ಶಿವಮೊಗ್ಗದಲ್ಲಿ ಹೈಕೋರ್ಟ್ ಪೀಠದ ಸ್ಥಾಪನೆ ರಾಜಕೀಯ ಬೇಡಿಕೆಯಲ್ಲ, ಅದು ನಮ್ಮ ಹಕ್ಕು ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು. ಶಿವಮೊಗ್ಗದಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಒತ್ತಾಯಿಸಿ ಕಳೆದ ಹಲವು..

ಶಿವಮೊಗ್ಗ (ಮೇ.27): ಶಿವಮೊಗ್ಗದಲ್ಲಿ ಹೈಕೋರ್ಟ್ ಪೀಠದ ಸ್ಥಾಪನೆ ರಾಜಕೀಯ ಬೇಡಿಕೆಯಲ್ಲ, ಅದು ನಮ್ಮ ಹಕ್ಕು ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು. ಶಿವಮೊಗ್ಗದಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಒತ್ತಾಯಿಸಿ ಕಳೆದ ಹಲವು ದಿನಗಳಿಂದ ಶಿವಮೊಗ್ಗ ವಕೀಲರ ಸಂಘದ ಆಶ್ರಯದಲ್ಲಿ ನಡೆಯುತ್ತಿರುವ ಹೋರಾಟದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಲೆನಾಡು ಮತ್ತು ಮಧ್ಯ ಕರ್ನಾಟಕದ ಲಕ್ಷಾಂತರ ಜನರ ನ್ಯಾಯ ಪ್ರಾಪ್ತಿಯ ಹಕ್ಕಿಗಾಗಿ ಪಕ್ಷಾತೀತವಾಗಿ ಒಗ್ಗೂಡಲು ಕರೆ ನೀಡಿದ ಅವರು, ಭೌಗೋಳಿಕ ಸವಾಲುಗಳನ್ನು ಕಡೆಗಣಿಸಿ ಮಂಗಳೂರು ಪೀಠಕ್ಕೆ ಶಿವಮೊಗ್ಗ ಸೇರಿಸುವ ಪ್ರಸ್ತಾವನೆಗೆ ತೀವ್ರ ಅಸಮ್ಮತಿ ವ್ಯಕ್ತಪಡಿಸಿದರು.

ಶಿವಮೊಗ್ಗದಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಯಾಗಬೇಕು ಎನ್ನುವ ನಮ್ಮ ಆಗ್ರಹ ಕೇವಲ ಒಂದು ಕಚೇರಿಯ ಸ್ಥಾಪನೆಗಾಗಿ ಅಲ್ಲ. ಇದು ನಮ್ಮ ಮಲೆನಾಡು ಮತ್ತು ಸುತ್ತ-ಮುತ್ತಲಿನ ಜಿಲ್ಲೆಗಳ ಜನರ ಸ್ವಾಭಿಮಾನದ ಹಾಗೂ ನ್ಯಾಯದ ಹಕ್ಕಿನ ಹೋರಾಟ. ‘ನ್ಯಾಯ ಎಲ್ಲರಿಗೂ ಸುಲಭವಾಗಿ ಸಿಗಬೇಕು’ ಎನ್ನುವ ಸಂವಿಧಾನದ ಆಶಯವನ್ನು ಸಾಕಾರಗೊಳಿಸಲು ಶಿವಮೊಗ್ಗದಲ್ಲಿ ಪೀಠ ಸ್ಥಾಪನೆಯಾಗುವುದು ಅತ್ಯಗತ್ಯವಾಗಿದೆ ಎಂದರು.

ಮಂಗಳೂರು ಪ್ರಸ್ತಾವನೆಗೆ ತಾರ್ಕಿಕ ವಿರೋಧ: ಮಂಗಳೂರು ಹೈಕೋರ್ಟ್ ಪೀಠದ ಪ್ರಸ್ತಾವನೆಯಲ್ಲಿ ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳನ್ನು ಸೇರಿಸುವ ಆಲೋಚನೆಯನ್ನು ತಾರ್ಕಿಕವಾಗಿ ತಿರಸ್ಕರಿಸಿದ ಸಂಸದ ರಾಘವೇಂದ್ರ, ನಮಗೆ ಕರಾವಳಿಯ ಸಹೋದರರ ಬಗ್ಗೆ ಅಪಾರ ಪ್ರೀತಿ ಮತ್ತು ಗೌರವವಿದೆ. ಆದರೆ ಭೌಗೋಳಿಕ ವಾಸ್ತವವನ್ನು ಅರಿಯದವರು ಮಾತ್ರ ಇಂತಹ ಪ್ರಸ್ತಾವನೆ ಮಂಡಿಸಲು ಸಾಧ್ಯ. ಧಾರವಾಡ ಮತ್ತು ಕಲಬುರಗಿಯ ಜನರಿಗೆ ನ್ಯಾಯ ಸಿಕ್ಕಿರುವಾಗ, ಮಲೆನಾಡಿನ ಜನತೆ ಕೇಳಿದರೆ ಸಿಗದೇ ಇರಲು ಸಾಧ್ಯವಿಲ್ಲ. ಏಕೆಂದರೆ ನಮ್ಮ ಬೇಡಿಕೆ ಭಾವನಾತ್ಮಕವಲ್ಲ, ಇದು ಸಂಪೂರ್ಣ ನ್ಯಾಯಸಮ್ಮತ ಎಂದರು.

ಗಮನಕ್ಕೆ ತರಲು ಬದ್ಧ

ಜಿಲ್ಲೆಯ ಸಂಸದನಾಗಿ ಕೇಂದ್ರ ಕಾನೂನು ಸಚಿವರೊಂದಿಗೆ ಹಾಗೂ ಭಾರತ ಸರ್ಕಾರದ ‘ಡಿಪಾರ್ಟ್‌ಮೆಂಟ್ ಆಫ್ ಜಸ್ಟಿಸ್’ಮಟ್ಟದಲ್ಲಿ ಈ ಪ್ರಸ್ತಾವನೆಗೆ ಬಲವಾದ ಧ್ವನಿಯಾಗುವ ಜವಾಬ್ದಾರಿಯನ್ನು ನಾನು ವಹಿಸಿಕೊಳ್ಳುತ್ತೇನೆ, ಶಿವಮೊಗ್ಗದಿಂದ ವಕೀಲರ ಮತ್ತು ಪ್ರಮುಖರ ನಿಯೋಗ ದೆಹಲಿಗೆ ಬಂದರೆ ಸಂಬಂಧಪಟ್ಟ ಸಚಿವರ ಭೇಟಿ ಮಾಡಿಸಲು ಮತ್ತು ಮನವಿ ನೀಡಿ ಕೇಂದ್ರದ ಗಮನಕ್ಕೆ ತರಲು ಬದ್ಧನಾಗಿದ್ದೇನೆ ಎಂದರು. ಶಾಸಕ ಡಿ.ಎಸ್.ಅರುಣ್ ಮಾತನಾಡಿ, ಸಂಸದರ ನೇತೃತ್ವದಲ್ಲಿ ಈ ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗೋಣ ಎಂದರು.