ರಾಜ್ಯದ ವಿವಿಧ ನಿಗಮ ಮಂಡಳಿಗಳಲ್ಲಿನ ಖಾಲಿ ಹುದ್ದೆ ಭರ್ತಿಗಾಗಿ ಕೆಇಎ ನಡೆಸಿದ್ದ ಲಿಖಿತ ಪರೀಕ್ಷೆಗಳಲ್ಲಿ ಬ್ಲೂಟೂತ್‌ ಬಳಸಿ ನಡೆದಿರುವ ಹಗರಣದ ಹಿಂದಿನ ಮಾಸ್ಟರ್‌ ಮೈಂಡ್‌ ಅಫಜಲ್ಪೂರದ ಆರ್‌ಡಿ ಪಾಟೀಲ್‌ ಏಕಕಾಲಕ್ಕೆ 300 ರಿಂದ 400 ರಷ್ಟು ಬ್ಲೂಟೂತ್‌ ಡಿವೈಸ್‌ ಖರೀದಿಸಿರುವ ಬಲವಾದಂತಹ ಶಂಕೆ ಇದೀಗ ಕಾಡಲಾರಂಭಿಸಿದೆ.

ಶೇಷಮೂರ್ತಿ ಅವಧಾನಿ

ಕಲಬುರಗಿ (ನ.7):  ರಾಜ್ಯದ ವಿವಿಧ ನಿಗಮ ಮಂಡಳಿಗಳಲ್ಲಿನ ಖಾಲಿ ಹುದ್ದೆ ಭರ್ತಿಗಾಗಿ ಕೆಇಎ ನಡೆಸಿದ್ದ ಲಿಖಿತ ಪರೀಕ್ಷೆಗಳಲ್ಲಿ ಬ್ಲೂಟೂತ್‌ ಬಳಸಿ ನಡೆದಿರುವ ಹಗರಣದ ಹಿಂದಿನ ಮಾಸ್ಟರ್‌ ಮೈಂಡ್‌ ಅಫಜಲ್ಪೂರದ ಆರ್‌ಡಿ ಪಾಟೀಲ್‌ ಏಕಕಾಲಕ್ಕೆ 300 ರಿಂದ 400 ರಷ್ಟು ಬ್ಲೂಟೂತ್‌ ಡಿವೈಸ್‌ ಖರೀದಿಸಿರುವ ಬಲವಾದಂತಹ ಶಂಕೆ ಇದೀಗ ಕಾಡಲಾರಂಭಿಸಿದೆ.

ಏಕೆಂದರೆ ಸದರಿ ಹಗರಣದ ತನಿಖೆಯಲ್ಲಿರುವ ಹಿರಿಯ ಪೊಲೀಸ್‌ ಅಧಿಕಾರಿಗಳ ಪ್ರಕಾರ ಕಲಬುರಗಿ, ಯಾದಗಿರಿ ಸೇರಿದಂತೆ ಕಲ್ಯಾಣ ನಾಡಿನ ಜಿಲ್ಲೆಗಳ 300 ರಿಂದ 400 ರಷ್ಟು ಅಭ್ಯರ್ಥಿಗಳೊಂದಿಗೆ ಆರ್‌.ಡಿ. ಪಾಟೀಲ್‌ ಪರೀಕ್ಷಾ ಪೂರ್ವ ಡೀಲ್‌ ಕುದುರಿಸಿರುವ ಶಂಕೆ ವ್ಯಕ್ತವಾಗುತ್ತಿದೆ.

ಯಾದಗಿರಿ: ಇಂದು ನಡೆದ ಕೆಪಿಎಸ್ಸಿ ಗ್ರೂಪ್ 'ಸಿ' 2 ಪತ್ರಿಕೆಗಳ ಪರೀಕ್ಷೆಗೆ 864 ಅಭ್ಯರ್ಥಿಗಳು ಗೈರು!

ಈ ಪರಿಯಲ್ಲಿ ಡೀಲ್‌ ಕುದುರಲು ಆರ್‌.ಡಿ. ಪಾಟೀಲ್‌ ಪಿಎಸ್‌ಐ ಹಗರಣದಿಂದ ಪಡೆದಂತಹ ಕುಖ್ಯಾತಿಯೇ ಕಾರಣ ಎನ್ನಲಾಗುತ್ತಿದೆ. ಗೃಹ ಇಲಾಖೆಯ 545 ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ ಓಎಂಆರ್‌ ಶೀಟ್‌ ತಿದ್ದಿ, ಬ್ಲೂಟೂತ್‌ ಬಳಸಿ ನಡೆದ ಹಗರಣಗಳೆರಡರಲ್ಲೂ ಆರ್‌. ಡಿ. ಪಾಟೀಲ್‌ ಸಿಕ್ಕಿಬಿದ್ದಿದ್ದ. ಈ ಹಗರಣದಲ್ಲಿನ ಕುಖ್ಯಾತಿಯೇ ಕೆಇಎ ಪರೀಕ್ಷಾರ್ಥಿಗಳು ತಂಡೋಪತಂಡವಾಗಿ ಈತನನನ್ನು ಹಡುಕಿಕೊಂಡು ಬರಲು ಕಾರಣವಾಯ್ತು ಎಂಬ ಅಭಿಪ್ರಾಯ ಹಿರಿಯ ಅಧಿಕಾರಿಗಳು ವ್ಯಕ್ತಪಡಿಸುತ್ತಿದ್ದಾರೆ.

ಆರ್‌.ಡಿ. ಪಾಟೀಲ್‌ನೊಂದಿಗೆ ಕಲಬುರಗಿ ಮನೆಯಲ್ಲಿ ಡೀಲ್‌ ಕುದುರಿಸಿ ಮುಂಗಡವಾಗಿ 8 ಲಕ್ಷ ರುಪಾಯಿ ನೀಡಿರುವ ನೌಬಾದ್‌ನ ಆಕಾಶ ಮಂಠಾಳೆ ಸೇರಿದಂತೆ ಸಿಕ್ಕಿಬಿದ್ದಿರುವ ಅನೇಕರು ತಾವು ಆರ್‌ಡಿಪಿಯನ್ನ ಹುಡುಕಿಕೊಂಡು ಹೋದ ಬಗೆಯನ್ನು ತನಿಖಾಧಿಕಾರಿಗಳ ಮುಂದೆ ಬಾಯಿ ಬಿಟ್ಟಿದ್ದಾರೆ.

ಪಿಎಸ್‌ಐ ಹಗರಣದಲ್ಲಿ ಇಷ್ಟೆಲ್ಲ ರಾದ್ಧಾಂತವಾದರೂ ಕಿಂಗ್‌ಪಿನ್‌ ಆರ್‌.ಡಿ. ಪಾಟೀಲ್‌ ಹೊರಗಡೆಯೇ ಇರುವಾಗ ಕೆಇಎಯಲ್ಲಿ ಯಾಕೆ ಅದೃಷ್ಟ ಪರೀಕ್ಷಿಸಬಾರದು? ಎಂದು ಆರ್‌.ಡಿ. ಪಾಟೀಲ್‌ ಹುಡುಕಿಕೊಂಡು 20ರಿಂದ 25 ಲಕ್ಷ ರು. ವ್ಯವಹಾರ ಕುದುರಿಸಿ 8 ರಿಂದ 10 ಲಕ್ಷ ರು. ಮುಂಗಡ ಹಣ ಕೊಟ್ಟು ಪರೇಶಾನ್‌ ಆಗಿರುವವರು. ಈ ಬಗ್ಗೆ ವಿಚಾರಣೆಯಲ್ಲಿ ವಿವರಿಸಿ ಪಶ್ಚಾತ್ತಾಪ ಪಟ್ಟಿರೋದು ಗೊತ್ತಾಗಿದೆ.

ಅಫಜಲ್ಪುರ ಮಹಾಂತೇಶ್ವರ ವಿದ್ಯಾವರ್ಧಕ ಸಂಘದ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಬ್ಲೂಟೂತ್‌ ಬಳಸಿ ಇನ್ನೇನು ಪರೀಕ್ಷೆ ಬರೆಯಬೇಕೆಂದು ಸಜ್ಜಾಗಿರುವಾಗಲೇ ಪೊಲೀಸರ ಕೈಗೆ ಸಿಕ್ಕುಬಿದ್ದಿರುವ ಅಭ್ಯರ್ಥಿಗಳು, ಉತ್ತರ ಹೇಳುವ ತಂಡದವರೆಲ್ಲರೂ ತನಿಖೆಯಲ್ಲಿ ಅನೇಕ ಅಚ್ಚರಿಯ ಸಂಗತಿಗಳನ್ನು ಪೊಲೀಸರೆದುರು ಬಾಯಿಬಿಟ್ಟಿದ್ದಾರೆ.

ಕೆಇಎ ಪರೀಕ್ಷೆಯಲ್ಲಿ ನೆರವು ನೀಡುವ ಭರವಸೆಯೊಂದಿಗೆ ಆರ್‌.ಡಿ. ಪಾಟೀಲ್‌ ವ್ಯವಹಾರ ಕುದುರಿಸಿದ್ದ ಅಭ್ಯರ್ಥಿಗಳ ಮೊಬೈಲ್ ನಂಬರ್‌ ಪಡೆದುಕೊಂಡು ಪರೀಕ್ಷೆಯ ಮುನ್ನಾ ದಿನವೇ ಅವರಿಗೆಲ್ಲರಿಗೂ ಅನಾಮಧೇಯನೊಬ್ಬನಿಂದ ಗುಟ್ಟಾಗಿ ಬ್ಲೂಟೂತ್‌ ತಲುಪಿಸಿದ್ದ. ಡಿವೈಸ್‌ ಅಭ್ಯರ್ಥಿಗಳಿಗೆ ಕೊಟ್ಟವರು ಯಾರೆಂಬುದೇ ರಹಸ್ಯವಾಗಿದೆ. ಡೀಲ್ ಆದಂತಹ ಅಭ್ಯರ್ಥಿಗಳಿಗೂ ಗೊತ್ತಾಗದಂತೆ ಡಿವೈಸ್‌ ಪೂರೈಸುವ ಜಾಲ ಹೆಣೆದಿದ್ದ. ಡಿವೈಸ್‌ ಕೊಟ್ಟವರ ಬಗ್ಗೆ ತಮಗೆ ಏನೇನೂ ತಿಳಿದಿಲ್ಲವೆಂದು ಬಂಧಿತರೆಲ್ಲರೂ ವಿಚಾರಣೆಯಲ್ಲಿ ಹೇಳಿದ್ದಾರೆ.

ಸರಿ ಉತ್ತರ 3 ಬಾರಿ ಪುನರಾವರ್ತನೆ:

ಉತ್ತರ ಪೂರೈಸುವ ತಂಡದವರು ಸರಿ ಉತ್ತರ 3 ಬಾರಿ ಪುನರಾರ್ತನೆ ಮಾಡುತ್ತಿದ್ದರು. ಅಭ್ಯರ್ಥಿಗಳು ತಮಗೆ ಬಂದಂತಹ ಪತ್ರಿಕೆಯ ಸಿರೀಸ್‌ ಆಧರಿಸಿ, ಪೂರೈಸಲಾದ ಸರಿ ಉತ್ತರ, ಅದಕ್ಕೆ ತಾಳೆಯಾಗುವ ಪ್ರಶ್ನೆ ನೋಡಿಕೊಂಡು ಓಎಂಆರ್‌ ಶೀಟ್‌ನಲ್ಲಿ ಉತ್ತರ ಭರಿಸಬೇಕೆಂಬ ಸೂಚನೆ ಇತ್ತು.

ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಮೊಬೈಲ್‌ಗಳು ರವಾನೆ:

ಬ್ಲೂಟೂತ್‌ಗೆ ಬಳಸಲಾಗಿದ್ದ ಸ್ಮಾರ್ಟ್ ಮೊಬೈಲ್‌ಗಳು ಫ್ಲಾಶ್‌ ಆಗಿರೋದರಿಂದ ಅವುಗಳಲ್ಲಿನ ದತ್ತಾಂಶ, ನಂಬರ್‌ ಸಂಗ್ರಹಿಸಲು ಅವುಗಳನ್ನೆಲ್ಲ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಪೊಲೀಸರು ಕಳುಹಿಸಿದ್ದಾರೆ. ಅಭ್ಯರ್ಥಿ ಬಾಬೂ ಚಾಂದ್‌ಶೇಖ್‌ರಿಂದ ಬ್ಲೂಟೂತ್‌ ಪಡೆದು ಪರಾರಿಯಾಗಿದ್ದ ಆಶೀಫ್‌ ಬಳಿಯ ಫ್ಯಾಶ್‌ ಮೊಬೈಲ್‌ನಲ್ಲಿನ ಎಲ್ಲಾ ನಂಬರ್‌ ಅಳಿಸಿ ಹಾಕಲಗಿದೆ. ಈತ ತನಗೇನು ಗೊತ್ತಿಲ್ಲವೆನ್ನುತ್ತಿರೋದರಿಂದ ಆಸೀಫ್‌ ಮೊಬೈಲ್‌ ಸಂಪರ್ಕ ಪತ್ತೆಗೆ ಪೊಲೀಸರು ಪ್ರಯತ್ನಿಸುತ್ತಿದ್ದಾರೆ.

ಸ್ವಯಂ ಚಾಲಿತ ವಾಟ್ಸಅಪ್‌ ಕರೆ ಸ್ವೀಕಾರ ತಂತ್ರ!

ಆರ್‌ಡಿ ಪಾಟೀಲ್‌ ಸೂಚನೆಯಂತೆಯೇ ಡೀಲ್‌ ಕುದುರಿಸಿದ್ದ ಅಭ್ಯರ್ಥಿಗಳು ಹೊಸ ಅಂಗಿ ಹೊಲಿಸಿಟ್ಟು ಕಾಲರ್ ಕೆಳಗೆ ಚಿಕ್ಕ ಸ್ಥಳ ಬಿಟ್ಟುಕೊಂಡು ಅಲ್ಲಿ ಸ್ಪೀಕರ್‌, ವಾಟ್ಸಅಪ್‌ ಕರೆ ಸ್ವಯಂಚಾಲಿತವಾಗಿ ಸ್ವೀಕಾರವಾಗುತಂವಹ ಫ್ಯಾಶ್‌ ಮಾಡಿದ್ದ ಮೊಬೈಲ್‌ ಸಿದ್ಧವಿಟ್ಟುಕೊಂಡಿದ್ದರೆಂಬ ಸಂಗತಿ ವಿಚಾರಣೆಯಲ್ಲಿ ಬಯಲಾಗಿದೆ.

ಯಾರು ಎಲ್ಲಿಂದ ಉತ್ತರ ಹೇಳುತ್ತಾರೆಂಬುದು ಗುಟ್ಟು!:

ಪರೀಕ್ಷಾ ಕೇಂದ್ರದಲ್ಲಿ ಬ್ಲೂಟೂತ್‌ ಡಿವೈಸ್‌ ಜೊತೆಗಿದ್ದವರಿಗೆ ಯಾರು ಎಲ್ಲಿಂದ, ಯಾವಾಗ ವಾಟ್ಸಅಪ್‌ ಕರೆ ಮಾಡಿ ಸರಿ ಉತ್ತರ ಹೇಳುತ್ತಾರೆಂಬುದು ಸಹ ಗುಟ್ಟಾಗಿಡಲಾಗಿತ್ತು. ಸರಿ ಉತ್ತರ ಪೂರೈಸುವ ನಾಲ್ವರು ಪರಿಣಿತರ ತಂಡ ಸಿದ್ಧಪಡಿಸಿ ಅವರಿಗೆ ಲ್ಯಾಪ್‌ಟಾಪ್‌, ಕಾರ್‌ ನೀಡಲಾಗಿತ್ತೆಂಬ ಸಂಗತಿಯೂ ತನಿಖೆಯಲ್ಲಿ ಬಯಲಾಗಿದೆ.

ಕೆಪಿಎಸ್‌ಸಿ ಪರೀಕ್ಷೆಗೆ ಬಂದ ಸ್ತ್ರೀಯರ ತಾಳಿ, ಕಾಲುಂಗರ ತೆಗೆಸಿದ ಸಿಬ್ಬಂದಿ!

ಕಿಂಗ್‌ಪಿನ್‌ ಸುಳಿವು ಇನ್ನೂ ಪತ್ತೆ ಇಲ್ಲ

ಕೆಇಎ ಪರೀಕ್ಷೆಯಲ್ಲಿನ ಹಗರಣ ಹೊರಬರುತ್ತಿದ್ದಂತೆಯೇ ಪರಾರಿಯಾಗಿರುವ ಅಫಜಲ್ಪುರ ತಾಲೂಕಿನ ಸೊನ್ನ ಗ್ರಾಮದ ರುದ್ರಗೌಡ ಪಾಟೀಲ್‌ ಎಲ್ಲಿದ್ದಾನೆಂಬುದು ಇನ್ನೂ ಪತ್ತೆಯಾಗಿಲ್ಲ. ಪೊಲೀಸರು ಇದಕ್ಕಾಗಿ ಮೂರ್ನಾಲ್ಕು ತಂಡಗಳನ್ನು ರಚಿಸಿಕೊಂಡು, ಆತನ ಮೊಬೈಲ್‌ ಲೋಕೇಷನ್‌ ಆಧರಿಸಿ ಮಹಾರಾಷ್ಟ್ರ, ಮಧ್ಯಪ್ರದೇಶ, ಉತ್ತರ ಪ್ರದೇಶ, ಗೋವಾ ಸುತ್ತುತ್ತಿದ್ದಾರೆ. ನಾಲ್ಕು ದಿನದಿಂದ ವಿಚಾರಣೆ ನಡೆಸುತ್ತಿರುವ ಪೊಲೀಸರು ಅಭ್ಯರ್ಥಿಗಳಿಂದ ಹೆಚ್ಚಿನ ಮಾಹಿತಿ ಸಿಗುತ್ತಿಲ್ಲವೆಂದು ಹೇಳುತ್ತಿದ್ದಾರೆ. ಕಿಂಗ್‌ಪಿನ್‌ ರುದ್ರಗೌಡ ಪಾಟೀಲ್‌ ಬಂಧನದ ನಂತರವಷ್ಟೇ ಈ ಹಗರಣದ ಸಂಪೂರ್ಣ ಮಾಹಿತಿ ಹೊರಬೀಳುವ ಸಾಧ್ಯತೆಗಳಿವೆ.