Asianet Suvarna News Asianet Suvarna News

ಕೆಪಿಎಸ್‌ಸಿ ಪರೀಕ್ಷೆಗೆ ಬಂದ ಸ್ತ್ರೀಯರ ತಾಳಿ, ಕಾಲುಂಗರ ತೆಗೆಸಿದ ಸಿಬ್ಬಂದಿ!

ಪೊಲೀಸ್‌ ಕಮೀಷನರ್‌ ಕಚೇರಿ ಪಕ್ಕದಲ್ಲೇ ಇರುವ ಸರ್ಕಾರಿ ಬಾಲಕಿಯರ ಪ.ಪೂ. ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಅಲ್ಲಿದ್ದ ಭದ್ರತಾ ಸಿಬ್ಬಂದಿ, ವಿವಾಹಿತ ಮಹಿಳೆಯರು ಮಂಗಳಸೂತ್ರ ಹಾಗೂ ಕಾಲುಂಗುರ ಧರಿಸಿಕೊಂಡು ಪರೀಕ್ಷಾ ಕೇಂದ್ರ ಪ್ರವೇಶಿಸಲು ಬಿಡಲಿಲ್ಲ. ಹೀಗಾಗಿ, ಅಭ್ಯರ್ಥಿಗಳು ಅನಿವಾರ್ಯವಾಗಿ ತಾಳಿ, ಕಾಲುಂಗುರ ತೆಗೆದಿಟ್ಟೇ ಪರೀಕ್ಷೆ ಬರೆದರು.

Staff who took off the Women Gold Chains Appearing for the KPSC Examination grg
Author
First Published Nov 6, 2023, 3:54 AM IST

ಕಲಬುರಗಿ(ನ.06):  ಕಲಬುರಗಿಯಲ್ಲಿ ಭಾನುವಾರ ನಡೆದ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ)ದ ಗ್ರೂಪ್‌ ‘ಸಿ’ ಹುದ್ದೆಗಳ ನೇಮಕಾತಿ ಪರೀಕ್ಷೆ ವೇಳೆ ಪರೀಕ್ಷಾ ಕೇಂದ್ರವೊಂದರ ಸಿಬ್ಬಂದಿ ಮಹಿಳಾ ಅಭ್ಯರ್ಥಿಗಳ ಕೊರಳಲ್ಲಿನ ತಾಳಿ ಹಾಗೂ ಕಾಲುಂಗುರ ತೆಗೆಸಿದ್ದು, ಇದಕ್ಕೆ ಅಭ್ಯರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭಾನುವಾರ ಕನ್ನಡ ಭಾಷಾ ವಿಷಯದ ಲಿಖಿತ ಪರೀಕ್ಷೆ ಇತ್ತು. ಪರೀಕ್ಷಾ ಅಕ್ರಮ ತಡೆಯಲು, ಪರೀಕ್ಷೆಯನ್ನು ಪಾರದರ್ಶಕ, ನ್ಯಾಯಸಮ್ಮತ ಹಾಗೂ ನಿಷ್ಪಕ್ಷಪಾತವಾಗಿ ನಡೆಸಲು ಹೆಚ್ಚಿನ ಆದ್ಯತೆ ನೀಡಿದ್ದ ಕರ್ನಾಟಕ ಲೋಕಸೇವಾ ಆಯೋಗ, ಪರೀಕ್ಷಾ ಕೇಂದ್ರಗಳಿಗೆ ಏನೆಲ್ಲಾ ಕೊಂಡೊಯ್ಯಬಹುದು, ಏನನ್ನು ಕೊಂಡೊಯ್ಯಬಾರದು ಎಂಬ ಬಗ್ಗೆ ಪಟ್ಟಿಯನ್ನೇ ಪ್ರಕಟಿಸಿತ್ತು. ಯಾವುದೇ ತರಹದ ಆಭರಣಗಳನ್ನು ಧರಿಸಿಕೊಂಡು ಅಭ್ಯರ್ಥಿಗಳು ಪರೀಕ್ಷಾ ಕೇಂದ್ರ ಪ್ರವೇಶಿಸುವಂತಿಲ್ಲ ಎಂದು ಆಯೋಗ ಹೇಳಿತ್ತಾದರೂ, ಮಹಿಳೆಯರ ಮುತ್ತೈದೆತನದ ಸಂಕೇತವಾಗಿರುವ ಮಂಗಳಸೂತ್ರ ಹಾಗೂ ಕಾಲುಂಗುರಗಳನ್ನು ಧರಿಸಲು ಅವಕಾಶ ನೀಡಿತ್ತು.

ಕಲಬುರಗಿ: ಕೆಪಿಎಸ್‌ಸಿ ಕನ್ನಡ ಭಾಷೆ ಲಿಖಿತ ಪರೀಕ್ಷೆ ತುಂಬ ಕಟ್ಟುನಿಟ್ಟು

ಆದರೆ, ನಗರದ ಪೊಲೀಸ್‌ ಕಮೀಷನರ್‌ ಕಚೇರಿ ಪಕ್ಕದಲ್ಲೇ ಇರುವ ಸರ್ಕಾರಿ ಬಾಲಕಿಯರ ಪ.ಪೂ. ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಅಲ್ಲಿದ್ದ ಭದ್ರತಾ ಸಿಬ್ಬಂದಿ, ವಿವಾಹಿತ ಮಹಿಳೆಯರು ಮಂಗಳಸೂತ್ರ ಹಾಗೂ ಕಾಲುಂಗುರ ಧರಿಸಿಕೊಂಡು ಪರೀಕ್ಷಾ ಕೇಂದ್ರ ಪ್ರವೇಶಿಸಲು ಬಿಡಲಿಲ್ಲ. ಹೀಗಾಗಿ, ಅಭ್ಯರ್ಥಿಗಳು ಅನಿವಾರ್ಯವಾಗಿ ತಾಳಿ, ಕಾಲುಂಗುರ ತೆಗೆದಿಟ್ಟೇ ಪರೀಕ್ಷೆ ಬರೆದರು.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಾಯಚೂರು ಜಿಲ್ಲೆಯ ಲಿಂಗಸೂಗೂರಿನ ಮಹಿಳಾ ಅಭ್ಯರ್ಥಿ, ಈ ಬಗ್ಗೆ ಆಯೋಗದಿಂದ ನಮಗೆ ಮೊದಲೇ ಯಾವುದೇ ಮಾಹಿತಿ ನೀಡಿರಲಿಲ್ಲ. ಹೀಗಾಗಿ, ಸಾವಿರಾರು ರು.ಗಳ ಮೌಲ್ಯದ ಚಿನ್ನದ ತಾಳಿ, ಮೂಗುತಿ, ಕಾಲುಂಗುರ ಧರಿಸಿಯೇ ಬಂದಿದ್ದೆವು. ಆದರೆ, ಇಲ್ಲಿನ ಭದ್ರತಾ ಸಿಬ್ಬಂದಿ ಅವಕಾಶ ನೀಡಲಿಲ್ಲ. ಗೇಟ್‌ನಲ್ಲೇ ತಪಾಸಣೆ ನಡೆಸಿದ ಪೊಲೀಸ್‌ ಸಿಬ್ಬಂದಿ, ಕರಿಮಣಿ, ತಾಳಿ ಧಾರಣೆ ಬೇಡವೆಂದು ಸೂಚಿಸಿದ್ದರು. ಆಯೋಗವೇ ಅವಕಾಶ ನೀಡಿದೆಯಲ್ಲ ಎಂದು ನಾವು ಒಳಗೆ ಹೋದಾಗ, ಮೆಟಲ್‌ ಡಿಟೆಕ್ಟರ್‌ನಿಂದ ತಪಾಸಣೆ ಮಾಡುತ್ತಿದ್ದ ಭದ್ರತಾ ಸಿಬ್ಬಂದಿ, ಮಂಗಳಸೂತ್ರ ತೆಗೆದು ಬಂದರೆ ಮಾತ್ರ ಒಳಗಡೆ ಬಿಡುವುದಾಗಿ ಹೇಳಿದಾಗ ಕಂಗಾಲಾದೆ. ಅನಿವಾರ್ಯವಾಗಿ ಕೊರಳಲ್ಲಿನ ಮಂಗಳಸೂತ್ರ ತೆಗೆದು ಸಹೋದರನ ಕೈಗೆ ಕೊಟ್ಟು ಪರೀಕ್ಷಾ ಕೇಂದ್ರದೊಳಗೆ ಹೋದೆ ಎಂದು ಕಣ್ಣೀರು ಹಾಕಿದರು.

ಓಲೆ ತೆಗೆಯಲು ಹೋಗಿ ಯುವತಿ ಕಿವಿಗೆ ಗಾಯ:

ಈ ಮಧ್ಯೆ, ರಾಯಚೂರಿನಿಂದ ಬಂದಿದ್ದ ಯುವತಿ ಚಂದ್ರಕಲಾ ಎಂಬುವರಿಗೆ ಕಿವಿಯೋಲೆ ತೆಗೆದುಕೊಂಡು ಬರುವಂತೆ ಭದ್ರತಾ ಸಿಬ್ಬಂದಿ ಸೂಚಿಸಿದರು. ಅವರು ಅಲ್ಲಿಯೇ ಸಮೀಪದ ಬಂಗಾರದ ಅಂಗಡಿಗೆ ಹೋಗಿ ಕಿವಿಯೋಲೆ ತೆಗೆಸುವಾಗ ಅವರ ಕಿವಿಗೆ ಗಾಯವಾಗಿ ರಕ್ತ ಬಂತು. ಆ ಗಾಯದ ನೋವಿನ ನಡುವೆಯೇ ಅವರು ಪರೀಕ್ಷೆ ಬರೆದರು.

Follow Us:
Download App:
  • android
  • ios