ರಾಜ್ಯದ ಜಿಲ್ಲೆಯೊಂದರಲ್ಲಿ ಸರ್ಕಾರದಿಂದ 75 ಎಕರೆ ಪ್ರದೇಶದಲ್ಲಿ ಜುವೆಲರಿ ಪಾರ್ಕ್ ನಿರ್ಮಾಣ ಮಾಡಲಾಗುತ್ತದೆ. ಈ ಬಗ್ಗೆ ಸಚಿವರು ಮಾಹಿತಿ ನೀಡಿದ್ದಾರೆ.
ಬೆಂಗಳೂರು (ಮಾ.21): ಕಲ್ಯಾಣ ಕರ್ನಾಟಕದ ಅಭಿವೃದ್ಧಿ ದೃಷ್ಟಿಯಿಂದ ಕಲಬುರಗಿ ಅಥವಾ ಬೀದರ್‌ನಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ ಜ್ಯುವೆಲರಿ ಪಾರ್ಕ್ ಸ್ಥಾಪಿಸಲು ಸರ್ಕಾರ ನಿರ್ಧರಿಸಿದೆ.
ಶನಿವಾರ ನಗರದಲ್ಲಿ ಗಣಿ ಮತ್ತು ಭೂ ವಿಜ್ಞಾನ ಸಚಿವ ಆರ್.ಮುರುಗೇಶ್ ನಿರಾಣಿ ಅಧ್ಯಕ್ಷತೆಯಲ್ಲಿ ನಡೆದ ಆಭರಣ ತಯಾರಿಕಾ ಸಂಸ್ಥೆಗಳ ಮುಖ್ಯಸ್ಥರ ಜೊತೆಗಿನ ಸಭೆಯಲ್ಲಿ 50-75 ಎಕರೆ ಜಮೀನಿನಲ್ಲಿ ಪಾರ್ಕ್ ನಿರ್ಮಿಸಲು ತೀರ್ಮಾನಿಸಲಾಯಿತು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಪಾರ್ಕ್ ಸ್ಥಾಪನೆಗೆ ರಾಜ್ಯ ಸರ್ಕಾರ ಎಲ್ಲ ರೀತಿಯ ಮೂಲಭೂತ ಸೌಲಭ್ಯ ಕಲ್ಪಿಸಿಕೊಡಲಿದೆ. ಬೆಂಗಳೂರಿನ ಹೊರ ಭಾಗದಲ್ಲಿ ಜ್ಯುವೆಲರಿ ಪಾರ್ಕ್ ಆರಂಭಿಸಲು ತೆರಿಗೆ ವಿನಾಯಿತಿ ನೀಡುವ ಸಂಬಂಧ ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಹಾಗೂ ಕೇಂದ್ರ ಗಣಿ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ಭೇಟಿ ಮಾಡಿ ತೆರಿಗೆ ವಿನಾಯಿತಿ ನೀಡುವಂತೆ ಮನವಿ ಮಾಡುವುದಾಗಿ ತಿಳಿಸಿದರು.
ಬರಲಿದೆ, ಸರ್ಕಾರಿ ಜ್ಯುವೆಲ್ಲರಿ ಶಾಪ್! .
ರಾಜ್ಯದ ಐದು ಕಡೆ ಸರ್ಕಾರಿ ಒಡೆತನದ ಜ್ಯುವೆಲರಿ ಪಾರ್ಕ್ ಸ್ಥಾಪಿಸಲು ಈಗಾಗಲೇ ನಿರ್ಧರಿಸಿದ್ದು, ಆದಷ್ಟುಬೇಗ ಕಾರ್ಯಾರಂಭಗೊಳ್ಳಲಿದೆ ಎಂದ ಅವರು, ವಿವಿಧ ಸಮಾರಂಭಗಳಿಗೆ ಉಡುಗೊರೆಯಾಗಿ ನೀಡಲು ಚಿನ್ನದ ನಾಣ್ಯಗಳನ್ನು ಹೊರತರಲು ತೀರ್ಮಾನಿಸಲಾಗಿದೆ. ಒಂದು ಕಡೆ ಗಂಡಭೇರುಂಡ, ಮತ್ತೊಂದು ಭಾಗದಲ್ಲಿ ರಾಜ್ಯದ ಐತಿಹಾಸಿಕ ಸ್ಥಳಗಳ ಚಿತ್ರ, ಇತಿಹಾಸ ಪ್ರಸಿದ್ಧ ಪುರುಷರ ಚಿತ್ರ ಒಳಗೊಂಡ ನಾಣ್ಯ ಹೊರತರುವಂತೆ ಸಂಘಟಕರಿಗೆ ಮನವಿ ಮಾಡಿದರು.
ಸಭೆಯಲ್ಲಿ ಬೆಂಗಳೂರು ಜ್ಯುವೆಲರಿ ಅಸೋಸಿಯೇಷನ್, ಕರ್ನಾಟಕ ಜ್ಯುವೆಲರಿ ಫೆಡರೇಷನ್, ಜ್ಯುವೆಲರಿ ಅಸೋಸಿಯೇಷನ್ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಹಟ್ಟಿಚಿನ್ನದ ಗಣಿ ಖಾಸಗಿಗೆ?
ರಾಜ್ಯದ ಹಟ್ಟಿಚಿನ್ನದ ಗಣಿಯಲ್ಲಿ ಅದಿರು ತೆಗೆಯುವುದನ್ನು ಖಾಸಗಿಯವರಿಗೆ ನೀಡಲು ಚಿಂತನೆ ನಡೆಸಲಾಗುತ್ತಿದೆ ಎಂದು ಸಚಿವ ನಿರಾಣಿ ತಿಳಿಸಿದ್ದಾರೆ.
ಈ ಸಂಬಂಧ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುವುದು. ಸದ್ಯ ಹಟ್ಟಿಚಿನ್ನದ ಗಣಿಯನ್ನು ಸರ್ಕಾರವೇ ನಿರ್ವಹಿಸುತ್ತಿದೆ. ಜಮೀನು, ಆಡಳಿತ ಮಂಡಳಿಯನ್ನು ಸರ್ಕಾರವೇ ನೋಡಿಕೊಳ್ಳಲಿದೆ. ವರ್ಷಾಂತ್ಯಕ್ಕೆ ಐದು ಸಾವಿರ ಕೆ.ಜಿ. ಚಿನ್ನ ಉತ್ಪಾದನೆ ಮಾಡುವ ಗುರಿ ಹೊಂದಲಾಗಿದೆ ಎಂದರು.
