ಬೆಳಗಾವಿ(ಮಾ.15): ಆಭರಣ ಪ್ರಿಯರಿಗೊಂದು ಸಿಹಿ ಸುದ್ದಿ. ದೇಶದ ಏಕೈಕ ಚಿನ್ನ ಉತ್ಪಾದಕ ರಾಜ್ಯವಾಗಿರುವ ಕರ್ನಾಟಕದಲ್ಲಿ ಮೈಸೂರು ರೇಷ್ಮೆ ಸೀರೆ, ಮೈಸೂರು ಸ್ಯಾಂಡಲ್‌ ಸೋಪ್‌ ಮಾದರಿಯಲ್ಲಿ ಸರ್ಕಾರದಿಂದಲೇ ಚಿನ್ನಾಭರಣಗಳ ಮಳಿಗೆ ತೆರೆಯುವ ಚಿಂತನೆ ನಡೆಯುತ್ತಿದೆ. ಈ ವಿಚಾರವನ್ನು ಸ್ವತಃ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಸಚಿವ ಮುರುಗೇಶ ನಿರಾಣಿ ಅವರೇ ತಿಳಿಸಿದ್ದಾರೆ.

ಈ ಸಂಬಂಧ ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಮೈಸೂರು ಸಿಲ್‌್ಕ, ಮೈಸೂರು ಸ್ಯಾಂಡಲ್‌ ಅಂಡ್‌ ಸೋಪ್‌ ಮಾದರಿಯಲ್ಲಿ ಚಿನ್ನ ಮಾರಾಟಕ್ಕೂ ಆಭರಣ ಮಳಿಗೆ ತೆರೆಯಲಾಗುವುದು. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದಲೇ ಬಂಗಾರದ ಆಭರಣಗಳ ತಯಾರಿಗೆ ಚಿಂತನೆ ನಡೆಸಲಾಗುವುದು. ಹಟ್ಟಿಗೋಲ್ಡ್‌ ಮೈನ್‌ ಹೆಸರನ್ನು ಕರ್ನಾಟಕ ಸ್ಟೇಟ್‌ಗೋಲ್ಡ್‌ ಮೈನ್‌ ಆಗಿ ಬದಲಾಯಿಸಲು ಹಾಗೂ ಹೊರ ರಾಜ್ಯ, ವಿದೇಶಗಳಲ್ಲೂ ಆಭರಣದ ಮಳಿಗೆ ತೆರೆಯಲು ಚಿಂತನೆ ನಡೆಸಲಾಗುವುದು ಎಂದರು.

ಕರ್ನಾಟಕದಲ್ಲಿರುವಷ್ಟುಖನಿಜ ಸಂಪತ್ತು ಎಲ್ಲೂ ಇಲ್ಲ. ನಮ್ಮಲ್ಲಿ ಮರಳಿನಿಂದ ಬಂಗಾರದವರೆಗೆ ಎಲ್ಲವೂ ಸಿಗುತ್ತದೆ. ಇಡೀ ದೇಶದಲ್ಲಿ ಚಿನ್ನ ಉತ್ಪಾದನೆಯಾಗುವುದು ಕರ್ನಾಟಕದಲ್ಲಿ ಮಾತ್ರ. ಸದ್ಯ ಕಾರ್ಯನಿರ್ವಹಿಸುತ್ತಿರುವ ದೇಶದ ಏಕೈಕ ಚಿನ್ನದ ಗಣಿಯಾದ ಹಟ್ಟಿಚಿನ್ನದ ಗಣಿಯಲ್ಲಿ ವಾರ್ಷಿಕ 1,700 ಕೆ.ಜಿ. ಚಿನ್ನ ಉತ್ಪಾದಿಸಲಾಗುತ್ತಿದೆ. ಇದರಿಂದ ಗಣಿ ಪ್ರತಿವರ್ಷ .250 ಕೋಟಿ ಲಾಭ ಮಾಡುತ್ತಿದೆ. ನಮ್ಮಲ್ಲಿ ಗಣಿಗಳಿವೆ, ಗಣಿಗಾರಿಕೆ ನಡೆಸಲು ತಂತ್ರಜ್ಞಾನವೂ ಇದೆ. ಉತ್ಪಾದಿಸಿದ ಚಿನ್ನಕ್ಕೆ ಉತ್ತಮ ಮಾರುಕಟ್ಟೆಕೂಡ ಇದೆ. ಈ ಹಿನ್ನೆಲೆಯಲ್ಲಿ ಚಿನ್ನದ ವಾರ್ಷಿಕ ಉತ್ಪಾದನೆಯನ್ನು 1,700 ಕೆ.ಜಿ.ಯಿಂದ 5,000 ಕೆ.ಜಿ.ಗೆ ಎರಡು ಹಂತದಲ್ಲಿ ವಿಸ್ತರಣೆ ಮಾಡುವ ಉದ್ದೇಶವಿದೆ ಎಂದು ತಿಳಿಸಿದರು.

ಉತ್ತಮ ಮಾರ್ಕೆಟ್‌ ಇದೆ

ಕರ್ನಾಟಕದಲ್ಲಿರುವಷ್ಟುಖನಿಜ ಸಂಪತ್ತು ಎಲ್ಲೂ ಇಲ್ಲ. ನಮ್ಮಲ್ಲಿ ಮರಳಿನಿಂದ ಬಂಗಾರದವರೆಗೆ ಎಲ್ಲವೂ ಸಿಗುತ್ತದೆ. ಇಡೀ ದೇಶದಲ್ಲಿ ಚಿನ್ನ ಉತ್ಪಾದನೆಯಾಗುವುದು ಕರ್ನಾಟಕದಲ್ಲಿ ಮಾತ್ರ. ಉತ್ಪಾದಿಸಿದ ಚಿನ್ನಕ್ಕೆ ಉತ್ತಮ ಮಾರುಕಟ್ಟೆಕೂಡ ಇದೆ. ಸರ್ಕಾರದಿಂದಲೇ ಚಿನ್ನಾಭರಣ ಮಳಿಗೆ ತೆರೆಯುವ ಕುರಿತು ಚಿಂತನೆ ನಡೆಯುತ್ತಿದೆ.

- ಮುರುಗೇಶ ನಿರಾಣಿ, ಗಣಿ ಸಚಿವ