ಶಿವಮೊಗ್ಗ :  ಶಿವಮೊಗ್ಗ-ಬೆಂಗಳೂರು ನಡುವಿನ ಅಂತರವನ್ನು 5 ಗಂಟೆಯಲ್ಲಿ ಕ್ರಮಿಸುವ ನೂತನ ಜನಶತಾಬ್ದಿ ಎಕ್ಸ್‌ಪ್ರೆಸ್ ರೈಲಿಗೆ  ಶಿವಮೊಗ್ಗದ ರೈಲು ನಿಲ್ದಾಣದಲ್ಲಿ ಭಾನುವಾರ ಸಂಜೆ ಸಂಸದ ಬಿ.ವೈ.ರಾಘವೇಂದ್ರ ಚಾಲನೆ ನೀಡಿದರು. 

ಸೋಮವಾರದಿಂದ ಈ ರೈಲಿನ ಪ್ರಯಾಣಿಕ ಸಂಚಾರ ಆರಂಭವಾಗಲಿದೆ. ನಂತರ ಮಾತನಾಡಿದ ಅವರು, ಶಿವಮೊಗ್ಗ-ಚೆನ್ನೈ ನಡುವೆ
ವಿಶೇಷ ರೈಲು ಕೇಳಲಾಗಿದೆ. ಶಿವಮೊಗ್ಗ- ಚಿತ್ರದುರ್ಗ ಮೂಲಕ ತಿರುಪತಿಗೂ ವಿಶೇಷ ರೈಲಿಗಾಗಿ ಮನವಿ ಸಲ್ಲಿಸಲಾಗಿದೆ. 

ಹರಿಹರ- ಶಿವಮೊಗ್ಗ, ಶಿಕಾರಿಪುರ-ರಾಣೇಬೆನ್ನೂರು ಮಾರ್ಗಗಳಿಗೆ ಆದಷ್ಟು ಬೇಗ ಚಾಲನೆ ಸಿಗಲಿದೆ. ರೈಲ್ವೆ ನಿಲ್ದಾಣದಲ್ಲಿ ಹಿರಿಯ ನಾಗರಿಕರ ಅನುಕೂಲಕ್ಕಾಗಿ ಎಲಿವೇಟರ್ ತಕ್ಷಣ ಬರಲಿದೆ ಎಂದು ತಿಳಿಸಿದರು. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತಿತರರು ಹಾಜರಿದ್ದರು. 

ವೇಳಾಪಟ್ಟಿ: ಬೆಳಗ್ಗೆ  5.15ಕ್ಕೆ ಶಿವಮೊಗ್ಗದಿಂದ ಹೊರಟು ಬೆಳಗ್ಗೆ 10.15ಕ್ಕೆ ಬೆಂಗಳೂರಿನ ಯಶವಂತಪುರ ತಲುಪಲಿದೆ. ಸಂಜೆ 5.30ಕ್ಕೆ  ಯಶವಂತಪುರದಿಂದ ಹೊರಟು ರಾತ್ರಿ 10.25ಕ್ಕೆ ಶಿವಮೊಗ್ಗ ತಲುಪಲಿದೆ. ಸೋಮವಾರ, ಬುಧವಾರ, ಶುಕ್ರವಾರ, ಶನಿವಾರ ಈ ರೈಲಿನ ಸಂಚಾರ ಇರುತ್ತದೆ.