ಒಂಟಿ ಸೊಸೆಗೆ ಸೀರೆ ಉಡಿಸದಿದ್ರೆ ಕೇಡು ವದಂತಿ; ಸೀರೆ ಅಂಗಡಿಗೆ ಮುಗಿಬಿದ್ದ ಜನ!
ಅಣ್ಣ ಅಥವಾ ತಮ್ಮನಿಗೆ ಒಬ್ಬಳೇ ಮಗಳಿದ್ದರೆ ಅವರ ಸಹೋದರಿ (ಮಕ್ಕಳಿಗೆ ಅತ್ತೆ) ಸೊಸೆಗೆ ಸೀರೆ ಉಡಿಸಬೇಕು. ಇಲ್ಲವಾದರೆ ಕೇಡು ಆಗಲಿದೆ ಎನ್ನುವ ವದಂತಿ ಶಿರಹಟ್ಟಿ ಪಟ್ಟಣ ಸೇರಿದಂತೆ ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ಹಬ್ಬಿದ್ದು, ಬಟ್ಟೆ ಅಂಗಡಿಗಳಲ್ಲಿ ಭರ್ಜರಿ ಸೀರೆ ವ್ಯಾಪಾರ ನಡೆದಿದೆ.
ಮಹದೇವಪ್ಪ ಎಂ. ಸ್ವಾಮಿ
ಶಿರಹಟ್ಟಿ (ನ.27): ಅಣ್ಣ ಅಥವಾ ತಮ್ಮನಿಗೆ ಒಬ್ಬಳೇ ಮಗಳಿದ್ದರೆ ಅವರ ಸಹೋದರಿ (ಮಕ್ಕಳಿಗೆ ಅತ್ತೆ) ಸೊಸೆಗೆ ಸೀರೆ ಉಡಿಸಬೇಕು. ಇಲ್ಲವಾದರೆ ಕೇಡು ಆಗಲಿದೆ ಎನ್ನುವ ವದಂತಿ ಶಿರಹಟ್ಟಿ ಪಟ್ಟಣ ಸೇರಿದಂತೆ ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ಹಬ್ಬಿದ್ದು, ಬಟ್ಟೆ ಅಂಗಡಿಗಳಲ್ಲಿ ಭರ್ಜರಿ ಸೀರೆ ವ್ಯಾಪಾರ ನಡೆದಿದೆ.
ಮುಗ್ಧ ಜನರನ್ನು ಮೋಸ ಮಾಡಲು ಅಥವಾ ಭಯ ಹುಟ್ಟಿಸಲೊ ಗೊತ್ತಿಲ್ಲ. ಪ್ರತಿ ಬಾರಿ (ವರ್ಷ) ಜನ ಮೂಢನಂಬಿಕೆಗೆ ಬೆಲೆ ಕೊಡುತ್ತಿರುವುದು ವಿಪರ್ಯಾಸವೇ ಸರಿ. ಇದಕ್ಕೆ ನೀಲಿ ಕೆಟ್ಟ ಸುದ್ದಿ ಎನ್ನುವ ಮಾತಿದೆ.
ಕಳೆದ ೧೫-೨೦ ದಿನಗಳಿಂದ ಬಟ್ಟೆ ಅಂಗಡಿಗಳಿಗೆ ಬರುವ ಮಹಿಳೆಯರು ನಮ್ಮ ಅಣ್ಣ ಅಥವಾ ತಮ್ಮನ ಮಗಳಿಗೆ ಚಲೋ ಸೀರಿ ಕೊಡಿ ಎಂದು ಕೇಳುತ್ತಿದ್ದಾರೆ. ಬಟ್ಟೆ ಅಂಗಡಿಗಳು ಡಬಲ್ ಧಮಾಕಾ ಹೊಡೆಯುತ್ತಿವೆ. ಹಬ್ಬ ಹರಿದಿನಕ್ಕೂ ಜನರು ಬಟ್ಟೆ ಖರೀದಿಗೆ ಮುಂದಾಗಿರಲಿಲ್ಲ. ಈಗ ವದಂತಿ ಹಿನ್ನೆಲೆಯಲ್ಲಿ ಮಹಿಳೆಯರು ಪಟ್ಟಣದ ಬಟ್ಟೆ ಅಂಗಡಿಗಳಲ್ಲಿ ಸೀರೆ ಖರೀದಿಗೆ ಮುಂದಾಗಿರುವುದು ವ್ಯಾಪಾರ ವೃದ್ಧಿಸಿಕೊಳ್ಳಲು ಅನುಕೂಲವಾದಂತಾಗಿದೆ.
ಕಿತ್ತೂರಿನಲ್ಲಿ ವಿನಯ ಕುಲಕರ್ಣಿ ಜನ್ಮದಿನ; ಬೃಹತ್ ಸೇಬಿನಹಾರಕ್ಕೆ ಮುಗಿಬಿದ್ದ ಅಭಿಮಾನಿಗಳು!
ಕಳೆದ ೨೦ ದಿನಗಳಿಂದ ತಾಲೂಕಿನ ಹೊಸಳ್ಳಿ, ನಾಗರಮಡುವು, ಮಾಚೇನಹಳ್ಳಿ, ಬೆಳ್ಳಟ್ಟಿ ಸೇರಿದಂತೆ ಬಹುತೇಕ ಗ್ರಾಮೀಣ ಪ್ರದೇಶಗಳಲ್ಲಿ ಈ ರೀತಿಯ ವದಂತಿ, ಸುದ್ದಿ ಹರಡಿಕೊಂಡಿದ್ದು, ಕೊಡಿಸದಿದ್ದರೆ ಕೇಡಾಗುವುದೆಂಬ ನಂಬಿಕೆಯಿಂದ ತವರು ಮನೆಗೆ ಹೆಣ್ಣುಮಕ್ಕಳು ಬಂದು ಅಣ್ಣ, ತಮ್ಮನ ಮಗಳಿಗೆ ಸೀರೆ ಕೊಟ್ಟು ತೆರಳುತ್ತಿರುವುದು ಸಾಗಿದೆ.
ನಿತ್ಯ ಬಟ್ಟೆ ಅಂಗಡಿಗಳಲ್ಲಿ ಹೆಣ್ಣು ಮಕ್ಕಳು ಸೀರೆ ಖರೀದಿಗೆ ಮುಂದಾಗಿದ್ದಾರೆ. ಅಣ್ಣನ, ತಮ್ಮನ ಹೆಣ್ಣು ಮಗಳಿಗೆ ಸೀರೆ ಕೊಡಿಸಬೇಕೆಂಬ ವದಂತಿ ಸತ್ಯ, ಅಸತ್ಯವೋ ಎನ್ನುವ ಮಾಹಿತಿ ಯಾರಿಗೂ ಗೊತ್ತಿಲ್ಲ. ಈ ಬಗ್ಗೆ ಪಂಚಾಂಗ ಹೇಳುವವರು ಖಚಿತವಾಗಿ ಹೇಳುತ್ತಿಲ್ಲ.
ಕಳೆದ ವರ್ಷ ಕೂಡ ಒಬ್ಬನೇ ಗಂಡು ಮಗನಿದ್ದರೆ ಬೆಳ್ಳಿ ಕಡಗ ಕೊಡಬೇಕೆಂಬ ವದಂತಿ ಹಬ್ಬಿತ್ತು. ಆಗ ಕೂಡ ಬಂಗಾರ, ಬೆಳ್ಳಿ ಅಂಗಡಿಗಳಿಗೆ ಭರ್ಜರಿ ವ್ಯಾಪಾರ ನಡೆದಿತ್ತು. ಜನ ಮರುಳೋ ಜಾತ್ರೆ ಮರುಳೋ ಗೊತ್ತಿಲ್ಲ. ನಾವೆಲ್ಲಾ ಎಷ್ಟೇ ಆಧುನಿಕವಾಗಿ ಮುಂದುವರೆದಿದ್ದರೂ ನಮ್ಮ ಜನರು ಮಾತ್ರ ವದಂತಿಗಳಿಗೆ ಬೇಗ ಮಾರು ಹೋಗುತ್ತಾರೆ.f
ರವಿ ಬೆಳಗೆೆರೆ ಆರಂಭಿಸಿದ ಸ್ಕೂಲ್‌ಗೆ ಮಗನಿಂದ ಆಧುನಿಕ ಸ್ಪರ್ಶ, ಹೇಗಿರುತ್ತೆ ಪ್ರಾರ್ಥನಾ ಇನ್ ವರ್ಲ್ಕ್ ಸ್ಕೂಲ್?
ಸೊಸೆಗೆ ಹೊಸ ಸೀರೆ ಉಡಿಸಿ ಹಣೆಗೆ ಕುಂಕುಮ ಇಟ್ಟು ಆರತಿ ಬೆಳಗಿ ಎಲ್ಲರಿಗೂ ಒಳ್ಳೆಯದಾಗಲಿ ಎಂದು ಹರಸುತ್ತಿದ್ದಾರೆ. ಒಟ್ಟಾರೆ ವದಂತಿಗಳು ಜನರಲ್ಲಿ ಪುನ: ಮೌಢ್ಯತೆ ಹೆಚ್ಚಿಸುತ್ತಿರುವುದು ವೈಜ್ಞಾನಿಕ ಮನೋಭಾವನೆ ಬೆಳೆಸುವವರಿಗೆ ಸವಾಲು ಆಗುತ್ತಿವೆ.
ಈ ಹಿಂದೆ ಕೂಡ ತಾಯಿಗೆ ಮಗಳು ಸೀರೆ ಕೊಡಿಸುವುದು, ಒಬ್ಬನೇ ಮಗನಿದ್ದರೆ ಬೆಳ್ಳಿ ಕಡಗ ಕೊಡಿಸುವುದು ಸುದ್ದಿ ಇತ್ತು. ಹೀಗಾಗಿ ನಾವು ಕೂಡ ನಮ್ಮ ಅಣ್ಣ ಮತ್ತು ತಮ್ಮನ ಮಗಳಿಗೆ ಈ ಬಾರಿ ಹೊಸ ಸೀರೆ, ಬೆಳ್ಳಿ ಉಂಗುರ ಖರೀದಿ ಮಾಡಿ ಕೊಡಿಸಲು ಮುಂದಾಗಿದ್ದೇವೆ. ತಪ್ಪೇನಲ್ಲ. ಇದರಿಂದ ನಮ್ಮ ತವರು ಮನೆಯ ಸಂಬಂಧ ಮತ್ತಷ್ಟು ಗಟ್ಟಿಗೊಳ್ಳಲಿದೆ.
ಸೋಮವ್ವ ಫಕ್ಕೀರಪ್ಪ ಹೊಸಳ್ಳಿ