ವಸತಿ ಸಚಿವ ಜಮೀರ್ ಅಹಮದ್ ಅವರಿಗೆ ನಟಿ ರಾಧಿಕಾ ಕುಮಾರಸ್ವಾಮಿ 2 ಕೋಟಿ ರೂ. ಸಾಲ ನೀಡಿದ್ದಾರೆ ಎಂದು ಖಚಿತಪಡಿಸಿದ್ದಾರೆ. 

ಬೆಂಗಳೂರು: ತಾವು ಮನೆ ಕಟ್ಟುವಾಗ ನಟಿ ರಾಧಿಕಾ ಕುಮಾರಸ್ವಾಮಿ ಅವರು 2 ಕೋಟಿ ರು. ಸಾಲ ನೀಡಿರುವುದು ನಿಜ. ಈ ಬಗ್ಗೆ ಅವರು ಆದಾಯ ತೆರಿಗೆಯಲ್ಲಿ ತೋರಿಸಿದ್ದಾರೆ. ನಾನೂ ಆದಾಯ ತೆರಿಗೆ ಫೈಲ್‌ ಮಾಡುವಾಗ ತೋರಿಸಿದ್ದೇನೆ ಎಂದು ವಸತಿ ಸಚಿವ ಜಮೀರ್‌ ಅಹಮದ್‌ ಸ್ಪಷ್ಟನೆ ನೀಡಿದ್ದಾರೆ.

ಬುಧವಾರ ಸುದ್ದಿಗಾರರ ಜೊತೆ ಮಾತನಾಡಿ, ನಾನು ಮನೆ ಕಟ್ಟುವಾಗ ರಾಧಿಕಾ ಕುಮಾರಸ್ವಾಮಿ ಸಾಲ ನೀಡಿದ್ದರು. ನನ್ನ ಮೇಲೆ ಇ.ಡಿ ಅಧಿಕಾರಿಗಳು ದಾಳಿ ಮಾಡಿದ ಪ್ರಕರಣವನ್ನು ಎಸಿಬಿಗೆ ವಹಿಸಲಾಗಿತ್ತು. ಆದರೆ ನಂತರ ಎಸಿಬಿ ರದ್ದಾದ ಬಳಿಕ ಲೋಕಾಯುಕ್ತಕ್ಕೆ ಪ್ರಕರಣ ವರ್ಗಾವಣೆಯಾಯಿತು. ಅದರಂತೆ ವಿಚಾರಣೆ ನಡೆಸಿದ ಅಧಿಕಾರಿಗಳು ಸಾಲ ಕೊಟ್ಟಿದ್ದು ನಿಜವೇ ಎಂದು ರಾಧಿಕಾರನ್ನು ಕೇಳಿದಾಗ ಅವರು ಹೌದೆಂದು ತಿಳಿಸಿದ್ದಾರೆ. ರಾಧಿಕಾ ಹಾಗೂ ನಾನು ಹಣದ ವ್ಯವಹಾರದ ಬಗ್ಗೆ ಆದಾಯ ತೆರಿಗೆಯಲ್ಲಿ ತಿಳಿಸಿದ್ದೇವೆ ಎಂದರು.

ವಿಚಾರಣೆಗೆ ಹಾಜರಾಗಿ ಹೇಳಿಕೆ ದಾಖಲಿಸಿದ ಕೆಜಿಎಫ್‌ ಬಾಬು

ಲೋಕಾಯುಕ್ತ ಪೊಲೀಸರು ಬುಧವಾರ ಉದ್ಯಮಿ ಕೆಜಿಎಫ್‌ ಬಾಬು ಅವರ ವಿಚಾರಣೆ ನಡೆಸಿದ್ದಾರೆ. ನೋಟಿಸ್‌ ಹಿನ್ನೆಲೆಯಲ್ಲಿ ಕೆಜಿಎಫ್‌ ಬಾಬು ಅವರು ಲೋಕಾಯುಕ್ತ ತನಿಖಾಧಿಕಾರಿ ಸತೀಶ್ ಕುಮಾರ್‌ ಎದುರು ವಿಚಾರಣೆಗೆ ಹಾಜರಾಗಿದ್ದರು. ಈ ವೇಳೆ ಸಚಿವ ಜಮೀರ್‌ ಮತ್ತು ಸಿಎಂ ರಾಜಕೀಯ ಕಾರ್ಯದರ್ಶಿ ನಜೀರ್‌ ಅಹಮ್ಮದ್‌ ಜೊತೆಗಿನ ಸಂಬಂಧ, ವ್ಯವಹಾರ, ಹಣಕಾಸು ವ್ಯವಹಾರ ಕುರಿತು ಹಲವು ಪ್ರಶ್ನೆಗಳನ್ನು ಕೇಳಿ ಹೇಳಿಕೆ ದಾಖಲಿಸಿಕೊಂಡಿದ್ದಾರೆ.

ಜಮೀರ್‌ ನಮ್ಮ ಸಮುದಾಯದ ನಾಯಕರು. ಅವರು ಹಲವು ವರ್ಷಗಳಿಂದ ನನ್ನ ಸ್ನೇಹಿತರಾಗಿದ್ದಾರೆ. ಅವರೊಂದಿಗೆ ನನ್ನ ಯಾವುದೇ ಪಾಲುದಾರಿಕೆ ಅಥವಾ ಉದ್ಯಮ ವ್ಯವಹಾರವಿಲ್ಲ. 2013ರ ವೇಳೆ ಮನೆ ಕಟ್ಟಿಸುವ ಉದ್ದೇಶದಿಂದ ನನ್ನಿಂದ 3.50 ಕೋಟಿ ರು. ಸಾಲ ಪಡೆದಿದ್ದರು. ಈ ಸಾಲವನ್ನು ಈವರೆಗೂ ವಾಪಸ್‌ ನೀಡಿಲ್ಲ. ಅಂತೆಯೇ ನಾಸೀರ್‌ ಅಹಮ್ಮದ್‌ ಅವರು ಸಹ ನನ್ನಿಂದ 3 ಕೋಟಿ ರು. ಸಾಲ ಪಡೆದಿದ್ದು, ವಾಪಸ್‌ ನೀಡಿಲ್ಲ ಎಂದು ಕೆಜಿಎಫ್‌ ಬಾಬು ತನಿಖಾಧಿಕಾರಿ ಎದುರು ಹೇಳಿಕೆ ನೀಡಿದ್ದಾರೆ. ಜತೆಗೆ ಸಾಲ ನೀಡಿರುವುದಕ್ಕೆ ಕೆಲ ದಾಖಲೆಗಳನ್ನೂ ತೋರಿಸಿದ್ದಾರೆ ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.

ರಾಧಿಕಾ ಕುಮಾರಸ್ವಾಮಿ ಸಹ ಹೇಳಿಕೆ ದಾಖಲು

ಸುಮಾರು ಎರಡು ತಾಸು ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಂಡು ತನಿಖಾಧಿಕಾರಿ, ಅಗತ್ಯಬಿದ್ದರೆ ಮತ್ತೆ ವಿಚಾರಣೆಗೆ ಹಾಜರಾಗುವಂತೆ ಕೆಜಿಎಫ್‌ ಬಾಬುಗೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ. ಸಚಿವ ಜಮೀರ್‌ ಅಹಮ್ಮದ್‌ ಅವರು ನಟಿ ರಾಧಿಕಾ ಕುಮಾರಸ್ವಾಮಿ ನಡುವೆ 2 ಕೋಟಿ ರು. ಹಣಕಾಸು ವ್ಯವಹಾರ ನಡೆಸಿರುವುದು ಲೋಕಾಯುಕ್ತ ತನಿಖೆಯಲ್ಲಿ ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ನೋಟಿಸ್‌ ನೀಡಿ ರಾಧಿಕಾ ಕುಮಾರಸ್ವಾಮಿ ಅವರನ್ನು ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಂಡಿದ್ದರು. ಇದೀಗ ಉದ್ಯಮಿ ಕೆಜಿಎಫ್‌ ಬಾಬು ಅವರನ್ನು ವಿಚಾರಣೆ ನಡೆಸಿದ್ದಾರೆ.

2013ರಲ್ಲಿ 3.50 ಕೋಟಿ ರು. ಸಾಲ ನೀಡಿದ್ದೆ

ವಿಚಾರಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಉದ್ಯಮಿ ಕೆಜಿಎಫ್‌ ಬಾಬು, ಜಮೀರ್‌ ಅಹಮದ್‌ ಸಾಹೇಬರು 2013ರಲ್ಲಿ ಮನೆ ಖರೀದಿಸಲು ನನ್ನಿಂದ 3.50 ಕೋಟಿ ರು. ಸಾಲ ಪಡೆದಿದ್ದರು. ನಮ್ಮಿಬ್ಬರ ನಡುವೆ ಬೇರೆ ಯಾವುದೇ ವ್ಯಾವಹಾರಿಕ ಸಂಬಂಧವಿಲ್ಲ. ಮನೆ ಖರೀದಿಗೆ ನನ್ನಿಂದ ಸಹಾಯ ಕೇಳಿದ್ದರು. ಅವರ ಬಳಿ ಆಗ ಹಣ ಇರಲಿಲ್ಲ. ಹೀಗಾಗಿ ನಾನು 3.50 ಕೋಟಿ ಸಾಲವಾಗಿ ನೀಡಿದ್ದೆ. ಎರಡು-ಮೂರು ಬಾರಿ ಸಾಲ ವಾಪಸ್‌ ಕೇಳಿದ್ದೆ. ಆಗ ಅವರು ತೊಂದರೆಯಲ್ಲಿ ಇರುವುದಾಗಿ ಹೇಳಿದ್ದರು. ಈವರೆಗೂ ಸಾಲ ಮರು ಪಾವತಿಸಿಲ್ಲ ಎಂದು ಹೇಳಿದರು.

ಇದನ್ನೂ ಓದಿ: ಗ್ರೇಟರ್ ಬೆಂಗಳೂರು ಜನರೇ ನಿಮ್ಮ ನಗರಪಾಲಿಕೆ, ವಿಧಾನಸಭಾ ಕ್ಷೇತ್ರ, ವಾರ್ಡ್ ಯಾವುದೆಂದು ಈಗಲೇ ಚೆಕ್ ಮಾಡಿ!

ಇ.ಡಿ. ವಿಚಾರಣೆಗೂ ಹಾಜರಾಗಿದ್ದೆ

ಈ ನಡುವೆ ಜಮೀರ್‌ ಅಹಮದ್‌ ಮನೆ ಮೇಲೆ ಜಾರಿ ನಿರ್ದೇಶನಾಲಯ(ಇ.ಡಿ) ದಾಳಿ ನಡೆಸಿತ್ತು. ಈ ವೇಳೆ ಇ.ಡಿ.ಅಧಿಕಾರಿಗಳು ನನಗೆ ನೋಟಿಸ್‌ ನೀಡಿದ್ದರು. ಅದರಂತೆ ನಾನು ಇ.ಡಿ.ಕಚೇರಿಗೆ ತೆರಳಿ 3.50 ಕೋಟಿ ರು. ಸಾಲದ ವಿಚಾರವಾಗಿ ಹೇಳಿಕೆ ನೀಡಿ ಬಂದಿದ್ದೆ. ಅಂತೆಯೇ ನಜೀರ್‌ ಅಹಮ್ಮದ್‌ಗೆ ನೀಡಿದ್ದ 3 ಕೋಟಿ ರು. ಸಾಲದ ಬಗ್ಗೆಯೂ ಹೇಳಿಕೆ ನೀಡಿದ್ದೆ. ಬಳಿ ಈ ಪ್ರಕರಣ ಲೋಕಾಯುಕ್ತಕ್ಕೆ ವರ್ಗಾವಣೆಯಾಗಿತ್ತು. ಹೀಗಾಗಿ ಲೋಕಾಯುಕ್ತ ಪೊಲೀಸರು ನನಗೆ ನೋಟಿಸ್‌ ನೀಡಿದ್ದರು. ಅದರಂತೆ ವಿಚಾರಣೆಗೆ ಹಾಜರಾಗಿ ಹೇಳಿಕೆ ನೀಡಿದ್ದೇನೆ ಎಂದು ತಿಳಿಸಿದರು.

ಜಮೀರ್‌ ನನ್ನ ಒಳ್ಳೆಯ ಸ್ನೇಹಿತ

ಸಚಿವ ಜಮೀರ್‌ ಅಹಮದ್‌ ಅವರು ನನಗೆ ಒಳ್ಳೆಯ ಸ್ನೇಹಿತ. ಅವರ ಬಗ್ಗೆ ನಮ್ಮ ಸಮಾಜದಲ್ಲಿ ಗೌರವವಿದೆ. ನಾನು ಅವರ ಹೆಸರು ಕೆಡಿಸುತ್ತಿಲ್ಲ. ದುಡ್ಡು ಹೋಗುತ್ತೆ, ಬರುತ್ತೆ. ನಮ್ಮ ಸಂಬಂಧ ಈಗಲೂ ಚೆನ್ನಾಗಿದೆ. ಲೋಕಾಯುಕ್ತ ಅಧಿಕಾರಿಗಳ ಪ್ರಶ್ನೆಗಳಿಗೆ ಉತ್ತರಿಸಿದ್ದೇನೆ. ಮತ್ತೆ ಕರೆದಾಗ ವಿಚಾರಣೆಗೆ ಬರುವಂತೆ ಸೂಚಿಸಿದ್ದಾರೆ. ಅವರು ಕರೆದಾಗ ವಿಚಾರಣೆಗೆ ಹಾಜರಾಗುತ್ತೇನೆ ಎಂದು ಕೆಜಿಎಫ್‌ ಬಾಬು ಹೇಳಿದರು.

ಪ್ರಕರಣದ ಹಿನ್ನೆಲೆ ಏನು?

ಐಎಂಎ ಕಂಪನಿಯ ಬಹುಕೋಟಿ ವಂಚನೆ ಪ್ರಕರಣ ಸಂಬಂಧ 2019ರಲ್ಲಿ ಇ.ಡಿ. ಅಧಿಕಾರಿಗಳು ಜಮೀರ್‌ ಅಹಮದ್‌ ಖಾನ್‌ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಜಮೀರ್‌ ಹಲವರೊಂದಿಗೆ ಹಣಕಾಸು ವ್ಯವಹಾರ ನಡೆಸಿರುವುದು ಬೆಳಕಿಗೆ ಬಂದಿತ್ತು. ಬಳಿಕ ಇ.ಡಿ.ವರದಿ ಆಧರಿಸಿ ಅಂದಿನ ಭ್ರಷ್ಟಾಚಾರ ನಿಗ್ರಹ ದಳವು(ಎಸಿಬಿ) ಜಮೀರ್‌ ಅಹಮದ್‌ ವಿರುದ್ಧ ಅಕ್ರಮ ಆಸ್ತಿ ಸಂಪಾದನೆ ಆರೋಪದಡಿ ಪ್ರಕರಣ ದಾಖಲಿಸಿತ್ತು. ಬಳಿಕ ಎಸಿಬಿ ರದ್ದುಗೊಂಡ ಹಿನ್ನೆಲೆಯಲ್ಲಿ ಈ ಪ್ರಕರಣವು ಲೋಕಾಯುಕ್ತಕ್ಕೆ ವರ್ಗಾವಣೆಯಾಗಿತ್ತು.

ಇದನ್ನೂ ಓದಿ: 'ನಿಂಗೆ ಹೆರಿಗೆ ಮಾಡಿಸ್ಬೇಕಾ?..' ಮಹಿಳೆಯರಿಗೆ ಆರ್‌ವಿ ದೇಶಪಾಂಡೆ, ನಾಳೆ ಬಿಜೆಪಿ ಪ್ರತಿಭಟನೆ