ಮಾಜಿ ಪ್ರಧಾನಿ ದೇವೇಗೌಡ ಅವರೇ ನನ್ನ ರಾಜಕೀಯ ಗುರುಗಳು ಎಂದು ವಸತಿ ಸಚಿವ ಜಮೀರ್ ಅಹಮದ್ ಹೇಳಿದ್ದಾರೆ.
ಬೆಂಗಳೂರು (ಆ.07): ಮಾಜಿ ಪ್ರಧಾನಿ ದೇವೇಗೌಡ ಅವರೇ ನನ್ನ ರಾಜಕೀಯ ಗುರುಗಳು ಎಂದು ವಸತಿ ಸಚಿವ ಜಮೀರ್ ಅಹಮದ್ ಹೇಳಿದ್ದಾರೆ. ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು ಯಾವುದೇ ಪಕ್ಷದಲ್ಲಿ ಇರಬಹುದು. ಆದರೆ ಗುರುವನ್ನಂತೂ ಬದಲಾಯಿಸಲು ಸಾಧ್ಯವಿಲ್ಲ. ಬಹಳ ಬಡತನದ ಕುಟುಂಬದಿಂದ ಮೇಲೆ ಬಂದು ಸಿಎಂ ಆಗಿ, ಈ ದೇಶದ ಪ್ರಧಾನಿಯಾದರು. ಇಂದಿನ ವಿದ್ಯಾರ್ಥಿಗಳಿಗೆ ಅವರು ಪ್ರೇರಣೆ. ಸಾಧಿಸಬೇಕೆಂಬ ಛಲ, ಕಠಿಣ ಪರಿಶ್ರಮ, ಶ್ರದ್ಧೆಯಿದ್ದರೆ ಜೀವನದಲ್ಲಿ ಏನನ್ನೂ ಬೇಕಾದರು ಸಾಧಿಸಬಹುದು. ವಿದ್ಯಾರ್ಥಿಗಳು ಶಿಕ್ಷಣಕ್ಕೆ ಹೆಚ್ಚಿನ ಆಧ್ಯತೆ ನೀಡಿ ಪೋಷಕರ ಆಸೆಯನ್ನು ನನಸು ಮಾಡಬೇಕು ಎಂದು ಸಲಹೆ ನೀಡಿದರು.
ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್: ಶಿಕ್ಷಕರು, ಪ್ರಾಂಶುಪಾಲರು, ಹಾಸ್ಟೆಲ್‌ಗಳ ವಾರ್ಡನ್‌ಗಳು ಶಾಲೆಗೆ ಬರುವ ಅಲ್ಪಸಂಖ್ಯಾತ ಕುಟುಂಬದ ಬಡ ಮಕ್ಕಳನ್ನು ನಮ್ಮ ಮಕ್ಕಳೆಂದು ತಿಳಿದುಕೊಂಡು ಶಿಕ್ಷಣ ಒದಗಿಸಬೇಕು ಎಂದು ಸಚಿವ ಜಮೀರ್ ಅಹಮದ್ ಖಾನ್ ತಿಳಿಸಿದರು. ವಸಂತನಗರದ ಅಂಬೇಡ್ಕರ್ ಭವನದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ನಿರ್ದೇಶನಾಲಯದಿಂದ ಆಯೋಜಿಸಿದ್ದ ಶೈಕ್ಷಣಿಕ ಕಾರ್ಯಾಗಾರ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಿಸಿ ಮಾತನಾಡಿದರು.
ಕೆಲವು ಹಾಸ್ಟೆಲ್‌ಗಳಲ್ಲಿ ವಾರ್ಡನ್‌ಗಳು ಮಕ್ಕಳ ವಿರುದ್ಧ ತುಂಬಾ ಕೆಟ್ಟದಾಗಿ ನಡೆದುಕೊಳ್ಳುತ್ತಾರೆ. ಆ ನೊಂದ ಮಕ್ಕಳ ಶಾಪ ನಮಗೆ ತಟ್ಟುತ್ತದೆ ಎಂದರು. ಕೆಎಂಡಿಸಿ ಅಧ್ಯಕ್ಷ ಅಲ್ತಾಫ್ ಖಾನ್, ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ನಿಸಾರ್ ಅಹಮದ್, ಉರ್ದು ಅಕಾಡೆಮಿ ಅಧ್ಯಕ್ಷ ಮೊಹಮ್ಮದ್ ಅಲಿ ಖಾಜಿ, ಹಜ್ ಸಮಿತಿ ಅಧ್ಯಕ್ಷ ಟಿಪ್ಪು, ಕ್ರಿಶ್ಚಿಯನ್ ಅಭಿವೃದ್ಧಿ ನಿಗಮ ಅಧ್ಯಕ್ಷ ಪ್ರೊ.ಜಾಫಟ್, ಅಲ್ಪಸಂಖ್ಯಾತ ರ ಕಲ್ಯಾಣ ನಿರ್ದೇಶನಾಲಯ ನಿರ್ದೇಶಕ ಜಿಲಾನಿ ಮೊಕಾಶಿ, ಸಚಿವರ ಆಪ್ತ ಕಾರ್ಯದರ್ಶಿ ಸರ್ಫಾರಾಜ್ ಖಾನ್ ಇದ್ದರು.
