ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರರ ಹೇಳಿಕೆಗಳಿಂದ ಸಿಎಂಗೆ ಮುಜುಗರವಾಗಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳಲು ಯತೀಂದ್ರರೊಂದಿಗೆ ಮಾತನಾಡುವುದಾಗಿ ತಿಳಿಸಿದ ಅವರು, ಸಿಎಂ ಬದಲಾವಣೆ ವಿಚಾರ ಹೈಕಮಾಂಡ್ ನಿರ್ಧಾರಕ್ಕೆ ಬಿಟ್ಟಿದ್ದು ಎಂದರು

ಬೆಳಗಾವಿ(ಡಿ.11): ಯತೀಂದ್ರ ಅವರ ಹೇಳಿಕೆಗಳಿಂದ ಸಿಎಂಗೆ ಮುಜುಗರವಾಗುವುದು ಸಹಜ. ಆ ರೀತಿ ಹೇಳಿಕೆ ಕೊಡಬಾರದು ಈಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆಗಳಿಂದ ರಾಜ್ಯ ರಾಜಕೀಯದಲ್ಲಿ ಉಂಟಾದ ಗೊಂದಲದ ಕುರಿತು ಪ್ರತಿಕ್ರಿಯಿಸಿದ ಸಚಿವ ಸತೀಶ್ ಜಾರಕಿಹೊಳಿ ಅವರು ಸರ್ಕಿಟ್ ಹೌಸ್‌ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದರು.

ಯತೀಂದ್ರರನ್ನ ಭೇಟಿ ಮಾಡಿಲ್ಲ: ಜಾರಕಿಹೊಳಿ

ಒಟ್ಟಿಗೆ ಕುಳಿತು ಊಟ ಮಾಡಿದ ಬಳಿಕವೂ ತಾವು ಯತೀಂದ್ರ ಅವರನ್ನು ಭೇಟಿ ಮಾಡಿಲ್ಲ ಎಂದ ಸತೀಶ್ ಜಾರಕಿಹೊಳಿ ಅವರು, ಸಿಎಂ ಹೇಳಿಕೆ ಗೊಂದಲ ವಿಚಾರವು ವರಿಷ್ಠರ ಗಮನಕ್ಕೆ ತರಲು ನಿರ್ಧರಿಸಲಾಗಿದೆ ಎಂದು. ಈಗ ಆಗಿದ್ದು ಆಗಿಹೋಗಿದೆ ವಾಪಾಸ್ ಬರಲ್ಲ. ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳೋಣ. ಎಲ್ಲರೂ ಕೂಡಿ ಮುಂದೆ ಹೀಗೆ ಆಗದ ಹಾಗೆ ಮಾತಾಡೋಣ ಎಂದು ತಿಳಿಸಿದರು. ಯತೀಂದ್ರ ಅವರ ಹೇಳಿಕೆಗಳು ಪಕ್ಷಕ್ಕೆ ಏನು ಲಾಭ, ನಷ್ಟ ತರುತ್ತದೆ ಎಂಬುದರ ಕುರಿತು ಚರ್ಚಿಸಲು ತಾವು ಸಂಜೆ ಅಥವಾ ನಾಳೆ ಅವರ ಜೊತೆಗೆ ಮಾತನಾಡುತ್ತೇನೆ ಎಂದು ಜಾರಕಿಹೊಳಿ ಸ್ಪಷ್ಟಪಡಿಸಿದರು.

ಯತೀಂದ್ರ ಅವರ ಹೇಳಿಕೆಯಿಂದ ಸಿಎಂಗೆ ಮುಜುಗರ ಆಯ್ತ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅವರು (ಯತೀಂದ್ರ) ಹೇಳಬಾರದು. ಅವರ ಪರವಾಗಿ ಬೇರೆ ಯಾರಾದ್ರೂ ಹೇಳಿದ್ರೆ ಓಕೆ. ಅವರು ಹೇಳಿರೋದ್ರಿಂದ ಸ್ವಲ್ಪ ಮುಜುಗರ ಆಗುತ್ತೆ. ಬೇರೆ ಅವರು ಹೇಳಿದ್ರೆ ಅದಕ್ಕೆ ಮಹತ್ವ ಇರುತ್ತೆ ಎಂದರು.

ಸಿಎಂ ಬದಲಾವಣೆ ವರಿಷ್ಠರ ನಿರ್ಧಾರ

ತಮ್ಮನ್ನು ಸಿಎಂ ಮಾಡಬೇಕು ಎಂದು ಸ್ವಾಮೀಜಿ ಹೇಳಿಕೆ ನೀಡಿದ್ದ ವಿಚಾರದ ಕುರಿತು ಕೇಳಲಾದ ಪ್ರಶ್ನೆಗೆ, ಆ ಪ್ರಶ್ನೆ ಉದ್ಭವಿಸಲ್ಲ ಎಂದು ಸತೀಶ್ ಜಾರಕಿಹೊಳಿ ತಳ್ಳಿಹಾಕಿದರು. ಆ ಹೇಳಿಕೆ ಬೆನ್ನಲ್ಲೇ ಸಿದ್ದರಾಮಯ್ಯ ಅವರು ಸ್ಥಾನದಿಂದ ಇಳಿಯುತ್ತಾರೆ ಎಂದು ಏಕೆ ಭಾವಿಸಬೇಕು? ಇದು ಸುಮಾರು ಒಂದು ವರ್ಷದಿಂದ ನಡೀತಾನೆ ಇದೆ. ಸಿದ್ದರಾಮಯ್ಯ ಅವರ ಜಾಗಕ್ಕೆ ಬೇರೆ ಅವರು ಬರೋಕೆ ಅವಕಾಶ ಇಲ್ಲ, ಅದಕ್ಕೆ ಕಾಯಬೇಕು. ಸಂದರ್ಭ ಮತ್ತು ಸನ್ನಿವೇಶಗಳನ್ನು ನೋಡೋಣ. ಸದ್ಯಕ್ಕೆ ಆ ರೀತಿಯ ಸನ್ನಿವೇಶ ನಮ್ಮ ಪಕ್ಷದಲ್ಲಿಲ್ಲ ಎಂದರು.

ಸಿಎಂ ಸಿದ್ದರಾಮಯ್ಯ ಅವರು ಪೂರ್ಣ 5 ವರ್ಷ ಮುಂದುವರೆಯುತ್ತಾರೆಯೇ ಎಂಬ ಪ್ರಶ್ನೆಗೆ, ಈಗ ಮಾಡಿರೋದು ಹಂಗೆ ತಿಳಿಯುತ್ತೆ. ನಮಗೆ ಅರ್ಧ ಅಂತ ಯಾರು ಹೇಳಿಲ್ಲ. ಅರ್ಧನೂ ಹೇಳಿಲ್ಲ‌ ಪೂರ್ತಿನೂ ಹೇಳಿಲ್ಲ. ಈಗ ಇದ್ದಾರೆ, ಅಲ್ಲಿಯವರೆಗೆ ಇರ್ತಾರೆ ಅನ್ನೋದು ನಮ್ಮ ಭಾವನೆ ಎಂದು ತಿಳಿಸಿದರು. ಏನೇ ಇದ್ದರೂ, ಹೈಕಮಾಂಡ್‌ನ ನಿರ್ಧಾರ ಅಷ್ಟೇ ಅಂತಿಮ ಎಂದು ಅವರು ಪದೇ ಪದೇ ಒತ್ತಿ ಹೇಳಿದರು.

ಎಲ್ಲರಿಗೂ ನೋಟಿಸ್ ಕೊಡಲು ಆಗೋಲ್ಲ:

ಯತೀಂದ್ರ ಹೇಳಿಕೆಗೆ ಇಕ್ಬಾಲ್ ಹುಸೇನ್ ಸೇರಿದಂತೆ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದ ಮತ್ತು ಅವರಿಗೆ ನೋಟಿಸ್ ನೀಡುವ ವಿಚಾರದ ಕುರಿತು ಪ್ರತಿಕ್ರಿಯಿಸಿದ ಜಾರಕಿಹೊಳಿ, ಎಲ್ಲರಿಗೂ ನೋಟೀಸ್ ಕೊಡಲು ಆಗಲ್ಲ. ನೋಟೀಸ್ ಕೊಡೋದ್ರಿಂದ ಎಲ್ಲವೂ ಪರಿಹಾರ ಆಗಲ್ಲ. ನೋಟೀಸ್‌ನಿಂದ ಸಮಾಧಾನ ಆದ್ರೆ ಕೊಡಬಹುದು. ಸಮಾಧಾನಕ್ಕೆ‌ ಕೊಡಬೇಕು ಅನ್ನೋದಾದ್ರೆ ಕೊಡಬಹುದು ಎಂದು ಹೇಳಿದರು. ಈಗ ಅವರಿಗೆ ನೋಟೀಸ್ ಕೊಟ್ಟಿದ್ರು ಏನಾಯ್ತು ಅವರಿಗೆ? ರಿಸಲ್ಟ್ ಏನು ಇಲ್ಲ. ಬಂದ್ ಆಗೋದಿದ್ರೆ ಬೇಕಿದ್ರೆ ಕೊಡಿಸೋಣ ಎಂದು ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.