ಬೆಂಗಳೂರಿನಿಂದ ಅಹಮದಾಬಾದ್‌ಗೆ ಐಪಿಎಲ್ ಪಂದ್ಯಗಳ ಸ್ಥಳಾಂತರವು ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದೆ. ಶಾಸಕರ ಟಿಕೆಟ್ ವ್ಯಾಮೋಹದಿಂದ ಹೀಗಾಗಿದೆ ಎಂದು ನಿಖಿಲ್ ಕುಮಾರಸ್ವಾಮಿ ಆರೋಪಿಸಿದರೆ, ಕ್ರೀಡಾಂಗಣದ ಸಾಮರ್ಥ್ಯವೇ ಕಾರಣ ಎಂದು ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದ್ದಾರೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಐಪಿಎಲ್ (IPL) ಪಂದ್ಯಗಳು ಅಹಮದಾಬಾದ್‌ಗೆ ಸ್ಥಳಾಂತರಗೊಂಡಿರುವ ವಿಚಾರ ಈಗ ರಾಜ್ಯ ರಾಜಕಾರಣದಲ್ಲಿ ದೊಡ್ಡ ಮಟ್ಟದ ವಾಕ್ಸಮರಕ್ಕೆ ಕಾರಣವಾಗಿದೆ. ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವೆ ಈ ವಿಚಾರವಾಗಿ 'ಟಿಕೆಟ್ ವಾರ್' ಶುರುವಾಗಿದೆ.
ನಿಖಿಲ್ ಕುಮಾರಸ್ವಾಮಿ ಕಿಡಿ: ಶಾಸಕರ ಟಿಕೆಟ್ ವ್ಯಾಮೋಹಕ್ಕೆ ಬೆಂಗಳೂರು ಬಲಿ
ಟ್ವೀಟ್ ಮೂಲಕ ರಾಜ್ಯ ಸರ್ಕಾರದ ವಿರುದ್ಧ ವೀರೋಚಿತವಾಗಿ ವಾಗ್ದಾಳಿ ನಡೆಸಿದ ನಿಖಿಲ್ ಕುಮಾರಸ್ವಾಮಿ, 'ನಮ್ಮ ರಾಜ್ಯದ ನಾಯಕರಿಗೆ ಅಭಿನಂದನೆಗಳು! ಕೇವಲ ವಿವಿಐಪಿ ಪಾಸ್‌ಗಳ ಹಪಾಹಪಿಯಿಂದಾಗಿ ನಮ್ಮೂರಿನಲ್ಲಿ ನಡೆಯಬೇಕಿದ್ದ ಫೈನಲ್ ಪಂದ್ಯವನ್ನು ಅಹಮದಾಬಾದ್‌ಗೆ ಉಡುಗೊರೆಯಾಗಿ ನೀಡಿದ್ದೀರಿ' ಎಂದು ವ್ಯಂಗ್ಯವಾಡಿದ್ದಾರೆ.
ಕ್ರೀಡಾಂಗಣ ಇರುವುದು ಕ್ರಿಕೆಟ್ ಅಭಿಮಾನಿಗಳಿಗಾಗಿ ಹೊರತು ವಿಐಪಿಗಳಿಗಾಗಿ ಅಲ್ಲ. ಕೆಲವು ಶಾಸಕರು ಉಚಿತ ಟಿಕೆಟ್‌ಗಳಿಗಾಗಿ ತೋರಿದ ವ್ಯಾಮೋಹ ಮತ್ತು ಚಿನ್ನಸ್ವಾಮಿ ಕ್ರೀಡಾಂಗಣವನ್ನು ತಮ್ಮ ವೈಯಕ್ತಿಕ ಟಿಕೆಟ್ ಕೌಂಟರ್ ಮಾಡಿಕೊಂಡಿದ್ದರಿಂದಲೇ ಇಂದು ಬೆಂಗಳೂರಿನ ಘನತೆ ರಾಷ್ಟ್ರಮಟ್ಟದಲ್ಲಿ ಕುಸಿದಿದೆ. ಬಿಸಿಸಿಐ ನಿರ್ಧಾರವು ಸರ್ಕಾರಕ್ಕೆ ಎಚ್ಚರಿಕೆ ಗಂಟೆಯಾಗಲಿ ಎಂದು ನಿಖಿಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಡಿ.ಕೆ. ಶಿವಕುಮಾರ್ ತಿರುಗೇಟು:
ನಿಖಿಲ್ ಕುಮಾರಸ್ವಾಮಿ ಅವರ ಆರೋಪಕ್ಕೆ ಮೈಸೂರಿನಲ್ಲಿ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್, 'ಅದೆಲ್ಲ ಸುಳ್ಳು, ಟಿಕೆಟ್‌ಗೂ ಪಂದ್ಯ ಶಿಫ್ಟ್ ಆಗುವುದಕ್ಕೂ ಯಾವುದೇ ಸಂಬಂಧವಿಲ್ಲ. ಬೇರೆ ಕಡೆಗಳಲ್ಲೂ 50 ಪ್ರತಿಶತದಷ್ಟು ಸೀಟುಗಳನ್ನು ಕೊಡುತ್ತಾರೆ. ಅಹಮದಾಬಾದ್‌ನಲ್ಲಿ ಒಂದು ಲಕ್ಷಕ್ಕೂ ಅಧಿಕ ಜನರು ಸೇರಬಹುದು ಎಂಬ ಕಾರಣಕ್ಕೆ ಅಲ್ಲಿಗೆ ಪಂದ್ಯಗಳನ್ನು ಶಿಫ್ಟ್ ಮಾಡಿರಬಹುದು ಅಷ್ಟೇ. ಯಾರೋ ಇನ್ಫ್ಲೂಯೆನ್ಸ್ ಮಾಡಿ ದೊಡ್ಡ ಸ್ಟೇಡಿಯಂ ಬೇಕು ಎಂದು ಮಾಡಿರಬಹುದು. ಟಿಕೆಟ್ ವಿಚಾರವಾಗಿ ಪಂದ್ಯ ಸ್ಥಳಾಂತರವಾಗಿದೆ ಎಂದು ಯಾರು ಹೇಳಿದರು? ಮೊದಲು ಬಿಸಿಸಿಐನವರು ಈ ಬಗ್ಗೆ ಅಧಿಕೃತ ಹೇಳಿಕೆ ನೀಡಲಿ, ಆಮೇಲೆ ನಾನು ಅವರಿಗೆ ಉತ್ತರ ಕೊಡುತ್ತೇನೆ' ಎಂದು ಡಿಕೆಶಿ ತಿರುಗೇಟು ನೀಡಿದ್ದಾರೆ.
ಐಪಿಎಲ್ ಕ್ರಿಕೆಟ್ ಪಂದ್ಯದ ವಿಚಾರವಾಗಿ ಆರಂಭವಾದ ಈ ಆರೋಪ-ಪ್ರತ್ಯಾರೋಪಗಳು ಈಗ ರಾಜ್ಯದ ಸತ್ತಾ ಪಕ್ಷ ಮತ್ತು ವಿರೋಧ ಪಕ್ಷಗಳ ನಡುವಿನ ಪ್ರತಿಷ್ಠೆಯ ಹೋರಾಟವಾಗಿ ಬದಲಾಗಿದೆ.


