ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಫೈನಲ್ ತಲುಪಿದ ಹಿನ್ನೆಲೆಯಲ್ಲಿ, ಬೆಂಗಳೂರು ನಗರ ಪೊಲೀಸರು ಸಂಭ್ರಮಾಚರಣೆಗೆ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದಾರೆ. ಕಳೆದ ವರ್ಷದ ಕಾಲ್ತುಳಿತದ ಘಟನೆಯಿಂದ ಪಾಠ ಕಲಿತಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಪಟಾಕಿ ಸಿಡಿಸುವುದು ನಿಷೇಧಿಸಲಾಗಿದೆ.

ಬೆಂಗಳೂರು (ಮೇ 29): ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal challengers Bengaluru - RCB) ತಂಡವು ಫೈನಲ್ ತಲುಪುತ್ತಿದ್ದಂತೆಯೇ ಇಡೀ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru RCB Fans) ಸಂಭ್ರಮದ ವಾತಾವರಣ ಮನೆಮಾಡಿದೆ. ಆದರೆ, ಈ ಸಂಭ್ರಮ ಹದ್ದುಮೀರಿ ಅನಾಹುತಕ್ಕೆ ದಾರಿ ಮಾಡಿಕೊಡಬಾರದು ಎಂಬ ನಿಟ್ಟಿನಲ್ಲಿ ಬೆಂಗಳೂರು ನಗರ ಪೊಲೀಸ್ ಇಲಾಖೆ (Bengaluru City Police) ಈಗಿನಿಂದಲೇ ಎಚ್ಚೆತ್ತುಕೊಂಡಿದೆ. ಕಳೆದ ವರ್ಷ ಚಿನ್ನಸ್ವಾಮಿ ಕ್ರೀಡಾಂಗಣದ (M Chinnaswamy Stadium) ಬಳಿ ನಡೆದ ಕಾಲ್ತುಳಿತದಂತಹ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ಈ ಬಾರಿ ಫೈನಲ್ ಪಂದ್ಯಕ್ಕೂ ಮುನ್ನವೇ ಅಭಿಮಾನಿಗಳಿಗೆ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು (Guidelines) ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ಮುಖ್ಯವಾಗಿ ಆರ್‌ಸಿಬಿ ಕಪ್ ಗೆದ್ದರೂ ಪಟಾಕಿ ಹೊಡೆಯುವಂತಿಲ್ಲ ಎಂದು ಸೂಚಿಸಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಚಿನ್ನಸ್ವಾಮಿ ಕಾಲ್ತುಳಿತದ ಎಫೆಕ್ಟ್:

ಕಳೆದ ಬಾರಿ ಆರ್‌ಸಿಬಿ 18 ವರ್ಷದ ಬಳಿಕ ಮೊದಲ ಬಾರಿಗೆ ಐಪಿಎಲ್ ಕಪ್ ಗೆದ್ದು ವಿಜಯೋತ್ಸವ ಆಚರಣೆಗೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಬಂದಾಗ ಅಭಿಮಾನಿಗಳ ನೂಕುನುಗ್ಗಲಿನಿಂದಾಗಿ ಉಂಟಾದ ಅವಾಂತರಗಳು ಪೊಲೀಸರಿಗೆ ದೊಡ್ಡ ಪಾಠ ಕಲಿಸಿವೆ. ಈ ವೇಳೆ ಕಾಲ್ತುಳಿತ ಸಂಭವಿಸಿ 11 ಆರ್‌ಸಿಬಿ ಅಭಿಮಾನಿಗಳು ಸಾವನ್ನಪ್ಪಿದ್ದರು. ಹೀಗಾಗಿ, ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಈ ಬಾರಿ ಯಾವುದೇ ರಿಸ್ಕ್ ತೆಗೆದುಕೊಳ್ಳಲು ಇಲಾಖೆ ಸಿದ್ಧವಿಲ್ಲ. ಹೀಗಾಗಿ, ಪಂದ್ಯದ ದಿನದಂದು ನಗರದಾದ್ಯಂತ ಶಾಂತಿ ಕಾಪಾಡಲು ಪೊಲೀಸ್ ಇಲಾಖೆ ಮುಂದಾಗಿದೆ.

ಪೊಲೀಸರು ಹೊರಡಿಸಿರುವ ಪ್ರಮುಖ ಮಾರ್ಗಸೂಚಿಗಳು ಇಲ್ಲಿವೆ:

ಸಾರ್ವಜನಿಕ ಸಂಭ್ರಮಾಚರಣೆಗೆ ನಿರ್ಬಂಧ: ರಸ್ತೆಗಳಲ್ಲಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಗುಂಪು ಸೇರಿ ಸಂಭ್ರಮಾಚರಣೆ ಮಾಡುವಂತಿಲ್ಲ. ಇದು ಸಂಚಾರ ದಟ್ಟಣೆ ಮತ್ತು ಸಾರ್ವಜನಿಕರಿಗೆ ಕಿರಿಕಿರಿ ಉಂಟುಮಾಡುವುದರಿಂದ ಇದಕ್ಕೆ ನಿಷೇಧ ಹೇರಲಾಗಿದೆ.

ಎಲ್ ಇ ಡಿ (LED) ವಾಲ್ ಪ್ರಸಾರಕ್ಕೆ ಬ್ರೇಕ್: ಅನುಮತಿ ಇಲ್ಲದೆ ರಸ್ತೆಗಳಿಗೆ ಮುಖಮಾಡಿ ದೊಡ್ಡ ಎಲ್ ಇ ಡಿ ವಾಲ್ ಗಳನ್ನು ಅಳವಡಿಸಿ ಪಂದ್ಯ ಪ್ರಸಾರ ಮಾಡುವಂತಿಲ್ಲ. ಈಗಾಗಲೇ ಅಳವಡಿಸಿರುವ ಸ್ಕ್ರೀನ್‌ಗಳಲ್ಲೂ ಪಂದ್ಯದ ಲೈವ್ ಸ್ಟ್ರೀಮಿಂಗ್ ಮಾಡಲು ಅವಕಾಶವಿಲ್ಲ.

ಪಟಾಕಿ ಸಿಡಿಸುವಂತಿಲ್ಲ: ಆರ್ ಸಿ ಬಿ ಫೈನಲ್ ಗೆದ್ದರೂ ಸಹ ಸಾರ್ವಜನಿಕ ಸ್ಥಳಗಳಲ್ಲಿ ಪಟಾಕಿ ಸಿಡಿಸಿ ಶಬ್ದ ಮಾಲಿನ್ಯ ಅಥವಾ ಅನಾಹುತಗಳಿಗೆ ದಾರಿ ಮಾಡಿಕೊಡುವಂತಿಲ್ಲ.

ಸಾರಿಗೆ ನಿಯಮಗಳ ಪಾಲನೆ: ಬೈಕ್ ರ್ಯಾಲಿ ನಡೆಸುವುದು, ಅತಿವೇಗವಾಗಿ ಚಾಲನೆ ಮಾಡುವುದು, ರಸ್ತೆಗಳಲ್ಲಿ ಸ್ಟಂಟ್ ಮಾಡುವುದು ಮತ್ತು ಕರ್ಕಶ ಹಾರ್ನ್ ಬಳಸುವುದಕ್ಕೆ ಕಟ್ಟುನಿಟ್ಟಿನ ನಿಷೇಧವಿದೆ. ಟ್ರಾಫಿಕ್ ಪೊಲೀಸರ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು.

ಮದ್ಯಪಾನ ನಿಷೇಧ: ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ ಮಾಡುವುದು ಅಥವಾ ಮದ್ಯ ಸೇವಿಸಿ ಗಲಾಟೆ ಮಾಡುವುದು ಕಂಡುಬಂದಲ್ಲಿ ತಕ್ಷಣವೇ ಕಾನೂನು ಕ್ರಮ ಕೈಗೊಳ್ಳಲಾಗುವುದು.

ಸಾಮಾಜಿಕ ಜಾಲತಾಣದ ಮೇಲೆ ನಿಗಾ: ಫೇಸ್‌ಬುಕ್, ಎಕ್ಸ್ (ಟ್ವಿಟರ್) ಅಥವಾ ಇನ್ಸ್ಟಾಗ್ರಾಮ್‌ನಲ್ಲಿ ಬೇರೆ ತಂಡದ ಅಭಿಮಾನಿಗಳ ವಿರುದ್ಧ ದ್ವೇಷಪೂರಿತ ಪೋಸ್ಟ್ ಹಾಕುವಂತಿಲ್ಲ. ಅಶಾಂತಿ ಸೃಷ್ಟಿಸುವ ಯಾವುದೇ ಪೋಸ್ಟ್ ಹಂಚಿಕೊಂಡರೆ ಐಟಿ ಕಾಯ್ದೆಯಡಿ ಕ್ರಮ ಜರುಗಿಸಲಾಗುವುದು.

ಅಭಿಮಾನಿಗಳಿಗೆ ಮನವಿ:

ಪಂದ್ಯದ ಫಲಿತಾಂಶ ಏನೇ ಇರಲಿ, ಬೇರೆ ತಂಡದ ಅಭಿಮಾನಿಗಳನ್ನು ನಿಂದಿಸುವುದು ಅಥವಾ ಜಗಳಕ್ಕೆ ಪ್ರಚೋದನೆ ನೀಡುವುದನ್ನು ಮಾಡಬಾರದು. ಕ್ರೀಡೆಯನ್ನು ಕ್ರೀಡಾ ಮನೋಭಾವದಿಂದ ಕಾಣಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ. ನಗರದ ಪ್ರಮುಖ ವೃತ್ತಗಳು ಮತ್ತು ಜನಸಂದಣಿ ಇರುವ ಪ್ರದೇಶಗಳಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದ್ದು, ಸಿಸಿಟಿವಿ ಮೂಲಕ ಹದ್ದಿನ ಕಣ್ಣು ಇಡಲಾಗಿದೆ.

ಈ ಮಾರ್ಗಸೂಚಿಗಳನ್ನು ಮೀರುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವುದಾಗಿ ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ. ಆರ್ ಸಿ ಬಿ ಅಭಿಮಾನಿಗಳು ಜವಾಬ್ದಾರಿಯುತವಾಗಿ ವರ್ತಿಸಿ, ನಗರದ ಶಾಂತಿ ಕಾಪಾಡುವಂತೆ ಕೋರಲಾಗಿದೆ.