ದೇಶ ವೈಜ್ಞಾನಿಕವಾಗಿ ಮುಂದುವರೆಯುತ್ತಿದೆ. ಇದರ ಜೊತೆಗೆ ಭವಿಷ್ಯದ ಪೀಳಿಗೆಗೆ ಧಾರ್ಮಿಕ ಪ್ರಜ್ಞೆ ಮೂಡಿಸುವ ಕೆಲಸ ಮಾಡುತ್ತಿರುವುದು ಉತ್ತಮ ಸಮಾಜ ನಿರ್ಮಾಣಕ್ಕೆ ಸಹಕಾರಿ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.

ಮಳವಳ್ಳಿ (ಮೇ.05): ದೇಶ ವೈಜ್ಞಾನಿಕವಾಗಿ ಮುಂದುವರೆಯುತ್ತಿದೆ. ಇದರ ಜೊತೆಗೆ ಭವಿಷ್ಯದ ಪೀಳಿಗೆಗೆ ಧಾರ್ಮಿಕ ಪ್ರಜ್ಞೆ ಮೂಡಿಸುವ ಕೆಲಸ ಮಾಡುತ್ತಿರುವುದು ಉತ್ತಮ ಸಮಾಜ ನಿರ್ಮಾಣಕ್ಕೆ ಸಹಕಾರಿ ಎಂದು ಜೆಡಿಎಸ್ ಯುವ ಘಟಕದ ರಾಜ್ಯ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು. ತಾಲೂಕಿನ ಅಮೃತೇಶ್ವರನಹಳ್ಳಿ ಕಾಲೋನಿಯಲ್ಲಿ ಶ್ರೀಮಹಾಗಣಪತಿ ಸೇವಾ ಸಮಿತಿಯಿಂದ ನಡೆದ ಮಹಾಗಣಪತಿ ದೇವಾಲಯದ ಪುನರ್ ಪ್ರತಿಷ್ಠಾಪನೆ ಮತ್ತು ವಿಮಾನ ಗೋಪುರ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಭವಿಷ್ಯದ ದೃಷ್ಟಿಯಿಂದ ಯುವ ಪೀಳಿಗೆಗೆ ಇರಬೇಕಾದ ಧಾರ್ಮಿಕ ಪ್ರಜ್ಞೆ, ಸಂಸ್ಕೃತಿ, ಪರಂಪರೆಯನ್ನು ಪೂರ್ವಜರ ಹಾದಿಯಲ್ಲಿಯೇ ಇಂತಹ ಧಾರ್ಮಿಕ ಕಾರ್ಯಕ್ರಮ ಮುಂದುವರೆಸಿಕೊಂಡು ಹೋಗುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದರು. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಇಳಿ ವಯಸ್ಸಿನಲ್ಲಿಯೂ ರಾಜ್ಯಸಭೆ ಸದಸ್ಯರಾಗಿದ್ದ ಅವಧಿಯಲ್ಲಿ ತಮ್ಮ ಸಿಕ್ಕ ಅವಕಾಶದಲ್ಲಿ ರಾಜ್ಯದ ನೆಲ, ಜಲ ಭಾಷೆಯ ಅಭಿವೃದ್ಧಿಗಾಗಿ ನಿರಂತರವಾಗಿ ಶ್ರಮಿಸುವ ಮೂಲಕ ಅಭಿಮಾನವನ್ನು ಸಾಬೀತು ಪಡಿಸಿದ್ದಾರೆ ಎಂದರು.

ಅದೇ ರೀತಿ ಜಿಲ್ಲೆಯ ಜನರ ಅರ್ಶೀವಾದದಿಂದ ಸಂಸದರಾಗಿ ಆಯ್ಕೆಯಾಗಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕೇಂದ್ರದ ಬಹು ದೊಡ್ಡ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವರಾಗಿ ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ. ಜನರು ನಮ್ಮ ಕುಟುಂಬದ ಮೇಲೆ ಇಟ್ಟಿರುವ ಪ್ರೀತಿ, ವಿಶ್ವಾಸಕ್ಕೆ ಸದಾ ಚಿರಋಣಿಯಾಗಿರುವುದಾಗಿ ಹೇಳಿದರು. ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧಿಪತಿ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ಆಧುನಿಕ ವಿಜ್ಞಾನ ತಂತ್ರಜ್ಞಾನ ಯುಗದಲ್ಲಿಯೂ ಕೂಡ ಗಣಪತಿ ದೇವಸ್ಥಾನ ನಿರ್ಮಿಸಿ ಪೂಜಿಸುತ್ತಿರುವುದು ಆಧ್ಯಾತ್ಮಿಕತೆಗೆ ಕೊಟ್ಟ ಗೌರವವಾಗಿದೆ ಎಂದರು.

ಗಣಪತಿಗೆ ಮೊದಲ ಪೂಜೆ

ಸರ್ವ ವ್ಯಾಪ್ತಿಯಲ್ಲಿ ನೆಲೆಸಿ ಸಕಲ ಶಕ್ತಿಯನ್ನು ಹೊಂದಿರುವ ದೇವರನ್ನು ಪೂಜಿಸಿದರೇ ಜೀವನದಲ್ಲಿ ನೆಮ್ಮದಿ ಕಾಣಬಹುದು. ಮನುಷ್ಯನ ಜನ್ಮವನ್ನು ಕೊಡುವ ಜೊತೆಗೆ ಗಾಳಿ ಬೆಳಕನ್ನು ನೀಡಿ ಜೀವಿಸಲು ಅನುವು ಮಾಡಿಕೊಟ್ಟಿರುವ ಭಗವಂತವನ್ನು ಪ್ರತಿಯೊಬ್ಬರು ಪೂಜಿಸಬೇಕಿದೆ ಎಂದರು. ಮೊದಲ ಪೂಜೆ ಗಣಪತಿಗೆ ಸಲ್ಲುತ್ತದೆ. ಗಣಪತಿ ಪೂಜಿಸಿ ಪ್ರಾರ್ಥಿಸಿ ನಾಲ್ಕರು ಬಾರಿ ಮಂತ್ರವನ್ನು ಜಪಿಸಿದರೇ ಶೀಘ್ರ ಸಿದ್ದೀ, ಪ್ರಾಧಾಯಕನ್ನಾಗಿ ಬಹುಬೇಗ ವರ ಕೊಡುತ್ತೇನೆ ಎನ್ನುವು ನಂಬಿಕೆ ಭಕ್ತರಲ್ಲಿದೆ. ದೇವರ ಮಂತ್ರ, ಸಾನಿಧ್ಯವನ್ನು ಎಂದಿಗೂ ಮರೆಯಬಾರದು ದೇವರ ದೈವಶಕ್ತಿ ಎಲ್ಲರ ಮೇಲಿರಲಿ ಎಂದು ಆಶಿಸಿದರು.

ಮತ್ತಿತಾಳೇಶ್ವರ ಸ್ವಾಮಿಯ ಬಸವಪ್ಪ ಅವರ ದಿವ್ಯಸಾನಿಧ್ಯದಲ್ಲಿ ಶಿಖರ ಕಳಸ ಪ್ರತಿಷ್ಠಾಪನೆ, ಕುಂಭಾಭಿಷೇಕ, ನೇತ್ರೋನ್ಮಿಲನ, ನವಗ್ರಹ ಹೋಮ, ವಾಸ್ತು ಹೋಮ, ಪ್ರಧಾನ ಹೋಮ, ಪೂರ್ಣಹುತಿ, ಮಹಮಂಗಳಾರತಿ, ತೀರ್ಥಪ್ರಸಾದ ವಿನಿಯೋಗದ ಪೂಜಾ ಕಾರ್ಯಕ್ರಮ ಅಂಚೆದೊಡ್ಡಿಯ ಗುರುಮಠದ ಎಸ್.ನಾಗಭೂಷಣಾರಾದ್ಯ ಅವರ ನೇತೃತ್ವದಲ್ಲಿ ನಡೆಯಿತು