ಬೆಂಗಳೂರಿಗೆ 29ರ ಮಳೆ ಕಂಟಕ: ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ದುರಂತಕ್ಕ 7 ಜನರ ಬಲಿಯಾಗಿ ಒಂದು ತಿಂಗಳಿಗೆ ವಿಜಯನಗರ ಕ್ಲಬ್ ಕಾಂಪೌಂಡ್ ಕುಸಿದು ಆಟೋ ಚಾಲಕ ಸಾವನ್ನಪ್ಪಿದ್ದಾನೆ. ಮಳೆಯಿಂದ ರಕ್ಷಣೆ ಪಡೆಯಲು ಆಟೋ ನಿಲ್ಲಿಸಿದ್ದ ಚಾಲಕ ಶಿವ ಬೋರಯ್ಯ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಬೆಂಗಳೂರು (ಮೇ 29): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru Rain) ಶುಕ್ರವಾರ ಸಂಜೆ ಸುರಿದ ಮಳೆ ಆರ್ಭಟಕ್ಕೆ ಕಾಂಪೌಂಡ್ ಕುಸಿದು (Wall Collapse) ಮತ್ತೊಬ್ಬ ವ್ಯಕ್ತಿ ಮೃತಪಟ್ಟಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ಬೌರಿಂಗ್ ಆಸ್ಪತ್ರೆ ಗೋಡೆಯ ಕುಸಿದು 7 ಜನರು ಸಾವನ್ನಪ್ಪಿದ ಘಟನೆ ಮಾಸುವ ಮುನ್ನವೇ ವಿಜಯನಗರದ ಪ್ರತಿಷ್ಠಿತ ಕ್ಲಬ್ (Vijayanagara Club) ಗೋಡೆ ಕುಸಿದು ಆಟೋ ಚಾಲಕನೊಬ್ಬ ಸ್ಥಳದಲ್ಲೇ (Auto Driver) ಸಾವನ್ನಪ್ಪಿರುವ ಆಘಾತಕಾರಿ ಘಟನೆ ನಡೆದಿದೆ. ಮಳೆಯಿಂದ ರಕ್ಷಣೆ ಪಡೆಯಲು ಆಟೋವನ್ನು ಪಕ್ಕಕ್ಕೆ ನಿಲ್ಲಿಸಿದ್ದೇ ಆ ದುರ್ದೈವಿ ಮಾಡಿದ ತಪ್ಪಾಯಿತು.
ಘಟನೆಯ ವಿವರ:
ಮೃತ ವ್ಯಕ್ತಿಯನ್ನು ಗಂಗೊಂಡಹಳ್ಳಿ ನಿವಾಸಿ ಶಿವ ಬೋರಯ್ಯ (55) ಎಂದು ಗುರುತಿಸಲಾಗಿದೆ. ವೃತ್ತಿಯಲ್ಲಿ ಆಟೋ ಚಾಲಕರಾಗಿದ್ದ ಇವರು, ಶುಕ್ರವಾರ ಸಂಜೆ ವಿಜಯನಗರದ ಸುತ್ತಮುತ್ತ ಬಾಡಿಗೆಗಾಗಿ ಸಂಚರಿಸುತ್ತಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಜೋರು ಮಳೆ ಶುರುವಾದ ಕಾರಣ, ಮಳೆಯಿಂದ ಬಚಾವಾಗಲು ವಿಜಯನಗರ ಕ್ಲಬ್‌ನ ಸ್ವಿಮ್ಮಿಂಗ್ ಪೂಲ್ ಪಕ್ಕದ ಗೋಡೆಯ ಬಳಿ ತಮ್ಮ ಆಟೋವನ್ನು ಪಾರ್ಕ್ ಮಾಡಿದ್ದರು. ಮಳೆ ಕಡಿಮೆಯಾಗಲಿ ಎಂದು ಆಟೋದ ಒಳಗೇ ಕುಳಿತಿದ್ದಾಗ ಈ ದುರಂತ ಸಂಭವಿಸಿದೆ.
ಬೃಹತ್ ಗೋಡೆ ಕುಸಿತ:
ಮಳೆಯ ಅಬ್ಬರಕ್ಕೆ ವಿಜಯನಗರ ಕ್ಲಬ್‌ನ ಸ್ವಿಮ್ಮಿಂಗ್ ಪೂಲ್ ಆವರಣದ ಬೃಹತ್ ಗೋಡೆ ಸಂಪೂರ್ಣವಾಗಿ ನೆನೆದು ದುರ್ಬಲಗೊಂಡಿತ್ತು. ಶಿವ ಬೋರಯ್ಯ ಅವರು ಆಟೋದಲ್ಲಿ ಕುಳಿತಿದ್ದಾಗಲೇ ಬೃಹತ್ ಗೋಡೆ ರಭಸವಾಗಿ ಆಟೋದ ಮೇಲೆಯೇ ಕುಸಿದು ಬಿದ್ದಿದೆ. ಗೋಡೆಯ ಇಟ್ಟಿಗೆ ಮತ್ತು ಕಲ್ಲುಗಳ ಭಾರಕ್ಕೆ ಆಟೋ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಒಳಗೆ ಕುಳಿತಿದ್ದ ಶಿವ ಬೋರಯ್ಯ ಅವರಿಗೆ ತೀವ್ರ ಪೆಟ್ಟು ಬಿದ್ದಿದೆ. ಗೋಡೆ ಬಿದ್ದ ರಭಸಕ್ಕೆ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಇದನ್ನೂ ಓದಿ: ಬೆಂಗಳೂರು ಮಹಾಮಳೆಗೆ 7 ಬಲಿ: ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಕುಸಿದು ಭೀಕರ ದುರಂತ; ಮೂವರು ಪುಟ್ಟ ಮಕ್ಕಳೂ ಸಾವು!
ಸ್ಥಳಕ್ಕೆ ಪೊಲೀಸರ ಭೇಟಿ:
ಘಟನೆ ನಡೆದ ತಕ್ಷಣ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ವಿಜಯನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಜೆಸಿಬಿ ಸಹಾಯದಿಂದ ಕುಸಿದಿದ್ದ ಗೋಡೆಯ ಅವಶೇಷಗಳನ್ನು ತೆರವುಗೊಳಿಸಿ, ಆಟೋದೊಳಗೆ ಸಿಲುಕಿದ್ದ ಮೃತದೇಹವನ್ನು ಹೊರತೆಗೆಯಲಾಯಿತು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ನಗರದ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.
ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಆಕ್ರೋಶ:
ನಗರದಲ್ಲಿ ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಇಂತಹ ಹಳೆಯ ಮತ್ತು ದುರ್ಬಲ ಗೋಡೆಗಳ ಬಗ್ಗೆ ಎಚ್ಚರಿಕೆ ವಹಿಸಬೇಕಾದ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮತ್ತು ಸಂಬಂಧಪಟ್ಟ ಸಂಸ್ಥೆಗಳು ನಿರ್ಲಕ್ಷ್ಯ ವಹಿಸಿವೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಂದು ಗೋಡೆ ಕುಸಿತದಿಂದಾಗಿ ಬಡ ಕುಟುಂಬವೊಂದು ತನ್ನ ಆಧಾರಸ್ತಂಭವನ್ನೇ ಕಳೆದುಕೊಂಡಿದೆ. ಮೃತ ಶಿವ ಬೋರಯ್ಯ ಅವರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಈ ಸಂಬಂಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕ್ಲಬ್ ಆಡಳಿತ ಮಂಡಳಿಯ ನಿರ್ಲಕ್ಷ್ಯದ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. ಸಾರ್ವಜನಿಕರು ಮಳೆಯ ಸಮಯದಲ್ಲಿ ಮರಗಳು ಅಥವಾ ಹಳೆಯ ಕಟ್ಟಡಗಳ ಗೋಡೆಗಳ ಪಕ್ಕ ವಾಹನ ನಿಲ್ಲಿಸದಂತೆ ಪೊಲೀಸರು ಮನವಿ ಮಾಡಿದ್ದಾರೆ.
ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಕುಸಿದು 11 ಸಾವು:
ಬೆಂಗಳೂರಿನಲ್ಲಿ ಏಪ್ರಿಲ್ 29ರಂದು ಸುರಿದ ಭಾರಿ ಮಳೆಗೆ ಶಿವಾಜಿನಗರದ ಬೌರಿಂಗ್ ಆಸ್ಪತ್ರೆಯ ಕಾಂಪೌಂಡ್ ಗೋಡೆ ಕುಸಿದು, ಮೂವರು ಮಕ್ಕಳು ಸೇರಿದಂತೆ 7 ಮಂದಿ ದಾರುಣವಾಗಿ ಸಾವನ್ನಪ್ಪಿದ್ದರು. ಈ ದುರಂತ ನಗರದಲ್ಲಿ ಆಘಾತವನ್ನುಂಟು ಮಾಡಿದ್ದು, ಹಳೆಯ ಗೋಡೆಯ ನಿರ್ವಹಣೆ ಕೊರತೆಯೇ ಘಟನೆಗೆ ಕಾರಣವೆಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದಿಂದ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಿ ಆದೇಶ ಹೊರಡಿಸಿತ್ತು. ಆದರೂ ಎಚ್ಚೆತ್ತುಕೊಳ್ಳದ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಒಂದು ತಿಂಗಳ ಅಂತರಕ್ಕೆ ಸರಿಯಾಗಿ ಮತ್ತೊಬ್ಬ ವ್ಯಕ್ತಿ ಕಾಂಪೌಂಡ್ ಕುಸಿದು ಮೃತಪಟ್ಟಿದ್ದಾರೆ.

