ಕೆ.ಆರ್‌.ನಗರ ತಾಲೂಕಿನ ಅರ್ಜುನಹಳ್ಳಿ ಗ್ರಾಮದ ಯುವ ರೈತ ಎ.ಎಸ್‌. ಹರಿಪ್ರಸಾದ್‌ ಸಾವಯವ ಪದ್ಧತಿಯಲ್ಲಿ ಸಮಗ್ರ ಬೇಸಾಯ ಮಾಡುತ್ತಿದ್ದು, ವಾರ್ಷಿಕ 9 ಲಕ್ಷ ರು. ಆದಾಯ ಗಳಿಸುತ್ತಿದ್ದಾರೆ.

ಭಾಗ-25

ಅಂಶಿ ಪ್ರಸನ್ನಕುಮಾರ್‌

ಮೈಸೂರು (ಜೂ.16) : ಕೆ.ಆರ್‌.ನಗರ ತಾಲೂಕಿನ ಅರ್ಜುನಹಳ್ಳಿ ಗ್ರಾಮದ ಯುವ ರೈತ ಎ.ಎಸ್‌. ಹರಿಪ್ರಸಾದ್‌ ಸಾವಯವ ಪದ್ಧತಿಯಲ್ಲಿ ಸಮಗ್ರ ಬೇಸಾಯ ಮಾಡುತ್ತಿದ್ದು, ವಾರ್ಷಿಕ 9 ಲಕ್ಷ ರು. ಆದಾಯ ಗಳಿಸುತ್ತಿದ್ದಾರೆ.

ಪಿಯುಸಿ ನಂತರ ಓದಿಗೆ ತಿಲಾಂಜಲಿ ನೀಡಿದ ಹರಿಪ್ರಸಾದ್‌ ತಂದೆಯವರಿಗೆ ಸೇರಿದ 9 ಎಕರೆ ಜಮೀನಿನಲ್ಲಿ ಕೃಷಿ ಕಾಯಕಕ್ಕೆ ಇಳಿದರು. ಈ ಜಮೀನಿಗೆ ಹೇಮಾವತಿ ಹಾಗೂ ಕಾವೇರಿಯಿಂದ ನೀರಾವರಿ ಸೌಲಭ್ಯವಿದೆ. ಜೊತೆಗೆ 2 ಕೊಳವೆ ಬಾವಿಗಳು ಕೂಡ ಇವೆ. ತರಕಾರಿ ಬೆಳೆಗಳಾದ ಟೊಮ್ಯಾಟೋ, ಮೆಣಸಿನಕಾಯಿ, ಬದನೆಕಾಯಿ, ಕುಂಬಳಕಾಯಿ ಬೆಳೆದು ಮಾರಾಟ ಮಾಡುತ್ತಾರೆ.

ವಿಎನ್‌ಆರ್‌ ಭತ್ತದ ತಳಿಯನ್ನು ಬೆಳೆಯುತ್ತಿದ್ದು, ಎಕರೆಗೆ 25 ಕ್ವಿಂಟಲ್‌ ಇಳುವರಿ ಬರುತ್ತಿದೆ. ತೆಂಗು- 200, ಅಡಿಕೆ-150, ಜಿ9 ಬಾಳೆ-600 ಗಿಡಗಳಿವೆ. 20 ಮೇಕೆಗಳು, 4 ನಾಟಿ ಹಸುಗಳು ಇವೆ. ಪ್ರತಿನಿತ್ಯ ಡೇರಿಗೆ ಹಾಲು ಪೂರೈಸುತ್ತಾರೆ.

ಅಂದು ಕೃಷಿಗಾಗಿ ಬ್ಯಾಂಕ್ ಉದ್ಯೋಗ ತೊರೆದ ಸಹೋದರರು,ಇಂದು 12 ಕೋಟಿ ರೂ. ವಹಿವಾಟು ನಡೆಸೋ ಸಂಸ್ಥೆಯ ಒಡೆಯರು!

ತರಕಾರಿ ಮಾರಾಟದಿಂದ 1 ಲಕ್ಷ, ತೆಂಗಿನಕಾಯಿ ಮಾರಾಟದಿಂದ 2 ಲಕ್ಷ, ಅಡಿಕೆ ಮಾರಾಟದಿಂದ 80 ರಿಂದ 90 ಸಾವಿರ, ಭತ್ತ ಮಾರಾಟದಿಂದ 2.5 ಲಕ್ಷ, ಮೇಕೆ ಮಾರಾಟದಿಂದ 2 ಲಕ್ಷ, ಹೈನುಗಾರಿಕೆಯಿಂದ 50 ರಿಂದ 60 ಸಾವಿರ ರೂ. ಆದಾಯ ಗಳಿಸುತ್ತಿದ್ದಾರೆ. ಅರ್ಜುನಹಳ್ಳಿ ಪ್ರತಿ ಮಂಗಳವಾರ ಸಂತೆ ನಡೆಯುತ್ತಿದೆ. ಅಲ್ಲಿ ಎಲ್ಲ ಬಗೆಯ ವಸ್ತುಗಳ ಮಾರಾಟ ಇರುತ್ತದೆ. ಹೀಗಾಗಿ ಈ ಸಂತೆ ಹರಿಪ್ರಸಾದ್‌ ಅವರಿಗೆ ತರಕಾರಿ, ಮೇಕೆ ಮಾರಾಟಕ್ಕೆ ಸಹಕಾರಿಯಾಗಿದೆ. ಕೃಷಿ ಇಲಾಖೆಯ ಸಹಾಯಧನದಿಂದ ಕೃಷಿ ಹೊಂಡ ಕೂಡ ನಿರ್ಮಿಸಿದ್ದು, ಆಗಾಗ ಮೀನು ಮರಿ ಸಾಕಾಣಿಕೆ ಕೂಡ ಮಾಡುತ್ತಾರೆ. ಮನೆ ಅಳತೆಗೆ ಮೀರಿ ಮೀನು ಬಂದಲ್ಲಿ ಮಾರಾಟ ಕೂಡ ಮಾಡುತ್ತಾರೆ.

ಕಳೆದ 20 ವರ್ಷಗಳಿಂದಲೂ ಈ ಕುಟುಂಬ ರಾಜ್ಯ ಬೀಜ ನಿಗಮಕ್ಕೆ ಪ್ರತಿ ವರ್ಷ ಗುಣಮಟ್ಟದ 150 ಕ್ವಿಂಟಲ್‌ ಭತ್ತದ ಬೀಜ ನೀಡುತ್ತಿದೆ. ಹರಿಪ್ರಸಾದ್‌ ಅವರ ಪರಿಶ್ರಮ ಮತ್ತು ಸಾಧನೆ ಗುರುತಿಸಿ, ನಾಗನಹಳ್ಳಿ ಕೃಷಿ ವಿವಿ ಸಾವಯವ ಸಂಶೋಧನಾ ಕೇಂದ್ರ, ಕೃಷಿ ಇಲಾಖೆ, ವಿವಿಧ ಸಂಘ ಸಂಸ್ಥೆಗಳು ಗೌರವಿಸಿವೆ.

ಹರಿಪ್ರಸಾದ್‌ ಜಮೀನಿಗೆ ಕೊಟ್ಟಿಗೆ ಗೊಬ್ಬರ ಮಾತ್ರ ನೀಡುತ್ತಾರೆ. ರಾಸಾಯನಿಕ ಗೊಬ್ಬರ, ಕ್ರಿಮಿ ಹಾಗೂ ಕೀಟ ನಾಶಕ ಬಳಕೆ ಮಾಡುವುದಿಲ್ಲ. ತಂದೆ ಸಂಪತ್‌ಕುಮಾರ್‌, ಸಹೋದರರಾದ ಎ.ಎಸ್‌. ಶಿವಪ್ರಸಾದ್‌ ಹಾಗೂ ಎ.ಎಸ್‌. ರಾಮಪ್ರಸಾದ್‌ ಅವರು ಕೂಡ ಹರಿಪ್ರಸಾದ್‌ಗೆ ಕೃಷಿ ಕಾಯಕದಲ್ಲಿ ಆಗಾಗ ಸಾಥ್‌ ನೀಡುತ್ತಿರುತ್ತಾರೆ. ಸ್ನಾತಕೋತ್ತರ ಪದವೀಧರರಾದ ರಾಮಪ್ರಸಾದ್‌ ಅವರಿಗೂ ಕೂಡ ಕೃಷಿ ಬಗ್ಗೆ ಅಪಾರವಾದ ಕಳಕಳಿ ಇದ್ದು, ರೈತ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರತಿ ವರ್ಷ ರೈತ ದಿನಾಚರಣೆ ಅಂಗವಾಗಿ ಕೃಷಿ ಸಂಬಂಧಿತ ವಿಚಾರ ಸಂಕಿರಣ ಏರ್ಪಡಿಸುತ್ತಿರುತ್ತಾರೆ.

ಚಿಕ್ಕಬಳ್ಳಾಪುರ: ಮಾವು ಬೆಲೆ ದಿಢೀರ್‌ ಕುಸಿತ, ಕಂಗಾಲಾದ ಮಾವು ಬೆಳೆಗಾರರು!

ಸಂಪರ್ಕ ವಿಳಾಸಃ

ಎ.ಎಸ್‌. ಹರಿಪ್ರಸಾದ್‌ ಬಿನ್‌ ಸಂಪತ್‌ಕುಮಾರ್‌

ಅರ್ಜುನಹಳ್ಳಿ, ಕೆ.ಆರ್‌. ನಗರ ತಾಲೂಕು

ಮೈಸೂರು ಜಿಲ್ಲೆ

ಮೊ.77951 33987

ನಾವು ಕೃಷಿ ಕುಟುಂಬದಿಂದಲೇ ಬಂದವರು. ವ್ಯವಸಾಯ ಯಾವತ್ತೂ ನಮಗೆ ಕಷ್ಟಅನಿಸಿಲ್ಲ. ನಾವು ಮಾಡುತ್ತಿರುವ ಕೆಲಸದಿಂದ ಸಂತೋಷ, ತೃಪ್ತಿ ಇದೆ. ದುಡಿಯಲು ಆಗದೇ ಇದ್ದವರು ಕೃಷಿ ಕಷ್ಟಎಂದು ಹೇಳುತ್ತಾರೆ. ಕೃಷಿ ನಂಬಿದರೆ ನಷ್ಟಇಲ್ಲವೇ ಇಲ್ಲ. ಮೈಬಗ್ಗಿಸಿ ದುಡಿಯಬೇಕು ಅಷ್ಟೇ.

-ಎ.ಎಸ್‌. ಹರಿಪ್ರಸಾದ್‌, ಅರ್ಜುನಹಳ್ಳಿ