ರೈಲ್ವೆ ಇಲಾಖೆಯು ಕರ್ನಾಟಕದ ಮೂರು ಪ್ರಮುಖ ರೈಲುಗಳಿಗೆ ಹೊಸ ನಿಲುಗಡೆಗಳನ್ನು ಘೋಷಿಸಿದೆ. ಹುಬ್ಬಳ್ಳಿ-ದಾದರ್ ಎಕ್ಸ್‌ಪ್ರೆಸ್‌ಗೆ ಗೋಕಾಕ್ ರೋಡ್, ಮಂಗಳೂರು-ಸುಬ್ರಮಣ್ಯ ಪ್ಯಾಸೆಂಜರ್‌ಗೆ ನೇರಳಕಟ್ಟೆ, ಮತ್ತು ಲೋಕಮಾನ್ಯ ತಿಲಕ್-ಕೊಯಮತ್ತೂರು ಎಕ್ಸ್‌ಪ್ರೆಸ್‌ಗೆ ಯಲಹಂಕದಲ್ಲಿ ಹೊಸ ನಿಲುಗಡೆ ಕಲ್ಪಿಸಲಾಗಿದೆ. 

ಬೆಂಗಳೂರು (ಜ.22): ಭಾರತೀಯ ರೈಲ್ವೆ ಇಲಾಖೆಯು ಕರ್ನಾಟಕದ ರೈಲ್ವೆ ಪ್ರಯಾಣಿಕರ ಬಹುದಿನಗಳ ಬೇಡಿಕೆಗೆ ಸ್ಪಂದಿಸಿದ್ದು, ಪ್ರಮುಖ ಮೂರು ರೈಲುಗಳಿಗೆ ಹೊಸ ನಿಲುಗಡೆಗಳನ್ನು ಕಲ್ಪಿಸಿ ಅಧಿಕೃತ ಆದೇಶ ಹೊರಡಿಸಿದೆ. ಈ ಕ್ರಮದಿಂದ ಹುಬ್ಬಳ್ಳಿ, ಮಂಗಳೂರು ಮತ್ತು ಬೆಂಗಳೂರು ಭಾಗದ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ.

ರೈಲ್ವೆ ಇಲಾಖೆಯ ಹೊಸ ಆದೇಶದ ಬಗ್ಗೆ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಸೋಶಿಯಲ್‌ ಮೀಡಿಯಾ ವೇದಿಕೆ ಎಕ್ಸ್‌ನಲ್ಲಿ ಮಾಹಿತಿ ನೀಡಿದ್ದಾರೆ.

ಹುಬ್ಬಳ್ಳಿ - ದಾದರ್ ಸೆಂಟ್ರಲ್ ಎಕ್ಸ್‌ಪ್ರೆಸ್ (17317/17318)

ಉತ್ತರ ಕರ್ನಾಟಕ ಮತ್ತು ಮಹಾರಾಷ್ಟ್ರದ ನಡುವೆ ಸಂಚರಿಸುವ ಅತ್ಯಂತ ಜನಪ್ರಿಯ ರೈಲುಗಳಲ್ಲಿ ಒಂದಾದ ಹುಬ್ಬಳ್ಳಿ - ದಾದರ್ ಸೆಂಟ್ರಲ್ ಎಕ್ಸ್‌ಪ್ರೆಸ್‌ಗೆ ಈಗ 'ಗೋಕಾಕ್ ರೋಡ್' ರೈಲ್ವೆ ನಿಲ್ದಾಣದಲ್ಲಿ ನಿಲುಗಡೆ ನೀಡಲಾಗಿದೆ. ಇದರಿಂದ ಗೋಕಾಕ್ ಸುತ್ತಮುತ್ತಲಿನ ವ್ಯಾಪಾರಸ್ಥರು ಹಾಗೂ ಮುಂಬೈ ಕಡೆಗೆ ಪ್ರಯಾಣಿಸುವ ಜನರಿಗೆ ಮತ್ತು ವಿದ್ಯಾರ್ಥಿಗಳಿಗೆ ಬಹಳ ಅನುಕೂಲವಾಗಲಿದೆ.

ಮಂಗಳೂರು ಸೆಂಟ್ರಲ್ - ಸುಬ್ರಮಣ್ಯ ರೋಡ್ ಪ್ಯಾಸೆಂಜರ್ (56627/56628)

ಕರಾವಳಿ ಮತ್ತು ಮಲೆನಾಡು ಭಾಗದ ಸಂಪರ್ಕ ಸೇತುವೆಯಾಗಿರುವ ಮಂಗಳೂರು ಸೆಂಟ್ರಲ್ ಮತ್ತು ಸುಬ್ರಮಣ್ಯ ರೋಡ್ ಪ್ಯಾಸೆಂಜರ್ ರೈಲಿಗೆ ಈಗ 'ನೇರಳಕಟ್ಟೆ' ರೈಲ್ವೆ ನಿಲ್ದಾಣದಲ್ಲಿ ನಿಲುಗಡೆ ಕಲ್ಪಿಸಲಾಗಿದೆ. ಪುತ್ತೂರು ಮತ್ತು ಬಂಟ್ವಾಳ ತಾಲೂಕಿನ ಗ್ರಾಮೀಣ ಭಾಗದ ಜನರಿಗೆ ಈ ಪ್ಯಾಸೆಂಜರ್ ರೈಲಿನ ನಿಲುಗಡೆಯು ದೈನಂದಿನ ಪ್ರಯಾಣಕ್ಕೆ ದೊಡ್ಡ ಬಲ ನೀಡಲಿದೆ.

ಲೋಕಮಾನ್ಯ ತಿಲಕ್ - ಕೊಯಮತ್ತೂರು ಎಕ್ಸ್‌ಪ್ರೆಸ್ (11013/11014)

ಮುಂಬೈ ಮತ್ತು ತಮಿಳುನಾಡಿನ ಕೊಯಮತ್ತೂರು ನಗರಗಳನ್ನು ಸಂಪರ್ಕಿಸುವ ಈ ದೂರದ ಪ್ರಯಾಣದ ರೈಲಿಗೆ ಬೆಂಗಳೂರಿನ 'ಯಲಹಂಕ' ರೈಲ್ವೆ ನಿಲ್ದಾಣದಲ್ಲಿ ನಿಲುಗಡೆಗೆ ಅವಕಾಶ ನೀಡಲಾಗಿದೆ. ಉತ್ತರ ಬೆಂಗಳೂರು ಭಾಗದ ಪ್ರಯಾಣಿಕರು ಮುಂಬೈ ಅಥವಾ ಕೊಯಮತ್ತೂರಿಗೆ ತೆರಳಲು ಇನ್ನು ಮುಂದೆ ಸಿಟಿ ರೈಲ್ವೆ ನಿಲ್ದಾಣ ಅಥವಾ ಕೃಷ್ಣರಾಜಪುರಂವರೆಗೆ ಹೋಗುವ ಅವಶ್ಯಕತೆ ಇರುವುದಿಲ್ಲ.

ರೈಲ್ವೆ ಇಲಾಖೆಯು ಪ್ರಯಾಣಿಕರ ಸಂಚಾರ ದಟ್ಟಣೆ ಮತ್ತು ಬೇಡಿಕೆಯನ್ನು ಆಧರಿಸಿ ಈ ನಿರ್ಧಾರ ಕೈಗೊಂಡಿದೆ. ನಿಲುಗಡೆ ಸಮಯದ ಕುರಿತು ಹೆಚ್ಚಿನ ಮಾಹಿತಿಗಾಗಿ ಪ್ರಯಾಣಿಕರು ಅಧಿಕೃತ ರೈಲ್ವೆ ವೆಬ್‌ಸೈಟ್ ಅಥವಾ ನಿಲ್ದಾಣದ ಮಾಹಿತಿ ಕೇಂದ್ರವನ್ನು ಸಂಪರ್ಕಿಸಬಹುದು. ಸಾರ್ವಜನಿಕರು ಮತ್ತು ನಿತ್ಯ ಪ್ರಯಾಣಿಕರು ಈ ಹೊಸ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬೇಕೆಂದು ರೈಲ್ವೆ ಇಲಾಖೆ ಕೋರಿದೆ.

Scroll to load tweet…