ಕೋವಿಡ್, ಝೀಕಾ ಜತೆ ಈಗ ಡೆಂಘೀ, ಮಲೇರಿಯಾ ಹೆಚ್ಚಳ..!
* 1310 ಮಂದಿಗೆ ಡೆಂಘೀ, 457 ಮಂದಿಗೆ ಚಿಕುನ್‌ಗುನ್ಯಾ
* ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ಸಾಲಿನಲ್ಲಿ ಡೆಂಘಿ ಪ್ರಕರಣಗಳು ನಿಯಂತ್ರಣ
* ಸಾರ್ವಜನಿಕರು ಸಹ ತಮ್ಮ ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿಟ್ಟುಕೊಳ್ಳಬೇಕು
ಬೆಂಗಳೂರು(ಜು.17): ಝೀಕಾ ವೈರಸ್ ಆತಂಕದ ನಡುವೆ ಮುಂಗಾರಿನ ಹಿನ್ನೆಲೆಯಲ್ಲಿ ಡೆಂಘಿ, ಮಲೇರಿಯಾ ಪ್ರಕರಣಗಳು ಹೆಚ್ಚಾಗುತ್ತಿದ್ದು, ಜುಲೈ 14ರ ವೇಳೆಗೆ ರಾಜ್ಯದಲ್ಲಿ 1,310 ಮಂದಿಗೆ ಡೆಂಘಿ ಹಾಗೂ 457 ಮಂದಿ ಚಿಕುನ್‌ಗುನ್ಯಾ ಕಾಣಿಸಿಕೊಂಡಿದೆ.
ಮಳೆಗಾಲದ ಹಿನ್ನೆಲೆಯಲ್ಲಿ ಸೊಳ್ಳೆಗಳಿಂದ ಹರಡುವ ಕಾಯಿಲೆಗಳು ತೀವ್ರಗೊಳ್ಳಲಿದ್ದು ಡೆಂಘಿ, ಮಲೇರಿಯಾ ಬಗ್ಗೆ ಎಚ್ಚರ ವಹಿಸುವಂತೆ ಹಾಗೂ ಮನೆಗಳ ಸುತ್ತಮುತ್ತಲು ಸೊಳ್ಳೆಗಳ ನಿಯಂತ್ರಣ ಮಾಡುವಂತೆ ಆರೋಗ್ಯ ಇಲಾಖೆ ಮನವಿ ಮಾಡಿದೆ. ಡೆಂಘಿ ಹಾಗೂ ಮಲೇರಿಯಾ ಹರಡಲು ಕಾರಣವಾಗುವ ಸೊಳ್ಳೆಯೇ ಝೀಕಾ ವೈರಸ್ ಹರಡಲೂ ಕಾರಣವಾಗುತ್ತದೆ. ಹೀಗಾಗಿ ಈಗಾಗಲೇ ನೆರೆಯ ಜಿಲ್ಲೆಯಲ್ಲಿ ಹರಡಿರುವ ಝೀಕಾ ವೈರಸ್ ಹರಡದಂತೆಯೂ ಎಚ್ಚರ ವಹಿಸುವಂತೆ ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರು, ಉಡುಪಿಯಲ್ಲೇ ಅಧಿಕ:
ರಾಜ್ಯದಲ್ಲಿ 1,310 ಡೆಂಘಿ ಪ್ರಕರಣ ವರದಿಯಾಗಿದ್ದು, ಈ ಪೈಕಿ ಶೇ.31ರಷ್ಟು ಪ್ರಕರಣ ಉಡುಪಿ, ಬೆಂಗಳೂರು ನಗರದಲ್ಲೇ ವರದಿಯಾಗಿವೆ. ಕಳೆದ ಕೆಲವು ವಾರಗಳಿಂದ ಆಸ್ಪತ್ರೆಗಳಿಗೆ ಡೆಂಘಿ ಕಾರಣದಿಂದ ದಾಖಲಾಗುವ ಪ್ರಕರಣಗಳು ಹೆಚ್ಚಾಗುತ್ತಿವೆ.
ದ.ಕ.ದಲ್ಲಿ ಕೊರೋನಾ ಸೋಂಕಿತರಲ್ಲಿ ಡೆಂಘೀ ಜ್ವರ, ಜಿಲ್ಲಾಡಳಿತಕ್ಕೆ ತಲೆನೋವು
ಉಡುಪಿಯಲ್ಲಿ 213, ಬೆಂಗಳೂರಿನಲ್ಲಿ 195, ಬೆಳಗಾವಿಯಲ್ಲಿ 145, ದಕ್ಷಿಣ ಕನ್ನಡ 127 ಹಾಗೂ ಬಳ್ಳಾರಿ 69 ಪ್ರಕರಣ ಪತ್ತೆಯಾಗಿದೆ. ರಾಜ್ಯದಲ್ಲಿ 457 ಚಿಕುನ್ ಗುನ್ಯಾ ಪ್ರಕರಣ ವರದಿಯಾಗಿದ್ದು, ಶಿವಮೊಗ್ಗ 81, ಕೋಲಾರದಲ್ಲಿ (77) ಅತಿ ಹೆಚ್ಚು ಪ್ರಕರಣ ವರದಿಯಾಗಿದೆ.
ಈ ಬಗ್ಗೆ ಮಾತನಾಡಿದ ಆರೋಗ್ಯ ಇಲಾಖೆ ಸಾಂಕ್ರಾಮಿಕ ರೋಗಗಳ ಜಂಟಿ ಆಯುಕ್ತ ಡಾ. ರಮೇಶ್ ಕೆ ಕಲಗುಡ, ಸೊಳ್ಳೆಯಿಂದ ಬರುವ ಡೆಂಘಿ, ಚಿಕುನ್ ಗುನ್ಯಾ ವಿರುದ್ಧ ಜಾಗೃತಿ ಶುರು ಮಾಡಲಾಗಿದೆ. ಮನೆಯುಲ್ಲಿ ಹಾಗೂ ಸುತ್ತಮುತ್ತ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು. ಈಗಾಗಲೇ ಝೀಕಾ ವೈರಸ್ ಹಿನ್ನೆಲೆಯಲ್ಲಿ ಎಲ್ಲಾ ಜಿಲ್ಲೆಗಳಲ್ಲೂ ವಾರ್ಡ್, ಗ್ರಾಮ ಮಟ್ಟದಲ್ಲಿ ಸೊಳ್ಳೆ ನಿಯಂತ್ರಣ್ಕಕೆ ಸೂಚಿಸಲಾಗಿದೆ ಎಂದರು.
ಆತಂಕ ಬೇಡ, ಎಚ್ಚರ ವಹಿಸಿ:
ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ಸಾಲಿನಲ್ಲಿ ಡೆಂಘಿ ಪ್ರಕರಣಗಳು ನಿಯಂತ್ರಣದಲ್ಲಿವೆ. ಕಳೆದ ವರ್ಷ ಬರೋಬ್ಬರಿ 3,828 ಮಂದಿಗೆ ಡೆಂಘಿ ಉಂಟಾಗಿ 5 ಸಾವು ವರದಿಯಗಿತ್ತು. ಈ ಬಾರಿ 1,310 ಮಂದಿಗೆ ಡೆಂಘಿ ಕಾಣಿಸಿಕೊಂಡಿದೆ. ಮಳೆಗಾಲದಲ್ಲಿ ಹೆಚ್ಚಾಗಬಹುದು ಎಂಬ ಕಾರಣಕ್ಕೆ ಎಲ್ಲಾ ಮುನ್ನೆಚ್ಚೆರಿಕೆ ತೆಗೆದುಕೊಂಡಿದ್ದೇವೆ. ಸಾರ್ವಜನಿಕರು ಸಹ ತಮ್ಮ ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದು ಮನವಿ ಮಾಡಿದರು.