ಮಂಗಳೂರು (ಮೇ. 14):  ಕೊರೋನಾ ಸೋಂಕಿನ 2ನೇ ಅಲೆ ವ್ಯಾಪಕವಾಗುತ್ತಿದ್ದಂತೆ ಅದರ ಜೊತೆ ಕರಾವಳಿ ಜಿಲ್ಲೆಯಲ್ಲಿ ಅಪಾಯಕಾರಿ ಡೆಂಘೀ ಜ್ವರವೂ ಕಾಣಿಸತೊಡಗಿದೆ.

ಈಗಾಗಲೇ ಡೆಂಘೀ ಕಾಣಿಸಿಕೊಂಡ ಇಬ್ಬರಲ್ಲಿ ಕೊರೋನಾ ಸೋಂಕು ಕಂಡುಬಂದಿದೆ. ದ.ಕ. ಜಿಲ್ಲೆಯ ಸುಳ್ಯ ಹಾಗೂ ಪುತ್ತೂರು ತಾಲೂಕುಗಳಲ್ಲಿ ಡೆಂಘೀ-ಕೊರೋನಾ ರೋಗ ಲಕ್ಷಣ ಅಲ್ಲಲ್ಲಿ ಕಾಣಿಸುತ್ತಿದೆ. ಮೊದಲೇ ಕೊರೋನಾ ಸೋಂಕು ನಿಯಂತ್ರಿಸುವಲ್ಲಿ ಹೈರಾಣಾಗುತ್ತಿರುವ ಆರೋಗ್ಯ ಇಲಾಖೆಗೆ ಡೆಂಘೀ ಎದುರಿಸುವುದು ಮತ್ತೊಂದು ಸವಾಲಾಗಿ ಪರಿಣಮಿಸಿದೆ.

ಪುತ್ತೂರು ಮತ್ತು ಸುಳ್ಯ ತಾಲೂಕಿನ ಸರಹದ್ದು, ಕಡಬ ತಾಲೂಕುಗಳಲ್ಲಿ ಡೆಂಘೀ ಜ್ವರ ಕಾಣಿಸಿದೆ. ಈ ಭಾಗದಲ್ಲಿ 8 ಮಂದಿ ಡೆಂಘೀ ಜ್ವರದಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇವರಲ್ಲಿ ಇಬ್ಬರಿಗೆ ಡೆಂಘೀ ಕಾಣಿಸಿದ ಜೊತೆಯಲ್ಲೇ ಕೊರೋನಾ ಸೋಂಕು ಕೂಡ ದೃಢಪಟ್ಟಿದೆ. ಈ ಎರಡು ತಾಲೂಕು ಹೊರತುಪಡಿಸಿದರೆ, ಬೇರೆ ತಾಲೂಕುಗಳಲ್ಲಿ ಸದ್ಯಕ್ಕೆ ಡೆಂಘೀ ಕಾಣಿಸಿಲ್ಲ. ಆದರೆ ಶಂಕಿತ ಡೆಂಘೀ ಲಕ್ಷಣದ ಜ್ವರ ಕಂಡುಬಂದಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳುತ್ತಿದ್ದಾರೆ. ಸದ್ಯದ ಮಟ್ಟಿಗೆ ಡೆಂಘೀ ಪ್ರಥಮ ಹಂತದಲ್ಲಿದ್ದು, ಯಾವುದೇ ಪ್ರಣಾಪಾಯ ಸಂಭವಿಸಿಲ್ಲ ಎಂಬುದಷ್ಟೆಸಮಾಧಾನ ಸಂಗತಿ.

ಜೀವಕ್ಕೆ ಮಾರಕವಾಗುವ ಮಲೇರಿಯಾ ಸಮಸ್ಯೆ ಕಾಡಬಹುದು, ಸೊಳ್ಳೆಗಳಿಂದ ದೂರವಿರಿ...

ಬಿಟ್ಟುಬಿಟ್ಟು ಬರುವ ಮಳೆಯೇ ಕಾರಣ: ಕೊರೋನಾ ಸೋಂಕು ವ್ಯಾಪಿಸುವ ಈ ಸಂದರ್ಭದಲ್ಲಿ ಹಠಾತ್ತನೆ ಡೆಂಘೀ ಕಾಣಿಸಲು ಆಗಾಗ ಬಿಟ್ಟುಬಿಟ್ಟು ಬರುವ ಮಳೆಯೇ ಕಾರಣ. ಕಳೆದ ನಾಲ್ಕೈದು ದಿನಗಳಲ್ಲಿ ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಲ್ಲಿ ಗುಡುಗು ಸಹಿತ ಮಳೆಯಾಗುತ್ತಿದೆ. ಪ್ರತಿದಿನ ಸಂಜೆ ವೇಳೆಗೆ ಮಳೆ ಬಂದು ಹೋಗುತ್ತಿದೆ. ನಿರಂತರವಾಗಿ ಮಳೆಯಾಗುತ್ತಿಲ್ಲ. ಇದರಿಂದಾಗಿ ಮಳೆ ನೀರು ಅಲ್ಲಲ್ಲಿ ಸಂಗ್ರಹಗೊಂಡು ಅದರಲ್ಲಿ ಸಾಂಕ್ರಾಮಿಕ ರೋಗ ಹರಡುವ ಸೊಳ್ಳೆ ಉತ್ಪತ್ತಿಯಾಗಿ ಡೆಂಘೀ ರೋಗಕ್ಕೆ ಕಾರಣವಾಗುತ್ತದೆ ಎಂದು ವೈದ್ಯಾಧಿಕಾರಿಗಳು ಹೇಳುತ್ತಿದ್ದಾರೆ.

ಕೊರೋನಾ ಸೋಂಕು, ಲಾಕ್ಡೌನ್‌ ಕುರಿತು ತಲೆಕೆಡಿಸಿಕೊಂಡಿರುವ ಜನತೆ ಮನೆಯ ಪರಿಸರ ಸ್ವಚ್ಛತೆಯ ಕಾಳಜಿ ಮರೆತುಬಿಟ್ಟಿದೆ. ಮನೆಯ ವಠಾರದಲ್ಲಿ ನೀರು ಸಂಗ್ರಹ, ಅಲ್ಲೇ ಬಿದ್ದಿರುವ ಚಿಪ್ಪು, ಟಯರ್‌ಗಳಲ್ಲಿ ನೀರು ತುಂಬಿ ಅಲ್ಲೇ ಡೆಂಘೀ ಹರಡುವ ಈಡಿಸ್‌ ಈಜಿಪ್ಟ್‌ ಸೊಳ್ಳೆ ಉತ್ಪತ್ತಿಯ ತಾಣವಾಗಿದೆ. ಸ್ವಚ್ಛ ನೀರಿನಲ್ಲಿ ಇದರ ಲಾರ್ವ ಉತ್ಪಾದನೆಯಾದರೆ, ಸಂಜೆ ವೇಳೆಗೆ ಕೊಳಚೆ ನೀರಿನಲ್ಲಿ ಉತ್ಪತ್ತಿಯಾಗುವ ಅನಾಫಿಲಿಸ್‌ ಹೆಣ್ಣು ಸೊಳ್ಳೆ ರಾತ್ರಿ ವೇಳೆ ಕಚ್ಚಿ ಮಲೇರಿಯಾ ಅಂಟಿಸಿಬಿಡುತ್ತದೆ. ಆದ್ದರಿಂದ ಮನೆಯ ಸುತ್ತಮುತ್ತ ಪೂರ್ತಿ ಸ್ವಚ್ಛತೆ ಕಾಪಾಡಿಕೊಳ್ಳಬೇಕಾದ್ದು ಅತ್ಯಗತ್ಯ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳುತ್ತಿದ್ದಾರೆ.

ಈ ಬಾರಿ 52 ಡೆಂಘೀ ಪ್ರಕರಣ: ಜನವರಿಯಿಂದ ಇಲ್ಲಿವರೆಗೆ ಜಿಲ್ಲೆಯಲ್ಲಿ 52 ಡೆಂಘೀ ಪ್ರಕರಣ ಕಂಡುಬಂದಿದೆ. ಇದರಲ್ಲಿ ಕೊರೋನಾ ಜೊತೆ ಕಾಣಿಸಿಕೊಂಡ ಡೆಂಘೀ ಪ್ರಕರಣ 2. ಈ ಬಾರಿ ಈಗಾಗಲೇ 252 ಮಲೇರಿಯಾ ಕೂಡ ಕಾಣಸಿದ್ದು, ಕಳೆದ ತಿಂಗಳಲ್ಲಿ 27 ಮಲೇರಿಯಾ ಪ್ರಕರಣ ಪತ್ತೆಯಾಗಿತ್ತು. ಮಂಗಳೂರಲ್ಲೇ ಅತ್ಯಧಿಕ ಶೇ.70ರಷ್ಟುಮಲೇರಿಯಾ ಕೇಸ್‌ ಪತ್ತೆಯಾಗುತ್ತಿದೆ.

ಸೊಳ್ಳೆ ಕಡಿತದ ತುರಿಕೆ, ಕಜ್ಜಿ... ಮಾಯ ಮಾಡುತ್ತೆ ಈ ಮನೆಮದ್ದು

ಫಾಗಿಂಗ್‌ ಬದಲು ಸ್ಪ್ರೇ

ಕಳೆದ ವರ್ಷದಂತೆ ಈಗ ಸಾಂಕ್ರಾಮಿಕ ರೋಗ ತಡೆಗೆ ಆರೋಗ್ಯ ಇಲಾಖೆ ಫಾಗಿಂಗ್‌ ನಡೆಸುವುದಿಲ್ಲ. ಬದಲು ಇಂಡೋರ್‌ ರಿಸಿಢ್ಯೂವಲ್‌ ಸ್ಪ್ರೇ(ಐಆರ್‌ಎಸ್‌)ಸಿಂಪಡಿಸುತ್ತಾರೆ. ಗೋಡೆಗಳಿಗೆ ಈ ಕ್ರಿಮಿನಾಶಕ ಸಿಂಪಡಣೆಯಿಂದ ಕನಿಷ್ಠ ನಾಲ್ಕು ತಿಂಗಳು ವರೆಗೆ ಸೊಳ್ಳೆಗಳು ಅಲ್ಲಿ ವಾಸಿಸುವುದಿಲ್ಲ ಎಂದು ಹೇಳುತ್ತಾರೆ ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ನವೀನ್‌ಚಂದ್ರ ಕುಲಾಲ್‌.

ಪರಿಸರದಲ್ಲಿ ನೀರು ನಿಲ್ಲದಂತೆ ಎಚ್ಚರ ವಹಿಸುವುದೇ ಮೊದಲ ಮುನ್ನೆಚ್ಚರಿಕೆ. ಮನೆಯಲ್ಲಿ ಸೊಳ್ಳೆ ಪರದೆ ಬಳಸಬೇಕು. ಈಗಾಗಲೇ ಡೆಂಘೀ ಕಾಣಿಸಿಕೊಂಡ ಪ್ರದೇಶಗಳಲ್ಲಿ ಜಿಲ್ಲಾ ಆರೋಗ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿ ತಂಡ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದೆ. ಇದು ಆರಂಭಿಕ ಹಂತವಾಗಿರುವುದರಿಂದ ಸೆಪ್ಟೆಂಬರ್‌ ವರೆಗೆ ತೀರಾ ಮುಂಜಾಗ್ರತೆ ವಹಿಸಬೇಕಾದ ಅಗತ್ಯವಿದೆ.

- ಡಾ.ನವೀನ್‌ಚಂದ್ರ ಕುಲಾಲ್‌, ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ, ದ.ಕ.

ಆತ್ಮಭೂಷಣ್‌