ರಾಜ್ಯದಲ್ಲಿ ಕಾನೂನು ಪದವಿ ಪಡೆದು, ವಕೀಲಿಕೆ ನಡೆಸಲು ಸನ್ನದು ನೋಂದಾಯಿಸಿಕೊಂಡ ನಂತರ ಸರ್ಕಾರಿ, ಅರೆ ಸರ್ಕಾರಿ, ನ್ಯಾಯಾಂಗ ಇಲಾಖೆ ಮತ್ತು ಖಾಸಗಿ ಕಂಪನಿಯಲ್ಲಿ ಉದ್ಯೋಗಕ್ಕೆ ಸೇರಿಕೊಂಡಿರುವವರು ತಮ್ಮ ಸನ್ನದು ಅಮಾನತು ಮಾಡಿಕೊಳ್ಳಲು ಕರ್ನಾಟಕ ವಕೀಲರ ಪರಿಷತ್ತು ಜೂನ್ 29 ರವರೆಗೆ ಕಾಲಾವಕಾಶ ವಿಸ್ತರಿಸಿದೆ.‌

ಬೆಂಗಳೂರು : ರಾಜ್ಯದಲ್ಲಿ ಕಾನೂನು ಪದವಿ ಪಡೆದು, ವಕೀಲಿಕೆ ನಡೆಸಲು ಸನ್ನದು ನೋಂದಾಯಿಸಿಕೊಂಡ ನಂತರ ಸರ್ಕಾರಿ, ಅರೆ ಸರ್ಕಾರಿ, ನ್ಯಾಯಾಂಗ ಇಲಾಖೆ ಮತ್ತು ಖಾಸಗಿ ಕಂಪನಿಯಲ್ಲಿ ಉದ್ಯೋಗಕ್ಕೆ ಸೇರಿಕೊಂಡಿರುವವರು ತಮ್ಮ ಸನ್ನದು ಅಮಾನತು ಮಾಡಿಕೊಳ್ಳಲು ಕರ್ನಾಟಕ ವಕೀಲರ ಪರಿಷತ್ತು ಜೂನ್ 29 ರವರೆಗೆ ಕಾಲಾವಕಾಶ ವಿಸ್ತರಿಸಿದೆ.‌

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ರಾಜ್ಯದಲ್ಲಿ ಹಲವು ವಕೀಲರು ಪರಿಷತ್‌ನಲ್ಲಿ ಸನ್ನದು ಮಾಡಿಕೊಂಡ ನಂತರ ಸರ್ಕಾರಿ, ಅರೆ ಸರ್ಕಾರಿ, ಸಹಾಯಕ ಅಭಿಯೋಜಕರಾಗಿ, ನ್ಯಾಯಾಂಗ ಇಲಾಖೆ ಮತ್ತು ಖಾಸಗಿ ಕಂಪನಿಯ ನೌಕರರಾಗಿ ನೇಮಕಗೊಂಡಿರುತ್ತಾರೆ. ಅಲ್ಲದೇ ಬೇರೆ ಬೇರೆ ರೀತಿಯ ಲಾಭದಾಯಕ ವ್ಯಾಪಾರ, ವ್ಯವಹಾರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅಂತಹವರು ಸನ್ನದು ಅಮಾನತು ಮಾಡಿಕೊಳ್ಳಲು ಮೇ 31ರವರೆಗೆ ಕಾಲಾವಕಾಶ ನೀಡಲಾಗಿತ್ತು.

ಮೇ ಅಂತ್ಯದವರೆಗೆ ಅನೇಕ ಜನರು ತಮ್ಮ ಸನ್ನದು ಅಮಾನತು ಮಾಡಿಕೊಂಡಿದ್ದಾರೆ. ಆದರೆ, ಇನ್ನೂ ಅನೇಕರು ಸನ್ನದು ಅಮಾನತು ಮಾಡಿಕೊಳ್ಳಬೇಕಿದೆ. ವಕೀಲರ ಕಾಯ್ದೆ-1961ರ ಪ್ರಕಾರ ವಕೀಲಿಕೆ ತೊರೆದು ಅನ್ಯ ಉದ್ಯೋಗದಲ್ಲಿ ತೊಡಗಿಸಿಕೊಂಡವರು ಆರು ತಿಂಗಳಲ್ಲಿ ತಮ್ಮ ಸನ್ನದು ಅನ್ನು ಅಮಾನತು ಮಾಡಿಕೊಳ್ಳಬೇಕಿದೆ. ಆದ್ದರಿಂದ ಜೂ.29ರವರೆಗೆ ಕಾಲಾವಕಾಶ ನೀಡಲಾಗಿದೆ.

ಜೂ.14, 15, 21, 22, 28 ಮತ್ತು 29ರಂದು ಪರಿಷತ್‌ ಕಚೇರಿಗೆ ಭೇಟಿ ನೀಡಿ, ಏಕೆ ಈವರೆಗೂ ಸನ್ನದು ಅಮಾನತು ಮಾಡಿಕೊಂಡಿಲ್ಲ ಎಂಬುದಕ್ಕೆ ಕಾರಣ ವಿವರಿಸಿ ಪ್ರಮಾಣ ಪತ್ರದೊಂದಿಗೆ ಸನ್ನದು ಅಮಾನತಿಗೆ ಅರ್ಜಿ ಸಲ್ಲಿಸಬಹುದು. ಜೂ. 29ರೊಳಗೆ ಸನ್ನದು ಅಮಾನತು ಮಾಡಿಕೊಳ್ಳಲು ವಿಫಲವಾದರೆ, ಅಂತಹವರ ವಿರುದ್ಧ ಕಠಿಣ ಕಾನೂನು ರೀತಿ ಕ್ರಮ ಜರುಗಿಸಲಾಗುತ್ತದೆ ಎಂದು ಪರಿಷತ್‌ ಅಧ್ಯಕ್ಷ ಎಸ್‌.ಎಸ್‌. ಮಿಟ್ಟಲಕೋಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.