Asianet Suvarna News Asianet Suvarna News

ರಾಜಕೀಯ ಬಿಟ್ಟು ಸುಮ್ಮನೆ ಕೂರುವೆ ಆದರೆ ಬೇರೆ ಪಕ್ಷ ಸೇರಲ್ಲ: ಸಿಟಿ ರವಿ

ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ವಿಜಯೇಂದ್ರ ಅವರ ಪದಗ್ರಹಣ ಕಾರ್ಯಕ್ರಮಕ್ಕೆ ಹೋಗಲು ಆಗುತ್ತಿಲ್ಲ. ನಾನು ಯಾವತ್ತೂ ಪಕ್ಷದ ಲಕ್ಷ್ಮಣ ರೇಖೆ ದಾಟಿಲ್ಲ. ಒಂದು ವೇಳೆ, ಬೇಡ ಎನಿಸಿದರೆ ರಾಜಕೀಯ ಬಿಟ್ಟು ಸುಮ್ಮನೆ ಕುಳಿತುಕೊಳ್ಳುತ್ತೇನೆ. ಆದರೆ, ಬೇರೆ ಪಕ್ಷಕ್ಕೆ ಹೋಗಿ ರಾಜಕೀಯ ಮಾಡಲ್ಲ ಎಂದು ಮಾಜಿ ಸಚಿವ ಸಿ.ಟಿ.ರವಿ ಸ್ಪಷ್ಟಪಡಿಸಿದ್ದಾರೆ.

I am not able to go to B.Y Vijayendra swearing ceremony as BJP state president and If I leaves BJP, won't join any other party CT Ravi akb
Author
First Published Nov 14, 2023, 8:18 AM IST

ಚಿಕ್ಕಮಗಳೂರು: ನ.15ರ ಸಂಜೆಯವರೆಗೂ ಮಧ್ಯಪ್ರದೇಶ ಚುನಾವಣಾ ಪ್ರಚಾರ ಇರುವ ಕಾರಣ ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ವಿಜಯೇಂದ್ರ ಅವರ ಪದಗ್ರಹಣ ಕಾರ್ಯಕ್ರಮಕ್ಕೆ ಹೋಗಲು ಆಗುತ್ತಿಲ್ಲ. ನಾನು ಯಾವತ್ತೂ ಪಕ್ಷದ ಲಕ್ಷ್ಮಣ ರೇಖೆ ದಾಟಿಲ್ಲ. ಒಂದು ವೇಳೆ, ಬೇಡ ಎನಿಸಿದರೆ ರಾಜಕೀಯ ಬಿಟ್ಟು ಸುಮ್ಮನೆ ಕುಳಿತುಕೊಳ್ಳುತ್ತೇನೆ. ಆದರೆ, ಬೇರೆ ಪಕ್ಷಕ್ಕೆ ಹೋಗಿ ರಾಜಕೀಯ ಮಾಡಲ್ಲ ಎಂದು ಮಾಜಿ ಸಚಿವ ಸಿ.ಟಿ.ರವಿ ಸ್ಪಷ್ಟಪಡಿಸಿದ್ದಾರೆ.

ನಗರದಲ್ಲಿ ಸೋಮವಾರ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ನಾನು 20 ವರ್ಷ ಶಾಸಕನಾಗಿದ್ದೆ. 35 ವರ್ಷದಿಂದ ಪಕ್ಷದ ಕಾರ್ಯಕರ್ತನಾಗಿ ವಿವಿಧ ಜವಾಬ್ದಾರಿಗಳನ್ನು ಹೊತ್ತು ಕೆಲಸ ಮಾಡಿದ್ದೇನೆ. ಜಗಳವಾಡಿದರೂ ನಮ್ಮ ಮನೆಯೊಳಗೇ ಜಗಳ, ಹೊಸಿಲು ದಾಟಿ ಬೇರೆಯವರ ಮನೆಗೆ ಹೋಗಿ ನಮ್ಮ ಮನೆಯ ಸಮಸ್ಯೆಯನ್ನು ಬಗೆಹರಿಸಿ ಎಂದು ಕೇಳಿಲ್ಲ. ಪಕ್ಷ ಏನೂ ಜವಾಬ್ದಾರಿ ಕೊಟ್ಟಿಲ್ಲ ಎಂದರೂ ಬಿಜೆಪಿಗೆ ಮತ ಕೊಡಿ ಎಂದೇ ಕೇಳುತ್ತೇನೆ. ಬೇರೆ ಪಕ್ಷಕ್ಕೆ ಮತ ಕೊಡಿ ಎಂದು ಕೇಳಲಿಕ್ಕೆ ಆಗುವುದಿಲ್ಲ. ನನಗೆ ಬುದ್ಧಿ ಬಂದಾಗಿನಿಂದ, ಬಿಜೆಪಿಗೆ ಸೇರಿದಾಗಿನಿಂದ ಬಿಜೆಪಿ ಬಿಟ್ಟು ಬೇರೆ ಪಕ್ಷಕ್ಕೆ ಮತ ಕೇಳಿಲ್ಲ, ಬೇರೆ ಪಕ್ಷಕ್ಕೆ ಮತ ಹಾಕಿಲ್ಲ. ನನಗಿರುವುದು ಒಂದೇ ಪಕ್ಷ ಅದು ಬಿಜೆಪಿ. ಅಕಸ್ಮಾತ್ ರಾಜಕೀಯ ಬೇಡ ಎನಿಸಿದರೆ ರಾಜಕೀಯ ಬಿಟ್ಟು ಸುಮ್ಮನೆ ಕುಳಿತುಕೊಳ್ಳುತ್ತೇನೆ. ಬಿಜೆಪಿಯನ್ನು ಬಿಟ್ಟು ಮತ್ತೊಂದು ಪಕ್ಷಕ್ಕೆ ಹೋಗಿ ರಾಜಕಾರಣ ಮಾಡುವುದಿಲ್ಲ ಎಂದರು.

ಇನ್ಮುಂದೆ ಕಾಂಗ್ರೆಸ್‌ಗೆ ಎದುರಾಗಲಿದೆ ನೇರಾನೇರ ಪೈಪೋಟಿ! ವಿಜಯೇಂದ್ರರ ಬಗ್ಗೆ ಎಂಪಿ ರೇಣುಕಾಚಾರ್ಯ ಹೇಳಿದ್ದೇನು?

ನ.15 ರಂದು ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ಜವಾಬ್ದಾರಿ ಸ್ವೀಕರಿಸಲಿದ್ದಾರೆ. ಈ ಸಂಬಂಧ ಅವರು ನನ್ನೊಂದಿಗೆ ಎರಡು ಬಾರಿ ಮಾತನಾಡಿ, ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ. ಆದರೆ, ಮಧ್ಯಪ್ರದೇಶದ ಚುನಾವಣಾ ಜವಾಬ್ದಾರಿ ಇರುವುದರಿಂದ ಅಲ್ಲಿಗೆ ಹೊರಡುತ್ತಿದ್ದೇನೆ. ನ.15ರ ರಾತ್ರಿವರೆಗೂ ಪ್ರಚಾರಕ್ಕಾಗಿ ಅಲ್ಲಿಯೇ ಇರಬೇಕಾಗುತ್ತದೆ. ಹಾಗಾಗಿ, ನನಗೆ ಸಮಾರಂಭಕ್ಕೆ ಬರಲು ಆಗುವುದಿಲ್ಲ ಎಂದು ಅವರಿಗೆ ತಿಳಿಸಿದ್ದೇನೆ ಎಂದರು.

ಪಕ್ಷದ ವರಿಷ್ಠರು ವಿಜಯೇಂದ್ರ ಅವರಿಗೆ ಅಧ್ಯಕ್ಷ ಹುದ್ದೆ ನೀಡಿದ್ದಾರೆ. ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಏನು ಗೌರವ ಕೊಡಬೇಕೋ ಅದನ್ನು ಕೊಟ್ಟೇ ಕೊಡುತ್ತೇನೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಬೇಕು, ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿ ಆಗಬೇಕು ಎಂಬ ಒಂದೇ ಗುರಿ ಇಟ್ಟುಕೊಂಡು ನಾನು ಕೆಲಸ ಮಾಡುತ್ತಿದ್ದೇನೆ ಎಂದರು.

ಕೊಟ್ಟಿರುವ ಜವಾಬ್ದಾರಿ ವಿಜಯೇಂದ್ರ ಸವಾಲಾಗಿ ಸ್ವೀಕರಿಸುತ್ತಾನೆ: ಸಂಸದ ಬಿವೈ ರಾಘವೇಂದ್ರ

Follow Us:
Download App:
  • android
  • ios