ಸರ್ಕಾರ ಬೇಕೋ, ಹಿಂದುತ್ವ ಬೇಕೋ ಕೇಳಿದರೆ ಹಿಂದುತ್ವ ಎನ್ನುವೆ: ಸಚಿವ ಸುನಿಲ್
ಸರ್ಕಾರ ಬೇಕೋ, ಹಿಂದುತ್ವ ಬೇಕೋ ಎನ್ನುವ ಪ್ರಶ್ನೆ ಬಂದಾಗ ಸರ್ಕಾರವನ್ನು ಬದಿಗಿಟ್ಟು ಹಿಂದುತ್ವವನ್ನು ಆಯ್ಕೆ ಮಾಡುತ್ತೇವೆ ಎಂದು ರಾಜ್ಯ ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್ ಕುಮಾರ್ ಸ್ಪಷ್ಟವಾಗಿ ಹೇಳಿದ್ದಾರೆ.
ಉಡುಪಿ (ಆ.02): ಸರ್ಕಾರ ಬೇಕೋ, ಹಿಂದುತ್ವ ಬೇಕೋ ಎನ್ನುವ ಪ್ರಶ್ನೆ ಬಂದಾಗ ಸರ್ಕಾರವನ್ನು ಬದಿಗಿಟ್ಟು ಹಿಂದುತ್ವವನ್ನು ಆಯ್ಕೆ ಮಾಡುತ್ತೇವೆ ಎಂದು ರಾಜ್ಯ ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್ ಕುಮಾರ್ ಸ್ಪಷ್ಟವಾಗಿ ಹೇಳಿದ್ದಾರೆ. ಸೋಮವಾರ ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರವೀಣ್ ನೆಟ್ಟಾರು ಕೊಲೆ ನಂತರ ಬಿಜೆಪಿ ಕಾರ್ಯಕರ್ತರ ನಡುವೆ ಆರಂಭವಾಗಿರುವ ಹಿಂದುತ್ವ ಮತ್ತು ಸರ್ಕಾರದ ಬಗೆಗಿನ ಚರ್ಚೆಗೆ ಅವರು ಪ್ರತಿಕ್ರಿಯಿಸಿದರು.
ಹಿಂದುತ್ವವನ್ನು ಆಧಾರವಾಗಿಟ್ಟುಕೊಂಡೇ ಸರ್ಕಾರ ರಚಿಸಿದ್ದೇವೆ, ಅದೇ ಕಾರಣಕ್ಕೆ ನಾವು ಗೋ ಹತ್ಯೆ ನಿಷೇಧ ಕಾನೂನು, ಮತಾಂತರ ನಿಷೇಧ ಕಾಯ್ದೆ ತಂದಿದ್ದೇವೆ. ಸಮಾಜದ ಹಿತದೃಷ್ಟಿಯಿಂದ ಮತ್ತಷ್ಟುಒಳ್ಳೆಯ ಕಾನೂನು ತರುತ್ತೇವೆ. ಮೋದಿಯವರ ನವ ಭಾರತದ ನಿರ್ಮಾಣಕ್ಕೆ ನವ ಕರ್ನಾಟಕದ ಕೊಡುಗೆ ನೀಡುತ್ತೇವೆ ಎಂದವರು ಹೇಳಿದರು.
5 ಲಕ್ಷವರೆಗಿನ ವಿದ್ಯುತ್ ಗುತ್ತಿಗೆ ಸ್ಥಳೀಯರಿಗೆ ಮೀಸಲು: ಸಚಿವ ಸುನಿಲ್
ಪ್ರವೀಣ್ ಕೊಲೆಯ ಹಿನ್ನೆಲೆಯಲ್ಲಿ ಕಾರ್ಯಕರ್ತರ ಕೋಪ ಸಹಜವಾಗಿದೆ. ಅದನ್ನು ತಪ್ಪು ಎಂದು ಹೇಳುವುದಿಲ್ಲ, ಅವರು ತಮ್ಮ ಭಾವನೆಗಳಿಗೆ ಬೆಲೆ ಕೊಡಿ ಅನ್ನುವುದು ಸರಿಯಾಗಿದೆ. ಅವರ ಅಭಿಪ್ರಾಯವನ್ನು ನಾವು ಸ್ವೀಕರಿಸಿದ್ದೇವೆ. ನಮ್ಮ ಪಕ್ಷದಲ್ಲಿ ಅಂತಹ ಬದ್ಧತೆ ಇದೆ. ಮನೆಯಲ್ಲಿ ಮಗ ತಪ್ಪು ಮಾಡಿದಾಗ ಯಜಮಾನ ಬುದ್ಧಿ ಹೇಳುತ್ತಾನೆ. ಕಾರ್ಯಕರ್ತರಿಗೆ ಎಲ್ಲವನ್ನೂ ತಿಳಿ ಹೇಳುತ್ತೇವೆ ಎಂದರು. ಪಕ್ಷದ ಕಾರ್ಯಕರ್ತರಲ್ಲಿ ಆಕ್ರೋಶ ಉಂಟಾಗಿದೆ ಎಂದರೆ ಅವರು ರಾಷ್ಟ್ರೀಯತೆಯಿಂದ ವಿಮುಖರಾಗಿದ್ದಾರೆ ಎಂದರ್ಥವಲ್ಲ ಎಂದವರು ಅಭಿಪ್ರಾಯಪಟ್ಟರು.
ದ.ಕ. ಜಿಲ್ಲೆಯ ಕೊಲೆಗಳ ಪ್ರಕರಣದಲ್ಲಿ ಪೊಲೀಸರಿಗೆ ಮುಕ್ತ ಅಧಿಕಾರ ನೀಡಲಾಗಿದೆ. ಖುದ್ದು ಎಡಿಜಿಪಿ ಮಂಗಳೂರಿನಲ್ಲಿ ಮೊಕ್ಕಾಂ ಹೂಡಿದ್ದಾರೆ. ಪ್ರಾಥಮಿಕ ವರದಿ ಪಡೆದಿದ್ದೇನೆ, ಸಿಸಿಟಿವಿ ಫುಟೇಜ್ ಮೂಲಕ ಪೊಲೀಸರಿಗೆ ಕೊಲೆಯ ಹಿಂದಿನ ಕೈವಾಡದ ಸುಳಿವು ಸಿಕ್ಕಿದೆ. ಪ್ರವೀಣ್ ಕೊಲೆಗೆ ಹಣಕಾಸು ನೆರವು ನೀಡಿದವರು, ಪ್ರಯತ್ನ ಮಾಡಿದವರು ಯಾರು, ಕೊಲೆ ಮಾಡಿದವರು ಯಾರು ಎಂಬುದು ಬಯಲಿಗೆಳೆಯುತ್ತಾರೆ ಎಂದರು.
ಜಿಹಾದಿಗಳ ಬಗ್ಗೆ ಮುಸ್ಲಿಂ ಸಮಾಜ ಆಲೋಚಿಸಲಿ: ಇವತ್ತು ಜಿಹಾದ್ ಇಡೀ ದೇಶಕ್ಕೆ ಹರುಡುತ್ತಿದೆ. ಈ ಜಿಹಾದ್ ಹಿಂಸಾಚಾರ ಎಲ್ಲಿಗೆ ಮುಟ್ಟುತ್ತದೆ ಎಂದು ಮುಸ್ಲಿಂ ಸಮುದಾಯ ಆಲೋಚನೆ ಮಾಡಬೇಕು. ಮುಸ್ಲಿಂ ರಾಷ್ಟ್ರಗಳೇ ದೊಡ್ಡ ಪ್ರಮಾಣದಲ್ಲಿ ಜಿಹಾದಿಗಳನ್ನು ನಿಷೇಧಿಸಿವೆ. ನಮ್ಮ ದೇಶದಲ್ಲಿ ಹಿಂಸೆಯ ಮೂಲಕವೇ ತಮ್ಮ ವಿಚಾರ ಹರಡುತ್ತೇವೆ ಎಂದರೆ ನಾಗರಿಕ ಸಮಾಜ ಒಪ್ಪುವುದಿಲ್ಲ. ಅಂಥವರ ವಿರುದ್ಧ ಸರ್ಕಾರ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತದೆ ಎಂದು ಸುನಿಲ್ ಕುಮಾರ್ ಎಚ್ಚರಿಕೆ ನೀಡಿದರು.
ಮೂರೂ ಕೊಲೆ ತನಿಖೆಗೆ ವಿಶೇಷ ತಂಡ: ದ.ಕ.ದಲ್ಲಿ ನಡೆದ ಮೂರು ಹತ್ಯೆಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಸಮಾನ ಪರಿಹಾರ ನೀಡಬೇಕು. ಜತೆಗೆ ಮೂರು ಕೊಲೆಗಳ ತನಿಖೆಗಾಗಿ ವಿಶೇಷ ತನಿಖಾ ತಂಡ ರಚಿಸಬೇಕು ಎಂದು ಜಾತ್ಯತೀತ ಪಕ್ಷಗಳು ಹಾಗೂ ಸಂಘಟನೆಗಳು ಒತ್ತಾಯಿಸಿವೆ. ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಯಾದವ ಶೆಟ್ಟಿ, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ರಾಜ್ಯ ಸರಕಾರ ವಿಫಲವಾಗಿದ್ದು, ಮುಖ್ಯಮಂತ್ರಿ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು. ಸಿಪಿಐ ಜಿಲ್ಲಾ ಕಾರ್ಯದರ್ಶಿ ವಿ. ಕುಕ್ಯಾನ್ ಮಾತನಾಡಿ ರಾಜ್ಯ ಸರ್ಕಾರ ಬೇಜವಾಬ್ದಾರಿಯಿಂದ ನಡೆದುಕೊಂಡ ಹಿನ್ನೆಲೆಯಲ್ಲಿ ಮತ್ತೆರಡು ಕೊಲೆಗಳು ನಡೆದಿದೆ ಎಂದು ಆರೋಪಿಸಿದರು.
ವಿದ್ಯುತ್ ಚಾಲಿತ ವಾಹನಗಳ ರಾಜಧಾನಿಯಾಗಲಿದೆ ಬೆಂಗಳೂರು: ಸಚಿವ ಸುನಿಲ್ ಕುಮಾರ್
ವಕೀಲ ದಿನೇಶ್ ಹೆಗ್ಡೆ ಉಳೆಪಾಡಿ ಮಾತನಾಡಿ, ಜಿಲ್ಲಾಧಿಕಾರಿ ತಮ್ಮ ಕರ್ತವ್ಯದಲ್ಲಿ ಸೋತಿದ್ದು, ಅಧಿಕಾರಿಗಳು ಸರ್ಕಾರದ ಬಾಲಂಗೋಚಿಯಾಗಿ ನಡೆದುಕೊಳ್ಳುವುದನ್ನು ನಿಲ್ಲಿಸಬೇಕು ಎಂದರು. ಡಿವೈಎಫ್‌ಐ ಜಿಲ್ಲಾಧ್ಯಕ್ಷ ಮುನೀರ್ ಕಾಟಿಪಳ್ಳ ಮಾತನಾಡಿದರು. ಅಖಿಲ ಭಾರತ ವಕೀಲರ ಸಂಘದ ಜಿಲ್ಲಾಧ್ಯಕ್ಷ ಯಶವಂತ ಮರೋಳಿ, ಎಐಟಿಯುಸಿ ಜಿಲ್ಲಾ ಅಧ್ಯಕ್ಷ ಎಚ್.ವಿ. ರಾವ್, ಇಂಟಕ್ ಜಿಲ್ಲಾ ಕಾರ್ಯದರ್ಶಿ ಬೊಂಡಾಲ ಚಿತ್ತರಂಜನ್ ಶೆಟ್ಟಿ, ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಎಐವೈಎಫ್ ದ.ಕ. ಜಿಲ್ಲಾ ಕಾರ್ಯದರ್ಶಿ ಕರುಣಾಕರ ಮಾರಿಪಳ್ಳ, ಸಿಐಟಿಯು ದ.ಕ. ಜಿಲ್ಲಾ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಇದ್ದರು.