5 ಲಕ್ಷವರೆಗಿನ ವಿದ್ಯುತ್ ಗುತ್ತಿಗೆ ಸ್ಥಳೀಯರಿಗೆ ಮೀಸಲು: ಸಚಿವ ಸುನಿಲ್
ವಿದ್ಯುತ್ ಗುತ್ತಿಗೆದಾರರ ಸಹಕಾರದಿಂದಲೇ ಇಂಧನ ಇಲಾಖೆ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. ಹೀಗಾಗಿ 1 ರಿಂದ 5 ಲಕ್ಷ ರು.ವರೆಗಿನ ಗುತ್ತಿಗೆಗಳನ್ನು ಕಡ್ಡಾಯವಾಗಿ ಸ್ಥಳೀಯರು ಹಾಗೂ ಸಣ್ಣ ಗುತ್ತಿಗೆದಾರರಿಗೆ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಇಂಧನ ಸಚಿವ ವಿ. ಸುನಿಲ್‌ಕುಮಾರ್ ಹೇಳಿದ್ದಾರೆ.
ಬೆಂಗಳೂರು (ಜು.18): ವಿದ್ಯುತ್ ಗುತ್ತಿಗೆದಾರರ ಸಹಕಾರದಿಂದಲೇ ಇಂಧನ ಇಲಾಖೆ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. ಹೀಗಾಗಿ 1 ರಿಂದ 5 ಲಕ್ಷ ರು.ವರೆಗಿನ ಗುತ್ತಿಗೆಗಳನ್ನು ಕಡ್ಡಾಯವಾಗಿ ಸ್ಥಳೀಯರು ಹಾಗೂ ಸಣ್ಣ ಗುತ್ತಿಗೆದಾರರಿಗೆ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಇಂಧನ ಸಚಿವ ವಿ. ಸುನಿಲ್‌ಕುಮಾರ್ ಹೇಳಿದ್ದಾರೆ. ಭಾನುವಾರ ಅರಮನೆ ಮೈದಾನದಲ್ಲಿ ನಡೆದ ಕರ್ನಾಟಕ ರಾಜ್ಯ ವಿದ್ಯುತ್ ಗುತ್ತಿಗೆದಾರರ ಸಮಾವೇಶದಲ್ಲಿ ಭಾಗವಹಿಸಿ ಸಂಘದ ವೆಬ್‌ಸೈಟ್ ಹಾಗೂ ಲಾಂಛನ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಸಾರ್ವಜನಿಕರು, ಗುತ್ತಿಗೆದಾರರು ಸೇರಿದಂತೆ ಎಲ್ಲಾ ವರ್ಗಗಳಿಗೂ ಅನುಕೂಲವಾಗುವಂತೆ ಕೆಲಸ ಮಾಡುತ್ತಿದ್ದೇವೆ. ವಿದ್ಯುತ್ ಸಂಪರ್ಕ ಪಡೆಯಲು ಒ.ಸಿ (ಸ್ವಾಧೀನಾನುಭವ ಪತ್ರ) ಪಡೆಯಬೇಕು ಎಂಬ ಕಾಂಗ್ರೆಸ್‌ನ ಜನವಿರೋಧಿ ನಿಯಮವನ್ನು ರದ್ದುಪಡಿಸಲಾಗಿದೆ. ಬೆಳಕು ಯೋಜನೆಯಡಿ ವಿದ್ಯುತ್ ಇಲ್ಲದ ಮನೆಗಳಿಗೆ ಸಂಪರ್ಕ ನೀಡಲು ಪಂಚಾಯ್ತಿ ಅನುಮತಿ ಕಡ್ಡಾಯವಲ್ಲ ಎಂದು ಆದೇಶಿಸಲಾಗಿದೆ. ಟ್ರಾನ್ಸ್‌ಫಾರ್ಮರ್‌ಗಳ ನಿರ್ವಹಣೆ, ಗುಣಮಟ್ಟದ ವಿದ್ಯುತ್ ಪೂರೈಕೆಗೆ ಹಲವು ಕ್ರಮ ಕೈಗೊಂಡಿದ್ದೇವೆ ಎಂದು ಹೇಳಿದ್ದೇವೆ ಎಂದು ವಿವರಿಸಿದರು.
ವಿದ್ಯುತ್ ಚಾಲಿತ ವಾಹನಗಳ ರಾಜಧಾನಿಯಾಗಲಿದೆ ಬೆಂಗಳೂರು: ಸಚಿವ ಸುನಿಲ್ ಕುಮಾರ್
ರಾಜ್ಯದಲ್ಲಿ 30 ಸಾವಿರ ವಿದ್ಯುತ್ ಗುತ್ತಿಗೆದಾರರಿದ್ದಾರೆ. ಅವರನ್ನು ನೆಚ್ಚಿಕೊಂಡು 10 ಲಕ್ಷ ಮಂದಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ 1 ಲಕ್ಷದಿಂದ 5 ಲಕ್ಷ ರು.ವರೆಗಿನ ತುಂಡು ಗುತ್ತಿಗೆಯನ್ನು ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದರು. ಇದೇ ವೇಳೆ ಸಚಿವರನ್ನು ಗುತ್ತಿಗೆದಾರರ ಸಂಘದ ವತಿಯಿಂದ ಸನ್ಮಾನಿಸಲಾಯಿತು. ಕರ್ನಾಟಕ ರಾಜ್ಯ ವಿದ್ಯುತ್ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಸಿ. ರಮೇಶ್ ಸೇರಿದಂತೆ ಹಲವರು ಪದಾಧಿಕಾರಿಗಳು ಹಾಜರಿದ್ದರು.
ಅಂಬೇಡ್ಕರ್ ಭವನ ನಿರ್ಮಾಣಕ್ಕೆ 6 ಕೋಟಿ ರು. ಅನುದಾನ: ಕಾರ್ಕಳ ವಿಧಾನ ಸಭಾ ಕ್ಷೇತ್ರದ ಕಾರ್ಕಳ ನಗರದಲ್ಲಿ ನಿರ್ಮಾಣಗೊಳ್ಳಲಿರುವ ತಾಲೂಕು ಮಟ್ಟದ ಭವ್ಯವಾದ ಡಾ. ಬಿ. ಆರ್. ಅಂಬೇಡ್ಕರ್ ಭವನಕ್ಕೆ 6.00 ಕೋಟಿ ರು. ಅನುದಾನ ಬಿಡುಗಡೆಗೊಂಡಿದೆ ಎಂದು ಶಾಸಕ ಹಾಗೂ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಮೊದಲು ಇದೇ ಅಂಬೇಡ್ಕರ್ ಭವನ ನಿರ್ಮಾಣಕ್ಕೆ 01.50 ಕೋಟಿ ರು. ಅನುದಾನ ಬಿಡುಗಡೆಗೊಂಡು ಕಾಮಗಾರಿ ಆರಂಭಿಸಲು ಎಲ್ಲ ಸಿದ್ಧತೆಗಳು ಆಗಿದ್ದವು. ಆದರೆ ಕಾರ್ಕಳ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹೆಚ್ಚಿನ ಸಂಖ್ಯೆಯ ಪರಿಶಿಷ್ಟಜಾತಿ ಸಮುದಾಯದ ಜನರಿದ್ದು ಹಲವಾರು ದಲಿತ ಸಂಘಟನೆಗಳು ಕಾರ್ಯನಿರ್ವಹಿಸುತ್ತಿವೆ.
ನಾರಾಯಣಗುರು, ಭಗತ್ ಸಿಂಗ್ ಪಾಠ ತೆಗೆದಿಲ್ಲ: ಸಚಿವ ಸುನಿಲ್ ಕುಮಾರ್
ದಲಿತ ಸಂಘಟನೆಗಳು ಸೇರಿದಂತೆ ಸಮುದಾಯದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ನಡೆಸುವ ಕಾರ್ಯಕ್ರಮಗಳಿಗೆ ಸಭಾಂಗಣದ ಕೊರತೆಯನ್ನು ಮನಗಂಡು ಎಲ್ಲ ಸೌಲಭ್ಯಗಳನ್ನೊಳಗೊಂಡ ಒಂದು ಸುಸಜ್ಜಿತ ಮತ್ತು ಭವ್ಯವಾದ ಅಂಬೇಡ್ಕರ್ ಭವನ ನಿರ್ಮಾಣ ಮಾಡುವ ಸಂಕಲ್ಪದೊಂದಿಗೆ ಇದೀಗ ಹಳೆಯ 1.50 ಕೋಟಿ ರು. ಅನುದಾನದ ಜೊತೆಗೆ ಹೆಚ್ಚುವರಿಯಾಗಿ 4.50 ಕೋಟಿ ರು. ಅನುದಾನ ಬಿಡುಗಡೆಗೊಳಿಸುವ ಮೂಲಕ ಒಟ್ಟು 6 ಕೋಟಿ ರು. ವೆಚ್ಚದಲ್ಲಿ ಅಂಬೇಡ್ಕರ್ ಭವನ ನಿರ್ಮಾಣಗೊಳ್ಳಲಿದೆ. ನೂತನವಾಗಿ ನಿರ್ಮಾಣಗೊಳ್ಳಲಿರುವ ಅಂಬೇಡ್ಕರ್ ಭವನವು ಒಂದು ವಿಶಾಲವಾದ ಸಭಾಂಗಣ, ಅಡುಗೆಕೋಣೆ ಹಾಗೂ ವಿಶ್ರಾಂತಿ ಕೊಠಡಿಗಳು ಸೇರಿದಂತೆ ಭವ್ಯವಾದ ಅಂಬೇಡ್ಕರ್ ಭವನ ನಿರ್ಮಾಣಗೊಳ್ಳಲಿದ್ದು ಸಮುದಾಯದ ಎಲ್ಲ ಜನರಿಗೂ ಅನುಕೂಲವಾಗಲಿದೆ ಎಂದು ತಿಳಿಸಿದರು.