Asianet Suvarna News Asianet Suvarna News

Hijab Row: ಹಿಜಾಬ್‌ ಮೂಲಭೂತ ಹಕ್ಕಲ್ಲ: ರಾಜ್ಯ ಸರ್ಕಾರ


ಸುಪ್ರೀಂ ಕೋರ್ಟಿನಲ್ಲಿ ರಾಜ್ಯ ಸರ್ಕಾರ ವಾದ, ಶಿಸ್ತಿನ ಭಾಗವಾಗಿ ಹಿಜಾಬ್‌ ನಿರ್ಬಂಧಿಸಲಾಗಿದೆ, ಹಲವೆಡೆ ಮುಸ್ಲಿಂ ಮಹಿಳೆಯರು ಹಿಜಾಬ್‌ ಧರಿಸುವುದಿಲ್ಲ: ರಾಜ್ಯ ಸರ್ಕಾರ 
 

Hijab is Not Fundamental Right Says Government of Karnataka to Supreme Court grg
Author
First Published Sep 22, 2022, 7:02 AM IST

ನವದೆಹಲಿ(ಸೆ.22):  ಹಿಜಾಬ್‌ ಆಂದೋಲನ ಪಿಎಫ್‌ಐ ಪಿತೂರಿ ಎಂದು ಮಂಗಳವಾರವಷ್ಟೇ ಸುಪ್ರೀಂ ಕೋರ್ಚ್‌ನಲ್ಲಿ ವಾದಿಸಿದ್ದ ಕರ್ನಾಟಕ ಸರ್ಕಾರ ಶಾಲೆಯಲ್ಲಿ ಶಿಸ್ತಿನ ಭಾಗವಾಗಿ ಹಿಜಾಬ್‌ಗೆ ನಿರ್ಬಂಧಿಸಲಾಗಿದೆಯೇ ಹೊರತು ಬೇರೆ ಯಾವ ಉದ್ದೇಶವೂ ಇಲ್ಲ ಎಂದು ಬುಧವಾರ ಸ್ಪಷ್ಟಪಡಿಸಿದೆ. ಜೊತೆಗೆ ಶಾಲಾ-ಕಾಲೇಜುಗಳಲ್ಲಿ ಹಿಜಾಬ್‌ ಧರಿಸುವುದು ಮೂಲಭೂತ ಹಕ್ಕಲ್ಲ. ಇಂದು ಹಲವು ಮುಸ್ಲಿಂ ಮಹಿಳೆಯರು ಹಿಜಾಬ್‌ ಧರಿಸುವುದಿಲ್ಲ ಎಂಬ ವಾದವನ್ನು ಮುಂದಿಟ್ಟಿದೆ.

ಹಿಜಾಬ್‌ ಕುರಿತು 9ನೇ ದಿನವೂ ಸುಪ್ರೀಂಕೋರ್ಟ್‌ನ ನ್ಯಾ.ಹೇಮಂತ್‌ ಗುಪ್ತಾ ನೇತೃತ್ವದ ದ್ವಿಸದಸ್ಯ ಪೀಠದ ಮುಂದೆ ವಾದ ಮಂಡನೆ ನಡೆಯಿತು. ಕರ್ನಾಟಕದ ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ ವಾದ ಮಂಡಿಸಿದರು. ಅಗತ್ಯ ಧಾರ್ಮಿಕ ಆಚರಣೆ ಅಲ್ಲ: ಆಚರಿಸುವ ಪ್ರತಿ ಧಾರ್ಮಿಕ ಆಚರಣೆಯೂ ಕೂಡ ಸಂವಿಧಾನದ ಆರ್ಟಿಕಲ್‌ 25 ರ ಅಡಿ ಸಂರಕ್ಷಿತವಾಗಿಲ್ಲ. ತ್ರಿವಳಿ ತಲಾಕ್‌ ಮತ್ತು ಗೋಹತ್ಯೆ ನಿಷೇಧ ಸುಪ್ರೀಂಕೋರ್ಟ್‌ ತೀರ್ಪುಗಳನ್ನು ಉಲ್ಲೇಖಿಸಿದ ನಾವದಿಗಿ, ಈ ಎರಡು ಪ್ರಕರಣಗಳಲ್ಲಿ ಕೂಡ ಇಸ್ಲಾಂನ ಅಗತ್ಯ ಧಾರ್ಮಿಕ ಆಚರಣೆ ಅಲ್ಲ ಎಂದು ಹೇಳಲಾಗಿದೆ. ಒಂದೊಮ್ಮೆ ಅರ್ಜಿದಾರರು ಹಿಜಾಬ್‌ ಅಗತ್ಯ ಆಚರಣೆ ಎನ್ನುವುದಾದರೆ ಅದಕ್ಕೆ ಅಗತ್ಯ ದಾಖಲೆಗಳನ್ನು ತೋರಿಸಬೇಕಿದೆ. ಶಾಲೆಯಲ್ಲಿ ಶಿಸ್ತಿನ ಭಾಗವಾಗಿ ಹಿಜಾಬ್‌ಗೆ ನಿರ್ಬಂಧಿಸಲಾಗಿದೆಯೇ ಹೊರತು ಬೇರೆ ಯಾವ ಉದ್ದೇಶ ಇಲ್ಲ ಎಂದು ವಾದ ಮಂಡಿಸಿದರು.

ಇರಾನ್‌ನಲ್ಲಿ ತೀವ್ರಗೊಂಡ Anti Hijab Protest; ಕೂದಲು ಕತ್ತರಿಸಿಕೊಂಡು ಹಿಜಾಬ್‌ ಸುಟ್ಟ ಮಹಿಳೆಯರು

ಕಡ್ಡಾಯವಾದರೆ ಪರೀಕ್ಷೆಗೆ ಒಳಪಡಿಸಬೇಕಿದೆ: ಕುರಾನ್‌ನಲ್ಲಿರುವುದು ಎಲ್ಲವನ್ನೂ ಕೂಡ ಒಪ್ಪಬಹುದು. ಆದರೆ ಅದರ ಅಗತ್ಯತೆಯ ಪ್ರಶ್ನೆ ಎದುರಾದಾಗ ಆ ಪರೀಕ್ಷೆಯಲ್ಲಿ ಫೇಲ್‌ ಆಗಿದೆ. ಇವತ್ತೂ ಕೂಡ ಹಲವು ಮುಸ್ಲಿಂ ಮಹಿಳೆಯರು ಹಿಜಾಬ್‌ ಧರಿಸುವುದಿಲ್ಲ. ಒಂದೊಮ್ಮೆ ಕಡ್ಡಾಯ ಎನ್ನುವುದಾದರೆ ಮೊದಲು ಅದನ್ನು ಪರೀಕ್ಷೆಗೆ ಒಳಪಡಿಸಬೇಕಿದೆ. ಈ ವೇಳೆ ಮಧ್ಯಪ್ರವೇಶಿಸಿದ ನ್ಯಾ.ಹೇಮಂತ್‌ ಗುಪ್ತಾ, ನನಗೆ ಗೊತ್ತಿರುವಂತೆ ಪಾಕಿಸ್ತಾನದ ಹೈಕೋರ್ಟ್‌ ನಿವೃತ್ತ ನ್ಯಾಯಾಧೀಶರು ಹೇಳಿರುವಂತೆ, ತಮ್ಮ ಇಬ್ಬರು ಮಕ್ಕಳು ಕೂಡ ಹಿಜಾಬ್‌ ಧರಿಸುವುದಿಲ್ಲ ಎಂದಿದ್ದಾರೆ. ಅಲ್ಲದೇ ಪಟ್ನಾ, ಮಧ್ಯಪ್ರದೇಶ ಸೇರಿ ಹಲವು ಕಡೆ ಹಿಜಾಬ್‌ ಧರಿಸುವುದಿಲ್ಲ ಎಂದರು.

ಇದಕ್ಕೆ ನ್ಯಾಯಪೀಠ, ಕುರಾನ್‌ನಲ್ಲಿ ಹೇಳಿರುವ ಎಲ್ಲವೂ ಕಡ್ಡಾಯ ಮತ್ತು ಪವಿತ್ರ ಎನ್ನಲಾಗಿದೆ ಎಂದು ಹೇಳಿತು. ಇದಕ್ಕೆ ಪ್ರತಿಕ್ರಿಯಿಸಿದ ನಾವದಗಿ, ಈ ಹಿಂದೆ ಸುಪ್ರೀಂಕೋರ್ಟ್‌ ಮೂರು ಪ್ರಕರಣಗಳಲ್ಲಿ ಹೇಳಿರುವಂತೆ ಕುರಾನ್‌ನಲ್ಲಿ ಹೇಳಿರುವುದು ಎಲ್ಲವೂ ಧಾರ್ಮಿಕವಾಗಿರಬಹುದು ಆದರೆ ಆಚರಣೆ ಅಥವಾ ಪಾಲನೆಯಲ್ಲಿ ಅಗತ್ಯ ಎಂದು ಹೇಳಿಲ್ಲ ಎಂದರು. ಕೇವಲ ಒಂದು ಅಭ್ಯಾಸವೂ ಧೀರ್ಘಕಾಲಿಕವಾಗಿ ಮುಂದುವರೆದರೆ ಅದನ್ನು ಅಗತ್ಯ ಆಚರಣೆ ಎಂದು ಅನುಮತಿಸಲು ಸಾಧ್ಯವಿಲ್ಲ. ಹಾಗೆಯೇ ಹಿಜಾಬ್‌ ಧರಿಸುವುದು ಧಾರ್ಮಿಕ ಆಚರಣೆಯಾಗಿರಬಹುದು ಆದರೆ ಅದು ಧರ್ಮಕ್ಕೆ ಅಗತ್ಯವೇ ಎಂದಾಗ ಇಲ್ಲ ಎಂದು ಕರ್ನಾಟಕ ಹೈಕೋರ್ಚ್‌ ಹೇಳಿರುವುದಾಗಿ ಉಲ್ಲೇಖಿಸಿದರು.

ಏಕತೆ ಉತ್ತೇಜಿಸಲು ಹಿಜಾಬ್‌ಗೆ ನಿರ್ಬಂಧ: 

ಶಾಲೆಗಳಲ್ಲಿ ಧರ್ಮದ ಆಧಾರದ ಮೇಲೆ ವರ್ಗೀಕರಣಕ್ಕೆ ಅನುಮತಿಸುವುದಿಲ್ಲ. ಶಾಲೆ ಎನ್ನುವುದು ಒಂದು ಸುರಕ್ಷಿತ ಸಂಸ್ಥೆ, ಇಲ್ಲಿಗೆ ಬಂದಾಗ ಎಲ್ಲರೂ ಸಮವಸ್ತ್ರ ಧರಿಸಿ ಬರಬೇಕು. ಏಕತೆಯನ್ನು ಉತ್ತೇಜಿಸುವ ಸಲುವಾಗಿ ಹಿಜಾಬ್‌ಗೆ ನಿರ್ಬಂಧ ಹೇರಲಾಗಿದೆ. ಇದರ ಹೊರತಾಗಿ ಕರ್ನಾಟಕ ಸರ್ಕಾರ ಯಾವುದೇ ಧಾರ್ಮಿಕ ಚಟುವಟಿಕೆ ಅಥವಾ ಆಚರಣೆಯನ್ನು ನಿಷೇಧಿಸಿಲ್ಲ ಎಂದು ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಕೆ.ಎಂ.ನಟರಾಜ್‌ ವಾದ ಮಂಡಿಸಿದರು.

ಹಿಜಾಬ್‌ ಒಂದು ಪ್ರಾಸಂಗಿಕ ಪ್ರಶ್ನೆಯಾಗಿರಬಹುದೇ ಹೊರತು ಇಲ್ಲಿ ಸರ್ಕಾರ ಯಾವುದೇ ಧರ್ಮ ಹುಡುಕಿಲ್ಲ ಅಥವಾ ಹುಡುಕುತಿಲ್ಲ ಎಂದು ನಟರಾಜ್‌ ಅವರು ವಾದ ಮುಂದಿಟ್ಟಾಗ, ನ್ಯಾ.ಧುಲಿಯಾ, ಯಾರಾದರೂ ಹಿಜಾಬ್‌ ಧರಿಸಿ ಶಾಲೆ ಪ್ರವೇಶಿಸಿದರೇ ನೀವು ಇದಕ್ಕೆ ಅನುಮತಿಸುತ್ತಿರೋ ಇಲ್ಲವೋ ? ನೇರವಾಗಿ ಉತ್ತರ ಹೇಳಿ ಎಂದರು. ಆಗ ಅದನ್ನು ಶಾಲಾ ಆಡಳಿತ ಮಂಡಳಿ ನಿರ್ಧರಿಸುತ್ತದೆ. ನಾವು ರಾಜ್ಯ ಸರ್ಕಾರವಾಗಿ ಎಲ್ಲವನ್ನೂ ಗೌರವಿಸುತ್ತೇವೆ ಎಂದರು.
ಧಾರ್ಮಿಕ ಸೂಚಕಗಳು ದೇಶದ ವಿಭಿನ್ನತೆ ತೋರಿಸುತ್ತವೆ.

Hijab Case: ಹಿಜಾಬ್‌ ನಿಷೇಧಿಸಿದ್ದಕ್ಕೆ 17000 ಮಂದಿ ಪರೀಕ್ಷೆ ಗೈರು!

ಮಕ್ಕಳ ಬಳಸುವ ಧಾರ್ಮಿಕ ಸೂಚಕಗಳು ಆ ದೇಶದ ವಿಭಿನ್ನತೆಯನ್ನು ತೋರಿಸುತ್ತದೆ ಎಂದು ನ್ಯಾ.ಸುಧಾಂಶು ದುಲಿಯಾ ಅಭಿಪ್ರಾಯ ಪಟ್ಟಿದ್ದಾರೆ. 9ನೇ ದಿನ ವಾದವನ್ನು ಆಲಿಸುವಾಗ ಈ ಅಭಿಪ್ರಾಯ ವ್ಯಕ್ತವಾಯಿತು. ವಿದ್ಯಾರ್ಥಿಗಳಿಗೆ ನಮ್ಮ ದೇಶದ ವಿಭಿನ್ನತೆ ತೋರಿಸಲು ಈ ಧಾರ್ಮಿಕ ಸೂಚಕಗಳು ಅವಕಾಶ ಮಾಡಿಕೊಡುತ್ತವೆ ಎಂದರು.

ಬೇಗ ವಾದ ಮುಗಿಸಿ: ಹಿಜಾಬ್‌ಪರ ಅರ್ಜಿದಾರರಿಗೆ ಸುಪ್ರೀಂ ತಾಕೀತು

‘ನಿಮಗೆ ಏನು ಹೇಳಲಿಕ್ಕೆ ಇದೆಯೋ ಅದನ್ನು ಗುರುವಾರದಂದು ಒಂದು ಗಂಟೆಯೊಳಗಾಗಿ ಹೇಳಿ ಮುಗಿಸಿ. ನಮ್ಮ ತಾಳ್ಮೆಯ ಕಟ್ಟೆಯೊಡೆಯುತ್ತಿದೆ.’ ಇದು ಹಿಜಾಬ್‌ ಪರ ಅರ್ಜಿದಾರರಿಗೆ ಸುಪ್ರೀಂ ಕೋರ್ಟ್‌ ಮಾಡಿರುವ ತಾಕೀತು. ಹಿಜಾಬ್‌ ಪರ 11 ವಕೀಲರು ಸುಪ್ರೀಂ ಕೋರ್ಟಿನಲ್ಲಿ ವಾದ ಮಾಡುತ್ತಿದ್ದು 8 ದಿನಗಳ ಕಾಲ ಅವರಿಗೆ ವಾದಿಸಲು ಅವಕಾಶ ನೀಡಲಾಗಿತ್ತು. ಬುಧವಾರ ನ್ಯಾ.ಹೇಮಂತ್‌ ಗುಪ್ತಾ ಮತ್ತು ಸುಧಾಂಶು ದುಲಿಯಾ ಅವರನ್ನೊಳಗೊಂಡ ದ್ವಿಸದಸ್ಯ ನ್ಯಾಯಪೀಠದ ಮುಂದೆ ಹಿಜಾಬ್‌ ಪರ ಹಿರಿಯ ವಕೀಲ ಹಫೀಝಾ ಅಹ್ಮದಿ ವಾದ ಮುಂದಿಡಲು ಮುಂದಾದಾಗ ನ್ಯಾಯಪೀಠ, ‘ಅರ್ಜಿದಾರರ ಪರವಾಗಿ ಈಗಾಗಲೇ ಬಹಳಷ್ಟು ವಕೀಲರು ತಮ್ಮ ವಾದವನ್ನು ಮುಂದಿಟ್ಟಿದ್ದಾರೆ. ‘ನಮ್ಮ ತಾಳ್ಮೆ ಮಿತಿಮೀರುತ್ತಿದೆ. ನೀವು ಹೇಳಬೇಕೆಂದು ಇರುವುದನ್ನು ಬೇಗ ಹೇಳಿ ಮುಗಿಸಿ’ ಎಂದರು.
 

Follow Us:
Download App:
  • android
  • ios