Asianet Suvarna News Asianet Suvarna News

ಠಾಣೆಗಳು ರಿಯಲ್‌ ಎಸ್ಟೇಟ್‌ ಒಪ್ಪಂದ ಕೇಂದ್ರಗಳಾಗಿವೆ: ಪೊಲೀಸರ ಧೋರಣೆ ಕಟುವಾಗಿ ಟೀಕಿಸಿದ ಹೈಕೋರ್ಟ್‌

ಖಾಸಗಿ ವ್ಯಕ್ತಿಗಳು ತನ್ನಿಂದ ಹಣ ವಸೂಲಿ ಮಾಡಲು ಪ್ರಯತ್ನಿಸುತ್ತಿದ್ದು, ಅದಕ್ಕೆ ಬಾಣಸವಾಡಿ ಠಾಣಾ ಪೊಲೀಸರು ನೆರವು ನೀಡುತ್ತಿದ್ದಾರೆ ಎಂದು ಆರೋಪಿಸಿ ನಗರದ ಗೆದ್ದಲಹಳ್ಳಿ ನಿವಾಸಿ ಜುವಿತ್ತಾ ರವಿ ಎಂಬುವರು ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಹೀಗೆ ಆಕ್ರೋಶ ವ್ಯಕ್ತಪಡಿಸಿದೆ.

High Court of Karnataka Slams Police grg
Author
First Published Nov 25, 2023, 9:05 AM IST

ಬೆಂಗಳೂರು(ನ.25):  ಠಾಣೆಗಳಲ್ಲಿ ಸಿವಿಲ್‌ ವ್ಯಾಜ್ಯಗಳನ್ನು ಇತ್ಯರ್ಥ ಮಾಡುವ ಪೊಲೀಸರ ಧೋರಣೆಯನ್ನು ಮತ್ತೊಮ್ಮೆ ಕಟುವಾಗಿ ಟೀಕಿಸಿರುವ ಹೈಕೋರ್ಟ್‌, ಪೊಲೀಸ್‌ ಠಾಣೆಗಳು ರಿಯಲ್ ಎಸ್ಟೇಟ್‌ ದಂಧೆಯ ಒಪ್ಪಂದ ಕೇಂದ್ರಗಳಾಗಿ ಪರಿವರ್ತನೆಗೊಂಡಿವೆ ಎಂದು ಖಾರವಾಗಿ ನುಡಿದಿದೆ.

ಖಾಸಗಿ ವ್ಯಕ್ತಿಗಳು ತನ್ನಿಂದ ಹಣ ವಸೂಲಿ ಮಾಡಲು ಪ್ರಯತ್ನಿಸುತ್ತಿದ್ದು, ಅದಕ್ಕೆ ಬಾಣಸವಾಡಿ ಠಾಣಾ ಪೊಲೀಸರು ನೆರವು ನೀಡುತ್ತಿದ್ದಾರೆ ಎಂದು ಆರೋಪಿಸಿ ನಗರದ ಗೆದ್ದಲಹಳ್ಳಿ ನಿವಾಸಿ ಜುವಿತ್ತಾ ರವಿ ಎಂಬುವರು ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಹೀಗೆ ಆಕ್ರೋಶ ವ್ಯಕ್ತಪಡಿಸಿದೆ.

ಸಚಿವ ಜಮೀರ್‌ಗೆ ಶುರುವಾಯ್ತು ಅಕ್ರಮ ಆಸ್ತಿ ಸಂಕಷ್ಟ: ಎಫ್ಐಆರ್ ರದ್ದಿಗೆ ಹೈಕೋರ್ಟ್ ನಿರಾಕರಣೆ

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಸಿವಿಲ್‌ ವ್ಯಾಜ್ಯಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಅರ್ಜಿದಾರರಿಗೆ ಪೊಲೀಸರು ವಿನಾಕಾರಣ ಕಿರುಕುಳ ನೀಡುತ್ತಿದ್ದಾರೆ ಎಂದು ನ್ಯಾಯಪೀಠದ ಗಮನಕ್ಕೆ ತಂದರು. ಅದನ್ನು ಗಂಭೀರವಾಗಿ ಪರಿಗಣಿಸಿದ ಹೈಕೋರ್ಟ್‌, ಠಾಣೆಗಳು ರಿಯಲ್‌ ಎಸ್ಟೇಟ್‌ ವ್ಯವಹಾರಸ್ಥರ ಸೆಟೆಲ್‌ಮೆಂಟ್‌ ಮಾಡುವ ಕೇಂದ್ರಗಳಾಗಿ ಪರಿವರ್ತನೆಗೊಂಡಿವೆ. ಸಿವಿಲ್‌ ವ್ಯಾಜ್ಯಗಳಲ್ಲಿ ಮಧ್ಯಪ್ರವೇಶ ಮಾಡದಂತೆ ಸುಪ್ರೀಂ ಕೋರ್ಟ್‌ ಹಾಗೂ ಹೈಕೋರ್ಟ್‌ ಪದೇ ಪದೇ ಆದೇಶಿಸಿದ್ದರೂ, ಪೊಲೀಸರು ಮಾತ್ರ ಅದನ್ನು ಉಲ್ಲಂಘಿಸುತ್ತಲೇ ಇದ್ದಾರೆ ಎಂದು ಅಸಮಾಧಾನ ಹೊರಹಾಕಿತು. ಅಲ್ಲದೆ, ಪ್ರಕರಣ ಕುರಿತಂತೆ ಬಾಣಸವಾಡಿ ಸಹಾಯಕ ಪೊಲೀಸ್‌ ಆಯುಕ್ತರು ನ.29ರಂದು ಮಧ್ಯಾಹ್ನ 2.30ಕ್ಕೆ ಕೋರ್ಟ್‌ಗೆ ಖುದ್ದು ಹಾಜರಾಗಿ ವಿವರಣೆ ನೀಡಬೇಕು ಎಂದು ನಿರ್ದೇಶಿಸಿ ವಿಚಾರಣೆ ಮುಂದೂಡಿತು.

ಹೈ ಕೋರ್ಟ್ ತೀರ್ಪು : ಸಾಮಾನ್ಯ ಕ್ಷೇತ್ರದಿಂದ ಗೆದ್ದರೂ ಅಧ್ಯಕ್ಷ ಹುದ್ದೆಗೆ ಮೀಸಲು ಅಡಿ ಸ್ಪರ್ಧೆ ತಪ್ಪಲ್ಲ

ಕೆಲ ಖಾಸಗಿ ವ್ಯಕ್ತಿಗಳು ತನ್ನಿಂದ ₹12 ಲಕ್ಷ ವಸೂಲಿ ಮಾಡಲು ಪ್ರಯತ್ನಿಸುತ್ತಿದ್ದಾರೆ. ಈ ಸಂಬಂಧ ಬಾಣಸವಾಡಿ ಪೊಲೀಸರು 2023ರ ನ.21ರಂದು ಠಾಣೆಗೆ ಕರೆದೊಯ್ದು ಹಣ ಪಾವತಿಸಲು ಸೂಚಿಸುತ್ತಿದ್ದರು. ನ.25ರಂದು ಚೆಕ್‌ ಸಮೇತ ಠಾಣೆಗೆ ಹಾಜರಾಗಿ ಹಣ ಪಾವತಿಸುವಂತೆ ಸೂಚಿಸಿದ್ದಾರೆ. ಇದು ಗಂಭೀರ ಪ್ರಕರಣವಾಗಿದ್ದು, ಪೊಲೀಸರು ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡುತ್ತಿದ್ದಾರೆ ಎಂದು ಅರ್ಜಿದಾರರು ದೂರಿದ್ದಾರೆ.

ಅಲ್ಲದೆ, ಸಿವಿಲ್‌ ಹಾಗೂ ಹಣಕಾಸಿಗೆ ಸಂಬಂಧಿಸಿದ ಪ್ರಕರಣಗಳನ್ನು ಪೊಲೀಸ್‌ ಠಾಣೆಯಲ್ಲಿ ಸೆಟೆಲ್‌ಮೆಂಟ್‌ ಮಾಡುವ ಪೋಲೀಸರ ಕಾರ್ಯವೈಖರಿಯಿಂದ ಸಾರ್ವಜನಿಕ ಶಾಂತಿಗೆ ಭಂಗ ಉಂಟಾಗುತ್ತಿದೆ. ಆದ್ದರಿಂದ ಪ್ರಕರಣ ಸಂಬಂಧ ಅರ್ಜಿದಾರರು ನ.22ರಂದು ನೀಡಿರುವ ಮಾಹಿತಿ ಪರಿಗಣಿಸಿ, ಕಾನೂನು ಪ್ರಕಾರ ಕ್ರಮ ಜರುಗಿಸುವಂತೆ ರಾಜ್ಯ ಸರ್ಕಾರ ಮತ್ತು ನಗರ ಪೊಲೀಸ್‌ ಆಯುಕ್ತರಿಗೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ನ್ಯಾಯಾಲಯವನ್ನು ಕೋರಿದ್ದಾರೆ. ಜತೆಗೆ, ಈ ಅರ್ಜಿ ಇತ್ಯರ್ಥವಾಗುವರೆಗೆ ಅರ್ಜಿದಾರರರು ಅಥವಾ ಅವರ ಕುಟುಂಬ ಸದಸ್ಯರ ವಿರುದ್ಧ ಯಾವುದೇ ಬಲವಂತದ ಕ್ರಮ ಜರುಗಿಸದಂತೆ ಪೊಲೀಸರಿಗೆ ನಿರ್ದೇಶಿಸಬೇಕು ಎಂದು ಮಧ್ಯಂತರ ಮನವಿ ಮಾಡಿದ್ದಾರೆ.

Latest Videos
Follow Us:
Download App:
  • android
  • ios