Asianet Suvarna News Asianet Suvarna News

ಸ್ಮಶಾನಕ್ಕೆ ಜಾಗ ಕೊಡದ್ದಕ್ಕೆ ಸರ್ಕಾರಕ್ಕೆ ಹೈಕೋರ್ಟ್‌ ಚಾಟಿ

ಕಳೆದ 75 ವರ್ಷಗಳಿಂದ ನಾಟಕ ನಡೆಯುತ್ತಿದೆಯೇ ಹೊರತು ಜನಸಾಮಾನ್ಯರು ಕೇಳುವ ಅಗತ್ಯ ಸೌಲಭ್ಯಗಳಾದ ನೀರು, ರಸ್ತೆ ಮತ್ತು ಸ್ಮಶಾನವನ್ನು ಕಲ್ಪಿಸುತ್ತಿಲ್ಲ. ಸರ್ಕಾರಕ್ಕೆ ಅಭಿವೃದ್ಧಿ ಬೇಕಿಲ್ಲ. ಆದರೆ, ಮೃತಪಟ್ಟ ಕೆಲವರಿಗೆ ಮಾತ್ರ ದೊಡ್ಡ ದೊಡ್ಡ ಪುತ್ಥಳಿ ನಿರ್ಮಿಸಿ ಕೊಡುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಹೈಕೋರ್ಟ್‌. 

High Court Angry on Government of Karnataka for Not Give Space for the Cemetery grg
Author
First Published Mar 17, 2023, 5:25 AM IST

ಬೆಂಗಳೂರು(ಮಾ.17):  ರಾಜ್ಯದಲ್ಲಿ ಸ್ಮಶಾನ ಜಾಗ ಇಲ್ಲದ ಗ್ರಾಮ ಮತ್ತು ಪಟ್ಟಣ ಪ್ರದೇಶಗಳಿಗೆ ಅಗತ್ಯ ಜಮೀನು ಒದಗಿಸಲು ವಿಫಲವಾಗಿರುವ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಹೈಕೋರ್ಟ್‌, ಕಳೆದ 75 ವರ್ಷಗಳಿಂದ ನಾಟಕ ನಡೆಯುತ್ತಿದೆಯೇ ಹೊರತು ಜನಸಾಮಾನ್ಯರು ಕೇಳುವ ಅಗತ್ಯ ಸೌಲಭ್ಯಗಳಾದ ನೀರು, ರಸ್ತೆ ಮತ್ತು ಸ್ಮಶಾನವನ್ನು ಕಲ್ಪಿಸುತ್ತಿಲ್ಲ. ಸರ್ಕಾರಕ್ಕೆ ಅಭಿವೃದ್ಧಿ ಬೇಕಿಲ್ಲ. ಆದರೆ, ಮೃತಪಟ್ಟ ಕೆಲವರಿಗೆ ಮಾತ್ರ ದೊಡ್ಡ ದೊಡ್ಡ ಪುತ್ಥಳಿ ನಿರ್ಮಿಸಿ ಕೊಡುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದೆ.

ರಾಜ್ಯದಲ್ಲಿ ಸ್ಮಶಾನ ಇಲ್ಲದ ಗ್ರಾಮ ಮತ್ತು ಪಟ್ಟಣ ಪ್ರದೇಶಗಳಿಗೆ ಅಗತ್ಯ ಜಮೀನು ಒದಗಿಸುವಂತೆ ಸೂಚಿಸಿ ಹೈಕೋರ್ಟ್‌ ಹೊರಡಿಸಿರುವ ಆದೇಶ ಜಾರಿಗೊಳಿಸದೇ ಇರುವುದಕ್ಕೆ ಬೆಂಗಳೂರು ನಿವಾಸಿ ಮಹಮ್ಮದ್‌ ಇಕ್ಬಾಲ್‌ ಸಲ್ಲಿಸಿರುವ ಸಿವಿಲ್‌ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ವೀರಪ್ಪ ಅವರ ನೇತೃತ್ವದ ವಿಭಾಗೀಯ ಪೀಠ ಬೇಸರ ವ್ಯಕ್ತಪಡಿಸಿತು.

5, 8ನೇ ಕ್ಲಾಸ್‌ ಬೋರ್ಡ್‌ ಪರೀಕ್ಷೆಗೆ ಹೈಕೋರ್ಟ್‌ ಗ್ರೀನ್‌ ಸಿಗ್ನಲ್‌: ಷರತ್ತು ಅನ್ವಯ

ಸ್ಮಶಾನಕ್ಕೆ ಜಾಗವಿಲ್ಲದ ಗ್ರಾಮಗಳ ಗ್ರಾಮಸ್ಥರು ಭೂಮಿ ಮಂಜೂರಾತಿಗಾಗಿ ಕೋರಿ ಸರ್ಕಾರಕ್ಕೆ ಅರ್ಜಿ ಸಲ್ಲಿಸುವಂತೆ ಪತ್ರಿಕಾ ಪ್ರಕಟಣೆ ಹೊರಡಿಸಬೇಕು ಎಂದು ನ್ಯಾಯಪೀಠ ಸರ್ಕಾರಕ್ಕೆ ನಿರ್ದೇಶಿಸಿ ಮೂರು ವಾರ ವಿಚಾರಣೆ ಮುಂದೂಡಿತು.

ಹಲವು ಜಿಲ್ಲಾಧಿಕಾರಿಗಳು ಹಾಜರ್‌:

ಕಳೆದ ಮಾ.9ರಂದು ಅರ್ಜಿ ವಿಚಾರಣೆಗೆ ಬಂದಾಗ ರಾಜ್ಯದ ಗ್ರಾಮಗಳಿಗೆ ಸ್ಮಶಾನಕ್ಕೆ ಜಮೀನು ಕಲ್ಪಿಸಿರುವ ವಿಚಾರದಲ್ಲಿ ಸರ್ಕಾರ ತಪ್ಪು ಮಾಹಿತಿ ನೀಡಿದೆ ಎಂದು ಕರ್ನಾಟಕ ಕಾನೂನು ಸೇವೆಗಳ ಪ್ರಾಧಿಕಾರವು ವರದಿ (ಕೆಎಸ್‌ಎಲ್‌ಎಸ್‌ಎ) ಸಲ್ಲಿಸಿ ಮಾಹಿತಿ ನೀಡಿತ್ತು. ಹೀಗಾಗಿ ತಪ್ಪು ಮಾಹಿತಿ ನೀಡಿದ ಸಂಬಂಧಪಟ್ಟಅಧಿಕಾರಿ ಮತ್ತು ಜಿಲ್ಲಾಧಿಕಾರಿಗಳು ಮಾ.16ರಂದು (ಗುರುವಾರ) ವಿಚಾರಣೆಗೆ ಖುದ್ದು ಹಾಜರಾಗಬೇಕು ಎಂದು ಹೈಕೋರ್ಟ್‌ ನಿರ್ದೇಶಿಸಿತ್ತು.

ಡಿ.ಸಿ.ಗಳು ಹಾಜರ್‌:

ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎನ್‌.ಜಯರಾಂ ಅವರು ವಿಚಾರಣೆಗೆ ಖುದ್ದು ಹಾಜರಾಗಿದ್ದರು. ಉಳಿದಂತೆ ದಕ್ಷಿಣ ಕನ್ನಡ, ಗದಗ, ವಿಜಯನಗರ, ಧಾರವಾಡ, ವಿಜಯಪುರ, ಬೆಳಗಾವಿ, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ಉಡುಪಿ, ಹಾವೇರಿ, ಚಾಮರಾಜನಗರ, ರಾಯಚೂರು, ಹಾಸನ, ಉತ್ತರ ಕನ್ನಡ, ತುಮಕೂರು ಮತ್ತು ಚಿಕ್ಕಬಳ್ಳಾಪುರ ಸೇರಿದಂತೆ ಹಲವು ಜಿಲ್ಲೆಗಳ ಜಿಲ್ಲಾಧಿಕಾರಿಗಳು ಆನ್‌ಲೈನ್‌ ಮೂಲಕ ಹಾಜರಾಗಿದ್ದರು.

ಜಯರಾಂ ಅವರು ಪ್ರಮಾಣ ಪತ್ರ ಸಲ್ಲಿಸಿ, ರಾಜ್ಯದಲ್ಲಿ ಒಟ್ಟು 30762 ಗ್ರಾಮಗಳಿವೆ. ಅದರಲ್ಲಿ 2491 ಬೇಚರಕ್‌ (ಜನವಸತಿಯಿಲ್ಲದ) ಗ್ರಾಮಗಳಿವೆ. ಬೇಚರಕ್‌ ಗ್ರಾಮಗಳನ್ನು ಹೊರತುಪಡಿಸಿದ ಒಟ್ಟು 28,271 ಗ್ರಾಮಗಳ ಪೈಕಿ 28,260 ಗ್ರಾಮಗಳಿಗೆ ಸ್ಮಶಾನ ಭೂಮಿ ಒದಗಿಸಲಾಗಿದೆ. ಉಳಿದ ಎಲ್ಲ ಗ್ರಾಮಗಳಿಗೂ ಸ್ಮಶಾನ ಭೂಮಿ ನೀಡಲಾಗುವುದು. ಕರ್ನಾಟಕ ಕಾನೂನು ಸೇವೆಗಳ ಪ್ರಾಧಿಕಾರ (ಕೆಎಸ್‌ಎಲ್‌ಎಸ್‌ಎ) ಮತ್ತು ಸರ್ಕಾರ ಜಂಟಿ ಸಮೀಕ್ಷೆ ನಡೆಸಿದರೆ, ಶಾಶ್ವತ ಪರಿಹಾರ ಕಂಡುಕೊಳ್ಳಬಹುದು ಎಂದು ತಿಳಿಸಿದರು.

ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ವೀರಪ್ಪ ಅವರು, ಪ್ರಕರಣದಲ್ಲಿ ಕೆಲವು ಜಿಲ್ಲಾಧಿಕಾರಿಗಳು ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಿದ್ದಾರೆಂದು ಕೆಎಸ್‌ಎಲ್‌ಎಸ್‌ಎ ವರದಿಯಲ್ಲಿ ಹೇಳಲಾಗಿದೆ. ಜಿಲ್ಲೆಯ ಕಸ್ಟೋಡಿಯನ್‌ ಆಗಿರುವ ಜಿಲ್ಲಾಧಿಕಾರಿಗಳು ಜನರು ಮತ್ತು ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಬಾರದು. ಇಡೀ ರಾಜ್ಯದಲ್ಲಿ ಮೂರು ಸಾವಿರ ಮಾತ್ರ ಸ್ಮಶಾನ ಜಾಗ ಇಲ್ಲದ ಗ್ರಾಮಗಳು ಇವೆಯೇ? ಯಾವೆಲ್ಲಾ ಗ್ರಾಮಗಳಲ್ಲಿ ಸ್ಮಶಾನಕ್ಕೆ ಜಾಗ ಇಲ್ಲ ಎಂಬುದರ ಮಾಹಿತಿಯನ್ನು ಜಿಲ್ಲಾಧಿಕಾರಿಗಳು ಸಂಗ್ರಹ ಮಾಡಿದ್ದಾರೆಯೇ ಎಂದು ಪ್ರಶ್ನಿಸಿದರು.

ಪರಿಸರ ಕಲುಷಿತಗೊಳಿಸಿ ಪೂಜೆ ಯಾಕೆ: ಬಿಬಿಎಂಪಿಗೆ ಕೋರ್ಟ್‌ ಪ್ರಶ್ನೆ

ಮಾಹಿತಿ ಸಂಗ್ರಹಿಸಲು ಸಾಧ್ಯವಾಗದಿದ್ದರೆ ನಮಗೆ ಹೇಳಿಬಿಡಿ. ಎಲ್ಲೆಲ್ಲಿ ಸ್ಮಶಾನಕ್ಕೆ ಜಾಗವಿಲ್ಲ ಎಂಬ ಮಾಹಿತಿಯನ್ನು ಪಡೆಯಲು ಜಾಹೀರಾತು ನೀಡಲು ಕೆಎಸ್‌ಎಲ್‌ಎಸ್‌ಎ ಸದಸ್ಯ ಕಾರ್ಯದರ್ಶಿಗೆ ಸೂಚಿಸುತ್ತೇವೆ. ಕಾಗದದ ಮೇಲೆ ನ್ಯಾಯಾಲಯದ ಆದೇಶ ಅನುಪಾಲನೆ ಬೇಡ. ಪ್ರಾಯೋಗಿಕವಾಗಿ ಪಾಲನೆಯಾಗಬೇಕು. ಇಲ್ಲವಾದಲ್ಲಿ ನ್ಯಾಯಾಲಯದ ಆದೇಶ, ಸರ್ಕಾರ, ನಾವು ಮತ್ತು ನೀವೆಲ್ಲರೂ ನಿಷ್ಟ್ರಯೋಜಕವಾಗುತ್ತೇವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಯಾವ ಗ್ರಾಮದಲ್ಲೂ ಒಂದು ಮತ ಬಿಡುವುದಿಲ್ಲ. ಎಲ್ಲರೂ ಮತ ಹಾಕಲೇ ಬೇಕು ನೀವು (ಸರ್ಕಾರ) ಹೇಳುತ್ತೀರಿ. ಆದರೆ, ಈ ಊರಿನಲ್ಲಿ ಸ್ಮಶಾನಕ್ಕೆ ಜಾಗ ಇದೆಯಾ ಎಂದು ಯಾರೂ ಕೇಳೋದಿಲ್ಲ. ಚುನಾವಣೆಯಲ್ಲಿ ಗೆಲ್ಲೋದು-ಸೋಲುವುದು ಬೇರೆ ವಿಚಾರ. ಆದರೆ, ಮೂಲ ಸೌಲಭ್ಯಗಳಾದ ನೀರು, ರಸ್ತೆ ಮತ್ತು ಸ್ಮಶಾನವನ್ನು ಜನ ಕೇಳುತ್ತಾರೆ. ಅದನ್ನು ಕಲ್ಪಿಸುವುದು ಸರ್ಕಾರದ ಸಾಂವಿಧಾನಿಕ ಕರ್ತವ್ಯ ಎಂದು ನುಡಿದ ನ್ಯಾಯಮೂರ್ತಿಗಳು, ಸರ್ಕಾರ ಮೊದಲು ಜನರಿಗೆ ಮೂಲಸೌಲಭ್ಯ ಕಲ್ಪಿಸಬೇಕು ಎಂದು ತಾಕೀತು ಮಾಡಿದರು.

Follow Us:
Download App:
  • android
  • ios