Asianet Suvarna News Asianet Suvarna News

ಪರಿಸರ ಕಲುಷಿತಗೊಳಿಸಿ ಪೂಜೆ ಯಾಕೆ: ಬಿಬಿಎಂಪಿಗೆ ಕೋರ್ಟ್‌ ಪ್ರಶ್ನೆ

ಕಲ್ಯಾಣಿಯಲ್ಲಿ ಶಿವನಮೂರ್ತಿ ಸ್ಥಾಪನೆ ಹಾಗೂ ಇತರೆ ಕಾಮಗಾರಿ ನಡೆಸುವುದರಿಂದ ಕೆರೆಗೆ ಕಲುಷಿತ ನೀರು ಸೇರುತ್ತದೆ ಎಂಬುದು ಅರ್ಜಿದಾರರ ಆಂತಕ. ಹೀಗಿದ್ದರೂ ಪರಿಸರವನ್ನು ಕಲುಷಿತಗೊಳಿಸಿ ಪೂಜೆ ಮಾಡುವುದು ಏಕೆ ಎನ್ನುವುದೇ ನಮಗೆ ಅರ್ಥ ಆಗಿಲ್ಲ: ನ್ಯಾಯಪೀಠ 

Why Pollute the Environment and Worship High Court Asked to BBMP grg
Author
First Published Mar 15, 2023, 7:33 AM IST

ಬೆಂಗಳೂರು(ಮಾ.15):  ಜನರು ಮನೆಗಳಲ್ಲಿ ಪೂಜೆ ಮಾಡಿಕೊಳ್ಳಲಿ, ಕಲ್ಯಾಣಿಯಲ್ಲಿ ಯಾಕೆ ಪೂಜೆ ಮಾಡಬೇಕು, ಪರಿಸರ ಕಲುಷಿತಗೊಳಿಸಿ ಪೂಜೆ ಮಾಡುವುದು ಏಕೆ ಎನ್ನುವುದೇ ತಮಗೆ ಅರ್ಥವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿರುವ ಹೈಕೋರ್ಟ್‌, ನಾವು ಕಲುಷಿತ ನಗರ, ಸಮಾಜದಲ್ಲಿದ್ದು, ಇದೇ ಪರಿಸ್ಥಿತಿ ಮುಂದುವರೆದರೆ ನಮ್ಮ ಮಕ್ಕಳು, ಮೊಮ್ಮಕ್ಕಳು ಶಾಪ ಹಾಕುತ್ತಾರೆ ಎಂದು ಹೇಳಿದೆ.

ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಲ್ಲತ್ತಳ್ಳಿಯ ಕೆರೆ ಪ್ರದೇಶದಲ್ಲಿ ಬಯಲು ರಂಗಮಂದಿರ, ಕಲ್ಯಾಣಿ ನಿರ್ಮಾಣ ಮತ್ತು ಶಿವನ ಮೂರ್ತಿ ಪ್ರತಿಷ್ಠಾಪನೆ ಆಕ್ಷೇಪಿಸಿ ವಕೀಲೆ ಗೀತಾ ಮಿಶ್ರಾ ಸಲ್ಲಿಸಿದ್ದ ಮಧ್ಯಂತರ ಅರ್ಜಿ ಹಿರಿಯ ನ್ಯಾಯಮೂರ್ತಿ ಬಿ. ವೀರಪ್ಪ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠದ ಮುಂದೆ ಮಂಗಳಾರ ವಿಚಾರಣೆ ನಡೆಸಿತು.

5 ವರ್ಷದ ನಿರಂತರ ಸಮ್ಮತಿ ಲೈಂಗಿಕ ಕ್ರಿಯೆ ಅತ್ಯಾಚಾರವಲ್ಲ: ಕರ್ನಾಟಕ ಹೈಕೋರ್ಟ್

ವಿಚಾರಣೆ ವೇಳೆ ಬಿಬಿಎಂಪಿ ಪರ ವಕೀಲರು, ಶಿವರಾತ್ರಿ ಹಬ್ಬದ ಆಚರಣೆಗಾಗಿ ತಾತ್ಕಾಲಿಕವಾಗಿ ಕಲ್ಯಾಣಿಯಲ್ಲಿ ಶಿವನಮೂರ್ತಿ ಸ್ಥಾಪಿಸಲಾಗಿತ್ತು. ಹಬ್ಬದ ನಂತರ ಅದನ್ನು ತೆರವುಗೊಳಿಸಲಾಗಿದೆ ಎಂದು ನ್ಯಾಯಪೀಠಕ್ಕೆ ಮಾಹಿತಿ ನೀಡಿದರು. ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಕಲ್ಯಾಣಿಯಲ್ಲಿ ಶಿವನಮೂರ್ತಿ ಸ್ಥಾಪನೆ ಹಾಗೂ ಇತರೆ ಕಾಮಗಾರಿ ನಡೆಸುವುದರಿಂದ ಕೆರೆಗೆ ಕಲುಷಿತ ನೀರು ಸೇರುತ್ತದೆ ಎಂಬುದು ಅರ್ಜಿದಾರರ ಆಂತಕ. ಹೀಗಿದ್ದರೂ ಪರಿಸರವನ್ನು ಕಲುಷಿತಗೊಳಿಸಿ ಪೂಜೆ ಮಾಡುವುದು ಏಕೆ ಎನ್ನುವುದೇ ನಮಗೆ ಅರ್ಥ ಆಗಿಲ್ಲ ಎಂದು ನುಡಿಯಿತು.

ಕೆರೆ ಪ್ರದೇಶದಲ್ಲಿ ನಿರ್ಮಾಣ ಕಾಮಗಾರಿಗೆ ಅನುಮತಿ ನೀಡಲು ಅವಕಾಶವಿಲ್ಲ. ಆದರೂ ಅದಕ್ಕೆ ಹೇಗೆ ಹಾಗೂ ಯಾರು ಅನುಮತಿ ಕೊಟ್ಟರು ಎಂದು ಪ್ರಶ್ನಿಸಿದ ನ್ಯಾಯಪೀಠ, ಬಿಬಿಎಂಪಿ ಮತ್ತು ಬಿಡಿಎ ಅಧಿಕಾರಿಗಳೇ ವ್ಯಾಜ್ಯಗಳನ್ನು ಹುಟ್ಟುಹಾಕುತ್ತಾರೆ. ಈ ಎರಡು ಸಂಸ್ಥೆಗಳು ಸರಿಯಿದ್ದರೆ ವ್ಯಾಜ್ಯಗಳು ಮತ್ತು ಸಮಸ್ಯೆಗಳೇ ಇರುತ್ತಿರಲಿಲ್ಲ ಎಂದು ತೀಕ್ಷ್ಣವಾಗಿ ನುಡಿಯಿತು.

ಸಂರಕ್ಷಣೆಗೆ ಆದೇಶ

ಅಂತಿಮವಾಗಿ ನ್ಯಾಯಾಲಯದಲ್ಲಿ ವ್ಯಾಜ್ಯದಲ್ಲಿರುವ 3 ಎಕರೆ ಹೊರತುಪಡಿಸಿ ಮಲ್ಲತಹಳ್ಳಿ ಕೆರೆಯ ಒಟ್ಟು 71 ಎಕರೆ ಪ್ರದೇಶವನ್ನು ಸಂರಕ್ಷಿಸಬೇಕು. ಯಾವುದೇ ರಾಜಕೀಯ ಪಕ್ಷ, ರಾಜಕಾರಣಿ, ವ್ಯಕ್ತಿ, ವ್ಯಕ್ತಿಗಳ ಗುಂಪು ಸಂಘಟನೆಗಳಿಗೆ ಈ ಕೆರೆ ಪ್ರದೇಶದಲ್ಲಿ ಯಾವುದೇ ರೀತಿಯ ಶಾಶ್ವತ ನಿರ್ಮಾಣ ಮತ್ತಿತರ ಚಟುವಟಿಕೆಗಳಿಗೆ ಅವಕಾಶ ಕೊಡಬಾರದು. ಕೆರೆ ಅಂಗಳದಲ್ಲಿ ಕಟ್ಟಿರುವ ಕಲ್ಯಾಣಿಯಲ್ಲಿ ನಿಗದಿಯಂತೆ ಗಣೇಶ, ದುರ್ಗಾ ಮೂರ್ತಿಗಳ ವಿಸರ್ಜನೆ ಸೇರಿದಂತೆ ಸೀಮಿತ ಚಟುವಟಿಕೆಗಳಿಗೆ ಸೀಮಿತ ಅವಧಿಗೆ ಮಾತ್ರ ಅನುಮತಿ ನೀಡಬೇಕು. ಅದು ಮುಗಿದ ಬಳಿಕ ಕಲ್ಯಾಣಿಯನ್ನು ಸ್ವಚ್ಛಗೊಳಿಸಬೇಕು. ಕಲ್ಯಾಣಿಯ ಕಲುಷಿತ ನೀರು ಕೆರೆಗೆ ಸೇರದಂತೆ ನೋಡಿಕೊಳ್ಳಬೇಕು ಎಂದು ಬಿಬಿಎಂಪಿಗೆ ನಿರ್ದೇಶನ ನೀಡಿ ಮಧ್ಯಂತರ ಅರ್ಜಿಯನ್ನು ಇತ್ಯರ್ಥಪಡಿಸಿತು.

Follow Us:
Download App:
  • android
  • ios