* ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ*  ಹಲವು ಜಿಲ್ಲೆಗಳಲ್ಲಿ  ಗುಡುಗು ಸಿಡಿಲಿನ ಮಳೆ ಆರ್ಭಟ* ಸಿಡಿಲಿನ ಅಬ್ಬರಕ್ಕೆ ಗಿಡ, ಬಣವಿಗಳಿಗೆ ಬೆಂಕಿ, ಓರ್ವ ಸಾವು

ಬೆಂಗಳೂರು, (ಏ.28): ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಇಂದು (ಗುರುವಾರ) ಸಂಜೆ ಗುಡುಗು, ಮಿಂಚು, ಸಿಡಿಲುದೊಂದಿಗೆ ಮಳೆ ಸುರಿದಿದೆ. ಕೆಲವೆಡೆ ಜನರು ಜನ ತುಸು ನೆಮ್ಮದಿ ಕಂಡಿದ್ರೆ, ಇನ್ನೂ ಮತ್ತೊಂದೆಡೆ ಧಾರಾಕಾರ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ತವಾಗಿದೆ. ಅದರಲ್ಲೂ ಕೊಪ್ಪಳ, ಬಳ್ಳಾರಿ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಭತ್ತ ಕಟಾವ್ ಜೋರಾಗಿದೆ. ಇದರ ಮಧ್ಯೆ ಮಳೆಯ ಆರ್ಭಟ ರೈತರನ್ನು ಆತಂಕಕ್ಕೀಡು ಮಾಡಿದೆ.

ಉತ್ತರ ಕರ್ನಾಟ, ಮಲೆನಾಡಿನ ಭಾಗಗಳಲ್ಲಿ ಮಳೆಯಾಗಿದೆ. ಅದರಲ್ಲೂ ಶಿಮಮೊಗ್ಗ ನಗರದಲ್ಲಿ ಗಾಳಿ ಗುಡುಗು ಸಹಿತ ಧಾರಾಕಾರ ಮಳೆಯಿಂದಾಗಿ ಮರಗಳು ಧರೆಗುರುಳಿರುವಂತಹ ಘಟನೆ ದುರ್ಗಿಗುಡಿ ಬಡಾವಣೆ ಮತ್ತು ತಿಲಕ ನಗರದ ಮಲ್ನಾಡ್ ಸ್ಕ್ಯಾನ್ ಸೆಂಟರ್ ಬಳಿ ನಡೆದಿದೆ. ನಗರದ ವಿವಿಧ ಬಡಾವಣೆಯಲ್ಲಿ ಪವರ್ ಕಟ್ ಮಾಡಲಾಗಿದೆ. ಕೆಲ ಹೊತ್ತು ರಸ್ತೆ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದ್ದು, ವಾಹನ ಸವಾರರ ಪರದಾಡುವಂತ್ತಾಗಿದೆ. 

ಕರ್ನಾಟಕದ 11 ಜಿಲ್ಲೆಗಳಲ್ಲಿ ಭಾರೀ ಮಳೆ: ಸಿಡಿಲು ಬಡಿದು ಐವರು ಸಾವು

ರಾಯಚೂರಿನಲ್ಲಿ ರೈತರು ಕಂಗಾಲು
ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲ್ಲೂಕಿನ ಹಟ್ಟಿ, ಮುದಗಲ್ ಸೇರಿದಂತೆ ಜಿಲ್ಲೆಯ ಹಲವೆಡೆ ಆಲಿಕಲ್ಲು ಸಹಿತ ಮಳೆ ಆಗಿದೆ. ಗಾಳಿ ಸಹಿತ ಮಳೆಗೆ ಬೃಹತ್ ಮರ ಧರೆಗುರುಳಿದ್ದು, ಸಂಚಾರ ಅಸ್ತವ್ಯಸ್ತವಾಗಿದೆ. ಸದ್ಯ ಧರೆಗುರುಳಿದ ಮರ ಸ್ಥಳೀಯರು ತೆರವುಗೊಳಿಸಿದ್ದಾರೆ. ಹಟ್ಟಿ ಪಟ್ಟಣದಲ್ಲಿ ಅರ್ಧ ಗಂಟೆ ಸುರಿದ ಆಲಿಕಲ್ಲು ಸಹಿತ ಮಳೆ ಸುರಿದಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ. ದಿಢೀರ್ ಮಳೆಯಿಂದ ಭತ್ತ ಕಟಾವು ಮಾಡಿದ್ದ ರೈತರು ಕಂಗಾಲಾಗಿದ್ದಾರೆ.

ಸಿಡಿಲು ಬಡಿದು ಎರಡು ಮೇವಿನ ಬಣವಿಗಳಿಗೆ ಬೆಂಕಿ
ಸಾಯಂಕಾಲದಿಂದ ಬಾಗಲಕೋಟೆ ಜಿಲ್ಲೆಯಾದ್ಯಂತ ಸಿಡಿಲು, ಗುಡುಗಿನ ಮಧ್ಯೆ ಮಳೆ ಜೋರು ಸುರಿದಿದೆ. ಬಾದಾಮಿ ತಾಲೂಕಿನ ಜಮ್ಮನಕಟ್ಟಿ ಗ್ರಾಮದಲ್ಲಿ ಸಿಡಿಲು ಬಡಿದು ಎರಡು ಮೇವಿನ ಬಣವಿಗಳಿಗೆ ಬೆಂಕಿ ಹೊತ್ತಿಕೊಂಡಿರುವ ಘಟನೆ ನಡೆದಿದೆ. 
ಹುಲ್ಲಪ್ಪ ಬೊಮ್ಮನಗಿ, ಶಿವಪುತ್ರಪ್ಪ ಹೂಗಾರ ಎಂಬುವ ರೈತರಿಗೆ ಸೇರಿದ ಬಣವಿಗಳು. ಬೆಂಕಿಯಿಂದ ಮೇವಿನ ಬಣವಿಗಳು ಸಂಪೂರ್ಣ ಸುಟ್ಟು ಕರಕಲಾದೆ. 

ಕೊಪ್ಪಳ‌ದಲ್ಲಿ ಸಿಡಿಲಿಗೆ ಹೊತ್ತಿ ಉರಿದ ತೆಂಗಿನ ಮರ
ಸಂಜೆ ಸುರಿದ ಧಾರಾಕಾರ ಮಳೆಯಿಂದಾಗಿ ಸಿಡಿಲು ಬಡಿದ ಹಿನ್ನಲೆ ತೆಂಗಿನ ಮರ ಹೊತ್ತಿ ಊರಿದಿರುವಂತಹ ಘಟನೆ ಜಿಲ್ಲೆಯ ಕುಷ್ಟಗಿ ತಾಲೂಕಿನ ಹನುಮಸಾಗರದಲ್ಲಿ ನಡೆದಿದೆ. ಶಂಕರಪ್ಪ ಪರಸಪ್ಪ ಹುಲಿಮನಿ ಎಂಬುವರ ಮನೆ ಮುಂದೆ ಟೆಂಗಿನ ಮರ ಇದಿದ್ದು, ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ‌. ಟೆಂಗಿನ ಮರ ಹೊತ್ತಿ ಉರಿಯೋ ದೃಶ್ಯವನ್ನು ಮೊಬೈಲ್​ನಲ್ಲಿ ಸ್ಥಳೀಯರು ಸೆರೆ ಹಿಡಿದಿದ್ದಾರೆ. ಹಾವೇರಿಯಲ್ಲಿಯೂ ಗುಡುಗು ಸಿಡಿಲಿನೊಂದಿಗೆ ಮಳೆರಾಯನ ಆಗಮನವಾಗಿದೆ. ಅರ್ಧ ಗಂಟೆಯಿಂದ ಗುಡುಗು ಸಿಡಿಲಿನೊಂದಿಗೆ ಮಳೆರಾಯ ಆರ್ಭಟಿಸುತ್ತಿದ್ದು, ಬಿಸಿಲಿನಿಂದ ತತ್ತರಿಸಿದ್ದ ಜನರಿಗೆ ಮಳೆರಾಯ ತಂಪೆರೆದಂತ್ತಾಗಿದೆ.

ಗದಗನಲ್ಲಿ ಆಲಿಕಲ್ಲು ಮಳೆ‌ 
ಸಿಡಿಲು ಬಡಿದು ಓರ್ವ ಮಹಿಳೆ ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ಮುಂಡರಗಿ ತಾಲೂಕಿನ ಜಂತ್ಲಿ ಗ್ರಾಮದಲ್ಲಿ ನಡೆದಿದೆ. ಮನೆಯಲ್ಲಿ ಇದ್ದಾಗ ಘಟನೆ ಸಂಭವಿಸಿದ್ದು, ಲತಾ. ಕಲಕೇರಿ (27) ಮೃತ ಮಹಿಳೆ. ಸ್ಥಳಕ್ಕೆ ಕಂದಾಯ ಇಲಾಖೆ ರೆವಿನ್ಯೂ ಇನ್ಸ್‌ಪೆಕ್ಟರ್ M A ನದಾಫ್ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಮುಂಡರಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ತಾಲೂಕಿನ ಹೊಂಬಳ ಗ್ರಾಮದಲ್ಲಿ ಗುಡುಗು ಸಮೇತವಾಗಿ ಆಲಿಕಲ್ಲು ಮಳೆ ಸುರಿದಿದ್ದು, ಗ್ರಾಮಸ್ಥರು ಆಲಿಕಲ್ಲು ಸಂಗ್ರಹಣೆ ಮಾಡುತ್ತಿದ್ದಾರೆ. ಆಲಿಕಲ್ಲು ಮಳೆ‌ ಕಂಡು ಗ್ರಾಮೀಣ ಭಾಗದ ಜನ್ರ ಹರ್ಷಗೊಂಡಿದ್ದಾರೆ.

ಮಳೆಯಿಂದಾಗಿ ಕಟ್ಟಡ ಕುಸಿದು ಕಾರ್ಮಿಕ ಸಾವು
ವಿಜಯನಗರದ ಹಗರಿಬೊಮ್ಮನಹಳ್ಳಿ ತಾಲೂಕಿನ ಹಲವು ಗ್ರಾಮಗಳಲ್ಲಿ ಗಾಳಿ ಸಹಿತ ಅಲಿಕಲ್ಲು ಮಳೆ ಸುರಿದಿದ್ದು, ಭಾರಿ ಗಾಳಿ ಮಳೆಗೆ ಕೆಲವೆಡೆ ಮರಗಳು ಮತ್ತು ಗುಡಿಸಲುಗಳು ನೆಲಸಮವಾಗಿವೆ. ಬಲ್ಲಾಹುಣಸಿ ಗ್ರಾಮದಲ್ಲಿ ನಿರ್ಮಾಣ ಹಂತದ ರೇಷ್ಮೆ ಮನೆಯ ಕಟ್ಟಡ ಕುಸಿತವಾಗಿದ್ದು, ಕಟ್ಟಡ ಕಾರ್ಮಿಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಸಾಸಿವೆಹಳ್ಳಿ ಚಂದ್ರಶೇಖರ (26) ಸ್ಥಳದಲ್ಲೆ ಮೃತ ಪಟ್ಟ ಕಾರ್ಮಿಕ. ಕಟ್ಟಡ ಕಾಮಗಾರಿಯಲ್ಲಿ ಭಾಗಿಯಾಗಿದ್ದ ಐವರಿಗೆ ಗಂಭೀರ ಗಾಯವಾಗಿದ್ದು, ಗಾಯಾಳುಗಳು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.