ಬೆಂಗಳೂರಿನಲ್ಲಿ ₹12,000 ಬಾಡಿಗೆಯ ಒಂದು ಬೆಡ್‌ರೂಮ್ ಮನೆಯಲ್ಲಿ ಯುವಕನೊಬ್ಬ 500 ಗಿಡಗಳನ್ನು ಬೆಳೆಸಿದ್ದಾನೆ. ಈ ಹಸಿರು ಪೆಂಟ್‌ಹೌಸ್ ನಗರದ ಗದ್ದಲದ ನಡುವೆ ಶಾಂತ ವಾತಾವರಣವನ್ನು ಸೃಷ್ಟಿಸಿದೆ.

ಬೆಂಗಳೂರಿನಲ್ಲಿ ಬಾಡಿಗೆ ಮನೆಗಳ ಬೆಲೆ ಗಗನಕ್ಕೇರುತ್ತಿದೆ ಎಂಬ ದೂರುಗಳು ಸಾಮಾನ್ಯ. ಆದರೆ, ಇದೇ ನಗರದಲ್ಲಿರುವ ಒಂದು ಅದ್ಭುತ ಮನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲರ ಮನ ಗೆದ್ದಿದೆ. ಕೇವಲ ₹12,000 ಬಾಡಿಗೆಯ ಈ ಒಂದು ಬೆಡ್ ರೂಮ್ ಮನೆ ಮತ್ತು ಅದರ ಸುತ್ತಮುತ್ತಲಿನ ಪರಿಸರ ನೋಡಿದರೆ ಯಾರಾದರೂ ಬೆರಗಾಗುತ್ತಾರೆ.

ಕಸ್ತೂರಿ ನಗರದಲ್ಲಿ ಈ ಯುವಕ ₹12,000 ಬಾಡಿಗೆ ಕೊಟ್ಟು ವಾಸಿಸುತ್ತಿದ್ದಾನೆ. ನಾಲ್ಕನೇ ಮಹಡಿಯಲ್ಲಿರುವ ಈ ಪೆಂಟ್‌ಹೌಸ್‌ನಲ್ಲಿ ಈ ಯುವಕ 500 ಗಿಡಗಳನ್ನು ನೆಟ್ಟಿದ್ದಾನೆ ಎಂದು ಹೇಳಿದರೆ ನಂಬುತ್ತೀರಾ? ನಂಬಲು ಕಷ್ಟವಾಗಬಹುದು, ಆದರೆ ಅದು ನಿಜ. ನಗರದ ಗದ್ದಲದಿಂದ ದೂರ ಬೇರೆಲ್ಲೋ ಇದ್ದೇವೆ ಎಂಬ ಭಾವನೆ ಈ ವಿಡಿಯೋ ನೋಡಿದಾಗ ಮೂಡುತ್ತದೆ.

ಬೆಂಗಳೂರು, ದೆಹಲಿ ಮತ್ತು ಮುಂಬೈನ ವಿಶಿಷ್ಟ ಮನೆಗಳು ಮತ್ತು ಬಾಡಿಗೆ ಮನೆಗಳನ್ನು ಪರಿಚಯಿಸುವ @whatsuptenant_rentomojo ಎಂಬ ಇನ್‌ಸ್ಟಾಗ್ರಾಮ್ ಪುಟದಲ್ಲಿ ಈ ಮನೆಯ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ, ಬಾಡಿಗೆದಾರ ಯುವಕ ತನ್ನ 1BHK ಬಾಡಿಗೆ ಮನೆಯನ್ನು ಜನರಿಗೆ ತೋರಿಸುತ್ತಿದ್ದಾನೆ. ಬಳ್ಳಿಗಳು, ಹುಲ್ಲು, ಗಿಡಗಳು ಮತ್ತು ಹೂವುಗಳಿಂದ ತುಂಬಿರುವ ಈ ಮನೆಯಲ್ಲಿ 60 ದಶಲಕ್ಷ ವರ್ಷಗಳಷ್ಟು ಹಳೆಯದಾದ ಪಳೆಯುಳಿಕೆ, ಕೈಯಿಂದ ಮಾಡಿದ ಅಕ್ವೇರಿಯಂಗಳು ಮತ್ತು ಟೆರೇರಿಯಂಗಳನ್ನು ಕಾಣಬಹುದು.

View post on Instagram

ಬಾಗಿಲುಗಳಿಗೆ ಸ್ವತಃ ಬಾಡಿಗೆದಾರನೇ ಬಣ್ಣ ಬಳಿದು ಮನೆಯನ್ನು ಸುಂದರಗೊಳಿಸಿದ್ದೇನೆ ಎಂದು ಯುವಕ ಹೇಳುತ್ತಾನೆ. ಈ ವಿಡಿಯೋವನ್ನು ಅನೇಕರು ವೀಕ್ಷಿಸಿದ್ದಾರೆ ಮತ್ತು ಕಾಮೆಂಟ್‌ಗಳನ್ನು ನೀಡಿದ್ದಾರೆ. ₹12,000 ಬಾಡಿಗೆಯ ಈ ಒಂದು ಬೆಡ್ ರೂಮ್ ಮನೆಯಲ್ಲಿ ಇಷ್ಟೊಂದು ಹಸಿರು ಇರುವುದು ಜನರನ್ನು ಅಚ್ಚರಿಗೊಳಿಸಿದೆ. ಇನ್ನು ಬಾಡಿಗೆ ಮನೆಯಲ್ಲಿಯೂ ಹಲವು ಅಪರೂಪದ ಗಿಡ ಮತ್ತು ಸಸ್ಯಗಳನ್ನು ಇಟ್ಟುಕೊಂಡಿದ್ದಾರೆ.

ಬೆಂಗಳೂರಿನ ಕೆಲವು ಪ್ರತಿಷ್ಠಿತ ಏರಿಯಾಗಳಲ್ಲಿ ಮನೆಯ ಬಾಡಿಗೆಗಳನ್ನು ನೋಡಿದರೆ ಮೂರ್ಛೆ ಹೋಗುವಂತೆ ಆಗುತ್ತದೆ. ಇತ್ತೀಚೆಗೆ ವೈರಲ್ ಆಗಿದ್ದ ಸೋಶಿಯಲ್ ಮೀಡಿಯಾ ಪೋಸ್ಟ್‌ನಲ್ಲಿ ರೆಡ್ಡಿಟ್ ಬಳಕೆದಾರರೊಬ್ಬರು 2.7 ಲಕ್ಷ ರೂ.ಗೆ 3 ಬಿಹೆಚ್‌ಕೆ ಮನೆಯನ್ನು ಬಾಡಿಗೆಗೆ ಇದೆ ಎಂಬ ಫಲಕವನ್ನು ಹಂಚಿಕೊಂಡಿದ್ದರು. ಬೆಂಗಳೂರಿನ ಹೆಚ್‌ಎಸ್‌ಆರ್ ಬಡಾವಣೆ ಬಳಿಯ ಹರಳೂರಿನಲ್ಲಿ 3BHK ಫ್ಲಾಟ್‌ಗೆ ಮಾಸಿಕ 2.7 ಲಕ್ಷ ಬಾಡಿಗೆ!' ಎಂದು ಫೋಟೋದಲ್ಲಿ ಬರೆಯಲಾಗಿತ್ತು. ನೋ ಬ್ರೋಕರ್ ಅಪ್ಲಿಕೇಷನ್‌ನಲ್ಲಿ ಹಾಕಲಾದ ಈ ಬಾಡಿಗೆ ದರವನ್ನು ನೋಡಿ ರೆಡ್ಡಿಟ್‌ನಲ್ಲಿ ನೆಟ್ಟಿಗರು ಹಂಚಿಕೊಂಡಿದ್ದರು. 1,464 ಚದರ ಅಡಿವುಳ್ಳ 3 ಮಲಗುವ ಕೋಣೆ ಸಹಿತ ಅಡುಗೆಮನೆಯನ್ನು ಹೊಂದಿರುವ ಫ್ಲಾಟ್‌ಗೆ ಮಾಸಿಕ ₹2.7 ಲಕ್ಷ ಬಾಡಿಗೆ ಅಂತ ತೋರಿಸುವ ಫೋಟೋ ಇತದಾಗಿತ್ತು. ಈ ಫ್ಲಾಟ್‌ಗೆ ಬಾಡಿಗೆಗೆ ₹15 ಲಕ್ಷ ಡೆಪಾಸಿಟ್ ಮಾಡಬೇಕು ಎಂತಲೂ ಮುದ್ರಣ ಮಾಡಲಾಗಿತ್ತು.