ಬೆಂಗಳೂರಿನ ಹರಳೂರಿನಲ್ಲಿ 3 BHK ಫ್ಲಾಟ್ ಗೆ 2.7 ಲಕ್ಷ ರೂ. ಮಾಸಿಕ ಬಾಡಿಗೆಗೆ ನೀಡಲಾಗುತ್ತಿದೆ ಎಂಬ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಬಾಡಿಗೆ ದರದ ಬಗ್ಗೆ ಜನರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮನೆ ಬಾಡಿಗೆ ದರಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆಗಾಗ್ಗೆ ಭಾರೀ ಚರ್ಚೆಗಳು ನಡೆಯುತ್ತಿರುತ್ತವೆ. ಏಕೆಂದರೆ ಬೆಂಗಳೂರಿನ ಮನೆ, ಫ್ಲಾಟ್‌ಗಳ ದುಬಾರಿ ಬಾಡಿಗೆ ದರಗಳ ಬಗ್ಗೆ ಕೆಲವರು ಆಕ್ರೋಶ ಹೊರಹಾಕಿದರೆ, ಇನ್ನು ಕೆಲವರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಇದೀಗ ಒಂದು 3 ಬಿಹೆಚ್‌ಕೆ ಫ್ಲ್ಯಾಟ್ ಬರೋಬ್ಬರಿ 2.7 ಲಕ್ಷ ರೂ. ಬಾಡಿಗೆಗೆ ಕೊಡುತ್ತಿರುವ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಇಲ್ಲಿದೆ ನೋಡಿ ವೈರಲ್ ಪೋಸ್ಟ್ ವಿವರ..
ಭಾರತದ ದೊಡ್ಡ ದೊಡ್ಡ ನಗರಗಳಲ್ಲಿ ಬಾಡಿಗೆ ದರ ಏರುತ್ತಲೇ ಇದೆ. ಮುಂಬೈ, ದೆಹಲಿ, ಬೆಂಗಳೂರು ಎಲ್ಲಾ ಕಡೆ ಇದೇ ಸ್ಥಿತಿಯಾಗಿದೆ. ಕೋವಿಡ್ ನಂತರದ ಅವಧಿಯಲ್ಲಿ ಉದ್ಯೋಗವನ್ನು ಹುಡುಗಿ ನಗರ ಪ್ರದೇಶಗಳಿಗೆ ವಲಸೆ ಬರುತ್ತಿರುವವರ ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಬಾಡಿಗೆ ದರಗಳೂ ಕೂಡ ಗಗನಕ್ಕೇರುತ್ತಿವೆ. ಕೇವಲ ಒಂದೆರಡು ದಶಕಗಳ ಹಿಂದೆ ಸಾಮಾನ್ಯ ಪಟ್ಟಣದಂತೆ ಬಾಡಿಗೆ ದರಗಳು ಇದ್ದ ಬೆಂಗಳೂರಿನಲ್ಲಿ ಇದೀಗ ಬಾಡಿಗೆ ದರ ಕೇಳಿದರೆ ಬೆಕ್ಕಿಗೆ ಜ್ವರ ಬರುವಂತಿದೆ. ಆದರೂ, ಇಷ್ಟೊಂದು ದುಬಾರಿ ಹಣವನ್ನು ಭರಿಸಿ ಬಾಡಿಗೆಗೆ ವಾಸ ಮಾಡುವವರೂ ಇದ್ದಾರೆ. ಇದರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್‌ಗಳು ಸಾಮಾನ್ಯವಾಗಿರುತ್ತದೆ. ಇದೀಗ Reddit ಬಳಕೆದಾರರೊಬ್ಬರು ಹಾಕಿರುವ ಪೋಸ್ಟ್ ವೈರಲ್ ಆಗಿದೆ.
ಬೆಂಗಳೂರಿನ ಹೆಚ್‌ಎಸ್‌ಆರ್ ಬಡಾವಣೆಗೆ ಹತ್ತಿರವಾದಂತೆ ಹರಳೂರಿನಲ್ಲಿರುವ ಫ್ಲಾಟ್‌ನ ಬಾಡಿಗೆ ಬಗ್ಗೆ ರೆಡ್ಡಿಟ್‌ನಲ್ಲಿ ಪೋಸ್ಟ್ ಮಾಡಲಾಗಿದೆ. 'ಹರಳೂರಿನಲ್ಲಿ 3BHK ಫ್ಲಾಟ್‌ಗೆ ಮಾಸಿನ 2.7 ಲಕ್ಷ ಬಾಡಿಗೆ!' ಎಂದು ಶೀರ್ಷಿಕೆ ಇದೆ. ಇನ್ನು ನೋ ಬ್ರೋಕರ್ ಅಪ್ಲಿಕೇಷನ್‌ನಲ್ಲಿ ಹಾಕಲಾದ ಈ ಬಾಡಿಗೆ ದರವನ್ನು ನೋಡಿ ರೆಡ್ಡಿಟ್‌ನಲ್ಲಿ ಹಂಚಿಕೊಂಡಿದ್ದಾರೆ. 1,464 ಚದರ ಅಡಿವುಳ್ಳ 3 ಮಲಗುವ ಕೋಣೆ ಸಹಿತ ಅಡುಗೆಮನೆಯನ್ನು ಹೊಂದಿರುವ ಫ್ಲಾಟ್‌ಗೆ ಮಾಸಿಕ ₹2.7 ಲಕ್ಷ ಬಾಡಿಗೆ ಅಂತ ತೋರಿಸುವ ಸ್ಕ್ರೀನ್‌ಶಾಟ್ ಕೂಡ ಅಳವಡಿಕೆ ಮಾಡಿದ್ದಾರೆ. ಇನ್ನು ಈ ಫ್ಲಾಟ್‌ಗೆ ಬಾಡಿಗೆಗೆ ₹15 ಲಕ್ಷ ಡೆಪಾಸಿಟ್ ಮಾಡಬೇಕು ಅಂತಾನೂ ಇದೆ.
ಇದನ್ನು ಶೇರ್ ಮಾಡಿಕೊಂಡಿರುವ ಯುವಕ ಜನ ನಿಜವಾಗ್ಲೂ ಇಷ್ಟೊಂದು ಬಾಡಿಗೆ ಮತ್ತು ಡಿಪಾಸಿಟ್ ಕೊಡ್ತಾರಾ ಅಂತ ಪ್ರಶ್ನೆ ಮಾಡಿದ್ದಾನೆ. ಈ ಫ್ಲಾಟ್ ನೋಡೋಕೆ ಚೆನ್ನಾಗಿದೆ, ಆದರೆ ಇಷ್ಟು ಹಣ ಕೊಡೋದಕ್ಕೆ ಯೋಗ್ಯವಿಲ್ಲ ಅಂತ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಯುವಕ Reddit ಪೋಸ್ಟ್ ವೈರಲ್ ಆದ ಮೇಲೆ, ಬೆಂಗಳೂರಿನಲ್ಲಿ ಏರುತ್ತಿರುವ ಬಾಡಿಗೆ ಬಗ್ಗೆ ಬಹಳಷ್ಟು ಜನ ಕಮೆಂಟ್ ಮಾಡಿದ್ದಾರೆ. ಒಬ್ಬರು 'ಯಾರೂ ಇಷ್ಟು ಹಣ ಕೊಡಲ್ಲ, ಇದೇ ಏರಿಯಾದಲ್ಲಿ 50,000ಕ್ಕೆ ಫ್ಲಾಟ್ ಸಿಗುತ್ತೆ' ಅಂತ ಕಾಮೆಂಟ್ ಮಾಡಿದ್ದಾರೆ.. ಇನ್ನೊಬ್ಬರು 'ಇಲ್ಲಿ ತಪ್ಪಾಗಿ ಒಂದು ಸೊನ್ನೆ ಜಾಸ್ತಿ ಆಗಿದೆ' ಅಂತ ಕಾಮೆಂಟ್ ಮಾಡಿದ್ದಾರೆ. ಅಂದರೆ 27 ಸಾವಿರ ರೂ.ಗೆ ಬಾಡಿಗೆ ಸಿಗಬಹುದು ಎಂದು ಅಭಿಪ್ರಾಯ ತಿಳಿಸಿದ್ದಾರೆ. ಮತ್ತೊಬ್ಬರು 'ಬಾಡಿಗೆ ಹೆಚ್ಚಿಸೋಕೆ ಏಜೆಂಟ್‌ಗಳು ಮಾಡುವ ಕೆಲಸ ಇರಬಹುದು' ಎಂದು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಮತ್ತೊಬ್ಬರು 'ಇಷ್ಟು ಹಣ ಕೊಟ್ಟು ಫ್ಲಾಟ್ ತೆಗೆದುಕೊಳ್ಳುವವರೂ ಇದ್ದಾರೆ' ಅವರಿಗಾಗಿಯೇ ಈ ಬೆಲೆ ಹಾಕಲಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ.
