ಜನರ ಹೃದಯ ಗೆದ್ದ ಬೆಂಗಳೂರು ಮನೆ ಓನರ್, ಬಾಡಿಗೆದಾರನ ಸೋಷಿಯಲ್ ಮೀಡಿಯಾ ಪೋಸ್ಟ್ ವೈರಲ್!
ಸೋಶಿಯಲ್ ಮೀಡಿಯಾ ಪೋಸ್ಟ್‌ವೊಂದು ವೈರಲ್ ಆಗಿದ್ದು, ಕೆಲವು ವರ್ಷಗಳಿಂದ ತಮ್ಮ ಮನೆ ಮಾಲೀಕರು ಬಾಡಿಗೆ ಹೆಚ್ಚಿಸಿಲ್ಲ, ಅಷ್ಟೇ ಅಲ್ಲದೆ ರಾತ್ರಿ ವೇಳೆ ಊಟವನ್ನೂ ನೀಡುತ್ತಿದ್ದಾರೆ ಎಂದು ಒಬ್ಬ ಬಾಡಿಗೆದಾರರು ಸಂತೋಷದಿಂದ ಹಂಚಿಕೊಂಡ ಪೋಸ್ಟ್ ವೈರಲ್ ಆಗಿದೆ. ಬೆಂಗಳೂರಿನಂಥ ಮಹಾನಗರದಲ್ಲಿ ಇಂಥ ಮನೆ ಮಾಲೀಕರು ಸಿಗುವುದು ಬಹಳ ಅದೃಷ್ಟ ಎಂದು ಹೇಳಿ, ಅವರನ್ನು ಹೊಗಳುತ್ತಾ ಜನರು ಕಮೆಂಟ್ಸ್ ಮಾಡುತ್ತಿದ್ದಾರೆ. ನೆಟ್ಟಿಗರು ಅಭೂತಪೂರ್ವವಾಗಿ ಸ್ಪಂದಿಸಿ, ಮನೆ ಮಾಲೀಕರನ್ನು ಹಾಡಿ ಹೊಗಳುತ್ತಿದ್ದಾರೆ.
ದೇಶದ ಪ್ರಮುಖ ಮಹಾನಗರಗಳಲ್ಲಿ ಒಂದಾದ ಬೆಂಗಳೂರು ಐಟಿ, ಬಿಟಿ ಹಬ್. ತನ್ನ ಕ್ರೈಮೇಟ್‌ನಿಂದಲೇ ಹೆಚ್ಚು ಆಕರ್ಷಿತ ತಾಣ. ಸಾಫ್ಟ್‌ವೇರ್ ಕಂಪನಿಗಳು ಹೆಚ್ಚಿನ ಸಂಖ್ಯೆಯಲ್ಲಿರುವ ಈ ನಗರದಲ್ಲಿ ಸೌಲಭ್ಯಗಳಿಗೆ ಕೊರತೆಯಿಲ್ಲ. ತಂಪಾದ ವಾತಾವರಣ, ಯಾವಾಗಲೂ ಎಲ್ಲೋ ಒಂದೆಡೆ ಮಳೆ ಬೀಳುತ್ತಲೇ ಇರುವುದು ಈ ನಗರದ ವಿಶೇಷ. ಇಂತಹ ಹಲವು ವಿಶೇಷತೆಗಳಿಂದಾಗಿ ಇಲ್ಲಿ ಮನೆ ಬಾಡಿಗೆ ಸೇರಿ ಕಾಸ್ಟ್ ಲೀವಿಂಗ್ ವಿಪರೀತ.
ಅಂತಹ ಬೆಂಗಳೂರಿನಲ್ಲಿ ಒಬ್ಬ ಮನೆ ಮಾಲೀಕರು ತಮ್ಮ ಬಾಡಿಗೆದಾರರೊಂದಿಗೆ ಬಹಳ ಗೌರವದಿಂದ, ಪ್ರೀತಿಯಿಂದ, ಮನೆಯ ಸದಸ್ಯರಂತೆ ನಡೆದುಕೊಳ್ಳುತ್ತಾರಂತೆ. ಈ ವಿಷಯವನ್ನು ಅವರ ಮನೆಯಲ್ಲಿ ಬಾಡಿಗೆಗೆ ಇರೋ ವ್ಯಕ್ತಿಯೊಬ್ಬರು ಸಾಮಾಜಿಕ ಮಾಧ್ಯಮ ರೆಡ್ಡಿಟ್‌ನಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಮನೆ ಮಾಲೀಕರ ಸ್ನೇಹ, ಸಹಾಯ ಪ್ರವೃತ್ತಿಯ ಬಗ್ಗೆ ಒಂದು ಪೋಸ್ಟ್ ಹಾಕಿದ್ದಾರೆ.
65 ವರ್ಷದ ಮನೆ ಮಾಲೀಕರು ಇನ್ನೂ ದಾನ ಗುಣವನ್ನು ಮೆರೆಯುತ್ತಿದ್ದಾರೆ, ಐದು ವರ್ಷಗಳಿಂದ ಆ ಮನೆಯಲ್ಲಿ ವಾಸಿಸುತ್ತಿದ್ದರೂ ಒಂದು ರೂಪಾಯಿ ಬಾಡಿಗೆ ಹೆಚ್ಚಿಸಿಲ್ಲ ಎಂದು ಬರೆದು ಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಕೆಲವೊಮ್ಮೆ ರಾತ್ರಿ ವೇಳೆ ತಮಗಾಗಿ ಊಟವನ್ನು ತಂದು ಕೊಡುತ್ತಾರೆ ಎಂದು ಹೊಗಳಿದ್ದಾರೆ. ಅವರು ತಮಗೆ ಜೀವನದ ಅನುಭವಗಳನ್ನು ಹೇಳುತ್ತಾ ಸಲಹೆಗಳನ್ನೂ ನೀಡುತ್ತಾರಂತೆ.
ಇದಕ್ಕೆ ನೆಟ್ಟಿಗರು ಚಂದ ಚಂದ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಬೆಂಗಳೂರಿನಲ್ಲಿ ಹೆಚ್ಚಿನ ಬಾಡಿಗೆಯಿಂದ ಮನೆ ಸಿಗುವುದೇ ಕಷ್ಟವಾಗಿರುವ ಈ ದಿನಗಳಲ್ಲಿ ಇಂಥ ಮನೆ ಮಾಲೀಕರು ಸಿಗುವುದು ಬಹಳ ಅದೃಷ್ಟ ಎಂದು ಕೆಲವರು, ಇಂತಹ ವ್ಯಕ್ತಿ ಬೆಂಗಳೂರಿನಲ್ಲಿ ಇರುವುದೇ ಡೌಟು ಎಂದು ಇನ್ನೂ ಕೆಲವರು, ನಮ್ಮ ಮನೆ ಮಾಲೀಕರೂ ಹೀಗಿದ್ದಿದ್ದರೆ ಚೆನ್ನಾಗಿತ್ತು ಎಂದು ಇನ್ನೂ ಕೆಲವರು ಕಾಮೆಂಟ್ ಮಾಡಿ, ಮನೆ ಮಾಲೀಕರನ್ನು ಕೊಂಡಾಡಿದ್ದಾರೆ. ಇನ್ನು ಕೆಲವರು ತಮ್ಮ ಮನೆ ಮಾಲೀಕರ ಬಗ್ಗೆ ಬರೆಯಲು ಪ್ರಾರಂಭಿಸಿದ್ದಾರೆ. ಈ ಪೋಸ್ಟ್‌ಗಳು ಇತರ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲೂ ಹಂಚಿಕೆಯಾಗಿ ವೈರಲ್ ಆಗಿವೆ. ಇದರಿಂದ ಆ ಮನೆ ಮಾಲೀಕರು ರಾತ್ರೋರಾತ್ರಿ ಸ್ಟಾರ್ ಆಗಿ ಹೋಗಿದ್ದಾರೆ.