* ರಾಮನವಮಿ ಹಬ್ಬವನ್ನು ಭಕ್ತಿ-ಶ್ರದ್ಧೆಯಿಂದ ಆಚರಣೆ ಮಾಡೋಣ* ರಾಮಸ್ಮರಣೆ ಮತ್ತೊಬ್ಬರಿಗೆ ನೋಟುಂಟು ಮಾಡದಂತೆ ಎಚ್ಚರಿಕೆ ವಹಿಸಬೇಕು* ರಾಮ ರಾಜ್ಯವು ಸರ್ವ ಜನಾಂಗದ ಶಾಂತಿಯ ತೋಟವಾಗಿತ್ತು
ಬೆಂಗಳೂರು(ಏ.11): ಶ್ರೀರಾಮ ನವಮಿ(Ram Navami) ಪ್ರಯುಕ್ತ ನಡೆಸುವ ಶೋಭಾಯಾತ್ರೆ ಹೆಸರಲ್ಲಿ ಮತ್ತೊಂದು ಸಮುದಾಯ ವಾಸ ಮಾಡುವ ಬೀದಿಯಲ್ಲಿ ಅಥವಾ ಪ್ರಾರ್ಥನಾ ಮಂದಿರಗಳ ಮುಂದೆ ಡಿಜೆ ಸೆಟ್‌ಗಳನ್ನು ಹಾಕಿಕೊಂಡು 15-20 ನಿಮಿಷ ಕಾಲ ಕುಣಿಯುವುದು, ಕೇಕೆ ಹಾಕುವುದು ಇತ್ಯಾದಿಗಳನ್ನು ಮಾಡುವುದು ಬೇಡ. ಇದರಿಂದ ಶಾಂತಿ ಕದಡುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ(HD Kumaraswamy) ಮನವಿ ಮಾಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ರಾಮನವಮಿ ಹಬ್ಬವನ್ನು ಭಕ್ತಿ-ಶ್ರದ್ಧೆಯಿಂದ ಆಚರಣೆ ಮಾಡೋಣ. ಆದರೆ, ರಾಮಸ್ಮರಣೆ ಮತ್ತೊಬ್ಬರಿಗೆ ನೋಟುಂಟು ಮಾಡದಂತೆ ಎಚ್ಚರಿಕೆ ವಹಿಸಬೇಕು. ಶ್ರೀರಾಮಚಂದ್ರ ಮಹಾಪ್ರಭು, ನಮ್ಮೆಲ್ಲರ ಆರಾಧ್ಯ ದೈವ. ಅಷ್ಟೇ ಅಲ್ಲ, ಮನುಕುಲಕ್ಕೆ ಆದರ್ಶ, ತ್ಯಾಗ, ಸರಳತೆ, ಶಾಂತಿ, ಸಹನೆ, ಮೌಲ್ಯಗಳ ದಿವ್ಯ ಬೆಳಕು ತೋರಿದ ನಮ್ಮೊಳಗಿನ ದೈವ. ರಾಮ ರಾಜ್ಯವು ಸರ್ವ ಜನಾಂಗದ ಶಾಂತಿಯ ತೋಟವಾಗಿತ್ತು. ನಾಡಿನ ಸಮಸ್ತ ಜನತೆ ರಾಮನ ಹೆಸರಲ್ಲಿ ಶೋಭಾಯಾತ್ರೆ ನಡೆಸಲು ಯಾವುದೇ ಅಭ್ಯಂತರ ಇಲ್ಲ, ಅದಕ್ಕೆ ನನ್ನದೂ ಬೆಂಬಲವೂ ಇದೆ ಎಂದು ತಿಳಿಸಿದ್ದಾರೆ.
ಬೆಂಕಿ ನಂದಿಸುವ ಕೆಲಸ ಮಾಡುತ್ತೇನೆ: ಎಚ್.ಡಿ. ಕುಮಾರಸ್ವಾಮಿ
ಒಂದು ಸಮುದಾಯದ ಜನರು ಈಗ ಉಪವಾಸ ಆಚರಣೆಯಲ್ಲಿದ್ದಾರೆ. ಈ ಸಮಯದಲ್ಲಿ ಅವರ ಬಡಾವಣೆಗಳಿಗೆ ಹೋಗಿ ಶಾಂತಿಗೆ ಭಂಗ ತರುವುದು ಬೇಡ. ಅದಕ್ಕೆ ಅವಕಾಶ ನೀಡದಂತೆ ಎಲ್ಲ ಜಿಲ್ಲೆಯ ಜಿಲ್ಲಾಧಿಕಾರಿ, ಪೊಲೀಸ್(Police) ವರಿಷ್ಠಾಧಿಕಾರಿಗಳಲ್ಲಿ ಮನವಿ ಮಾಡುತ್ತೇನೆ. ಶೋಭಾಯಾತ್ರೆಯನ್ನು(Shobhayatre) ಹಿಂದೂಗಳು(Hindu) ವಾಸ ಮಾಡುವ ಬಡಾವಣೆ, ಬೀದಿಯಲ್ಲಿ ಮಾಡಿ. ಅಲ್ಲಿ ಅರ್ಧಗಂಟೆ ಸಾಲದಿದ್ದರೆ, ಒಂದು ಗಂಟೆ ಮಾಡಲಿ. ಇದಕ್ಕೆ ನನ್ನ ಬೆಂಬಲ ಇದೆ ಎಂದಿದ್ದಾರೆ.
ಬೆಲೆ ಏರಿಕೆ ಮರೆಮಾಚಲು ಧರ್ಮ ವಿವಾದ ಸೃಷ್ಟಿ:
ಬೆಂಗಳೂರು: ಪೆಟ್ರೋಲ್, ಡಿಸೇಲ್, ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನರ ಮನಸ್ಸನ್ನು ಬೇರೆ ಕಡೆ ತಿರುಗಿಸಲು ಧರ್ಮದ ವಿಚಾರವನ್ನು ಕೈಗೆತ್ತಿಗೊಳ್ಳಲಾಗಿದೆ. ರಾಷ್ಟ್ರಕವಿ ಕುವೆಂಪು ಅವರ ಸರ್ವ ಜನಾಂಗದ ಶಾಂತಿಯ ತೋಟ ಇಂದು ಹೊತ್ತಿ ಉರಿಯುತ್ತಿದೆ ಎಂದು ಬಿಜೆಪಿ ಸರ್ಕಾರ ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಏ.09 ರಂದು ಬೆಲೆ ಏರಿಕೆ ವಿರೋಧಿಸಿ ಫ್ರೀಡಂಪಾರ್ಕ್‌ನಲ್ಲಿ ಜೆಡಿಎಸ್(JDS) ವತಿಯಿಂದ ನಡೆಸಲಾದ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ್ದ ಅವರು ಜೀವಾನವಶ್ಯಕ ವಸ್ತುಗಳ ಬೆಲೆಗಳ ನಿರಂತರ ಏರಿಕೆಯ ಬಗ್ಗೆ ಕಿಡಿಕಾರಿದ್ದರು.
Karnataka Politics: ಗೃಹ ಸಚಿವರು ಖಳನಟನ ಪಾತ್ರ ಮಾಡ್ತಿದ್ದಾರಾ?: ಕುಮಾರಸ್ವಾಮಿ
ಬೆಲೆ ಹೆಚ್ಚಳ ವಿರುದ್ಧ ಪ್ರತಿಭಟನಾ ಮೆರವಣಿಗೆ ಮಾಡಲು ಅವಕಾಶ ನೀಡದ ಸರ್ಕಾರ, ಶೋಭಾಯಾತ್ರೆಗೆ ಅವಕಾಶ ನೀಡಿದೆ. ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೆ ಏರುತ್ತಿವೆ. ಇದರ ಬಗ್ಗೆ ತುಟಿ ಬಿಚ್ಚದ ಮುಖ್ಯಮಂತ್ರಿಗಳು ಧರ್ಮಗಳ ನಡುವೆ ಯುದ್ಧಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ. ಪ್ರತಿಭಟನೆಯ ಜತೆಗೆ ಪಾದಯಾತ್ರೆ ಕೈಗೊಳ್ಳುವ ತೀರ್ಮಾನ ಕೈಗೊಳ್ಳಲಾಗಿತ್ತು. ಆದರೆ, ರಾಜ್ಯ ಸರ್ಕಾರ ಅದಕ್ಕೆ ಅವಕಾಶ ನೀಡಲಿಲ್ಲ. ಬದಲಿಗೆ ಆಡಳಿತಾರೂಢ ಬಿಜೆಪಿ(BJP) ತನಗೆ ಬೇಕಾದ ಸಂಘಟನೆಗಳು ಇಷ್ಟ ಬಂದಾಗಲೆಲ್ಲಾ ಹಮ್ಮಿಕೊಳ್ಳುವ ಶೋಭಾಯಾತ್ರೆಗೆ ಅವಕಾಶ ನೀಡಲಾಗುತ್ತದೆ ಎಂದು ವಾಗ್ದಾಳಿ ನಡೆಸಿದ್ದರು.
ಬೆಲೆ ಏರಿಕೆಗೆ ಕಿಡಿ:
ಪಂಚರಾಜ್ಯಗಳ ಚುನಾವಣಾ ಫಲಿತಾಂಶದ ನಂತರ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಸತತವಾಗಿ ಏರಿಕೆಯಾಗುತ್ತಿದೆ. ಉಜ್ವಲ ಯೋಜನೆಯಡಿ ಗ್ಯಾಸ್ ಸಿಲಿಂಡರ್ ಮೂರು ತಿಂಗಳು ಉಚಿತವಾಗಿ ಕೊಡುತ್ತೇವೆ ಎಂದು ಹೇಳಿದರು. ಈಗ ಗ್ಯಾಸ್ ಸಿಲಿಂಡರ್ ಬೆಲೆ ಒಂದು ಸಾವಿರ ರು. ದಾಟಿದೆ. ಇನ್ನು ಬೆಲೆ ಏರಿಕೆಯಿಂದ ಬಡ ಕುಟುಂಬ ಮನೆ ಕಟ್ಟಲು ಹೇಗೆ ಸಾಧ್ಯ. ಕಬ್ಬಿಣದ ಬೆಲೆ ಟನ್‌ಗೆ ಒಂದು ಲಕ್ಷ ರು. ದಾಟಿದೆ. ಸಿಮೆಂಟ್ ಬೆಲೆಯಲ್ಲಿ ಚೀಲಕ್ಕೆ 500 ರು.ವರೆಗೆ ಮುಟ್ಟಿದೆ. ಹೀಗಾದರೆ ಸಾಮಾನ್ಯ ಜನರು ಬದುಕುವುದು ಹೇಗೆ ಎಂದು ಖಾರವಾಗಿ ಪ್ರಶ್ನಿಸಿದ ಅವರು, ಬೆಲೆ ಏರಿಕೆಯ ಬಗ್ಗೆ ಜನರಲ್ಲಿ ತೀವ್ರ ವ್ಯಕ್ತವಾಗುತ್ತಿದೆ. ಅದನ್ನು ವಿಷಯಾಂತರ ಮಾಡಿ ಧರ್ಮದ ವಿಚಾರದಲ್ಲಿ ಗಲಾಟೆ ಸೃಷ್ಟಿಮಾಡಲಾಗುತ್ತಿದೆ. ಕುವೆಂಪು ಅವರ ಸರ್ವ ಜನಾಂಗದ ಶಾಂತಿಯ ತೋಟಕ್ಕೆ ಬೆಂಕಿ ಹಾಕುತ್ತಿದ್ದಾರೆ. ಹಿಜಾಬ್(Hijab) ವಿಚಾರ ಸಣ್ಣದಾಗಿದ್ದಾಗಲೇ ಚಿವುಟಿ ಹಾಕಿದ್ದರೆ ಹೀಗೆ ಆಗುತ್ತಿರಲಿಲ್ಲ ಎಂದು ಹೇಳಿದ್ದರು.
