ಬೆಂಕಿ ನಂದಿಸುವ ಕೆಲಸ ಮಾಡುತ್ತೇನೆ: ಎಚ್.ಡಿ. ಕುಮಾರಸ್ವಾಮಿ
ಸರ್ವಜನಾಂಗದ ಶಾಂತಿಯ ತೋಟಕ್ಕೆ ಬೆಂಕಿ ಇಟ್ಟರೆ, ನಾನು ನಂದಿಸುವ ಕೆಲಸ ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ಮೈಸೂರು (ಏ.07): ಸರ್ವಜನಾಂಗದ ಶಾಂತಿಯ ತೋಟಕ್ಕೆ ಬೆಂಕಿ ಇಟ್ಟರೆ, ನಾನು ನಂದಿಸುವ ಕೆಲಸ ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಹೇಳಿದರು. ಕಲಾಮಂದಿರದಲ್ಲಿ ಬುಧವಾರ ಲೋಕನಾಯಕ ಜೆ.ಪಿ. ವಿಚಾರ ವೇದಿಕೆ ವತಿಯಿಂದ ಆಯೋಜಿಸಿದ್ದ ಸರ್ವಜನಾಂಗದ ಶಾಂತಿಯ ತೋಟ (Sarva Janangada Shantiya Tota Program) ಒಂದು ಭಾವೈಕ್ಯತೆ ಚರ್ಚೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸರ್ವಜನಾಂಗದ ಶಾಂತಿಯ ತೋಟದಂತಿದ್ದ ಕರ್ನಾಟಕವನ್ನು ಹಿಂದೂ ಪರ ಸಂಘಟನೆಗಳು ಧರ್ಮದ ಆಧಾರದಲ್ಲಿ ವಿಭಜಿಸಿ ಬೆಂಕಿ ಹಚ್ಚುತ್ತಿವೆ. ಇದನ್ನು ನಂದಿಸುವ ಸಲುವಾಗಿ ಸಮಾನ ಮನಸ್ಕರನ್ನು ಕಟ್ಟಿಕೊಂಡು ಭಾವೈಕ್ಯತೆಯ ಚರ್ಚೆ ಕಾರ್ಯಕ್ರಮ ಮಾಡುತ್ತಿದ್ದೇನೆ. ಈಗಾಗಲೇ ಬೆಂಗಳೂರಿನಲ್ಲಿ ಒಂದು ಸಭೆ ಮಾಡಿದ್ದೆ. ಈಗ ಮೈಸೂರಿನಲ್ಲಿ ಎರಡನೇ ಕಾರ್ಯಕ್ರಮ ಮಾಡುತ್ತಿದ್ದು, ಇದರ ಹಿಂದೆ ಯಾವ ದುರುದ್ದೇಶ, ಚುನಾವಣೆ ರಾಜಕೀಯ ಇಲ್ಲ. ಈ ನನ್ನ ಹೋರಾಟ ನಿಷ್ಕಲ್ಮಶವಾಗಿದೆ. 2023ರ ಚುನಾವಣೆ ಮುಖ್ಯವಲ್ಲ ಬದಲಿಗೆ ರಾಜ್ಯದ ಆರೂವರೆ ಕೋಟಿ ಜನರ ಜೀವನ ಮುಖ್ಯ. ನನ್ನನ್ನು ನಂಬಿ ಎಂದು ಹೇಳಿದರು.
ಜೈ ಶ್ರೀರಾಮ್ ಹೆಸರೇಳಿಕೊಂಡು ರಾಜ್ಯವನ್ನು ರಾವಣರಾಜ್ಯ ಮಾಡದಿರಿ, ಹಿಂದುವೀ ಜಟ್ಕಾ ಕಟ್ ಮಟನ್ ಸ್ಟಾಲ್ ತೆರೆಯಲು ಅನುಮತಿ ನೀಡಿದವರಾರಯರು, ಮಾಂಸ ಮಾರಾಟ ಮಾಡುವವರ ಬಗ್ಗೆ ಸಸ್ಯಹಾರಿಗಳಿಗೇಕೆ ಚಿಂತೆ, ಮುಸ್ಲಿಂ ಯುವಕರು ಸಂಯಮದಿಂದಿರಿ, ನನ್ನ ಹೋರಾಟ ನಿಷ್ಕಲ್ಮಶ - ನನ್ನನ್ನು ನಂಬಿ. ಕರಾವಳಿಯಲ್ಲಿ ಆರಂಭವಾದ ಹಿಜಾಬ್ ವಿವಾದ ಈಗ ಮುಸ್ಲಿಂರ ಮಾವಿನ ಹಣ್ಣು ವ್ಯಾಪಾರದವರೆಗೆ ಬಂದು ನಿಂತಿದೆ. ದಿನಕ್ಕೊಂದು ವಿವಾದ ಸೃಷ್ಟಿಸಿ ರಾಜ್ಯವನ್ನು ಏನೂ ಮಾಡಲಿಕ್ಕೆ ಹೊರಡಿದ್ದೀರಿ? ಮುಸ್ಲಿಂರಿಂದ ಮಾವಿನ ಹಣ್ಣು ಖರೀದಿಇಸಬಾರದು ಎಂದು ಕರೆ ಕೊಟ್ಟರೆ ರೈತರು ಏನು ಮಾಡಬೇಕು? ಹುಣಸೆಹಣ್ಣು, ದ್ರಾಕ್ಷಿ ಖರೀದಿ ಮಾಡಿ ರೈತರಿಗೆ ಆರ್ಥಿಕ ಶಕ್ತಿ ತುಂಬುವವರು ಯಾರು? ನಾಮ ಹಾಕಿಕೊಂಡು ಜೈ ಶ್ರೀರಾಮ್ ಎಂದಾಕ್ಷಣ ರೈತರು ಉಳಿಯುವುದಿಲ್ಲ ಎಂದರು.
ರಾಮ ಅಲ್ಲ, ರಾವಣ ಸೇನೆ ಎಂದು ಬದಲಿಸಿಕೊಳ್ಳಿ: ಎಚ್ಡಿಕೆ
ಚುನಾವಣೆ ಕಾರಣಕ್ಕೆ ನಾನು ದನಿ ಎತ್ತಿಲ್ಲ. ಮತಕ್ಕಾಗಿ ಮಾತಾಡುವ ದುರಾಲೋಚನೆ, ಸಣ್ಣತನ ನನಗಿಲ್ಲ. 6.5 ಕೋಟಿ ಜನರ ಹಿತ ಮುಖ್ಯ. ನಾಡಿನಲ್ಲಿ ಶಾಂತಿ ನೆಲಸಬೇಕು. ಕುವೆಂಪು ಅವರ ಆಶಯ ಉಳಿಯಬೇಕೆಂದು ಬಿಜೆಪಿ ಪರಿವಾರದ ವಿರುದ್ಧ ದೊಡ್ಡ ಮಟ್ಟದಲ್ಲಿ ಅಟ್ಯಾಕ್ ಮಾಡುತ್ತಿದ್ದೇನೆ. ಬಿಜೆಪಿ ಮತ್ತು ಬೆಂಬಲಿತ ಸಂಘಟನೆಗಳು ಕರ್ನಾಟಕವನ್ನು ಮತ್ತೊಂದು ಉತ್ತರ ಪ್ರದೇಶ ಮಾಡಲಿಕ್ಕೆ ಹೊರಟಿದ್ದಾರೆ. ಅದನ್ನು ತಡೆಯಲು ನಮ್ಮ ಹೋರಾಟ. ಬಿಜೆಪಿಯವರು ಕಾಯಕದ ಹೆಸರಿನಲ್ಲಿ ಮತ ಕೇಳಲಿ, ಸಮಾಜ ಹೊಡೆದು ಮತ ಕೇಳುವುದು ಸರಿಯಲ್ಲ ಎಂದು ಅವರು ಹೇಳಿದರು. ಕಾರ್ಯಕ್ರಮದಲ್ಲಿ ಬಸವ ಧ್ಯಾನ ಮಂದಿರದ ಬಸವಲಿಂಗಮೂರ್ತಿ ಶರಣರು, ಕೇಂದ್ರದ ಮಾಜಿ ಸಚಿವ ಸಿ.ಎಂ. ಇಬ್ರಾಹಿಂ, ಸಾಹಿತಿ ಪ್ರೊ. ಅರವಿಂದ ಮಾಲಗತ್ತಿ, ಪ್ರೊ.ಪಿ.ವಿ. ನಂಜರಾಜ ಅರಸ್, ಮೌಲಾನ ಅಬ್ಬಾಸ್ ಸಜ್ಜದಿ, ವಿಧಾನ ಪರಿಷತ್ ಸದಸ್ಯ ಕೆ.ಟಿ. ಶ್ರೀಕಂಠೇಗೌಡ ಮೊದಲಾದವರು ಪಾಲ್ಗೊಂಡಿದ್ದರು.
ಕೊಲೆ ಪ್ರಕರಣದಲ್ಲಿ ಗೃಹ ಸಚಿವರಿಂದ ಸಣ್ಣತನದ ಹೇಳಿಕೆ: ಬೆಂಗಳೂರಿನ ಚಂದ್ರು ಕೊಲೆ ಪ್ರಕರಣದಲ್ಲಿ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಸಣ್ಣತನದ ಹೇಳಿಕೆ ನೀಡಿದ್ದಾರೆ. ಗೃಹ ಸಚಿವರು ಕಮಿಡಿಯನ್ ರೋಲ್ ಪ್ಲೇ ಮಾಡ್ತೀದ್ದಾರಾ ಅಥವಾ ವಿಲನ್ ರೋಲ್ ಪ್ಲೇ ಮಾಡ್ತೀದ್ದಾರಾ? ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಕಿಡಿಕಾರಿದರು. ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಸಾಮರಸ್ಯದ ಕೊರತೆ ಇದೆ, ವಿಶ್ವಾಸದ ಕೊರತೆ ಕೂಡ ಇದೆ. ಕುವೆಂಪು ರಚಿಸಿದ ನಾಡಗೀತೆಗೆ ಗೌರವ ಸೂಚಿಸಲಾಗುತ್ತಿದೆ. ಆದರೆ ಸಾಮರಸ್ಯ ಹಾಗೂ ಭಾವೈಕ್ಯತೆಗೆ ಧಕ್ಕೆ ತರುವ ಕೆಲಸ ಆಗುತ್ತಿದೆ. ಹೀಗಾಗಿ ಒಂದು ಒಳ್ಳೆ ಸಂದೇಶ ಸಾರುವ ಕಾರ್ಯಕ್ರಮ ಮಾಡುತ್ತಿದ್ದೇವೆ ಎಂದರು.
5 ವರ್ಷದಲ್ಲಿ ನೀರಾವರಿ ಯೋಜನೆ ಪೂರ್ಣ, ಮಾತು ತಪ್ಪಿದರೆ ಜೆಡಿಎಸ್ ವಿಸರ್ಜನೆ
ಬೆಂಗಳೂರಿನ ಯುವಕನ ಕೊಲೆಯನ್ನು ಲಘುವಾಗಿ ಪರಿಗಣಿಸಬೇಡಿ. ಗೃಹ ಸಚಿವರು ತಮ್ಮ ಜವಾಬ್ದಾರಿ ಮರೆತ್ತಿದ್ದಾರೆ. ಚುಚ್ಚಿ ಚುಚ್ಚಿ ಕೊಲೆ ಆಗಿದೆ ಅಂತ ಪ್ರಚೋದಾನಾತ್ಮಕ ಹೇಳಿಕೆ ಕೊಟ್ಟಿದ್ದಾರೆ. ಗೃಹ ಸಚಿವರೆ ಹೀಗೆ ಹೇಳಿಕೆ ಕೊಟ್ಟರೆ ಹೇಗೆ? ಈ ಹತ್ಯೆ ಪ್ರಕರಣದಲ್ಲಿ ಯಾರೇ ಆದರೂ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು. ಪದೇ ಪದೇ ಸರ್ಕಾರವನ್ನು ಎಚ್ಚರಿಸುತ್ತಿದ್ದೇನೆ. ನಿಮ್ಮ ಮೌನ ದೊಡ್ಡ ಅನಾಹುತಕ್ಕೆ ಕಾರಣವಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಪ್ರತಿಯೊಂದು ವಿಚಾರವನ್ನು ಬಿಜೆಪಿಯವರು ರಾಜಕೀಕರಣಗೊಳಿಸುತ್ತಿದ್ದಾರೆ. ದಲಿತ ಕೊಲೆ ಆಗಿದ್ದಾನೆ ಅಂತ ಸಾಮರಸ್ಯಕ್ಕೆ ಧಕ್ಕೆ ತರುತ್ತಿದ್ದಾರೆ. ಪೋಲಿಸರು ಒಂದು ಹೇಳಿಕೆ ಕೊಟ್ಟರೆ, ಗೃಹ ಸಚಿವರು ಮತ್ತೊಂದು ಹೇಳಿಕೆ ಕೊಡುತ್ತಿದ್ದಾರೆ. ಯಾವುದೇ ಘಟನೆ ನಡೆದಾಗ ಸರಿಯಾಗಿ ಮಾಹಿತಿ ಪಡೆದುಕೊಳ್ಳಬೇಕು.
ಬಳಿಕ ಮಾಧ್ಯಮಗಳ ಮುಂದೆ ಹೇಳಿಕೆ ಕೊಡಬೇಕು. ಉರ್ದು ಮಾತನಾಡಲಿಲ್ಲ ಅಂತ ಕೊಲೆಯಾಗಿದೆ ಅಂತ ಹೇಳಿಕೆ ಕೊಟ್ಟಿದ್ದರು. ಈಗ ಆಕ್ಸಿಡೆಂಟ್ ಗಲಾಟೆ ಕಾರಣಕ್ಕೆ ಅಂದಿದ್ದಾರೆ. ಏನ್ ಹುಡುಗಾಟ ಆಡುತ್ತಿದ್ದೀರಾ? ಒಬ್ಬ ಗೃಹ ಸಚಿವನಾಗಿ ಜವಾಬ್ದಾರಿಯಿಂದ ಮಾತನಾಡಬೇಕು ಎಂದು ಗೃಹ ಸಚಿವರ ವಿರುದ್ಧ ಕಿಡಿಕಾರಿದರು. ಮುಸ್ಲಿಂ ಯುವಕರು ಅಂತ ಆರೋಪಿಗಳ ಮೇಲೆ ಕನಿಕರ ತೋರಿಸಿ ಎಂದು ಹೇಳುವುದಿಲ್ಲ. ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಿ. ಇತ್ತೀಚಿನ ಸಿನಿಮಾಗಳೇ ಹುಡುಗರ ಈ ರೀತಿಯ ಕೃತ್ಯಗಳಿಗೆ ಪ್ರೇರಣೆ. ನಿರ್ಮಾಪಕರಿಗೆ ನಾನು ಮನವಿ ಮಾಡುತ್ತೇನೆ. ಸಮಾಜದ ಸ್ವಾಸ್ಥ್ಯ ಕೆಡಿಸುವ ಕೆಲಸ ಮಾಡಲಾಗುತ್ತದೆ. ರಾಜ್ಯದಲ್ಲಿ ಬೇರೆ ಬೇರೆ ಕಾರಣಕ್ಕಾಗಿ ಜನರ ಕೊಲೆಯಾದವು. ಆದರೆ ಕೊಲೆ ವಿಚಾರದಲ್ಲಿ ಬಿಜೆಪಿ ಪ್ರಚೋದನಾಕಾರಿಯಾಗಿ ನಡೆದುಕೊಳ್ಳುತ್ತಿದೆ. ಚುನಾವಣೆಗಾಗಿ ಸಮಾಜ ಹೊಡೆಯುವ ಕೆಲಸ ಆಗಬಾರದು ಎಂದು ವಾಗ್ದಾಳಿ ನಡೆಸಿದರು.
ರೈತರಿಗೆ ನಾಮ ಹಾಕಬೇಡಿ: ಈಗ ಮಾವು ಮಾರಾಟಕ್ಕೆ ಗಲಾಟೆ ಶುರುವಾಗಿದೆ. ಮುಂದೆ ಹುಣಸೆ, ಸಪೋಟಕ್ಕೂ ಶುರುವಾಗುತ್ತೆ. ಮಾವು ಮಾರಾಟ ಮಾಡುವವರು ಯಾರು? ಅದು 400 - 500 ಕೋಟಿ ವ್ಯವಹಾರ. ಏನು ವಿಶ್ವ ಹಿಂದೂ ಪರಿಷತ್ ನವರು ಬಂದು ವ್ಯಾಪಾರ ಮಾಡುತ್ತಾರಾ? ವಿಶ್ವ ಹಿಂದೂ ಪರಿಷತ್ ನವರು ರೇಷ್ಮೆ, ಮಾವಿನ ಡೀಲರ್ಸ್ ಗಳಾಗುತ್ತಾರಾ? ನಾಳೆ ಹುಣಸೇ, ಸಪೋಟ ಹಣ್ಣಿನ ವ್ಯಾಪಾರಕ್ಕೂ ಬರುತ್ತೆ? ನೀವು ಬೇಕಾದರೆ ನಾಮ ಹಾಕಿಕೊಂಡು ಓಡಾಡಿ, ನಮ್ಮ ರೈತರಿಗೆ ನಾಮ ಹಾಕಲು ಬರಬೇಡಿ ಎಂದರು. ಕೇಸರಿ ಬಟ್ಟೆಹಾಕಿ ಅದಕ್ಕೆ ಅವಮಾನ ಮಾಡಬೇಡಿ. ಬೀದಿಲಿ ಹೋಗೋರೆಲ್ಲಾ ಕೇಸರಿ ಬಟ್ಟೆಹಾಕೊಂಡು ಜೈ ಶ್ರೀರಾಮ್ ಅಂತಿದ್ದಾರೆ. ಕೇಸರಿ ಹಾಕಿ ಇದನ್ನ ರಾಮ ರಾಜ್ಯ ಮಾಡಿ, ರಾವಣನ ರಾಜ್ಯ ಮಾಡಬೇಡಿ. ಸರ್ಕಾರಕ್ಕೆ ಒಂದು ತಿಂಗಳ ಸಮಯ ಕೊಟ್ಟು ಎಚ್ಚರಿಕೆ ಕೊಟ್ಟಿದ್ದೇನೆ.
ಇದೇನಾ ನೀವು ಆಡಳಿತ ನಡೆಸುವ ರೀತಿ, ಸಿಎಂ ಬೊಮ್ಮಾಯಿ ವಿರುದ್ಧ ಎಚ್‌ಡಿಕೆ ಕೆಂಡ
ಇದೇ ರೀತಿ ಗಲಭೆಗೆ ಪ್ರೋತ್ಸಾಹ ಕೊಟ್ಟರೆ ಸರ್ಕಾರ ಕಿತ್ತೊಗೆಯುವ ಕೆಲಸವನ್ನು ನಾವು ಮಾಡುತ್ತೇವೆ. ನನಗೆ ಬಿಜೆಪಿ ನಾಯಕರು ಸುಫಾರಿ ಕೊಟ್ಟಿಲ್ಲ. ಈ ನಾಡಿನ ಜನರೇ ರಾಜ್ಯದಲ್ಲಿ ಶಾಂತಿ ತರಲು ಸುಫಾರಿ ಕೊಟ್ಟಿದ್ದಾರೆ ಎಂದು ಅವರು ಹೇಳಿದರು. ಕರ್ನಾಟಕದಿಂದಲೇ ದೇಶಕ್ಕೆ ಒಂದು ಸಂದೇಶ ಕೊಡಿ. ಕರ್ನಾಟಕವನ್ನು ಮತ್ತೊಂದು ಉತ್ತರ ಪ್ರದೇಶ ಮಾಡಲು ಬಿಡಬೇಡಿ. ನಮ್ಮದು ಸರ್ವ ಜನಾಂಗದ ಶಾಂತಿಯ ತೋಟ. ಅದನ್ನು ಕೋಮುವಾದಿಗಳ ಕೈಗೆ ಕೊಟ್ಟು ಹಾಳು ಮಾಡಬೇಡಿ. ಇವರ ವಿರುದ್ಧ ಮಾತನಾಡಿದರೆ ನಾವು ರಾಷ್ಟ್ರ ದ್ರೋಹಿಗಳು. ಇವರು ಮಾತ್ರ ರಾಷ್ಟ್ರ ಪ್ರೇಮಿಗಳಾ. ಪೆಟ್ರೋಲ್ ಬೆಲೆ . 111 ಮಾಡೋದೇ ರಾಷ್ಟ್ರ ಪ್ರೇಮಾನಾ. ಜನರಿಗೆ ನಾಮ ಹಾಕುವ ಕೆಲಸ ಮಾಡಬೇಡಿ ಎಂದು ಅವರು ಕಿಡಿಕಾರಿದರು.