PSI Recruitment Scam: ಕಿಂಗ್‌ಪಿನ್‌ಗಳನ್ನು ಸಿಐಡಿ ಬಂಧಿಸಲಿ: ಎಚ್‌ಡಿಕೆ ಆಗ್ರಹ
ಪಿಎಸ್‌ಐ ಹಗರಣದ ಬ್ರಹ್ಮಾಂಡ ಭ್ರಷ್ಟಾಚಾರ ಬಯಲಿಗೆಳೆದು ಎಡಿಜಿಪಿ ದರ್ಜೆಯ ಉನ್ನತ ಅಧಿಕಾರಿಯನ್ನೇ ಬಂಧಿಸಿರುವ ಘಟನೆ ರಾಜ್ಯ ಪೊಲೀಸ್ ವ್ಯವಸ್ಥೆಯಲ್ಲಿಯೇ ಐತಿಹಾಸಿಕ ದಿನ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಿಐಡಿ ತನಿಖಾ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.
ಬೆಂಗಳೂರು (ಜು.05): ಪಿಎಸ್‌ಐ ಹಗರಣದ ಬ್ರಹ್ಮಾಂಡ ಭ್ರಷ್ಟಾಚಾರ ಬಯಲಿಗೆಳೆದು ಎಡಿಜಿಪಿ ದರ್ಜೆಯ ಉನ್ನತ ಅಧಿಕಾರಿಯನ್ನೇ ಬಂಧಿಸಿರುವ ಘಟನೆ ರಾಜ್ಯ ಪೊಲೀಸ್ ವ್ಯವಸ್ಥೆಯಲ್ಲಿಯೇ ಐತಿಹಾಸಿಕ ದಿನ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಿಐಡಿ ತನಿಖಾ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ಸಿಐಡಿ ನೇತೃತ್ವ ವಹಿಸಿರುವ ದಕ್ಷ ಅಧಿಕಾರಿ, ಪಿ.ಎಸ್.ಸಂಧು ಅವರು ಎಷ್ಟೇ ರಾಜಕೀಯ ಮತ್ತು ಅಧಿಕಾರಿಶಾಹಿ ಮಟ್ಟದಲ್ಲಿ ಒತ್ತಡ ಎದುರಾದರೂ ಮಣಿಯದೆ ತನಿಖಾ ತಂಡವನ್ನು ಮುನ್ನಡೆಸಿದ್ದಾರೆ. ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದಿದ್ದಾರೆ.
ಇನ್ನು, ಪಿಎಸ್‌ಐ ಕರ್ಮಕಾಂಡದ ತನಿಖೆಯಲ್ಲಿ ಸಿಐಡಿ ಸಾಗಬೇಕಿರುವ ದೂರ ಬಹಳಷ್ಟಿದೆ. ಕೆಳ, ಹಿರಿಯ ಹಂತದ ಅಧಿಕಾರಿಗಳ ಜತೆಗೆ ಸರ್ಕಾರದ ಮಟ್ಟದಲ್ಲಿ ಅತ್ಯಂತ ಪ್ರಭಾವಿ ಸ್ಥಾನದಲ್ಲಿರುವ ಕಿಂಗ್‌ಪಿನ್‌ಗಳನ್ನು ಸಿಐಡಿ ಹಿಡಿಯಬೇಕಿದೆ. ಯಾವುದೇ ಕಾರಣಕ್ಕೂ ಈ ಪ್ರಭಾವಿಗಳು ತಪ್ಪಿಸಿಕೊಳ್ಳಬಾರದು. ನಾನು ಮೊದಲೇ ಹೇಳಿದ್ದು, ಪಿಎಸ್‌ಐ ಹಗರಣದಲ್ಲಿ ಒಬ್ಬರು ಮಹಾನ್ ಕಿಂಗ್‌ಪಿನ್ ಇದ್ದಾರೆ. ಅವರ ಹೆಸರು ಹೇಳಿದರೆ ಸರ್ಕಾರವೇ ಬಿದ್ದು ಹೋಗುತ್ತದೆ ಎಂದು. ಹೀಗೆ ಹೇಳಿದಾಗ ಕುಮಾರಸ್ವಾಮಿ ಹಿಟ್ ಅಂಡ್ ರನ್ ಮಾಡುತ್ತಾರೆ ಎಂದಿದ್ದರು. ದಾಖಲೆ ಕೊಡಿ ಎಂದಿದ್ದರು. ಈಗ ಅವರು ಏನು ಹೇಳುತ್ತಾರೆ ಎಂದು ಪ್ರಶ್ನಿಸಿದ್ದಾರೆ.
ಅಪ್ಪ ಭೀಷ್ಮನಿದ್ದಂತೆ, ಬಯಸಿದಾಗ ಸಾವು ಬರುತ್ತದೆ: ಎಚ್‌ಡಿಕೆ
ಕಾಂಗ್ರೆಸ್ 70 ದಾಟಲ್ಲ, ಚಾಲೆಂಜ್: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳಿಗಿಂತ ಜೆಡಿಎಸ್‌ಗೆ ಹೆಚ್ಚು ಸ್ಥಾನ ಬರುತ್ತದೆಯೇ ಹೊರತು ಕೆಳಗಿರುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರತಿಪಾದಿಸಿದ್ದಾರೆ. ಅಲ್ಲದೆ, ಕಾಂಗ್ರೆಸ್ ಪಕ್ಷ 70 ಸ್ಥಾನ ದಾಟಲ್ಲ. ನಾನು ಚಾಲೆಂಜ್ ಮಾಡುತ್ತೇನೆ ಎಂದೂ ಅವರು ಹೇಳಿದ್ದಾರೆ.
ಶನಿವಾರ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್‌ಗೆ 130 ಸ್ಥಾನ ಬರುತ್ತದೆಂಬ ಆಂತರಿಕ ಸಮೀಕ್ಷೆಯು ಪ್ಲಾಂಟೆಡ್ ಸಮೀಕ್ಷೆ. ಅವರ ಶಕ್ತಿ ಇರುವುದು 60-65 ಸ್ಥಾನ ಅಷ್ಟೇ. 2013ರಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇನ್ನೊಂದು ಪಕ್ಷ ಮಾಡದಿದ್ದರೆ ಸಿದ್ದರಾಮಯ್ಯ ಅಂದು ಮುಖ್ಯಮಂತ್ರಿಯಾಗುತ್ತಿರಲಿಲ್ಲ. ಅವರು ಯಡಿಯೂರಪ್ಪ ಅವರನ್ನು ನೆನಪಿಸಿಕೊಳ್ಳಬೇಕು. ಮುಂದಿನ ಚುನಾವಣೆಯಲ್ಲಿ 70 ಸ್ಥಾನ ದಾಟುವುದಿಲ್ಲ. ಈ ಬಗ್ಗೆ ನಾನು ಚಾಲೆಂಜ್ ಮಾಡುತ್ತೇನೆ ಎಂದು ಹೇಳಿದರು.
ತಾಕತ್ತಿದ್ದರೆ ಸಿಎಂ ಅಭ್ಯರ್ಥಿ ಘೋಷಿಸಲಿ- ಇಬ್ರಾಹಿಂ: ನಿಮಗೆ ತಾಕತ್ತಿದ್ದರೆ ಮುಂದಿನ ಮುಖ್ಯಮಂತ್ರಿ ಯಾರೆಂದು ಈಗಲೇ ಘೋಷಣೆ ಮಾಡಿ ಎಂದು ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಸವಾಲು ಹಾಕಿದರು. ಈವರೆಗೆ ಕಾಂಗ್ರೆಸ್‌ನವರು ಮುಖ್ಯಮಂತ್ರಿ ಅಭ್ಯರ್ಥಿ ಯಾರೆಂದು ಘೋಷಣೆ ಮಾಡಿಲ್ಲ. ಬಿಜೆಪಿಯವರು ಸಹ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂದು ಹೇಳಿಲ್ಲ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಅಭ್ಯರ್ಥಿ ಎಂದು ನಾವು ಹೇಳಿದ್ದೇವೆ. ನಿಮಗೆ ತಾಕತ್ ಇದ್ದರೆ ಮುಖ್ಯಮಂತ್ರಿ ಅಭ್ಯರ್ಥಿ ಹೆಸರು ಘೋಷಣೆ ಮಾಡಿ ಎಂದರು.
ಡಿಸೆಂಬರ್‌ನಲ್ಲೇ ಕರ್ನಾಟಕ ವಿಧಾನಸಭೆ ಚುನಾವಣೆ: ಕುಮಾರಸ್ವಾಮಿ
ದೇವೇಗೌಡ ಬಗ್ಗೆ ಮಾತನಾಡಿರುವ ರಾಜಣ್ಣ ಕ್ಷಮೆ ಕೇಳುತ್ತಾರೆ ಎಂದು ಭಾವಿಸಿದ್ದೆ. ಆದರೆ, ಅವರು ಉಲ್ಟಾಮಾತನಾಡಿದ್ದಾರೆ. ರಾಜಣ್ಣ ಅವರು ಕ್ಷಮೆ ಕೇಳಬೇಕು. ನಾಳೆ ರಾಜ್ಯದಲ್ಲಿ ಏನು ಬೇಕಾದರೂ ಆಗಬಹುದು. ಏನಾದರೂ ಅಹಿತಕರ ಘಟನೆ ನಡೆದರೆ ಅದಕ್ಕೆ ನಾವು ಹೊಣೆಯಲ್ಲ ಎಂದು ಪರೋಪಕ್ಷವಾಗಿ ರಾಜಣ್ಣ ಅವರಿಗೆ ಎಚ್ಚರಿಕೆ ನೀಡಿದರು.