Asianet Suvarna News Asianet Suvarna News

ಡಿಸೆಂಬರ್‌ನಲ್ಲೇ ಕರ್ನಾಟಕ ವಿಧಾನಸಭೆ ಚುನಾವಣೆ: ಕುಮಾರಸ್ವಾಮಿ

*  ಕಾರ್ಯಕರ್ತರಿಗೆ ಈಗಿನಿಂದಲೇ ಸಜ್ಜಾಗುವಂತೆ ಜನತಾ ಮಿತ್ರದಲ್ಲಿ ಕರೆ
*  ಆಗಸ್ಟ್‌ನಲ್ಲಿ ಪಂಚರತ್ನ ರಥಯಾತ್ರೆ ಕಾರ್ಯಕ್ರಮ ಆರಂಭ
*  ಎರಡು ರಾಷ್ಟ್ರೀಯ ಪಕ್ಷಗಳು ಬೆಂಗಳೂರಿಗೆ ಏನು ಕೊಡುಗೆ ನೀಡಿಲ್ಲ

Karnataka Assembly Elections Likely on December Says HD Kumaraswamy grg
Author
Bengaluru, First Published Jul 2, 2022, 5:42 AM IST

ಬೆಂಗಳೂರು(ಜು.02): ವಿಧಾನಸಭೆ ಚುನಾವಣೆ ಡಿಸೆಂಬರ್‌ನಲ್ಲಿಯೇ ಎದುರಾಗುವ ಸಾಧ್ಯತೆಗಳಿದ್ದು, ಕಾರ್ಯಕರ್ತರು ಈಗಿನಿಂದಲೇ ಸಜ್ಜಾಗಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಕರೆ ನೀಡಿದ್ದಾರೆ.

ಶುಕ್ರವಾರ ಜೆಡಿಎಸ್‌ ಕಚೇರಿ ಜೆ.ಪಿ.ಭವನದಲ್ಲಿ ಜನತಾ ಮಿತ್ರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ವಿಧಾನಸಭೆ ಮತ್ತು ಬಿಬಿಎಂಪಿ ಚುನಾವಣೆಗೆ ಕಾರ್ಯಕರ್ತರು ಸಂಘಟಿತರಾಗಬೇಕು. ಬೆಂಗಳೂರು ಹಂತಹಂತವಾಗಿ ಬೆಳೆಯುತ್ತಿದೆ. ಬೆಂಗಳೂರಲ್ಲಿ ನಮ್ಮ ಪಕ್ಷ ಶಕ್ತಿಯುತವಾಗಿಲ್ಲ ಎಂಬ ಭಾವನೆಯನ್ನು ತೆಗೆದು ಹಾಕಬೇಕು. ಬೆಂಗಳೂರಿನಲ್ಲಿ ಕನಿಷ್ಠ 15 ಕ್ಷೇತ್ರಗಳನ್ನು ಗೆಲ್ಲುವ ವಾತಾವರಣ ಜೆಡಿಎಸ್‌ಗೆ ಇದೆ ಎಂದು ಹೇಳಿದರು.

ದೇವೇಗೌಡ್ರ ಬಗ್ಗೆ ಅವಹೇಳನ ಮಾತು, ರಾಜಣ್ಣಗೆ ಖಡಕ್ ಎಚ್ಚರಿಕೆ ಕೊಟ್ಟ ಎಚ್‌ಡಿಕೆ

ಆರ್‌.ಆರ್‌.ನಗರದಲ್ಲಿ ಪಕ್ಷದ ಮತಗಳಿವೆ. ಕಾರ್ಯಕರ್ತರು ಇದನ್ನು ಮರೆಯಬಾರದು. ನಾವೇನು ಅಧಿಕಾರದಲ್ಲಿದ್ದಾಗ ಅಕ್ರಮವಾಗಿ ಹಣ ಲೂಟಿ ಮಾಡಿಲ್ಲ. ನಮ್ಮಲ್ಲಿ ಮೂವರು ಶಾಸಕರಿದ್ದರು. ಅವರೂ ಸಹ ಬೇರೆ ಕಡೆ ಹೋಗಿದ್ದಾರೆ. ಹೋರಾಟದ ಫಲವಾಗಿ ಚಾಮರಾಜಪೇಟೆ, ಪುಲಕೇಶಿನಗರ, ಮಹಾಲಕ್ಷ್ಮೇ ಲೇಔಟ್‌ನಲ್ಲಿ ಗೆಲುವು ಸಾಧಿಸಿದ್ದೇವು. ಪಕ್ಷ ಉಳಿದರೆ ನಾವೆಲ್ಲಾ ಉಳಿಯುತ್ತೇವೆ. ಭಗವಂತನ ಆರ್ಶೀವಾದದಿಂದ ಎರಡು ಬಾರಿ ಮುಖ್ಯಮಂತ್ರಿಯಾಗಿ ಇತಿಹಾಸದ ಪುಟ ಸೇರಿದ್ದೇನೆ. ಈಗಿನ ಸರ್ಕಾರ ಲೂಟಿ ಮಾಡುತ್ತಿದೆ. ಇದನ್ನು ಸಂಪೂರ್ಣವಾಗಿ ಬಂದ್‌ ಮಾಡಬೇಕು. ನನಗೆ ಒಂದು ಅವಕಾಶ ನೀಡಲಿ, ನಮಗೆ 20 ವರ್ಷ ಬೇಡ, ಐದು ವರ್ಷದ ಅವಕಾಶ ಕೊಟ್ಟರೆ ಸಾಕು ಎಂದರು.

ನಮ್ಮ ಕಾರ್ಯಕರ್ತರು ಪ್ರತಿ ಮನೆಮನೆಗೂ ಹೋಗಿ, ಅವರ ಆದ್ಯತೆ ಏನು ಎಂಬುದನ್ನು ಅರಿಯುವ ಕೆಲಸ ಮಾಡಬೇಕು. ಜನರಿಂದ ಎಲ್ಲಾ ಮಾಹಿತಿಯನ್ನು ಸಂಗ್ರಹಿಸಿ, ಮುಂದೆ ನಮ್ಮ ಸರ್ಕಾರ ಬಂದ ನಂತರ ಸಮಸ್ಯೆಗೆ ಪರಿಹಾರ ಕಲ್ಪಿಸಲು ಅನುಕೂಲವಾಗಲಿದೆ. ಜನತಾಮಿತ್ರ 17 ದಿನಗಳ ಕಾಲ ನಡೆಯಲಿದ್ದು, ಬೆಂಗಳೂರು ನಗರದ ಕಾರ್ಯಕರ್ತರ ಸಮಾವೇಶವನ್ನು ಜು.17ರಂದು ನಡೆಸುತ್ತೇವೆ. ಸುಮಾರು ಒಂದೂವರೆ ಲಕ್ಷ ಜನ ಇದರಲ್ಲಿ ಭಾಗಿಯಾಗಬೇಕು. ಎರಡು ರಾಷ್ಟ್ರೀಯ ಪಕ್ಷಗಳು ಬೆಂಗಳೂರಿಗೆ ಏನು ಕೊಡುಗೆ ನೀಡಿಲ್ಲ. ಬ್ಯಾಟರಾಯನಪುರ, ಯಲಹಂಕದ ಬಡಾವಣೆಗಳನ್ನು ನೋಡಿದ್ದೇನೆ. ಬೆಂಗಳೂರು ನಗರವನ್ನು ಸಿಂಗಾಪುರ ಮಾಡುತ್ತೇವೆ ಎಂದು ಪ್ರಚಾರ ಪಡೆದಿದ್ದರು. ಸಿಂಗಾಪುರ ಮಾಡಲು ಹೋಗಿ ಸರ್ಕಾರ, ಬೆಂಗಳೂರಿನ ಕೆರೆಕಟ್ಟೆಗಳನ್ನು ನಾಶ ಮಾಡಿದೆ ಎಂದು ವಾಗ್ದಾಳಿ ನಡೆಸಿದರು.

ಯಡಿಯೂರಪ್ಪ ನಡೆ ಆಧರಿಸಿ ಕಾಂಗ್ರೆಸ್‌ ಹೆಜ್ಜೆ: ಕುಮಾರಸ್ವಾಮಿ

ಆಗಸ್ಟ್‌ನಲ್ಲಿ ಪಂಚರತ್ನ:

ಆಗಸ್ಟ್‌ನಲ್ಲಿ ಪಂಚರತ್ನ ರಥಯಾತ್ರೆ ಕಾರ್ಯಕ್ರಮ ಆರಂಭಿಸುತ್ತೇವೆ. ಹಳ್ಳಿ ಹಳ್ಳಿಗೆ ಹೋಗುತ್ತೇನೆ. ಮೂರು ತಿಂಗಳು ಬೆಂಗಳೂರಿಗೆ ಬರುವುದಿಲ್ಲ. ಎಲ್ಲೆಡೆ ಸುತ್ತಿ 15 ದಿನ ಬೆಂಗಳೂರಿಗೆ ಮೀಸಲಿಡುತ್ತೇನೆ. ಜನತಾಮಿತ್ರ ಕಾರ್ಯಕ್ರಮದ ಸ್ಥಳಗಳಿಗೆ ಹೋಗಿ ಮಾತನಾಡುತ್ತೇನೆ. ಇಲ್ಲಿ ಸಂಬಳ ಪಡೆಯುವ ಐಎಎಸ್‌ ಅಧಿಕಾರಿಗಳು ಬಂಡವಾಳ ಹೂಡಿಕೆದಾರರಿಗೆ ಏನೋನೋ ಹೇಳುತ್ತಿದ್ದಾರೆ. ಕರ್ನಾಟಕದಲ್ಲಿ ಯಾಕೆ ಬಂಡವಾಳ ಹೂಡುತ್ತೀರಾ? ಗುಜರಾತ್‌ಗೆ ಹೋಗಿ ಎನ್ನುತ್ತಿದ್ದಾರೆ. ಚುನಾವಣೆ ಬರಲಿ, ಆಗ ಎಲ್ಲವನ್ನೂ ಮಾತನಾಡುತ್ತೇನೆ ಎಂದು ಸರ್ಕಾರ ವಿರುದ್ಧ ಕಿಡಿಕಾರಿದರು.

ಕಾರ್ಯಕ್ರಮದಲ್ಲಿ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ, ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ, ಶಾಸಕರಾದ ಟಿ.ಎ.ಶರವಣ, ಆರ್‌.ಮಂಜುನಾಥ್‌, ಕೇರಳ ರಾಜ್ಯದ ವಿದ್ಯುತ್‌ ಸಚಿವ ಕೃಷ್ಣನ್‌ ಕುಟ್ಟಿ, ಕೇರಳದ ಜೆಡಿಎಸ್‌ ಶಾಸಕ ಥಾಮಸ್‌ ಟಿ.ಮ್ಯಾಥ್ಯೂ ಸೇರಿದಂತೆ ಇತರರು ಉಪಸ್ಥಿತರಿದ್ದರು.
 

Follow Us:
Download App:
  • android
  • ios