ಅಪ್ಪ ಭೀಷ್ಮನಿದ್ದಂತೆ, ಬಯಸಿದಾಗ ಸಾವು ಬರುತ್ತದೆ: ಎಚ್‌ಡಿಕೆ
* ‘ಸಿದ್ದು ಟೀಂ ಖಾಸಗಿಯಾಗಿ ಮಾತಾಡೋದನ್ನೇ ರಾಜಣ್ಣ ಬಾಯ್ತಪ್ಪಿ ಹೇಳಿದ್ದಾರೆ’
* ರಾಜ್ಯದಲ್ಲಿ ಜೆಡಿಎಸ್ ಅನ್ನು ಅಧಿಕಾರಕ್ಕೆ ತರಲೇಬೇಕು ಎಂದು ದೇವೇಗೌಡ ಶಪಥ ಮಾಡಿದ್ದಾರೆ
* ಭಗವಂತ ಅವರಿಗೆ ಇನ್ನೂ ಶಕ್ತಿ ಕೊಟ್ಟಿದ್ದಾನೆ
ಬೆಂಗಳೂರು(ಜು.03): ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಭೀಷ್ಮಾಚಾರ್ಯ ಇದ್ದಂತೆ. ಅವರಿಗೆ ಸಾವು ಎನ್ನುವುದು ಅವರು ಬಯಸಿದಾಗಲೇ ಬರುತ್ತದೆಯೇ ಹೊರತು ಯಾರೋ ಹೇಳಿದಾಗ ಬರುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಇದೇ ವೇಳೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಖಾಸಗಿ ಟೀಂನಲ್ಲಿ ಈ ಬಗ್ಗೆ ಚರ್ಚೆಯಾಗಿದ್ದು, ದೇವೇಗೌಡರು ಇನ್ನೆಷ್ಟು ವರ್ಷ ಇರುತ್ತಾರೆ. ಅವರ ಕಾಲ ಮುಗಿಯಿತು ಅಂತ ಆಂತರಿಕವಾಗಿ ಮಾತನಾಡಿಕೊಂಡಿರುತ್ತಾರೆ. ಹೀಗಾಗಿ ಮಾಜಿ ಶಾಸಕ ರಾಜಣ್ಣನವರು ವೇದಿಕೆ ಮೇಲೆ ಅದನ್ನೇ ಬಾಯಿತಪ್ಪಿ ಹೇಳಿದ್ದಾರೆ ಅಷ್ಟೇ ಎಂದೂ ಅವರು ಹೊಸಬಾಂಬ್ ಸಿಡಿಸಿದ್ದಾರೆ.
ದೇವೇಗೌಡ್ರ ಬಗ್ಗೆ ಅವಹೇಳನ ಮಾತು, ರಾಜಣ್ಣಗೆ ಖಡಕ್ ಎಚ್ಚರಿಕೆ ಕೊಟ್ಟ ಎಚ್‌ಡಿಕೆ
ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜ್ಯದಲ್ಲಿ ಜೆಡಿಎಸ್ ಅನ್ನು ಅಧಿಕಾರಕ್ಕೆ ತರಲೇಬೇಕು ಎಂದು ದೇವೇಗೌಡ ಅವರು ಶಪಥ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಭೀಷ್ಮಾಚಾರ್ಯರ ಗುಣ ಅವರಿಗೆ ಇದೆ. ಅವರು ಬಯಸಿದಾಗ ಸಾವು ಬರುತ್ತದೆ. ಅವರು ಇಚ್ಛಾಮರಣಿ ಎಂಬುದು ನನ್ನ ಅಚಲ ನಂಬಿಕೆ. ಭಗವಂತ ಅವರಿಗೆ ಇನ್ನೂ ಶಕ್ತಿ ಕೊಟ್ಟಿದ್ದಾನೆ. ನಾನು ಅವರ ಭಾವನೆಗಳನ್ನು ಗಮನಿಸಿದ್ದೇನೆ. ಯಾವುದೇ ಕಾರಣಕ್ಕೂ ಅವರ ಆಯಸ್ಸಿನ ಮೇಲೆ ದುಷ್ಪರಿಣಾಮ ಬೀರುವುದಿಲ್ಲ. ಅವರ ಬಗ್ಗೆ ಕೆಟ್ಟದಾಗಿ ಚರ್ಚೆ ಮಾಡಿರುವ ವ್ಯಕ್ತಿಗಳ ಬಯಕೆ ಈಡೇರುವುದಿಲ್ಲ ಎಂದು ತಿರುಗೇಟು ನೀಡಿದರು.
ನಾಡಿನ ಜನತೆಯ ಆಕ್ರೋಶ ಹೆಚ್ಚಳವಾದ ಮೇಲೆ ರಾಜಣ್ಣ ಮಾತನಾಡಿದ್ದಾರೆ. ನನ್ನ ಹೇಳಿಕೆ ತಿರುಚಲಾಗಿದೆ ಎಂದು ಅವರು ಹೇಳುತ್ತಿದ್ದಾರೆ. ನನಗೆ ಸಿದ್ದರಾಮಯ್ಯನವರ ಮೇಲೆ ದ್ವೇಷ ಇಲ್ಲ. ನಾನು ಕಳೆದ ಒಂದು ತಿಂಗಳಲ್ಲಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಬಗ್ಗೆ ಪ್ರಸ್ತಾಪಿಸಿ ಎಲ್ಲಿಯೂ ಮಾತನಾಡಿಲ್ಲ. ಅವರ ಹುಟ್ಟುಹಬ್ಬದ ಕಾರ್ಯಕ್ರಮಕ್ಕೆ ನಾವು ಯಾಕೆ ಆಪೇಕ್ಷೆ ಮಾಡೋಣ ಎಂದರು.