ಹಾಸನ ಜಿಲ್ಲೆಯಲ್ಲಿ ಹೃದಯಾಘಾತದ ಸರಣಿ ಮುಂದುವರಿದಿದ್ದು, ಇಂದು ಯುವಕನೋರ್ವ ಸಾವನ್ನಪ್ಪಿದ ಬೆನ್ನಲೇ ಶಿವಮೊಗ್ಗ ಜಿಲ್ಲೆಯಲ್ಲಿ ಮತ್ತೋರ್ವ ಯುವತಿ ಸಾವನಪ್ಪಿದ ಹೃದಯ ವಿದ್ರಾವಕ ಘಟನೆ ನಡೆದಿದೆ.
ಹಾಸನ (ಜು.01): ಹಾಸನ ಜಿಲ್ಲೆಯಲ್ಲಿ ಹೃದಯಾಘಾತದ ಸರಣಿ ಮುಂದುವರಿದಿದ್ದು, ಇಂದು ಯುವಕನೋರ್ವ ಸಾವನ್ನಪ್ಪಿದ ಬೆನ್ನಲೇ ಶಿವಮೊಗ್ಗ ಜಿಲ್ಲೆಯಲ್ಲಿ ಮತ್ತೋರ್ವ ಯುವತಿ ಸಾವನಪ್ಪಿದ ಹೃದಯ ವಿದ್ರಾವಕ ಘಟನೆ ನಡೆದಿದೆ. ಹಾಸನ ಮೂಲದ ಅಕ್ಷಿತಾ (22) ಶಿವಮೊಗ್ಗ ಜಿಲ್ಲೆಯಲ್ಲಿ ಹೃದಯಾಘಾತದಿಂದ ಸಾವನಪ್ಪಿದ್ದಾರೆ.
ಹೌದು! ಒಂದೂವರೆ ತಿಂಗಳ ಬಾಣಂತಿಯಾದ ಅಕ್ಷಿತಾ ಹಾಸನದ ಕೊಮ್ಮೆನಹಳ್ಳಿಯವರು, ತವರು ಮನೆ ಶಿವಮೊಗ್ಗದ ಆಯನೂರಿನಲ್ಲಿ ಅವರು ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಇನ್ನು ಬಾಣಂತನಕ್ಕೆ ತವರು ಮನೆ ಆಯನೂರಿನಲ್ಲಿದ್ದ ಅಕ್ಷಿತಾಗೆ ಮೊನ್ನೆ ರಾತ್ರಿ ಎದೆನೋವು ಕಾಣಿಸಿಕೊಂಡಿತ್ತು. ಈ ವೇಳೆ ರಾತ್ರಿ ಹಾಸನದಲ್ಲಿ ಇದ್ದ ಗಂಡನನ್ನು ಎದೆನೋವು ಬಂದಿದ್ದರಿಂದ ಆಕೆ ಕರೆಸಿಕೊಂಡಿದ್ದರು. ಆದರೆ ನಿನ್ನೆ ಬೆಳಗ್ಗೆ ಆಯನೂರು ಆಸ್ಪತ್ರೆಗೆ ಅಂಬ್ಯುಲೆನ್ಸ್ ನಲ್ಲಿ ಹೋಗುವಾಗ ಮಾರ್ಗಮಧ್ಯೆ ಅಕ್ಷಿತಾ ಸಾವನಪ್ಪಿದ್ದಾರೆ.
ಅಂತ್ಯಕ್ರಿಯೆಗೆ ತೆರಳಿದ್ದ ಮಹಿಳೆ ಸಾವು: ಶಿವಮೊಗ್ಗ ಜಿಲ್ಲೆಯಲ್ಲಿ ಹೃದಯಘಾತದಿಂದ ಸರಣಿ ಸಾವು ಮುಂದುವರಿದಿದ್ದು, ಹೃದಯಾಘಾತದಿಂದ ಮತ್ತೊಬ್ಬ ಮಹಿಳೆ ನಿಧನರಾಗಿದ್ದಾರೆ. ಚಿಕ್ಕಮ್ಮನ ಮಗನ ಅಂತ್ಯಕ್ರಿಯೆಗೆ ತೆರಳಿದ್ದ ಮಹಿಳೆಯು ಹೃದಯಾಘಾತಕ್ಕೆ ಒಳಗಾಗಿ ಸಾವನಪ್ಪಿದ್ದಾರೆ. ಭದ್ರಾವತಿ ತಾಲೂಕಿನ ಮಲ್ಲಾಪುರ ಗ್ರಾಮದ ಚೈತ್ರಾ (52) ಮೃತ ದುರ್ದೈವಿ.
ಮಲ್ಲಾಪುರದ ಚೈತ್ರಾ ಹಾಗೂ ಪತಿ ಮಲ್ಲಿಕಾರ್ಜುನ್ ದಂಪತಿ ಕುಟುಂಬ ಸಮೇತ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಸೋಗಿಲು ಗ್ರಾಮದಲ್ಲಿ ಚೈತ್ರಾ ಅವರ ಚಿಕ್ಕಮ್ಮನ ಮಗನ ಶವ ಸಂಸ್ಕಾರಕ್ಕೆ ತೆರಳಿದ್ದ ವೇಳೆ ಹೃದಯಾಘಾತವಾಗಿದೆ. ಸೋಗಿಲು ಗ್ರಾಮದಲ್ಲಿ ಚಿಕ್ಕಮ್ಮನ ಮಗ ರಾಜು(50) ನೇಣು ಬಿಗಿದುಕೊಂಡು ಮೃತಪಟ್ಟಿದ್ದರು. ಪಾರ್ಥಿವ ಶರೀರದ ದರ್ಶನ ಮಾಡುವ ವೇಳೆ ಚೈತ್ರಾ ಕುಸಿದು ಬಿದ್ದು ಪ್ರಜ್ಞೆ ತಪ್ಪಿದ್ದಾರೆ. ಕೂಡಲೇ ಚೈತ್ರಾ ಅವರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಮೃತಪಟ್ಟಿದ್ದಾರೆ. ಇನ್ನು ಚೈತ್ರಾ ಅವರಿಗೆ ಪತಿ, ಪುತ್ರ, ಪುತ್ರಿ ಇದ್ದಾರೆ.
ಓಪಿಡಿ ಫುಲ್ ರಷ್: ಹಾಸನದಲ್ಲಿ ಹೃದಯಾಘಾತ ಪ್ರಕರಣ ಹೆಚ್ಚಾದ ಹಿನ್ನೆಲೆಯಲ್ಲಿ ಮೈಸೂರಿನ ಜಯದೇವ ಹೃದ್ರೋಗ ಆಸ್ಪತ್ರೆಗೆ ರೋಗಿಗಳು ದಾಂಗುಡಿಯಿಡುತ್ತಿದ್ದಾರೆ. ಮೈಸೂರು, ಮಂಡ್ಯ, ಹಾಸನ, ಚಾಮರಾಜನಗರ ಜಿಲ್ಲೆಗಳಿಂದ ರೋಗಿಗಳು ಬಂದಿದ್ದು, ಮುಂಜಾನೆಯೆಯಿಂದಲೇ ಆಸ್ಪತ್ರೆಯ ಓಪಿಡಿ ಫುಲ್ ರಷ್ ಆಗಿದೆ. ಇನ್ನು ದೇವಸ್ಥಾನದ ಮುಂದೆ ದರ್ಶನಕ್ಕೆ ನಿಂತಂತೆ ನಿಂತಿರುವ ಜನರನ್ನ ನಿಯಂತ್ರಣ ಮಾಡಲಾಗದೆ ಆಸ್ಪತ್ರೆ ಸಿಬ್ಬಂದಿಯವರು ಬ್ಯಾರಿಕೇಡ್ ಸಿಸ್ಟಮ್ ಹಾಕಿದ್ದಾರೆ. ಸದ್ಯ ಸರತಿ ಸಾಲಲ್ಲಿ ನಿಂತಿ ರೋಗಿಗಳಲ್ಲಿ ಯುವಕ ಯುವತಿಯರ ಸಂಖ್ಯೆ ಗಣನೀಯವಾಗಿದ್ದು, ನಿತ್ಯ 500ರಷ್ಟು ಬರುತ್ತಿದ್ದ ರೋಗಿಗಳ ಸಂಖ್ಯೆ ದಿಢೀರ್ 1,500ಕ್ಕೂ ಅಧಿಕ ಸಂಖ್ಯೆಗೆ ಏರಿಕೆಯಾಗಿದೆ. ಪ್ರಸ್ತುತ ಬಂದಿರುವ ರೋಗಿಗಳಲ್ಲಿ ಮೊದಲ ಬಾರಿ ಬಂದಿರುವವರ ಸಂಖ್ಯೆಯೇ ಅಧಿಕವಾಗಿದೆ.
