ಹಾಸನ ಜಿಲ್ಲೆಯಲ್ಲಿ ಹೃದಯಾಘಾತ ಮತ್ತು ಹೃದಯ ಸ್ತಂಭನಕ್ಕೊಳಗಾಗುತ್ತಿರುವ ಪ್ರಕರಣಗಳ ಹೆಚ್ಚಳಕ್ಕೆ ಸಂಬಂಧಿಸಿ ಅಧ್ಯಯನ ನಡೆಸಿ ನಿಖರ ಕಾರಣ ತಿಳಿಸುವಂತೆ ತಜ್ಞರ ಸಮಿತಿಗೆ ಆರೋಗ್ಯ ಇಲಾಖೆ ಆದೇಶಿಸಿದೆ.
ಬೆಂಗಳೂರು (ಜು.01): ಹಾಸನ ಜಿಲ್ಲೆಯಲ್ಲಿ ಹೃದಯಾಘಾತ ಮತ್ತು ಹೃದಯ ಸ್ತಂಭನಕ್ಕೊಳಗಾಗುತ್ತಿರುವ ಪ್ರಕರಣಗಳ ಹೆಚ್ಚಳಕ್ಕೆ ಸಂಬಂಧಿಸಿ ಅಧ್ಯಯನ ನಡೆಸಿ ನಿಖರ ಕಾರಣ ತಿಳಿಸುವಂತೆ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ.ರವೀಂದ್ರ ನಾಥ್ ನೇತೃತ್ವದ ತಜ್ಞರ ಸಮಿತಿಗೆ ಆರೋಗ್ಯ ಇಲಾಖೆ ಆದೇಶಿಸಿದೆ. ಕಳೆದೊಂದು ತಿಂಗಳಲ್ಲಿ ಹಾಸನ ಜಿಲ್ಲೆಯೊಂದರಲ್ಲೇ 21 ಮಂದಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಹೀಗೇ ಏಕಾಏಕಿ ಹೃದಯಾಘಾತ ಮತ್ತು ಹೃದಯ ಸ್ತಂಭನ ಪ್ರಕರಣಗಳ ಹೆಚ್ಚಳಕ್ಕೆ ಕಾರಣ ಅರಿಯಲು ಮುಂದಾಗಿರುವ ಆರೋಗ್ಯ ಇಲಾಖೆ, ಅದರ ಹೊಣೆಯನ್ನು ಫೆಬ್ರವರಿಯಲ್ಲಿ ರಚಿಸಲಾಗಿದ್ದ ಹೃದಯಾತಕ್ಕೆ ಸಂಬಂಧಿಸಿದ ಡಾ.ರವೀಂದ್ರ ನಾಥ್ ಅವರ ನೇತೃತ್ವದ ತಜ್ಞರ ಸಮಿತಿಗೆ ನೀಡಲಾಗಿದೆ.ಈ ಕುರಿತು ಪ್ರತಿಕ್ರಿಯಿಸಿರುವ ಡಾ.ರವೀಂದ್ರನಾಥ್, ಹಾಸನ ಜಿಲ್ಲೆ ವ್ಯಾಪ್ತಿಯ ಪ್ರಕರಣಗಳಲ್ಲಿ ಮೃತರ ಮರಣೋತ್ತರ ಪರೀಕ್ಷೆ ನಡೆಸದ ಕಾರಣ ನಿಖರ ಕಾರಣ ತಿಳಿದಿಲ್ಲ. ಹೀಗಾಗಿ ಮೃತರ ಕುಟುಂಬದವರಿಂದ ಮೃತರ ಆರೋಗ್ಯ ಸ್ಥಿತಿ, ದಿನಚರಿ, ಜೀವನ ಶೈಲಿ, ಆಹಾರ ಕ್ರಮ, ವಂಶವಾಹಿ ಕಾರಣ ಸೇರಿ ಸಮಗ್ರ ಮಾಹಿತಿ ಸಂಗ್ರಹಿಸಬೇಕಿದೆ. ಅದಕ್ಕಾಗಿ ಮಂಗಳವಾರ ಸಮಿತಿಯ ಸಭೆ ನಡೆಸಲಿದ್ದು, ಮುಂದಿನ ಕ್ರಮಗಳ ಕುರಿತು ಚರ್ಚಿಸಲಾಗುತ್ತಿದೆ ಎಂದಿದ್ದಾರೆ.
ಕೋವಿಡ್ ಅಡ್ಡಪರಿಣಾಮ ಪರಿಶೀಲನೆ: ಕೋವಿಡ್ ಸೋಂಕು ಮತ್ತು ಲಸಿಕೆಯಿಂದ ಹೃದಯಾಘಾತ ಹೆಚ್ಚಳವಾಗುತ್ತಿದೆಯೇ ಎಂಬುದನ್ನುವಿಶ್ಲೇಷಿಸಲು ಆರೋಗ್ಯ ಇಲಾಖೆ ಫೆಬ್ರವರಿಯಲ್ಲಿ ಡಾ.ರವೀಂದ್ರ ನಾಥ್ ನೇತೃತ್ವದಲ್ಲಿ ತಜ್ಞರ ಸಮಿತಿ ರಚಿಸಿತ್ತು. ಆ ಸಮಿತಿ ಈಗಾಗಲೇ ಜಯದೇವ ಆಸ್ಪತ್ರೆಯ 250 ಹೃದ್ರೋಗಿಗಳನ್ನು ಪರಿಶೀಲನೆಗೊಳಿಸಿ, ವಿಶ್ಲೇಷಣೆ ಮಾಡುತ್ತಿದೆ. ಆ ವಿಶ್ಲೇಷಣೆಯಲ್ಲಿ ಕಂಡುಬರುವ ಅಂಶಗಳನ್ನಾಧರಿಸಿ ಸಮಿತಿ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಶೀಘ್ರ ಸಲ್ಲಿಕೆ ಮಾಡಲಿದೆ.
ಹಾಸನ ಜಿಲ್ಲೆ ವ್ಯಾಪ್ತಿಯಲ್ಲಿ ಹೃದಯಾಘಾತದಿಂದ ಸಾವಿಗೀಡಾಗಿರುವ 21 ಮಂದಿ ಪೈಕಿ ಇಬ್ಬರು ಮಾತ್ರ ಆಸ್ಪತ್ರೆಗೆ ಕರೆತಂದ ನಂತರ ಮೃತಪಟ್ಟಿದ್ದಾರೆ. ಉಳಿದಂತೆ 19 ಮಂದಿ ಆಸ್ಪತ್ರೆಗೆ ಕರೆತರುವುದಕ್ಕೂ ಮುನ್ನವೇ ಮೃತಪಟ್ಟಿದ್ದಾರೆ. ಆ ನಿಟ್ಟಿನಲ್ಲಿ ಪರಿಶೀಲಿಸಿ ವರದಿ ನೀಡುವಂತೆ ಡಾ. ರವೀಂದ್ರನಾಥ್ ನೇತೃತ್ವದ ಸಮಿತಿಗೆ ಸೂಚಿಸಲಾಗಿದೆ.
-ಹರ್ಷ ಗುಪ್ತ, ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ
