ಹಾಸನದಲ್ಲಿ ಮತ್ತೆ ಕಾಡಿದ ಹೃದಯಾಘಾತ, ಒಂದೇ ದಿನ ನಾಲ್ವರ ಸಾವು; 40 ದಿನಗಳಲ್ಲಿ 21 ಮಂದಿ ಬಲಿ
ಹಾಸನ ಜಿಲ್ಲೆಯಲ್ಲಿ ಕೇವಲ 40 ದಿನಗಳಲ್ಲಿ 21 ಜನರು ಹೃದಯಾಘಾತಕ್ಕೆ ಬಲಿಯಾಗಿದ್ದು, ಆತಂಕ ಮೂಡಿಸಿದೆ. ಮಹಿಳೆ, ಉಪನ್ಯಾಸಕ, ಯೋಧ ಮತ್ತು ಸರ್ಕಾರಿ ನೌಕರ ಸೇರಿದಂತೆ ವಿವಿಧ ವಯೋಮಾನದವರು ಹೃದಯಾಘಾತಕ್ಕೆ ತುತ್ತಾಗಿದ್ದಾರೆ.

ಹಾಸನ (ಜೂ. 30): ರಾಜ್ಯದಲ್ಲಿ ಹೃದಯಾಘಾತದ ಪ್ರಕರಣಗಳು ಹೆಚ್ಚಳ ಆಗುತ್ತಿರುವ ಬೆನ್ನಲ್ಲಿಯೇ ಹಾಸನ ಜಿಲ್ಲೆಯಲ್ಲಿ ಕೇವಲ 40 ದಿನಗಳ ಅವಧಿಯಲ್ಲಿ 21 ಮಂದಿ ಹೃದಯಾಘಾತಕ್ಕೆ ಬಲಿಯಾಗಿರುವ ಅಂಕಿ-ಅಂಶವು ಜಿಲ್ಲೆಯ ಜನತೆಯಲ್ಲಿ ಹೃದಯಾಘಾತ ಭೀತಿಯನ್ನು ತಂದೊಡ್ಡಿದೆ. ಇಂದು ಮಧ್ಯಾಹ್ನ 12 ಗಂಟೆಯೊಳಗೆ ನಾಲ್ವರು ಜನರು ಹಾಸನ ಜಿಲ್ಲೆಯೊಂದರಲ್ಲಿಯೇ ಹೃದಯಾಘಾತಕ್ಕೆ ಬಲಿ ಆಗಿದ್ದಾರೆ.
ಮನೆಯಲ್ಲಿ ಕುಸಿದುಬಿದ್ದ ಮಹಿಳೆ ಲೇಪಾಕ್ಷಿ
ಇತ್ತೀಚಿನ ಘಟನೆಯು ಬೇಲೂರು ಪಟ್ಟಣದ ಜೆಪಿ ನಗರದಲ್ಲಿ ಮನೆಲ್ಲಿದ್ದ ಲೇಪಾಕ್ಷಿ (50) ಎಂಬ ಮಹಿಳೆ ದಿಡೀರ್ ಸುಸ್ತಿನಿಂದ ನೆಲಕ್ಕೆ ಬಿದ್ದಿದ್ದಾಳೆ. ಪತಿ ನಾಗರಾಜ್ ಕೂಡಲೇ ಅವರನ್ನು ಬೇಲೂರಿನ ತಾಲ್ಲೂಕು ಆಸ್ಪತ್ರೆಗೆ ಕರೆದೊಯ್ದರೂ ವೈದ್ಯರು ಅವರು ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ.
ಟೀ ಕುಡಿಯುತ್ತಿದ್ದಾಗಲೇ ಕುಸಿದ ಲೆಕ್ಚರರ್ ಮುತ್ತಯ್ಯ
ಇನ್ನೊಂದು ಘಟನೆ ಹೊಳೆನರಸೀಪುರ ಪಟ್ಟಣದಲ್ಲಿ ನಡೆದಿದೆ. ಸರ್ಕಾರದ ಪ್ರಥಮ ದರ್ಜೆ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದ ಮುತ್ತಯ್ಯ (58) ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಚನ್ನರಾಯಪಟ್ಟಣದ ನಿವಾಸಿಯಾಗಿದ್ದ ಮುತ್ತಯ್ಯ ಅವರು ಟೀ ಕುಡಿಯುತ್ತಿರುವಾಗಲೇ ಬೈಪಾಸ್ ರಸ್ತೆಯಲ್ಲಿ ಕುಸಿದು ಬಿದ್ದಿದ್ದು, ಸ್ಥಳೀಯರು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ.
ರಜೆಗೆ ಬಂದಿದ್ದ ಯೋಧ ಲೋಹಿತ್ ಸಾವು
ರಜೆ ಹಿನ್ನೆಲೆಯಲ್ಲಿ ಊರಿಗೆ ಬಂದಿದ್ದ ಯೋಧ ಲೋಹಿತ್ (38) ಹೃದಯಾಘಾತದಿಂದ ಅಕಾಲಿಕವಾಗಿ ಮೃತಪಟ್ಟಿದ್ದಾರೆ. ಈ ದುರ್ಘಟನೆ ಚನ್ನರಾಯಪಟ್ಟಣ ತಾಲ್ಲೂಕಿನ ಕೆಂಬಾಳು ಗ್ರಾಮದಲ್ಲಿ ನಡೆದಿದೆ. 18 ವರ್ಷಗಳಿಂದ ಸೇನೆ ಸೇವೆ ಮಾಡುತ್ತಿದ್ದ ಲೋಹಿತ್, ಜುಲೈ 3ರಂದು ಕರ್ತವ್ಯಕ್ಕೆ ಹಾಜರಾಗಬೇಕಿತ್ತು. 7 ವರ್ಷಗಳ ಹಿಂದೆ ವಿವಾಹವಾಗಿದ್ದ ಲೋಹಿತ್‌ಗೆ 3 ವರ್ಷದ ಹೆಣ್ಣು ಮಗು ಕೂಡಾ ಇದೆ.
ಡಿ.ಗ್ರೂಫ್ ನೌಕರನೂ ಸಾವು
ಹೃದಯಾಘಾತದ ತೀವ್ರತೆಯನ್ನು ಮತ್ತಷ್ಟು ಘೋರಗೊಳಿಸಿದ ಘಟನೆ ನಲ್ಲೂರು ಗ್ರಾಮದಲ್ಲಿ ನಡೆದಿದೆ. ನುಗ್ಗೆಹಳ್ಳಿ ನಾಡಕಚೇರಿ ಡಿ ಗ್ರೂಪ್ ನೌಕರನಾಗಿದ್ದ ಕುಮಾರ್ (53) ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಈ ಎಲ್ಲಾ ಪ್ರಕರಣಗಳು ತೀವ್ರ ಆತಂಕದ ವಿಷಯವಾಗಿದ್ದು, ಜಿಲ್ಲೆಯ ಆರೋಗ್ಯ ಇಲಾಖೆಯ ಗಮನ ಸೆಳೆದಿವೆ. ಹೃದಯಾಘಾತದ ಈ ಸರಣಿ ಸಾವುಗಳು ಜಿಲ್ಲೆಯಲ್ಲಿ ಆರೋಗ್ಯದ ಬಗ್ಗೆ ಜನರಲ್ಲಿ ನೂತನ ಚಿಂತೆ ಹುಟ್ಟಿಸಿವೆ. ತಜ್ಞರ ಪ್ರಕಾರ ಜೀವನ ಶೈಲಿ, ಆಹಾರ ಕ್ರಮ, ಒತ್ತಡದ ಮಟ್ಟ ಇತ್ಯಾದಿಗಳ ಪರಿಷ್ಕರಣೆ ಅಗತ್ಯವಾಗಿದೆ.