ಬೆಂಗಳೂರು(ಮೇ 29): ರಾಜ್ಯದಲ್ಲಿ ಲಾಕ್‌ಡೌನ್‌ ಸಡಿಲಿಕೆಯಿಂದಾಗಿ ಡಿಸೆಂಬರ್‌ ವೇಳೆಗೆ ಶೇ.50 ರಷ್ಟುಮಂದಿವರೆಗೆ ಕೊರೋನಾ ಸೋಂಕು ಹರಡಿರುತ್ತದೆ. ಆದರೆ, ಬಹುತೇಕ ಮಂದಿಗೆ ತಮಗೆ ಕೊರೋನಾ ಸೋಂಕು ಹರಡಿರುವುದು ಸಹ ಗೊತ್ತಾಗುವುದಿಲ್ಲ.  ಹೀಗಂತ ಹೇಳುತ್ತಾರೆ ಖ್ಯಾತ ವೈರಾಣು ತಜ್ಞ ಹಾಗೂ ಸರ್ಕಾರದ ತಜ್ಞರ ಸಮಿತಿ ಸದಸ್ಯ ಡಾ ವಿ. ರವಿ ಅವರು.

ನಿಮ್ಹಾನ್ಸ್‌ ಆಸ್ಪತ್ರೆ ವೈರಾಣು ವಿಭಾಗದ ಮುಖ್ಯಸ್ಥರೂ ಆಗಿರುವ ರವಿ ಅವರ ಪ್ರಕಾರ, ‘ಲಾಕ್‌ಡೌನ್‌ ಬಳಿಕ ಕೊರೋನಾ ಸೋಂಕು ಸಮುದಾಯಕ್ಕೆ ಹರಡುತ್ತದೆ. ಹೀಗಾಗಿ ಡಿಸೆಂಬರ್‌ ವೇಳೆಗೆ ಶೇ.50 ರಷ್ಟುಮಂದಿವರೆಗೂ ಸೋಂಕು ಹರಡಬಹುದು. ರಾಜ್ಯದಲ್ಲಿ ಗುರುವಾರದ ವೇಳೆಗೆ 2,533 ಮಂದಿಗೆ ಸೋಂಕು ದೃಢಪಟ್ಟಿದೆ. ಇದರಲ್ಲಿ 283 (ಶೇ.11.17) ಮಂದಿಗೆ ಮಾತ್ರ ಸೋಂಕು ಲಕ್ಷಣ ಕಾಣಿಸಿಕೊಂಡಿದೆ.

14ನೇ ವಯಸ್ಸಿನಲ್ಲಿ KBC ಗೆದ್ದ ಬಾಲಕ ಈಗ ಸೂಪರಿಡೆಂಟ್ ಆಫ್ ಪೊಲೀಸ್!

ಉಳಿದ ಶೇ.88.82 ರಷ್ಟುಮಂದಿಗೆ ಸೋಂಕಿನ ಲಕ್ಷಣಗಳೇ ಇಲ್ಲ. ರಾಜ್ಯದಲ್ಲಿ ಬಹುತೇಕ ಮಂದಿಗೆ ಸೋಂಕು ಲಕ್ಷಣ ಇಲ್ಲದಿರುವುದು ಖುಷಿಯ ವಿಚಾರ. ಈವರೆಗಿನ ಅಧ್ಯಯನಗಳ ಪ್ರಕಾರ ಸೋಂಕು ಲಕ್ಷಣ ಇಲ್ಲದವರಿಂದ ಸೋಂಕು ಹರಡುವ ಸಾಧ್ಯತೆ ತೀರಾ ಕಡಿಮೆ ಎಂಬುದು ಸ್ಪಷ್ಟವಾಗಿದೆ. ಹೀಗಾಗಿ ರೋಗ ಲಕ್ಷಣ ಉಳ್ಳವರನ್ನು ಪರೀಕ್ಷೆಗೆ ಒಳಪಡಿಸಿ ಚಿಕಿತ್ಸೆ ನೀಡಿದರೆ ಸಾಕು’ ಎಂದು ಹೇಳಿದ್ದಾರೆ.

ಮುಂದಿನ ಜವಾಬ್ದಾರಿ ಜನರ ಮೇಲೆ:

ಈ ನಡುವೆ, ರಾಜ್ಯ ಸರ್ಕಾರವು ಮೇ 31ರ ಬಳಿಕ ಕೊರೋನಾ ಸೋಂಕು ಬಾರದಂತೆ ತಡೆಯುವ ಸಂಪೂರ್ಣ ಜವಾಬ್ದಾರಿಯನ್ನು ಸಾರ್ವಜನಿಕರ ಮೇಲೆಯೇ ಬಿಡಲು ಆರೋಗ್ಯ ಇಲಾಖೆ ಗಂಭೀರ ಚಿಂತನೆ ನಡೆಸಿದೆ.

ಆರೋಗ್ಯ ಇಲಾಖೆ ಉನ್ನತ ಮೂಲಗಳು ಇದನ್ನು ಖಚಿತಪಡಿಸಿವೆ. ತನ್ನ ಈ ಹೊಸ ಚಿಂತನೆಯ ಮೊದಲ ಭಾಗವಾಗಿ, ಸಾಂಸ್ಥಿಕ ಕ್ವಾರಂಟೈನ್‌ (ಸರ್ಕಾರದಿಂದಲೇ ಕ್ವಾರಂಟೈನ್‌) ವ್ಯವಸ್ಥೆ ಶೀಘ್ರವೇ ಕೈ ಬಿಟ್ಟು, ಹೋಂ ಕ್ವಾರಂಟೈನ್‌ಗೆ ಆದ್ಯತೆ ನೀಡಲಿದೆ. ಎರಡನೇ ಭಾಗವಾಗಿ, ಪಾಸಿಟಿವ್‌ ಇದ್ದೂ ರೋಗ ಲಕ್ಷಣಗಳಿಲ್ಲದವರಿಗೆ ಆಸ್ಪತ್ರೆಗೆ ದಾಖಲಿಸಿಕೊಳ್ಳುವುದಿಲ್ಲ. ರೋಗ ಲಕ್ಷಣವಿದ್ದ ಪಾಸಿಟಿವ್‌ ವ್ಯಕ್ತಿಗಳಿಗೆ ಮಾತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ.

ವಿಮಾನ ಏರಿದ್ಮೇಲೆ ಒಂದು, ಇಳಿದ್ಮೇಲೆ ಇನ್ನೊಂದು: ಮಹಿಳೆಯ ಕಿರಿಕ್

ಜನರ ಮೇಲೆ ಹೊಣೆಗಾರಿಕೆ ವಹಿಸುವ ಸರ್ಕಾರದ ಚಿಂತನೆಯಲ್ಲಿದೆ ಎಂಬುದನ್ನು ಗುರುವಾರ ಹೊರಬಿದ್ದಿರುವ ಕ್ವಾರಂಟೈನ್‌ ಕುರಿತ ಆದೇಶ ಸ್ಪಷ್ಟಪಡಿಸುತ್ತದೆ. ಈ ಆದೇಶದ ಪ್ರಕಾರ ಪ್ರಸ್ತುತ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಇರುವವರಲ್ಲಿ 7 ದಿನ ರೋಗ ಲಕ್ಷಣ ಪತ್ತೆಯಾಗದಿದ್ದರೆ ಅವರಿಗೆ ಸೋಂಕು ಪರೀಕ್ಷೆ ನಡೆಸದೇ ಹೋಂ ಕ್ವಾರಂಟೈನ್‌ಗೆ ಕಳುಹಿಸಲಾಗುತ್ತದೆ. ಇದುವರೆಗೂ ಸೋಂಕು ಪರೀಕ್ಷೆ ನಡೆಸಿ ನಂತರ ಬಿಡುಗಡೆ ಮಾಡಲಾಗುತ್ತಿತ್ತು.

ಮೇ 31ರ ಬಳಿಕ ಸಾಂಸ್ಥಿಕ ಕ್ವಾರಂಟೈನ್‌ಗೆ ಸಂಪೂರ್ಣ ವಿನಾಯಿತಿ ನೀಡಲಿದೆ. ಅಂತಾರಾಜ್ಯ ಹಾಗೂ ಅಂತಾರಾಷ್ಟ್ರೀಯ ಪ್ರಯಾಣಿಕರು ರಾಜ್ಯಕ್ಕೆ ಆಗಮಿಸಿದಾಗ ತಪಾಸಣೆ ನಡೆಸಿ ಸೋಂಕು ಲಕ್ಷಣಗಳು ಇಲ್ಲದವರನ್ನು ನೇರವಾಗಿ ಹೋಂ ಕ್ವಾರಂಟೈನ್‌ಗೆ ಕಳುಹಿಸಲಾಗುವುದು. ಬಳಿಕ ಕೊರೋನಾ ವಾಚ್‌ ಆ್ಯಪ್‌ ಮೂಲಕ ಅವರ ಮೇಲೆ ನಿಗಾ ಇಡಲಾಗುವುದು ಎಂದು ಆರೋಗ್ಯ ಇಲಾಖೆ ಉನ್ನತ ಮೂಲಗಳು ತಿಳಿಸಿವೆ.

ಮಾವಿನ ಹಣ್ಣಿನಿಂದ ಕೊರೋನಾ: ತಮ್ಮ ಮಾತಿಗೆ ಸ್ಪಷ್ಟನೆ ಕೊಟ್ಟ ನಾರಾಯಣಗೌಡ್ರು...!

ಇಷ್ಟುಮಾತ್ರವಲ್ಲದೆ, ಲಾಕ್‌ಡೌನ್‌ ಮುಗಿದ ಬಳಿಕ ಬಹುತೇಕ ಕೊರೋನಾ ಸೋಂಕು ಸಮುದಾಯಕ್ಕೆ ಹರಡಬಹುದು. ಹೀಗಾಗಿ ಸೋಂಕು ಲಕ್ಷಣ ಹೊಂದಿರುವವರಿಗೆ ಮಾತ್ರ ಕೊರೋನಾ ಪರೀಕ್ಷೆ ನಡೆಸಲಾಗುವುದು. ಜತೆಗೆ ಸೋಂಕು ಲಕ್ಷಣಗಳಿದ್ದು ಸೋಂಕು ದೃಢಪಟ್ಟವರಿಗೆ ಮಾತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುವುದು. ಉಳಿದವರಿಗೆ ಚಿಕಿತ್ಸೆ ಅಗತ್ಯವಿಲ್ಲ ಎಂಬ ಮಹತ್ವದ ಮಾರ್ಗಸೂಚಿ ಹೊರತರಲೂ ರಾಜ್ಯ ಸರ್ಕಾರ ಮುಂದಾಗಿದೆ ಎಂದು ತಿಳಿದುಬಂದಿದೆ.

ಏಕೆ ಈ ನಿರ್ಧಾರ?:

ರಾಜ್ಯದ ಶೇ.88 ರಷ್ಟುಪ್ರಕರಣಗಳಿಗೆ ಸೋಂಕು ಲಕ್ಷಣ ಇಲ್ಲ. ಇಂತಹವರನ್ನು ಆಸ್ಪತ್ರೆಗೆ ದಾಖಲು ಮಾಡಿಕೊಂಡು 14 ದಿನಗಳ ಕಾಲ ಅನಗತ್ಯವಾಗಿ ಇಟ್ಟುಕೊಳ್ಳಬೇಕಾಗುತ್ತಿದೆ. ವೈರಾಣು ಸಂಶೋಧನಾ ಸಂಸ್ಥೆಗಳ ಅಧ್ಯಯನದ ಪ್ರಕಾರ ರೋಗ ಲಕ್ಷಣಗಳಿಲ್ಲದವರಿಂದ ಸೋಂಕು ಹರಡುವ ಸಾಧ್ಯತೆ ತೀರಾ ಕಡಿಮೆ. ಹೀಗಾಗಿ ಇಂತಹವರನ್ನು ಆಸ್ಪತ್ರೆಗೆ ದಾಖಲಿಸಿಕೊಂಡು ಆಸ್ಪತ್ರೆಯ ಸೌಲಭ್ಯಗಳನ್ನು ವ್ಯರ್ಥ ಮಾಡಬಾರದು ಎಂದು ರಾಜ್ಯದ ತಜ್ಞರ ಸಮಿತಿ ಸದಸ್ಯರು ಸರ್ಕಾರಕ್ಕೆ ತಿಳಿಸಿದ್ದಾರೆ.

ಅಲ್ಲದೆ ಪ್ರಸ್ತುತ ಬಹುತೇಕ ಆಸ್ಪತ್ರೆಗಳು ಕೊರೋನಾಗೆ ಮೀಸಲಿರುವುದರಿಂದ ಬಹುತೇಕ ಸರ್ಕಾರಿ ಆಸ್ಪತ್ರೆಗಳು ಸಾರ್ವಜನಿಕ ಸೇವೆಗೆ ಲಭ್ಯವಿಲ್ಲ. ಇದನ್ನು ತಡೆಯಲು ಕೇವಲ ಸೋಂಕು ಲಕ್ಷಣ ಹೊಂದಿರುವರನ್ನು ಮಾತ್ರ ಆಸ್ಪತ್ರೆಗೆ ದಾಖಲಿಸಿಕೊಳ್ಳಬೇಕು. ಜತೆಗೆ ಮುಂದೆ ಲಾಕ್‌ಡೌನ್‌ ಸಡಿಲಗೊಂಡರೆ ಹಾಸ್ಟೆಲ್‌, ಹೋಟೆಲ್‌ಗಳು ಕ್ವಾರಂಟೈನ್‌ಗೆ ಲಭ್ಯವಿರುವುದಿಲ್ಲ. ಹೀಗಾಗಿ ಸಾಂಸ್ಥಿಕ ಕ್ವಾರಂಟೈನ್‌ಗೆ ವಿನಾಯಿತಿ ನೀಡಿ ಸಂಪೂರ್ಣ ಜವಾಬ್ದಾರಿಯನ್ನು ಸಾರ್ವಜನಿಕರಿಗೆ ವಹಿಸಿ ಹೋಂ ಕ್ವಾರಂಟೈನ್‌ ಮಾಡಬೇಕು ಎಂದು ತಿಳಿಸಿದ್ದಾರೆ. ಇದಕ್ಕೆ ಸರ್ಕಾರವೂ ಸೂಕ್ತವಾಗಿ ಸ್ಪಂದಿಸಿದ್ದು, ಸದ್ಯದಲ್ಲೇ ಆದೇಶ ಹೊರಡಿಸಲಿದೆ ಎಂದು ತಜ್ಞರ ಸಮಿತಿ ಸದಸ್ಯರೊಬ್ಬರು ‘ಕನ್ನಡಪ್ರಭ’ಕ್ಕೆ ತಿಳಿಸಿದರು.

ಎಣ್ಣೆಗಾಗಿ ಸ್ನೇಹಿತನ ಕೊಲೆ: ಸಾಕ್ಷಿ ಹೇಳ್ತಾನೆ ಅಂತ ಮತ್ತೊಬ್ಬ ಫ್ರೆಂಡ್‌ನ ಕೊಂದ ಪಾಪಿಗಳು!

ಅಲ್ಲದೆ ಸೋಂಕು ನಿಯಂತ್ರಿಸುವುದು ಕೇವಲ ಸರ್ಕಾರ ಅಥವಾ ವೈದ್ಯಾಧಿಕಾರಿಗಳು, ವೈದ್ಯರ ಜವಾಬ್ದಾರಿಯಲ್ಲ. ಲಾಕ್‌ಡೌನ್‌ ಸಮಯದಲ್ಲಿ ಸರ್ಕಾರಗಳು ಸೋಂಕು ನಿಯಂತ್ರಿಸಬಹುದು. ಈ ವೇಳೆ ಸರ್ಕಾರ ಸಮರ್ಥವಾಗಿ ಜವಾಬ್ದಾರಿ ನಿಭಾಯಿಸಿ ದೊರೆತ ಸಮಯದಲ್ಲಿ ಆಸ್ಪತ್ರೆ, ಪ್ರಯೋಗಾಲಯಗಳನ್ನು ಎಲ್ಲಾ ರೀತಿಯಲ್ಲೂ ಸಜ್ಜುಗೊಳಿಸಿದೆ. ಇನ್ನು ಮುಂದೆ ತಮಗೆ ಸೋಂಕು ಬಾರದಂತೆ ತಡೆಯುವುದು ಆಯಾ ನಾಗರಿಕನಿಗೆ ಬಿಟ್ಟವಿಚಾರ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಸಾಂಸ್ಥಿಕ ಕ್ವಾರಂಟೈನ್‌ ರದ್ದು?

- ರಾಜ್ಯದಲ್ಲಿ 2,533 ಮಂದಿಗೆ ಸೋಂಕು ದೃಢಪಟ್ಟಿದೆ. ಇದರಲ್ಲಿ 283 (ಶೇ.11.17) ಮಂದಿಗೆ ಮಾತ್ರ ರೋಗ ಲಕ್ಷಣ ಇದೆ.

- ಉಳಿದ ಶೇ.88.82 ರಷ್ಟುಮಂದಿಗೆ ಸೋಂಕಿನ ಲಕ್ಷಣಗಳೇ ಇಲ್ಲ.

- ಇವರನ್ನೂ 14 ದಿನ ಆಸ್ಪತ್ರೆಯಲ್ಲಿಟ್ಟುಕೊಂಡು ಅನಗತ್ಯವಾಗಿ ಚಿಕಿತ್ಸೆ ನೀಡಬೇಕು

- ಲಕ್ಷಣಗಳಿಲ್ಲದವರಿಂದ ಸೋಂಕು ಹರಡುವ ಸಾಧ್ಯತೆ ಕಡಿಮೆ.

- ಹೀಗಾಗಿ ಇಂಥವರಿಗೆ ಸಾಂಸ್ಥಿಕ ಕ್ವಾರಂಟೈನ್‌ ಬದಲು ಹೋಂ ಕ್ವಾರಂಟೈನ್‌ ಸೂಕ್ತ ಎಂಬ ಮಾತಿದೆ.

-ಶ್ರೀಕಾಂತ್‌ ಎನ್. ಗೌಡ ಸಂದ್ರ