Asianet Suvarna News Asianet Suvarna News

Chikkamagaluru: ದತ್ತಪೀಠ ಅರ್ಚಕರು, ಸದಸ್ಯರು, ಮುಜಾವರ್‌ಗೆ ಗನ್‌ಮ್ಯಾನ್‌ ಭದ್ರತೆ

ದತ್ತಪೀಠದಲ್ಲಿ ಹಿಂದೂ ಅರ್ಚಕರಿಂದ ಹೋಮ, ಪೂಜೆ ನಡೆಸಿರುವುದಕ್ಕೆ ಮುಸ್ಲಿಂ ಸಮುದಾಯ ಅಸಮಾಧಾನ ಹೊರಹಾಕಿದೆ. ಸದ್ಯ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ.

Gunmen Security for Datta peetha priests members Mujawars gvd
Author
First Published Dec 11, 2022, 9:14 AM IST

ಚಿಕ್ಕಮಗಳೂರು (ಡಿ.11): ದತ್ತಪೀಠದಲ್ಲಿ ಹಿಂದೂ ಅರ್ಚಕರಿಂದ ಹೋಮ, ಪೂಜೆ ನಡೆಸಿರುವುದಕ್ಕೆ ಮುಸ್ಲಿಂ ಸಮುದಾಯ ಅಸಮಾಧಾನ ಹೊರಹಾಕಿದೆ. ಸದ್ಯ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಆದ್ದರಿಂದ ಶ್ರೀ ಬಾಬಾಬುಡನ್‌ ದತ್ತಾತ್ರೇಯಸ್ವಾಮಿ ದರ್ಗಾದ ವ್ಯವಸ್ಥಾಪನಾ ಸಮಿತಿಯ ಕೆಲ ಸದಸ್ಯರು, ಅರ್ಚಕರು ಹಾಗೂ ಮುಜಾವರ್‌ ಭದ್ರತೆಗೆ ಗನ್‌ಮ್ಯಾನ್‌ ಸೌಲಭ್ಯ ನೀಡಲಾಗಿದೆ. ವ್ಯವಸ್ಥಾಪನಾ ಸಮಿತಿಯಲ್ಲಿರುವ 8 ಮಂದಿಗಳ ಪೈಕಿ ಸದಸ್ಯ ಬಾಷಾ ಅವರಿಗೆ ಓರ್ವ ಗನ್‌ಮ್ಯಾನ್‌ ನೀಡಿರುವ ಜತೆಗೆ ಅವರ ಮನೆಯ ಬಳಿ ಡಿಎಆರ್‌ ತುಕಡಿ ನಿಯೋಜಿಸಲಾಗಿದೆ. ವ್ಯವಸ್ಥಾಪನಾ ಸಮಿತಿಯ ಇನ್ನೊಬ್ಬ ಸದಸ್ಯರಾದ ಅತ್ತಿಗುಂಡಿಯ ಸತೀಶ್‌, ಅರ್ಚಕರಾದ ಸಂದೀಪ್‌, ಶ್ರೀಧರ್‌, ಮುಜಾವರ್‌ಗಳಾದ ಮಹಮದ್‌ ಇಸ್ಮಾಯಿಲ್‌ ಅವರಿಗೂ ಸಹ ಗನ್‌ ಮ್ಯಾನ್‌ ವ್ಯವಸ್ಥೆ ಕಲ್ಪಿಸಲಾಗಿದೆ.

ತ್ರಿಕಾಲ ಪೂಜೆ: ವ್ಯವಸ್ಥಾಪನಾ ಸಮಿತಿ ದತ್ತ ಜಯಂತಿ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಇಬ್ಬರು ಅರ್ಚಕರನ್ನು ನೇಮಕ ಮಾಡಿತ್ತು. ಮೂರು ದಿನಗಳ ದತ್ತಜಯಂತಿಗೆ ಡಿ.8ರಂದು ತೆರೆಬಿದ್ದಿದೆ. ಆದರೆ, ದತ್ತ ಜಯಂತಿಯ ನಂತರವೂ ಕೂಡ ಅಂದರೆ, ಶುಕ್ರವಾರದಿಂದ ದತ್ತಪೀಠದಲ್ಲಿ ತಾತ್ಕಾಲಿಕ ಅರ್ಚಕರಿಂದ ತ್ರಿಕಾಲ ಪೂಜೆ ನಡೆಯುತ್ತಿದೆ. ದತ್ತಪೀಠಕ್ಕೆ ಹಿಂದೂ ಅರ್ಚಕರನ್ನು ನೇಮಕ ಮಾಡಬೇಕು, ಅವರಿಂದ ತ್ರಿಕಾಲ ಪೂಜೆ ನಡೆಸಬೇಕೆಂಬ ಸಂಘ ಪರಿವಾರದ ಪ್ರಮುಖ ಬೇಡಿಕೆಗಳು ಈಡೇರಿವೆ. ಈ ಬೆಳವಣಿಗೆಗಳಿಂದ ಮುಸ್ಲಿಂ ಸಮುದಾಯ ಅಸಮಾಧಾನ ವ್ಯಕ್ತಪಡಿಸಿರುವ ಹಿನ್ನೆಲೆ ಮುಂಜಾಗ್ರತೆ ವಹಿಸಲಾಗಿದೆ.

ದತ್ತಜಯಂತಿಗೆ ಶಾಂತಿಯುತ ತೆರೆ, ಪೊಲೀಸ್ ಸರ್ಪಗಾವಲಿನಲ್ಲಿ ಭಕ್ತರಿಂದ ದತ್ತಪಾದುಕೆ ದರ್ಶನ

ಗೊಂದಲ: ದತ್ತಪೀಠದಲ್ಲಿ ಫಾತ್ಯ (ಮುಸ್ಲಿಂ ಸಮುದಾಯದ ಪೂಜಾ ಪದ್ಧತಿ) ನಡೆಸಲು ಮುಜರಾಯಿ ಇಲಾಖೆಯಿಂದ ಅಖಿಲ್‌ ಪಾಷಾ ಹಾಗೂ ಮಹಮದ್‌ ಇಸ್ಲಾಮಿಲ್‌ ಅವರನ್ನು ನೇಮಕ ಮಾಡಲಾಗಿದೆ. ದತ್ತ ಜಯಂತಿಯ ದಿನದಂದು ದತ್ತಪೀಠದಿಂದ ಮುಜಾವರ್‌ ಅವರನ್ನು ಬಲವಂತವಾಗಿ ದತ್ತಪೀಠದಿಂದ ಹೊರಗೆ ಕಳುಹಿಸಲಾಗಿದೆ ಎಂಬುದು ಮುಸ್ಲಿಂ ಸಮುದಾಯದ ಆರೋಪ. ಈ ಸಂಬಂಧ ಸಮುದಾಯದ ಮುಖಂಡರು ಜಿಲ್ಲಾಧಿಕಾರಿಗೆ ಮನವಿ ಸಹ ಸಲ್ಲಿಸಿದ್ದಾರೆ.

ಅರ್ಚಕರು ಮತ್ತು ಮೌಲ್ವಿಗಳ ಮಧ್ಯೆ ಕಿರಿಕ್: ಚಿಕ್ಕಮಗಳೂರು ಜಿಲ್ಲೆಯ ವಿವಾದಿತ ಕೇಂದ್ರ ದತ್ತಪೀಠಕ್ಕೆ ಆಡಳಿತ ಸಮಿತಿ ರಚಿಸಿ ವಾರವೂ ಕಳೆದಿಲ್ಲ. ಗುಹೆಯಲ್ಲಾಗ್ಲೇ ಅರ್ಚಕರು-ಮೌಲ್ವಿಗಳ ಮಧ್ಯೆ  ಕಿರಿಕ್ ಉಂಟಾಗಿದೆ. ಮೈಲಿಗೆ ಆಗುತ್ತೆ ಎಂದು ಅರ್ಚಕರು ಮೌಲ್ವಿಗಳಿಗೆ ಪೂಜೆ ಮಾಡೋದಕ್ಕೆ ಬಿಡ್ತಿಲ್ವಂತೆ. ಸರ್ಕಾರ ಅರ್ಚಕರನ್ನ ನೇಮಿಸಿದ್ದು 3 ದಿನಕಷ್ಟೆ, ಕೂಡಲೇ ಅರ್ಚಕರ ನೇಮಕವನ್ನ ರದ್ದು ಮಾಡ್ಬೇಕು ಅಂತ ಕೋಮು ಸೌಹಾರ್ದ ವೇದಿಕೆ ಆಗ್ರಹಿಸಿದ್ರೆ, ಆಡಳಿತ ಮಂಡಳಿಯ ಮುಸ್ಲಿಂ ಸದಸ್ಯ ಅಲ್ಲಿ ಏನೂ ಆಗಿಲ್ಲ. ಪ್ರಚಾರಕ್ಕೆ ಹೀಗೆಲ್ಲಾ ಮಾಡ್ತಾರೆ ಅಂತಿದ್ದಾರೆ. ಸರ್ಕಾರ ಮುಂಜಾಗೃತ ಕ್ರಮವಾಗಿ ಅರ್ಚಕರು, ಆಡಳಿತ ಮಂಡಳಿಯ ಸದಸ್ಯನಿಗೆ ಗನ್ ಮ್ಯಾನ್ ಕೊಟ್ಟಿದೆ. ಕಾಫಿನಾಡ ದತ್ತಪೀಠದ ವಿವಾದ ಸದ್ಯಕ್ಕೇನು ತಣ್ಣಗಾಗುವಂತೆ ಕಾಣ್ತಿಲ್ಲ. 

ಚಿಕ್ಕಮಗಳೂರಲ್ಲಿ ದತ್ತಜಯಂತಿಯ ಶೋಭಾಯಾತ್ರೆ ಸಂಭ್ರಮ

ಕೋಮು ಸೌಹಾರ್ದ ವೇದಿಕೆ ವಿವಾದದ ಕಿಡಿ?: 47 ವರ್ಷಗಳ ಹೋರಾಟದ ಫಲವಾಗಿ ಚಿಕ್ಕಮಗಳೂರಿನ ದತ್ತಪೀಠಕ್ಕೆ ಹಿಂದೂ ಅರ್ಚಕರ ನೇಮಕವಾಯ್ತು ಅಂತ ಹಿಂದೂ ಸಮುದಾಯ ಖುಷಿಯಾಗಿತ್ತು. ಆದ್ರೆ, ಮುಸ್ಲಿಂ ಸಮುದಾಯ ಇದು ಕಾನೂನು ಉಲ್ಲಂಘನೆ. ಏಕಸ್ವಾಮ್ಯ ನಿರ್ಧಾರ ಅಂತೆಲ್ಲಾ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿತ್ತು. ಈ ಮಧ್ಯೆ ಹೊಸದೊಂದು ವಿವಾದ ತಲೆದೂರಿದ್ದು, ದತ್ತಪೀಠದಲ್ಲಿ ಅರ್ಚಕರು ಮೈಲಿಗೆ ಆಗುತ್ತೆ ಎಂದು ಮೌಲ್ವಿಗಳಿಗೆ ಪೂಜೆ ಮಾಡೋದಕ್ಕೆ ಬಿಡುತ್ತಿಲ್ಲ ಎಂದು ಕೋಮು ಸೌಹಾರ್ದ ವೇದಿಕೆ ಆರೋಪಿಸಿದೆ.

Follow Us:
Download App:
  • android
  • ios