Asianet Suvarna News Asianet Suvarna News

ಚಿಕ್ಕಮಗಳೂರಲ್ಲಿ ದತ್ತಜಯಂತಿಯ ಶೋಭಾಯಾತ್ರೆ ಸಂಭ್ರಮ

ದಾಖಲೆ ಸಂಖ್ಯೆಯಲ್ಲಿ ಸೇರಿದ ಮಾಲಾಧಾರಿಗಳು, ಭಕ್ತರು, ಸಾರ್ವಜನಿಕರು ವಿರಾಟ್ ಹಿಂದೂ ಶಕ್ತಿಯನ್ನು ಪ್ರದರ್ಶಿಸಿದರು. ಯುವಕ-ಯುವತಿಯರ ಉತ್ಸಾಹಕ್ಕೆ ಎಲ್ಲೆಯೇ ಇರಲಿಲ್ಲ. ಎಲ್ಲರ ಬಾಯಲ್ಲೂ ಕೇಳಿಬಂದ ದತ್ತಪೀಠ ನಮ್ಮದೆಂಬ ಘೋಷಣೆ ಮುಗಿಲು ಮುಟ್ಟಿತು. 

Dattajayanti Shobha Yatra Held in Chikkamagaluru grg
Author
First Published Dec 7, 2022, 9:03 PM IST

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು(ಡಿ.07): ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ ಆಯೋಜಿಸಿರುವ 3 ದಿನಗಳ ದತ್ತಜಯಂತಿಯ ಎರಡನೇ ದಿನವಾದ ಇಂದು(ಬುಧವಾರ) ಚಿಕ್ಕಮಗಳೂರಿನಲ್ಲಿ ಬೃಹತ್ ಶೋಭಾಯಾತ್ರೆ ನಡೆಯಿತು. ಬರೀ ದತ್ತಮಾಲಾಧಾರಿಗಳು ಮಾತ್ರವಲ್ಲ, ಸಾರ್ವಜನಿಕರು ಅದರಲ್ಲೂ ಮಹಿಳೆಯರು ಸಾವಿರಾರು ಸಂಖ್ಯೆಯಲ್ಲಿ ಈ ಬಾರಿ ಪಾಲ್ಗೊಂಡಿದ್ದರು. ಬರೀ ಭಾಗವಹಿಸಿರುವುದು ಮಾತ್ರವಲ್ಲ, ಡಿಜೆಯ ಮ್ಯೂಜಿಕ್ ಕಲ್ಲರ್ ಲೈಟಿಗ್ಗೆ ದಾರಿಯ ಉದ್ದಕ್ಕೂ ಕುಣಿದರು, ಪುರುಷರಿಗೆ ಹೋಲಿಕೆ ಮಾಡಿದರೆ ಮಹಿಳೆಯರು ಡಿಜೆಯ ಸದ್ದಿಗೆ ಹೆಜ್ಜೆ ಹಾಕಿದರು. ವಯಸ್ಸಿನ ಅಂತರವೇ ಇಲ್ಲದೆ ಜನರು ಕುಣಿದು ಕುಪ್ಪಳಿಸಿದರು. 

ವಿರಾಟ್ ಹಿಂದೂ ಶಕ್ತಿಯ ಪ್ರದರ್ಶನ 

ದಾಖಲೆ ಸಂಖ್ಯೆಯಲ್ಲಿ ಸೇರಿದ ಮಾಲಾಧಾರಿಗಳು, ಭಕ್ತರು, ಸಾರ್ವಜನಿಕರು ವಿರಾಟ್ ಹಿಂದೂ ಶಕ್ತಿಯನ್ನು ಪ್ರದರ್ಶಿಸಿದರು. ಯುವಕ-ಯುವತಿಯರ ಉತ್ಸಾಹಕ್ಕೆ ಎಲ್ಲೆಯೇ ಇರಲಿಲ್ಲ. ಎಲ್ಲರ ಬಾಯಲ್ಲೂ ಕೇಳಿಬಂದ ದತ್ತಪೀಠ ನಮ್ಮದೆಂಬ ಘೋಷಣೆ ಮುಗಿಲು ಮುಟ್ಟಿತು. ಬಸವನಹಳ್ಳಿ ಮುಖ್ಯರಸ್ತೆಯ ಶಂಕರ ಮಠದಿಂದ ಮತ್ತೊಂದು ತುದಿಯ ಆಜಾದ್ ಪಾರ್ಕ್ ಸರ್ಕಲ್ವರೆಗೆ ನದಿಯಂತೆ ಹರಿದುಬಂದ ಕೇಸರಿ ಕಲರವ ನೋಡುಗರನ್ನು ದಿಗ್ಭ್ರಮೆಗೊಳಿಸಿತು.ಶೋಭಾಯಾತ್ರೆಯ ಇತಿಹಾಸದಲ್ಲಿ ಕಂಡು ಕೇಳರಿಯದ ಜನಸ್ತೋಮವನ್ನು ಕಂಡು ಇಡೀ ನಗರ ನಿಬ್ಬೆರಗಾಯಿತು. ಬಲಿಷ್ಠ ಹಿಂದೂ ಸಂಘಶಕ್ತಿಯನ್ನು ಅನಾವರಣಗೊಳಿಸಿದ ಜನತೆ ದಾರಿಯುದ್ಧಕ್ಕೂ ಯಾವ ಬೇಧ-ಭಾವವೂ ಇಲ್ಲದೆ ಬೆರೆತು ಕುಣಿದು ಕುಪ್ಪಳಿಸಿದರು.ಮಾರ್ಗದುದ್ದಕ್ಕೂ ದತ್ತಾತ್ರೇಯರು, ಶ್ರೀರಾಮ, ಆಂಜನೇಯ, ಭಾರತ ಮಾತೆಯ ಘೋಷಣೆಗಳು ಕಿವಿ ಗಡಚಿಕ್ಕುವಂತೆ ಕೇಳಿಬಂತು. ಬೃಹದಾಕಾರವಾದ ಭಗವಾಧ್ವಜಗಳನ್ನು ಬಾನಗಲಕ್ಕೆ ಬೀಸಿದ ಮಕ್ಕಳು, ಯುವಕರು ಶೋಭಾಯಾತ್ರೆಗೆ ರಂಗು ತುಂಬಿದರು.

ದತ್ತಪೀಠಕ್ಕೆ ಸುನೀಲ್ ಕುಮಾರ್ ಭೇಟಿ; ದತ್ತಪಾದುಕೆ ದರ್ಶನ

ಕಲಾ ತಂಡಗಳ ಸೊಬಗು

ನಾಡಿನ ಸಂಸ್ಕೃತಿಯನ್ನು ಬಿಂಬಿಸವ ಹತ್ತಕ್ಕೂ ಹೆಚ್ಚು ಕಲಾತಂಡಗಳು ಶೋಭಾಯಾತ್ರೆಯ ಸೊಬಗನ್ನು ಹೆಚ್ಚಿಸಿದವು. ಸಾವಿರಾರು ಭಕ್ತರಿಂದ ಕಿಕ್ಕಿರಿದು ತುಂಬಿದ್ದ ಎಂಜಿ ರಸ್ತೆಯಲ್ಲಿ ಕೇಸರಿ ನದಿ ಹರಿಯುತ್ತಿರುವಂತೆ ಭಾಸವಾಯಿತು. 
ಕಣ್ತುಂಬಿಕೊಳ್ಳಲು ಮುಗಿಬಿದ್ದರು

ಭಗವಾಧ್ವಜಗಳನ್ನು ಬೀಸುತ್ತಾ, ಹೆಗಲಮೇಲೆ ದತ್ತಾತ್ರೇಯರ ಅಡ್ಡೆಯನ್ನು ಕುಣಿಸುತ್ತಾ, ಚಂಡೆ ಮದ್ದಲೆ, ಭಾಜಾ ಭಜಂತ್ರಿಗಳಿಗೆ ಹೆಜ್ಜೆ ಹಾಕುತ್ತಾ, ಕ್ಷಣಕ್ಕೂ ಬಿಡುವು ನೀಡದೆ ಘೋಷಣೆಗಳನ್ನು ಕೂಗುತ್ತಾ ಸಾಗಿಬಂದ ವರ್ಣರಂಜಿತ ಮೆರವಣಿಗೆಯನ್ನು ಕಣ್ತುಂಬಿಕೊಳ್ಳಲು ಇಡೀ ನಗರದ ಜನತೆ ಎಂಜಿ ರಸ್ತೆ, ಹನುಮಂತಪ್ಪ ಸರ್ಕಲ್, ಆಜಾದ್ ವೃತ್ತಗಳಲ್ಲಿ ಕಿಕ್ಕಿರಿದು ಸೇರಿದ್ದರು. ರಸ್ತೆಯ ಇಕ್ಕೆಲಗಳಲ್ಲಿ ಕಟ್ಟಡದ ಮಹಡಿಗಳ ಮೇಲೆ ನಿಂತು ವೀಕ್ಷಿಸಿದ್ದಲ್ಲದೆ ಅಲ್ಲಿಂದಲೇ ಯುವ ಶಕ್ತಿಯನ್ನು ಹುರಿದುಂಬಿಸಿದರು.ಬೆಳ್ತಂಗಡಿಯ ಬೊಂಬೆ, ನಾಸಿಕ್ ಡೊಳ್ಳು, ಕಂಸಾಳೆ, ವೀರಭದ್ರ ಕುಣಿತ, ಗೊರವರ ಕುಣಿತ, ಕೊಂಬು ಕಹಳೆ, ನಂದಿಧ್ವಜ, ಪೂಜಾ ಕುಣಿತ, ಡೊಳ್ಳು ಕುಣಿತ, ಸೋಮನ ಕುಣಿತ, ಹಾಗೂ ಡಿಜೆಗಳು ಶೋಭಾಯಾತ್ರೆಯ ಸೊಬಗನ್ನು ಹೆಚ್ಚಿಸಿದ್ದವು.ಶಾಸಕ ಸಿ.ಟಿ.ರವಿ ಹಾಗೂ ಸಚಿವ ವಿ.ಸುನೀಲ್ ಕುಮಾರ್ ಮಧ್ಯಾಹ್ನ 4 ಗಂಟೆ ವೇಳೆಗೆ ಕಾಮಧೇನು ಗಣಪತಿ ದೇವಸ್ಥಾನದ ಬಳಿ ಶೋಭಾಯಾತ್ರೆಗೆ ಚಾಲನೆ ನೀಡಿದರು. ಮೆರವಣಿಗೆ ಆರಂಭವಾಗಿ ನೋಡ ನೋಡುತ್ತಿದ್ದಂತೆ ಭಕ್ತರ ಸಂಖ್ಯೆ ಸಾಗರದಷ್ಟಾಯಿತು. ದತ್ತಾತ್ರೇಯರ ಮೂರ್ತಿಯನ್ನೊಳಗೊಂಡ ಭವ್ಯ ಪ್ರಭಾವಳಿಯೊಂದಿಗೆ ಸಾವಿರಾರು ಭಕ್ತರು ದತ್ತಾತ್ರೇಯರಿಗೆ ಜೈಕಾರ ಹಾಕುತ್ತ ಮುಂದಡಿ ಇಟ್ಟರು.

ಸಂಘಟಕರು ಭಾಗಿ

ವಿಶ್ವಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಶ್ರೀಕಾಂತ್ ಪೈ, ಉಪಾಧ್ಯಕ್ಷ ಯೋಗೀಶ್ ರಾಜ್ ಅರಸ್, ಬಜರಂಗದಳ ವಿಭಾಗೀಯ ಸಹ ರಘು ಸಕಲೇಶಪುರ, ಆರ್.ಡಿ.ಮಹೇಂದ್ರ ಮತ್ತಿತರರು ಉಸ್ತುವಾರಿ ವಹಿಸಿದ್ದರು. ಇಂಧನ ಸಚಿವ ವಿ.ಸುನೀಲ್ ಕುಮಾರ್, ಶಾಸಕರು, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ವಿಧಾನ ಪರಿಷತ್ ಸದಸ್ಯ ಎಂ.ಕೆ.ಪ್ರಾಣೇಶ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಿ.ಎನ್.ಜೀವರಾಜ್ ಸೇರಿದಂತೆ ಬಿಜೆಪಿ ಚುನಾಯಿತ ಪ್ರತಿನಿಧಿಗಳು, ಮುಖಂಡರು, ಕಾರ್ಯಕರ್ತರು ಮೆರವಣಿಗೆಯಲ್ಲಿ ಭಾಗವಹಿಸಿದರು.

ಪೊಲೀಸ್ ಸರ್ಪಗಾವಲು

ಶೋಭಾಯಾತ್ರೆಗೆ ಸಾವಿರಾರು ಪೊಲೀಸರ ಬಿಗಿ ರಕ್ಷಣೆ ಒದಗಿಸಲಾಗಿತ್ತು. ಕ್ಷಿಪ್ರ ಕಾರ್ಯಾಚರಣೆ ಪಡೆ ಸಿಬ್ಬಂಧಿಗಳು ಸೇರಿದಂತೆ ಹೊರ ಜಿಲ್ಲೆಗಳಿಂದ ಆಗಮಿಸಿದ್ದ ಸಿಬ್ಬಂಧಿಗಳನ್ನು ಮೆವಣಿಗೆಯ ಎರಡೂ ಬದಿಯಲ್ಲಿ ನೇಮಿಸಲಾಗಿತ್ತು.

ನನ್ನನ್ನು ಮುಲ್ಲಾಅಂತಾ ಕರೆದರೆ ಮುಲ್ಲಾಗಳು ಒಪ್ಪಿಕೊಳ್ಳಲ್ಲ: ಸಿ.ಟಿ.ರವಿ

ದತ್ತ ಜಯಂತಿಗೆ ತೆರೆ

ಮೂರು ದಿನಗಳ ದತ್ತ ಜಯಂತಿಗೆ ನಾಳೆ ತೆರೆ ಬೀಳಲಿದೆ.ಡಿಸೆಂಬಂರ್ 6 ರಂದು ಚಿಕ್ಕಮಗಳೂರಿನಲ್ಲಿ ಸಂಕೀರ್ತನಾ ಯಾತ್ರೆ, ಡಿಸೆಂಬರ್ 7 ರಂದು ಶೋಭಯಾತ್ರೆ ಸಂಘ ಪರಿವಾರದ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದೆ. ಡಿಸೆಂಬರ್ 8 ರಂದು ದತ್ತಪೀಠದಲ್ಲಿ ದತ್ತಜಯಂತಿ ನಡೆಯಲಿದೆ.ದತ್ತಮಾಲೆಯನ್ನು ಧರಿಸಿರುವ ಸುಮಾರು 30ಸಾವಿರ ದತ್ತಭಕ್ತರು ದತ್ತಪೀಠಕ್ಕೆ ಆಗಮಿಸಲಿದ್ದಾರೆ ಎಂದು ಭಜರಂಗದಳ ಅಂದಾಜು ಮಾಡಿದೆ. ಆದರೆ, ಸಂಕೀರ್ತನಾ ಯಾತ್ರೆ, ಶೋಭಾಯಾತ್ರೆಗೆ ನಿರೀಕ್ಷೆಗೂ ಮೀರಿ ಜನರು ಬಂದಿದ್ದರಿಂದ ದತ್ತಜಯಂತಿಗೂ ನಿರೀಕ್ಷೆಗಿಂತ ಹೆಚ್ಚು ಜನರು ಬರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಪೊಲೀಸ್ ಅಧಿಕಾರಿಗಳು ಮೊಕ್ಕಂ

ಇತ್ತೀಚಿನ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಂದರೆ ಸುಮಾರು ೩೫೦೦ ಪೊಲೀಸರನ್ನು ನಿಯೋಜಿಸಲಾಗಿದೆ.ಬಂದೋಬಸ್ತಿಗೆ ಪೊಲೀಸರಿಗೆ ನಿಯೋಜನೆ ಸಹಜ. ಆದರೆ, ಎಡಿಜಿಪಿ (ಕಾನೂನು ಮತ್ತು ಸುವ್ಯವಸ್ಥೆ) ಅಲೋಕ್ ಕುಮಾರ್, ಪಶ್ಚಿಮ ವಲಯದ ಐಜಿಪಿ ಗಗನ್ ದೀಪ್ ಚಿಕ್ಕಮಗಳೂರಿನಲ್ಲಿ ಮೊಕ್ಕಂ ಹೂಡಿದ್ದಾರೆ. ನಿನ್ನೆಯೇ ಆಗಮಿಸಿರುವ ಅವರು ಇಂದು ನಗರದಾದ್ಯಂತ ಸಂಚರಿಸಿ ಪರಿಸ್ಥಿತಿಯನ್ನು ಅವಲೋಕಿಸಿದರು. ಶೋಭಾಯಾತ್ರೆ ಸಾಗುವ ಮಾರ್ಗದಲ್ಲಿ  ಸ್ವತಃ ಅಲೋಕ್ಕುಮಾರ್ ಹಾಗೂ ಗಗನ್ ದೀಪ್ ಅವರು ನಿಂತು ಬಂದೋಬಸ್ತ್ ವ್ಯವಸ್ಥೆಯನ್ನು ವೀಕ್ಷಿಸಿದರು. ಜಿಲ್ಲಾ ರಕ್ಷಾಣಾಧಿಕಾರಿ ಉಮಾ ಪ್ರಶಾಂತ್ ಅವರಿಂದ ಆಗಾಗ ಮಾಹಿತಿಯನ್ನು ಪಡೆಯುತ್ತಿದ್ದರು.ಈ ಬಾರಿ ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿರುವ ಜನ ಸ್ತೋಮ, ಸಂಘಪರಿವಾರದ ಮಾತ್ರವಲ್ಲ ಪೊಲೀಸ್ ಇಲಾಖೆಯ ಲೆಕ್ಕಚಾರವನ್ನು ತಲೆ ಕೆಳ ಮಾಡಿದೆ.
 

Follow Us:
Download App:
  • android
  • ios