Datta Jayanti: ದತ್ತಜಯಂತಿಗೆ ಶಾಂತಿಯುತ ತೆರೆ, ಪೊಲೀಸ್ ಸರ್ಪಗಾವಲಿನಲ್ಲಿ ಭಕ್ತರಿಂದ ದತ್ತಪಾದುಕೆ ದರ್ಶನ
ಕಾಫಿನಾಡಿನ ಧಾರ್ಮಿಕ ಹಾಗೂ ವಿವಾದಿತ ಪ್ರದೇಶ ದತ್ತಪೀಠದಲ್ಲಿ ಮೂರು ದಿನಗಳಿಂದ ನಡೆಯುತ್ತಿದ್ದ ದತ್ತಜಯಂತಿಗೆ ಇಂದು ಶಾಂತಿಯುತ ತೆರೆಬಿದ್ದಿದೆ. ಪೊಲೀಸ್ ಸರ್ಪಗಾವಲಿನಲ್ಲಿ ದತ್ತಭಕ್ತರಿಂದ ದತ್ತಪಾದುಕೆ ದರ್ಶನ.
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ಡಿ,8): ಕಾಫಿನಾಡಿನ ಧಾರ್ಮಿಕ ಹಾಗೂ ವಿವಾದಿತ ಪ್ರದೇಶ ದತ್ತಪೀಠದಲ್ಲಿ ಮೂರು ದಿನಗಳಿಂದ ನಡೆಯುತ್ತಿದ್ದ ದತ್ತಜಯಂತಿಗೆ ಇಂದು ಶಾಂತಿಯುತ ತೆರೆಬಿದ್ದಿದೆ. ಮಾಗಿಯ ಚಳಿಯಲ್ಲೂ ಬೆಳಗ್ಗಿನಿಂದಲೇ ಸಾವಿರಾರು ಭಕ್ತರು ಭಾರೀ ಭದ್ರತೆ ನಡುವೆ ದತ್ತಪಾದುಕೆ ದರ್ಶನ ಪಡೆದು ಪುನೀತರಾದ್ರು. ಶ್ರೀ ಗುರುದತ್ತಾತ್ರೇಯ ಪೀಠ ಆವರಣದ ತುಳಸಿಕಟ್ಟೆ ಬಳಿ ಹಿಂದೂ ಅರ್ಚಕರ ಸಮ್ಮುಖದಲ್ಲಿ ಹೋಮ ಹವನಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್, ಶಾಸಕ ಸಿ.ಟಿ.ರವಿ, ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಪಾಲ್ಗೊಂಡು ಸಂಕಲ್ಪ ಮಾಡುವ ಮೂಲಕ ದತ್ತ ಜಯಂತಿ ಶಾಂತಯುತ ತೆರೆ ಎಳೆಯಲಾಯಿತು. ವಿಶ್ವಹಿಂದೂ ಪರಿಷದ್ ಹಾಗೂ ಬಜರಂಗದಳ ಚಿಕ್ಕಮಗಳೂರು ತಾಲೂಕಿನ ಶ್ರೀ ಗುರು ದತ್ತಾತ್ರೇಯ ಪೀಠದಲ್ಲಿ ಗುರುವಾರ ಆಯೋಜಿಸಿದ್ದ ಶ್ರೀ ದತ್ತ ಜಯಂತಿ ಅಭಿಯಾನದಲ್ಲಿ ಪೀಠದ ಆವರಣದಲ್ಲಿ ವಿವಿಧ ಮಠಾಧೀಶರ ಸಾನಿಧ್ಯದಲ್ಲಿ ಜನಪ್ರತಿನಿಧಿಗಳು, ಜಿಲ್ಲಾಡಳಿತದ ಉಪಸ್ಥಿತಿಯಲ್ಲಿ ಹಿಂದೂ ಪದ್ದತಿಯಂತೆ ಹೋಮ, ಹವನ ಪೂರ್ಣಾಹುತಿ ನೆರವೇರಿಸುವ ಮೂಲಕ ಎರಡು ದಶಕಗಳ ನಂತರ ಪೀಠದ ಆವರಣದಲ್ಲೆ ಧಾರ್ಮಿಕ ಕೈಂಕರ್ಯಗಳು ಮತ್ತೆ ಮರುಕಳಿಸಿದ್ದು ವಿಶೇಷವಾಗಿತ್ತು.
ರಾಜ್ಯ ಸರ್ಕಾರ ತಾತ್ಕಾಲಿಕವಾಗಿ ನೇಮಿಸಿರುವ ಅರ್ಚಕರಾದ ಡಾ.ಸಂದೀಪ್ ಶರ್ಮ ಹಾಗೂ ಶೃಂಗೇರಿ ಕೆ.ಶ್ರೀಧರ್ ಭಟ್ ನೇತೃತ್ವದಲ್ಲಿ ಕಳೆದ ಮೂರು ದಿನಗಳಿಂದ ಶ್ರೀ ದತ್ತಾತ್ರೇಯ ಮೂಲಮಂತ್ರ ಹೋಮ, ಸುದರ್ಶನ ಹೋಮ ನೆರವೇರಿಸಿದ್ದು ಇಂದು ಬೆಳಗ್ಗೆ ಗುಹಾಂತರ ದೇವಾಲಯದ ಪೀಠದ ಗರ್ಭಗುಡಿಯಲ್ಲಿ ದತ್ತ ಪಾದುಕೆಗೆ ಮಹನ್ಯಾಸ ಪೂರ್ವಕ ರುದ್ರಾಭಿಷೇಕ, ಅರ್ಚನೆ, ಕಲಾನ್ಯಾಸ, ಆವಾಹನೆ, ಆರಾಧನೆ, ಪ್ರಾಣ ಪ್ರತಿಷ್ಠಾಪನೆ ಮಾಡುವ ಮೂಲಕ ವಿಶೇಷ ಪೂಜಾ ವಿಧಾನಗಳು ನೆರವೇರಿಸಿದರು.
ಸಚಿವ ಬೈರತಿ ಬಸವರಾಜ್, ಶಾಸಕ ಸಿ.ಟಿ.ರವಿ ಯಜ್ಞಯಾಗಾದಿಗಳಲ್ಲಿ ಪಾಲ್ಗೊಂಡು ನಿರಂತರವಾಗಿ ಹಿಂದೂ ಸಂಪ್ರದಾಯದಲ್ಲೆ ಪೂಜಾ ಪದ್ದತಿಗಳು ನಡೆಯಬೇಕೆಂದು ಮಹಾ ಸಂಕಲ್ಪ ಮಾಡಿದರು. ಪ್ರದೀಪ್ ಭಟ್, ಪ್ರವೀಣ್ ಖಾಂಡ್ಯ, ಸುಮಂತ್ ನೇತೃತ್ವದಲ್ಲಿ ಹೋಮ ನೆರವೇರಿಸಿದರು. ಯಳನಾಡು ಶ್ರೀ ಜ್ಞಾನಪ್ರಭು ರಾಜದೇಶೀಕೇಂದ್ರ ಸ್ವಾಮೀಜಿ, ಶಂಕರ ದೇವರ ಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ವಿಶ್ವಧರ್ಮ ಪೀಠದ ಶ್ರೀ ಜಯಬಸವಾನಂದ ಸ್ವಾಮೀಜಿ, ಬೀರೂರು ಶ್ರೀ ರಂಭಾಪುರಿ ಮಠದ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ , ಬಜರಂಗದಳ ರಾಷ್ಟ್ರೀಯ ಸಹ ಸಂಯೋಜಕ ಸೂರ್ಯನಾರಾಯಣ್, ಅಖಿಲ ಭಾರತ ವಿಎಚ್ಪಿ ಸಹಕಾರ್ಯದರ್ಶಿ ಅಂಬರೀಶ್ ಪಾಲ್ಗೊಂಡಿದ್ದರು.
ಇರುಮುಡಿ ಹೊತ್ತು ಆಗಮಿಸಿದ ದತ್ತ ಭಕ್ತರು
ಬೆಳಗ್ಗೆ ಶಾಸಕರಾದ ಸಿ.ಟಿ.ರವಿ, ಡಿ.ಎಸ್.ಸುರೇಶ್, ನಗರಸಭೆ ಅಧ್ಯಕ್ಷ ವರಸಿದ್ದಿವೇಣುಗೋಪಾಲ್, ಎಚ್.ಡಿ.ತಮ್ಮಯ್ಯ ಸೇರಿದಂತೆ ಹಲವರು ಇರುಮುಡಿ ಹೊತ್ತು ಹೊನ್ನಮ್ಮನ ಹಳ್ಳದಿಂದ ದತ್ತನಾಮ ಸ್ಮರಣೆಯೊಂದಿಗೆ ಭಜನೆ ಮಾಡುತ್ತಾ ದತ್ತಪೀಠಕ್ಕೆ ಆಗಮಿಸಿದರು. ಯುವಕರು, ಮಹಿಳೆಯರು ಮಕ್ಕಳು, ವೃದ್ದರಾದಿಯಾಗಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಭಕ್ತ ಸಮೂಹ ಬಿಗಿ ಪೊಲೀಸ್ ಭದ್ರತೆಯಲ್ಲಿ ಕಬ್ಬಿಣದ ಬ್ಯಾರಿಕೇಡ್ ಮೂಲಕ ಸಾಲಿನಲ್ಲಿ ಸಾಗಿ ಗುಹಾಂತರ ದೇವಾಲಯದ ಗರ್ಭಗುಡಿಯಲ್ಲಿದ್ದ ದತ್ತ ಪಾದುಕೆ ದರ್ಶನ ಪಡೆದು ಧನ್ಯರಾದರು.ಶಾಸಕ ಸಿ.ಟಿ.ರವಿ ಸೇರಿದಂತೆ ಮಾಲಾಧಾರಿಗಳು ಪಾದುಕೆ ದರ್ಶನದ ನಂತರ ಪೀಠದ ಹೊರ ಆವರಣದ ಶೆಡ್ನಲ್ಲಿ ಇರುಮುಡಿ ಹೊತ್ತು ತಂದಿದ್ದ ಅಕ್ಕಿ, ಬೆಲ್ಲ, ಕಾಯಿ, ಹಣ್ಣು ಇತ್ಯಾದಿ ಹರಿಕೆ ಕಾಣಿಕೆಗಳನ್ನು ಅರ್ಪಿಸಿ ಮಾಲೆ ವಿಸರ್ಜಿಸಿದ ನಂತರ ದತ್ತಾತ್ರೇಯರ ಮೂರ್ತಿಗೆ ಪೂಜೆ ಸಲ್ಲಿಸಿ ಕೃತಾರ್ಥಭಾವ ಮೆರೆದರು. ನಂತರ ಅದೇ ಸ್ಥಳದಲ್ಲಿ ನಡೆದ ಹೋಮ ಧಾರ್ಮಿಕ ಕಾರ್ಯಗಳಲ್ಲೂ ಪಾಲ್ಗೊಂಡರು.
ಟ್ರಾಫಿಕ್ ಜಾಮ್: ಬೆಳಗ್ಗಿನಿಂದಲೇ ಭಕ್ತರು ಪೀಠಕ್ಕೆ ಆಗಮಿಸಲು ಆರಂಭಿಸಿದ್ದು ಮಧ್ಯಾಹ್ನದ ವರೆಗೂ ಸುಗಮವಾಗಿ ಪಾದುಕೆ ದರ್ಶನ ಪಡೆದ ಭಕ್ತ ಸಮೂಹ 12 ಗಂಟೆ ನಂತರ ನೂರಾರು ವಾಹನಗಳಲ್ಲಿ ಒಮ್ಮೆಲೆ ಆಗಮಿಸಿದಾಗ ಮುಳ್ಳಯ್ಯನಗಿರಿ ಕ್ರಾಸ್ನಿಂದ ಕವಿಕಲ್ ಗಂಡಿ, ಹೊನ್ನಮ್ಮನಹಳ್ಳದ ವರೆಗೂ ಸಂಪೂರ್ಣ ಟ್ರಾಫಿಕ್ ಜ್ಯಾಮ್ ಆಗಿ ಪೊಲೀಸರು ಹರ ಸಾಹಸ ಪಟ್ಟು ನಿಯಂತ್ರಿಸಿ ಪೀಠಕ್ಕೆ ತೆರಳಲು ಸುಗಮ ಹಾದಿ ಕಲ್ಪಿಸಿದರು.
ದತ್ತಪೀಠಕ್ಕೆ ಸುನೀಲ್ ಕುಮಾರ್ ಭೇಟಿ; ದತ್ತಪಾದುಕೆ ದರ್ಶನ
ಈ ಸಂದರ್ಭದಲ್ಲಿ ದ್ವಿಚಕ್ರ ವಾಹನಗಳು ಸಾಗಲಾಗಷ್ಟು ದಟ್ಟಣೆಯಾಗಿ ವಾಹನ ಸವಾರರು ಪರದಾಡಿದ ದೃಶ್ಯ ಕಂಡು ಬಂತು. ಸಂಚಾರ ದಟ್ಟಣೆ ನಿಯಂತ್ರಿಸಲು ಮಂಗಳೂರು, ಚಿಕ್ಕಮಗಳೂರು ಸೇರಿದಂತೆ ವಿವಿಧ ಕಾರ್ಯಕರ್ತರು ಹಲವು ಕಿಮೀ ದೂರ ನಡೆದುಕೊಂಡೆ ಸಾಗುತ್ತ ಭಕ್ತರಿಗೆ ಪೀಠಕ್ಕೆ ತೆರಳಲು ಸಹಕರಿಸಿದರು. ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ನೇತೃತ್ವದಲ್ಲಿ ನಗರ ಸೇರಿದಂತೆ ಕೈಮರದಿಂದ ಪೀಠದ ವರೆಗೂ ಬಿಗಿ ಚೆಕ್ ಪೋಸ್ಟ್ಗಳನ್ನು ತೆರೆದು ತಪಾಸಣೆ ಮೂಲಕ ಪೊಲೀಸ್ ಭದ್ರತೆ ನಿಯೋಜಿಸಲಾಗಿತ್ತು.
ಚಿಕ್ಕಮಗಳೂರಲ್ಲಿ ದತ್ತಜಯಂತಿಯ ಶೋಭಾಯಾತ್ರೆ ಸಂಭ್ರಮ
ಒಟ್ಟಾರೆ ಬಿಗಿ ಪೊಲೀಸ್ ಭದ್ರತೆ ನಡುವೆ ಮೂರು ದಿನಗಳ ಕಾಲ ನಡೆದ ದತ್ತ ಮಾಲೆ ಆಭಿಯಾನ ಹಾಗೂ ದತ್ತ ಜಯಂತಿ ಉತ್ಸವಕ್ಕೆ ಶಾಂತಯುತ ತೆರೆ ಎಳೆಯಲಾಯಿತು.ಸರ್ಕಾರ ನೇಮಿಸಿದ್ದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಹೇಮಂತ್ಕುಮಾರ್, ಸದಸ್ಯರಾದ ಭಾಷಾ, ಶೀಲ, ಲೀಲಾ, ಸತೀಶ್, ಗುರುವೇಶ್, ಚೇತನ್, ಸುಮಂತ್ ಉಸ್ತುವಾರಿಯಲ್ಲಿ ದತ್ತ ಜಯಂತಿ ಕಾರ್ಯಕ್ರಮಗಳು ಸಾಂಗವಾಗಿ ನೆರವೇರಿತು.ಶಾಸಕರಾದ ಎಂ.ಪಿ.ಕುಮಾರಸ್ವಾಮಿ, ಬೆಳ್ಳಿಪ್ರಕಾಶ್, ಸಿಡಿಎ ಅಧ್ಯಕ್ಷ ಸಿ.ಆನಂದ್, ಮುಜುರಾಯಿ ಅಽಕಾರಿ ಶ್ರೀನಿವಾಸ್, ಉಪ ವಿಭಾಗಾಽಕಾರಿ ರಾಜೇಶ್, ತಹಸೀಲ್ದಾರ್ ವಿನಾಯಕ್ ಸಾಗರ್, ಸಂಘ ಪರಿವಾರದ ಆರ್.ಡಿ.ಮಹೇಂದ್ರ, ಯೋಗೀಶ್ ರಾಜ್ ಅರಸ್, ಶಶಾಂಕ್ ಹಿಂದೂ , ಅಮಿತ್ಗೌಡ, ಶ್ಯಾಮ್ ವಿ ಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಎಚ್.ಸಿ.ಕಲ್ಮರುಡಪ್ಪ ಇದ್ದರು.