ನ್ಯಾಯಬೆಲೆ ಅಂಗಡಿಗಳಿಗೆ ಪಡಿತರ ಕೊಂಡೊಯ್ಯುವಾಗ ನಡೆಯುತ್ತಿರುವ ಅಕ್ರಮ ತಡೆಯಲು ಆಹಾರ ಸರಬರಾಜು ವಾಹನಗಳಿಗೆ ಜಿಪಿಎಸ್‌ ಅಳವಡಿಸಿ ನಿಗಾವಹಿಸಲಾಗುತ್ತಿದೆ. ರಾಜ್ಯದಲ್ಲಿನ ಪಡಿತರ ಸಂಗ್ರಹಿಸುವ ಗೋದಾಮುಗಳಿಂದ ಆಹಾರ ಸಾಮಗ್ರಿ ಕೊಂಡೊಯ್ಯುವ ವಾಹನಗಳಿಗೆ ಜಿಪಿಎಸ್‌ ಅಳವಡಿಸಲಾಗುತ್ತಿದೆ.

ಗಿರೀಶ್‌ ಗರಗ

 ಬೆಂಗಳೂರು ಮೇ(.16) : ನ್ಯಾಯಬೆಲೆ ಅಂಗಡಿಗಳಿಗೆ ಪಡಿತರ ಕೊಂಡೊಯ್ಯುವಾಗ ನಡೆಯುತ್ತಿರುವ ಅಕ್ರಮ ತಡೆಯಲು ಆಹಾರ ಸರಬರಾಜು ವಾಹನಗಳಿಗೆ ಜಿಪಿಎಸ್‌ ಅಳವಡಿಸಿ ನಿಗಾವಹಿಸಲಾಗುತ್ತಿದೆ. ರಾಜ್ಯದಲ್ಲಿನ ಪಡಿತರ ಸಂಗ್ರಹಿಸುವ ಗೋದಾಮುಗಳಿಂದ ಆಹಾರ ಸಾಮಗ್ರಿ ಕೊಂಡೊಯ್ಯುವ ವಾಹನಗಳಿಗೆ ಜಿಪಿಎಸ್‌ ಅಳವಡಿಸಲಾಗುತ್ತಿದೆ.

ನ್ಯಾಯಬೆಲೆ ಅಂಗಡಿಗಳಿಗೆ ಸರಬರಾಜು ಮಾಡುವ ಪಡಿತರ ಅಕ್ರಮ ಮಾರಾಟ ಪ್ರಕರಣಗಳು ದಿನೇದಿನೆ ಹೆಚ್ಚುತ್ತಿದೆ. ಪಡಿತರ ಸಾಗಿಸುವ ವಾಹನ ಚಾಲಕರ ನೆರವಿನಿಂದಲೇ ಈ ಕೃತ್ಯ ನಡೆಯುತ್ತಿದೆ ಎಂಬ ಆರೋಪವೂ ಇದೆ. ಹೀಗೆ ಪಡಿತರ ಅಕ್ರಮ ಮಾರಾಟ ಹಾಗೂ ನಿಗದಿತ ಅವಧಿಯಲ್ಲಿ ನ್ಯಾಯಬೆಲೆ ಅಂಗಡಿಗಳಿಗೆ ಪಡಿತರ ತಲುಪುವಂತೆ ಮಾಡುವ ಸಲುವಾಗಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಪಡಿತರ ಸಾಗಿಸುವ ವಾಹನಗಳಿಗೆ ಜಿಪಿಎಸ್‌ ಅಳವಡಿಸುತ್ತಿದೆ. ಅದರ ಜೊತೆಗೆ ಜಿಪಿಎಸ್‌ ಮೂಲಕ ವಾಹನಗಳು ಸಾಗುವ ಮಾರ್ಗ ಸೇರಿ ಇನ್ನಿತರ ಮಾಹಿತಿಯನ್ನು ಕಾಲಕಾಲಕ್ಕೆ ಪಡೆಯಲು ಹೊಸದಾಗಿ ಮೊಬೈಲ್‌ ಅಪ್ಲಿಕೇಷನ್‌ ಕೂಡ ಅಭಿವೃದ್ಧಿಪಡಿಸಲಾಗುತ್ತಿದೆ.

Party Rounds: ಬಿಜೆಪಿಯಿಂದ ಪ್ರಣಾಳಿಕೆ ಬಿಡುಗಡೆ: 5 ಕೆಜಿ ಅಕ್ಕಿ, ಪ್ರತಿದಿನ ಅರ್ಧ ಲೀ.ಹಾಲು, ಹಬ್ಬಕ್ಕೆ ಉಚಿತ ಗ್ಯಾಸ್ ಸಿಲಿಂಡರ್

2,200 ವಾಹನಗಳಿಗೆ ಜಿಪಿಎಸ್‌

ರಾಜ್ಯದಲ್ಲಿ 30 ಫುಡ್‌ ಕಾರ್ಪೋರೇಷನ್‌ ಆಫ್‌ ಇಂಡಿಯಾ ಗೋದಾಮುಗಳಿದ್ದು, ಅವುಗಳಿಂದ ಪಡಿತರ ಪಡೆದು 306 ಸಗಟು ಗೋದಾಮುಗಳಿಗೆ ಸಾಗಿಸಲಾಗುತ್ತದೆ. ಅದಾದ ನಂತರ ಸಗಟು ಗೋದಾಮುಗಳಿಂದ ರಾಜ್ಯದಲ್ಲಿನ 20,277 ನ್ಯಾಯಬೆಲೆ ಅಂಗಡಿಗಳಿಗೆ ವಾಹನಗಳ ಮೂಲಕ ಪಡಿತರ ಸಾಗಿಸಲಾಗುತ್ತದೆ. ಹೀಗೆ ಗೋದಾಮುಗಳ ನಡುವೆ ಮತ್ತು ನ್ಯಾಯಬೆಲೆ ಅಂಗಡಿಗಳಿಗೆ ಪಡಿತರ ಸಾಗಿಸಲು 2,200 ಸರ್ಕಾರಿ ಮತ್ತು ಖಾಸಗಿ ವಾಹನಗಳನ್ನು (ಭಾರಿ ವಾಹನ) ಬಳಸಿಕೊಳ್ಳಲಾಗುತ್ತದೆ. ಹೀಗೆ ಪಡಿತರ ಸಾಗಿಸುವ ವೇಳೆ ಯಾವುದೇ ರೀತಿಯ ಅಕ್ರಮ ಮಾರಾಟ ನಡೆಯದಂತೆ ತಡೆಯಲು ಜಿಪಿಎಸ್‌ ಅಳವಡಿಸಲಾಗುತ್ತದೆ.

ಮೊಬೈಲ್‌-ವೆಬ್‌ ಆ್ಯಪ್‌ ಅಭಿವೃದ್ಧಿ:

ಜಿಪಿಎಸ್‌ ಅಳವಡಿಸಿದ ನಂತರ ಅದರ ಮಾಹಿತಿಯನ್ನು ಪಡೆಯಲು ಹೊಸದಾಗಿ ಮೊಬೈಲ್‌ ಮತ್ತು ವೆಬ್‌ ಆಧಾರಿತ ಆ್ಯಪ್‌ಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಪ್ರತಿ ವಾಹನದ ಜಿಪಿಎಸ್‌ನ್ನು ಈ ಆ್ಯಪ್‌ಗೆ ಲಿಂಕ್‌ ಮಾಡಲಾಗುತ್ತದೆ. ಅಲ್ಲದೆ, ಸಗಟು ಗೋದಾಮುಗಳಲ್ಲಿ ಪಡಿತರ ಭರ್ತಿ ಮಾಡಿದ ನಂತರ ವಾಹನಗಳು ಯಾವ ಮಾರ್ಗದಲ್ಲಿ ಸಾಗಬೇಕು, ಎಲ್ಲೆಲ್ಲಿ ನಿಲುಗಡೆ ನೀಡಬೇಕು ಎಂಬುದನ್ನು ಜಿಪಿಎಸ್‌ನಲ್ಲಿ ನಮೂದಿಸಲಾಗುತ್ತದೆ. ಅದರಂತೆ ವಾಹನಗಳು ಸಾಗಬೇಕಿದೆ. ಒಂದು ವೇಳೆ ವಾಹನಗಳು ನಿಗದಿತ ಮಾರ್ಗದ ಬದಲು ಬೇರೆ ಮಾರ್ಗದಲ್ಲಿ ಸಂಚರಿಸಿದರೆ ಹಾಗೂ ನಿಗದಿತ ಸ್ಥಳದ ಬದಲು ಬೇರೆ ಕಡೆ ನಿಲುಗಡೆ ನೀಡಿದರೆ ಆ್ಯಪ್‌ನಲ್ಲಿ ಅದು ತಿಳಿಯಲಿದೆ. ಹೀಗೆ ತಪ್ಪಾದ ಕೂಡಲೆ ಆ್ಯಪ್‌ ಸಂಬಂಧಪಟ್ಟಅಧಿಕಾರಿಗಳಿಗೆ ಎಸ್‌ಎಂಎಸ್‌ ಅಥವಾ ಈಮೇಲ್‌ ಮೂಲಕ ಸಂದೇಶ ರವಾನಿಸಲಿದೆ.

ಈ ಅಪ್ಲಿಕೇಷನ್‌ ಅಕ್ರಮ ತಡೆಯಲು ಮಾತ್ರ ಬಳಕೆಯಾಗದೆ ವಾಹನ ಚಾಲಕರು ನಿಗದಿತ ಅವಧಿಯಲ್ಲಿ ಯಾವುದೇ ಸಮಸ್ಯೆಯಿಲ್ಲದೆ ಸಗಟು ಗೋದಾಮು ಅಥವಾ ನ್ಯಾಯಬೆಲೆ ಅಂಗಡಿಗೆ ತಲುಪಲು ಸಹಕಾರಿಯಾಗಿರಲಿವೆ. ಅದರ ಪ್ರಕಾರ ಆ್ಯಪ್‌ನಲ್ಲಿ ಲಾಗಿನ್‌ ಆಗುವ ಚಾಲಕರಿಗೆ ಅವರು ಯಾವ ಮಾರ್ಗದಲ್ಲಿ ತೆರಳಬೇಕು ಎಂಬುದನ್ನು ಸೂಚಿಸಲಿದೆ. ಜತೆಗೆ ಅವರು ಸಾಗುವ ರಸ್ತೆಯ ಗುಣಮಟ್ಟ, ಸಂಚಾರ ದಟ್ಟಣೆ ಸೇರಿ ಇನ್ನಿತರ ಮಾಹಿತಿಯನ್ನೂ ನೀಡಲಿದೆ.

ವಿಶ್ಲೇಷಣಾತ್ಮಕ ವರದಿ ಆಧರಿಸಿ ಕ್ರಮ:

ನೂತನವಾಗಿ ಅಭಿವೃದ್ಧಿ ಪಡಿಸಲಾಗುವ ಅಪ್ಲಿಕೇಷನ್‌ ಮೂಲಕ ಎಲ್ಲ 2,200 ಚಾಲಕರ ಕಾರ್ಯದ ಬಗ್ಗೆ ವಾರ ಅಥವಾ ಮಾಸಿಕ ವಿಶ್ಲೇಷಣಾತ್ಮಕ ವರದಿಯನ್ನು ನೀಡಲಿದೆ. ಅದರಲ್ಲಿ ಚಾಲಕರು ಯಾವ ವೇಗದಲ್ಲಿ ಸಂಚರಿಸಿದ್ದಾರೆ, ಜಿಪಿಎಸ್‌ನಲ್ಲಿ ನಮೂದಿಸಿದ ಮಾರ್ಗದಲ್ಲಿ ಸಂಚರಿಸಿದ್ದಾರೆಯೇ? ನಿಗದಿಗಿಂತ ಹೆಚ್ಚಿನ ಕಡೆ ನಿಲುಗಡೆ ನೀಡಿದ್ದಾರೆಯೇ? ಎಂಬಂತಹ ವಿವರಗಳು ಇರಲಿವೆ. ಅದನ್ನಾಧರಿಸಿ ತಪ್ಪು ಮಾಡಿದ ಚಾಲಕರು ಹಾಗೂ ವಾಹನ ಮಾಲೀಕರ ವಿರುದ್ಧ ಇಲಾಖೆ ಕ್ರಮ ಕೈಗೊಳ್ಳಲಿದೆ.

ಅನ್ನಭಾಗ್ಯ ಅಕ್ಕಿಗೆ ನ್ಯಾಯಬೆಲೆ ಅಂಗಡಿ ಮಾಲೀಕರ ಕತ್ತರಿ: ಕಣ್ಮುಚ್ಚಿ ಕುಳಿತ ಅಧಿಕಾರಿಗಳು

ಪಡಿತರ ಸಾಗಣೆ ವಾಹನಗಳ ಮೇಲೆ ನಿಗಾವಹಿಸಲು ಜಿಪಿಎಸ್‌ ಅಳಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸಾರಿಗೆ ವಿಭಾಗ ಅಂತಹದ್ದೊಂದು ಕ್ರಮ ಕೈಗೊಳ್ಳುತ್ತಿದೆ. ಜಿಪಿಎಸ್‌ ಅಳವಡಿಸಿದ ಪಡಿತರ ಸಾಗಾಟದಲ್ಲಿನ ಲೋಪ ನಿವಾರಣೆಯಾಗಲಿದೆ.

- ವಿಜಯಕುಮಾರ್‌, ಜಂಟಿ ನಿರ್ದೇಶಕ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ