ಬೆಂಗಳೂರು ನಗರದ ಗಾಂಧಿನಗರ, ಪೀಣ್ಯ, ಕೊಟ್ಟಿಗೆಪಾಳ್ಯ, ರಾಮಮೂರ್ತಿನಗರ, ಮಡಿವಾಳ, ಮಾಗಡಿರಸ್ತೆ, ಗೋವಿಂದರಾಜನಗರ, ಸುಂಕದಕಟ್ಟೆ, ಸಂಜಯನಗರ, ಶ್ರೀರಾಮಪುರ ಸೇರಿದಂತೆ ಹಲವೆಡೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಫಲಾನುಭವಿಗಳಿಗೆಂದು ಹಂಚಿಕೆ ಮಾಡಿದ ಪಡಿತರ ಆಹಾರ ಧಾನ್ಯಗಳಲ್ಲಿ ಕನಿಷ್ಠ 3ರಿಂದ 4 ಕೆಜಿ ಕಡಿತ ಮಾಡಲಾಗುತ್ತಿದೆ. 

ಬೆಂಗಳೂರು(ಏ.14): ಬೆಂಗಳೂರು ನಗರದ ಹಲವೆಡೆ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಚೀಟಿಗಳ ಫಲಾನುಭವಿಗಳಿಗೆ ಅನ್ನಭಾಗ್ಯ ಯೋಜನೆಯ ಅಕ್ಕಿ ವಿತರಣೆಯಲ್ಲಿ ವಂಚಿಸಲಾಗುತ್ತಿದ್ದು ಆಹಾರ ಇಲಾಖೆ ಅಧಿಕಾರಿಗಳು ಮಾತ್ರ ಅಕ್ರಮ ತಡೆಗೆ ಮುಂದಾಗುತ್ತಿಲ್ಲ ಎಂದು ಆರೋಪ ಕೇಳಿ ಬಂದಿದೆ.

ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಗರೀಬ್‌ ಕಲ್ಯಾಣ ಯೋಜನೆಯಲ್ಲಿ ಸಾರ್ವಜನಿಕ ವಿತರಣ ಪದ್ಧತಿಯಡಿ ಈ ವರ್ಷದ ಜನವರಿ 1ರಿಂದ ರಾಜ್ಯದ ಆದ್ಯತಾ (ಬಿಪಿಎಲ್‌) ಮತ್ತು ಅಂತ್ಯೋದಯ ಪಡಿತರ ಚೀಟಿಗಳ ಪ್ರತಿ ಫಲಾನುಭವಿಗಳಿಗೆ ತಲಾ 5 ಕೆಜಿ ಅಕ್ಕಿ ವಿತರಿಸುತ್ತಿದೆ. ಜತೆಗೆ ರಾಜ್ಯ ಸರ್ಕಾರವೂ ಫೆ.1ರಿಂದ ಹೆಚ್ಚುವರಿಯಾಗಿ ಪ್ರತಿ ಫಲಾನುಭವಿಗೆ ತಲಾ 1 ಕೆಜಿ ಅಕ್ಕಿ ನೀಡಲು ಆದೇಶಿಸಿದೆ. ಒಟ್ಟಾರೆ ಫಲಾನುಭವಿಗೆ ಒಟ್ಟು 6 ಕೆಜಿ ಅಕ್ಕಿ ವಿತರಣೆಯಾಗಬೇಕು.

ಬೆಂಗಳೂರು ಸಾರ್ವಜನಿಕರೇ ಎಚ್ಚರ : ರಿಮೋಟ್‌ ಕಂಟ್ರೋಲ್‌ ಬಳಸಿ ತೂಕದ ಯಂತ್ರದಿಂದ ಮೋಸ

ಆದರೆ, ನಗರದ ಗಾಂಧಿನಗರ, ಪೀಣ್ಯ, ಕೊಟ್ಟಿಗೆಪಾಳ್ಯ, ರಾಮಮೂರ್ತಿನಗರ, ಮಡಿವಾಳ, ಮಾಗಡಿರಸ್ತೆ, ಗೋವಿಂದರಾಜನಗರ, ಸುಂಕದಕಟ್ಟೆ, ಸಂಜಯನಗರ, ಶ್ರೀರಾಮಪುರ ಸೇರಿದಂತೆ ಹಲವೆಡೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಫಲಾನುಭವಿಗಳಿಗೆಂದು ಹಂಚಿಕೆ ಮಾಡಿದ ಪಡಿತರ ಆಹಾರ ಧಾನ್ಯಗಳಲ್ಲಿ ಕನಿಷ್ಠ 3ರಿಂದ 4 ಕೆಜಿ ಕಡಿತ ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ. ಉದಾ: ಒಂದು ಕುಟುಂಬದಲ್ಲಿ ಮೂವರು ಫಲಾನುಭವಿಗಳಿದ್ದರೆ ಒಟ್ಟು 18 ಕೆಜಿ ಅಕ್ಕಿ ವಿತರಣೆ ಮಾಡಬೇಕು. ಆದರೆ, ಕೇವಲ 12 ರಿಂದ 15 ಕೆಜಿ ಅಕ್ಕಿ ಮಾತ್ರ ಹಂಚಿಕೆ ಮಾಡಲಾಗುತ್ತಿದ್ದಾರೆ ಎಂದು ಹೆಸರು ಹೇಳಲು ಇಚ್ಛಿಸದ ಫಲಾನುಭವಿಯೊಬ್ಬರು ದೂರಿದರು.

ಕೆಲವು ಕಡೆಗಳಲ್ಲಿ ನ್ಯಾಯಬೆಲೆ ಅಂಗಡಿ ಮಾಲೀಕರು ಫಲಾನುಭವಿಗಳಿಂದ ಪ್ರತಿ ಪಡಿತರ ಚೀಟಿಗೆ ತಲಾ 10 ರು.ಗಳಂತೆ ಸಂಗ್ರಹಿಸುತ್ತಿರುವ ಅಕ್ರಮ ವಸೂಲಾತಿ ನಿಂತಿಲ್ಲ ಎಂದು ಗಾಂಧಿನಗರದ ನಿವಾಸಿ ರಾಜೇಶ್‌ ಎಂಬುವರು ದೂರಿದ್ದಾರೆ. ಇನ್ನು ಕೆಲವು ನ್ಯಾಯಬೆಲೆ ಅಂಗಡಿ ಮಾಲೀಕರು, 5 ಸದಸ್ಯರಿರುವ ಕುಟುಂಬಕ್ಕೆ ನಿಗದಿಯಂತೆ 30 ಕೆಜಿ ಅಕ್ಕಿ ವಿತರಿಸಬೇಕು. ಆದರೆ, ಅವರು ಕೇವಲ 20ರಿಂದ 25 ಕೆಜಿ ವಿತರಿಸಿ, ಒಂದು ಕೆಜಿ ಸಕ್ಕರೆ ಇಲ್ಲವೇ ಒಂದು ಕೆಜಿ ಬೆಳೆ ಕೊಟ್ಟು ಕೈತೊಳೆದುಕೊಳ್ಳುತ್ತಿದ್ದಾರೆ. ಬಡ ಜನರು ಈ ಅನ್ಯಾಯ ಪ್ರಶ್ನಿಸಲು ಹಿಂದೇಟು ಹಾಕುತ್ತಿದ್ದಾರೆ. ಅಧಿಕಾರಿಗಳು ವರ್ಷಕ್ಕೊಮ್ಮೆಯಾದರೂ ಬಂದು ಪರಿಶೀಲಿಸುತ್ತಿಲ್ಲ ಎಂದು ಮಾಗಡಿ ರಸ್ತೆಯ ನಿವಾಸಿ ಸುನೀಲ್‌ಕುಮಾರ್‌ (ಚಿನ್ನ) ಎಂಬುವರು ಆರೋಪಿಸಿದ್ದಾರೆ.

ಬಾಗಲಕೋಟೆ: ಸಸಾಲಟ್ಟಿ ಪಡಿತರ ಅಕ್ಕಿಯಲ್ಲಿ ಕಂಡುಬಂದ ಪ್ಲಾಸ್ಟಿಕ್‌ ಅಕ್ಕಿ?

ರಾಜ್ಯದಲ್ಲಿ ಪ್ರಸ್ತುತ 10,91,508 ಅಂತ್ಯೋದಯ ಕಾರ್ಡುಗಳಿದ್ದು, 44,83,745 ಮಂದಿ ಫಲಾನುಭವಿಗಳಿದ್ದಾರೆ. ಅದೇ ರೀತಿ 1,15,93,227 ಬಿಪಿಎಲ್‌ ಕಾರ್ಡುಗಳಿದ್ದು 3,87,79,975 ಮಂದಿ ಫಲಾನುಭವಿಗಳಿ ದ್ದಾರೆ. ಹೀಗೆ ಒಟ್ಟು 4,32,63,720 ಮಂದಿ ಫಲಾನುಭವಿಗಳಿಗೆ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಅನ್ವಯ ಪ್ರತಿ ತಿಂಗಳು ತಲಾ 6 ಕೆಜಿ ಅಕ್ಕಿಯನ್ನು ಹಂಚಿಕೆ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರ ಪ್ರತಿ ತಿಂಗಳು ಪ್ರತಿ ಯೂನಿಟ್‌ಗೆ ತಲಾ 5 ಕೆಜಿಯಂತೆ ಒಟ್ಟು 2.17 ಲಕ್ಷ ಮೆಟ್ರಿಕ್‌ ಟನ್‌ ಅಕ್ಕಿಯನ್ನು ಹಂಚಿಕೆ ಮಾಡುತ್ತಿದೆ. ಇದರೊಂದಿಗೆ ರಾಜ್ಯ ಸರ್ಕಾರ ತಲಾ 1 ಕೆಜಿಯಂತೆ 4.32 ಕೋಟಿಗೂ ಅಧಿಕ ಕೆಜಿ ಅಕ್ಕಿಯನ್ನು ವಿತರಿಸುತ್ತಿದೆ.

ನ್ಯಾಯಬೆಲೆ ಅಂಗಡಿ ಮಾಲೀಕರ ಪೈಕಿ ಕೇವಲ ಶೇ.5ರಿಂದ 6ರಷ್ಟುಮಂದಿ ಮಾತ್ರ ಇಂತಹ ಅಕ್ರಮದಲ್ಲಿ ತೊಡಗಿದ್ದಾರೆ. ಈ ಬಗ್ಗೆ ದೂರು ಬಂದರೂ ಅಧಿಕಾರಿಗಳು ಏಕೆ ಕ್ರಮಕೈಗೊಳ್ಳುತ್ತಿಲ್ಲ? ಸರಿಯಾದ ತೂಕ ನೀಡದ ಮಾಲೀಕರ ವಿರುದ್ಧ ಕೇಸು ದಾಖಲಿಸಿ, ಪರವಾನಗಿ ರದ್ದುಪಡಿಸಬೇಕು. ಇಲ್ಲದಿದ್ದರೆ ಅಧಿಕಾರಿಗಳೇ ಈ ಅಕ್ರಮದಲ್ಲಿ ಶಾಮೀಲಾಗಿದ್ದಾರೆ ಎಂದು ಇಲಾಖೆಯ ಕಾರ್ಯದರ್ಶಿಗಳು, ಆಯುಕ್ತರು ಕ್ರಮ ಜರುಗಿಸಬೇಕು ಅಂತ ಸರ್ಕಾರಿ ಪಡಿತರ ವಿತರಕರ ಸಂಘದ ರಾಜ್ಯಾಧ್ಯಕ್ಷ ಟಿ.ಕೃಷ್ಣಪ್ಪ ತಿಳಿಸಿದ್ದಾರೆ.