Asianet Suvarna News Asianet Suvarna News

ಬಿಬಿಎಂಪಿ 5 ಹೋಳು ಮಾಡಲು ಸರ್ಕಾರ ಸಿದ್ಧತೆ: ಪಾಲಿಕೆ ಚುನಾವಣೆ ಮುಂದೂಡಿಕೆ?

ಬೆಂಗಳೂರಿನಲ್ಲಿ ಆಡಳಿತ ಸುಧಾರಣೆಗಾಗಿ ವರದಿ ನೀಡಲು 2016-17ರಲ್ಲಿ ರಚಿಸಲಾಗಿದ್ದ ನಿವೃತ್ತ ಐಎಎಸ್‌ ಅಧಿಕಾರಿ ಬಿ.ಎಸ್‌. ಪಾಟೀಲ ಸಮಿತಿಯನ್ನು ಮತ್ತೊಮ್ಮೆ ಕಾರ್ಯಗತಗೊಳಿಸಲಾಗಿದ್ದು, ಈ ಬಾರಿ ಬಿಬಿಎಂಪಿ ವಿಭಜನೆಯ ಜತೆಗೆ ನಗರದಲ್ಲಿ ಸೇವೆ ನೀಡುತ್ತಿರುವ ಸಂಸ್ಥೆಗಳನ್ನು ಒಂದೆಡೆ ತರಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ವರದಿ ನೀಡುವಂತೆ ರಾಜ್ಯ ಸರ್ಕಾರ ಸೂಚನೆ ನೀಡಿದೆ.

Government is preparing to divide BBMP into 5 parts at bengaluru rav
Author
First Published Jun 14, 2023, 5:35 AM IST

ಗಿರೀಶ್‌ ಗರಗ

ಬೆಂಗಳೂರು (ಜೂ.14) ಬೆಂಗಳೂರಿನಲ್ಲಿ ಆಡಳಿತ ಸುಧಾರಣೆಗಾಗಿ ವರದಿ ನೀಡಲು 2016-17ರಲ್ಲಿ ರಚಿಸಲಾಗಿದ್ದ ನಿವೃತ್ತ ಐಎಎಸ್‌ ಅಧಿಕಾರಿ ಬಿ.ಎಸ್‌. ಪಾಟೀಲ ಸಮಿತಿಯನ್ನು ಮತ್ತೊಮ್ಮೆ ಕಾರ್ಯಗತಗೊಳಿಸಲಾಗಿದ್ದು, ಈ ಬಾರಿ ಬಿಬಿಎಂಪಿ ವಿಭಜನೆಯ ಜತೆಗೆ ನಗರದಲ್ಲಿ ಸೇವೆ ನೀಡುತ್ತಿರುವ ಸಂಸ್ಥೆಗಳನ್ನು ಒಂದೆಡೆ ತರಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ವರದಿ ನೀಡುವಂತೆ ರಾಜ್ಯ ಸರ್ಕಾರ ಸೂಚನೆ ನೀಡಿದೆ.

ಬಿಬಿಎಂಪಿ(BBMP) ಪುನಾರಚನೆಗೆ ಸಂಬಂಧಿಸಿದಂತೆ 2016-17ರಲ್ಲಿ ಅಂದೂ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ನಿವೃತ್ತ ಐಎಎಸ್‌ ಅಧಿಕಾರಿ ಬಿ.ಎಸ್‌. ಪಾಟೀಲ್‌(BS Patil IAS rtd) ನೇತೃತ್ವದ ಸಮಿತಿ ರಚಿಸಿದ್ದರು. ಸಮಿತಿಯು ಹಲವು ಅಧ್ಯಯನ, ಸಭೆಗಳ ನಂತರ 2018ರಲ್ಲಿ ಬಿಬಿಎಂಪಿ ಪುನಾರಚನೆಗೆ ಸಂಬಂಧಿಸಿದಂತೆ ವರದಿ ನೀಡಲಾಗಿತ್ತು. ಆ ವರದಿ ಪ್ರಕಾರ ಬೆಂಗಳೂರಿನ ವಿಸ್ತೀರ್ಣ ಹೆಚ್ಚಿಸಿ ಗ್ರೇಟರ್‌ ಬೆಂಗಳೂರು ರಚಿಸಬೇಕು, ಬಿಬಿಎಂಪಿ ವಿಂಗಡಿಸಿ 5 ಪ್ರತ್ಯೇಕ ಮಹಾನಗರ ಪಾಲಿಕೆಗಳನ್ನು ರಚಿಸಬೇಕು ಹಾಗೂ ಜನರಿಂದಲೇ ಮೇಯರ್‌ ಆಯ್ಕೆ ಪ್ರಕ್ರಿಯೆ ನಡೆಸಬೇಕು ಎಂಬ ಶಿಫಾರಸು ಮಾಡಿತ್ತು. ಇದೀಗ ಬಿ.ಎಸ್‌.ಪಾಟೀಲ್‌ ಸಮಿತಿಯನ್ನು ಮರು ಸ್ಥಾಪಿಸಲಾಗಿದ್ದು, ಬಿಬಿಎಂಪಿ ಪುನಾರಚನೆಗೆ ವರದಿ ನೀಡುವಂತೆ ಸೂಚಿಸಲಾಗಿದೆ. ಇದು ಈಗ ಬಿಬಿಎಂಪಿ ಚುನಾವಣೆ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ.

 

ಬಿಬಿಎಂಪಿಯ 243 ವಾರ್ಡ್‌ಗಳಿಗೂ ಚುನಾವಣೆ ಸಾಧ್ಯತೆ: ರಾಮಲಿಂಗಾರೆಡ್ಡಿ ಸಮಿತಿ ವರದಿ

ಹಳೇ ವರದಿಯೇ ಮೂಲ:

ಬಿ.ಎಸ್‌. ಪಾಟೀಲ್‌ ಸಮಿತಿಯು 2018ರಲ್ಲಿ ನೀಡಲಾಗಿದ್ದ ವರದಿಯನ್ನೇ ಆಧಾರವಾಗಿಟ್ಟುಕೊಂಡು ಹೊಸದಾಗಿ ಅಧ್ಯಯನ ನಡೆಲು ಸಮಿತಿ ನಿರ್ಧರಿಸಿದೆ. ಅದಕ್ಕಾಗಿ ಬಿಬಿಎಂಪಿ ಅಧಿಕಾರಿಗಳ ಜತೆಗೆ ಶೀಘ್ರದಲ್ಲಿ ಸಭೆಯನ್ನೂ ಮಾಡಲಾಗುತ್ತಿದೆ.

ಹಿಂದೆ ನೀಡಿದ್ದ ವರದಿಯಂತೆ ಬೆಂಗಳೂರಿನ ವಿಸ್ತೀರ್ಣವನ್ನು 1,307 ಚದರ ಕಿಮೀಗೆ ವಿಸ್ತರಿಸಿ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ರಚಿಸಬೇಕು. ಅದರ ವ್ಯಾಪ್ತಿಯಲ್ಲಿ 5 ಮಹಾನಗರ ಪಾಲಿಕೆ ರಚಿಸಿ, ಆ ಐದೂ ಪಾಲಿಕೆಗೆ ಒಬ್ಬರೇ ಮೇಯರ್‌ ನೇಮಿಸಬೇಕು. ಆ ಮೇಯರ್‌ನ್ನು ಕಾರ್ಪೋರೇಟರ್‌ಗಳ ಚುನಾವಣೆ ವೇಳೆ ಜನರಿಂದಲೇ ಮತ ಚಲಾಯಿಸುವಂತೆ ಮಾಡಿ ಆಯ್ಕೆ ಮಾಡಬೇಕು ಎಂದು ಸೂಚಿಸಲಾಗಿತ್ತು. ಜತೆಗೆ 5 ಮಹಾನಗರ ಪಾಲಿಕೆಯು ಆ ಮೇಯರ್‌ ಅಡಿಯಲ್ಲಿ ಬರಬೇಕು ಹಾಗೂ ಮೇಯರ್‌ ಅಧಿಕಾರಾವಧಿ ಒಂದು ವರ್ಷದ ಬದಲು 5 ವರ್ಷಕ್ಕೆ ಹೆಚ್ಚಿಸಬೇಕು ಎಂದು ತಿಳಿಸಲಾಗಿತ್ತು. ಇದೀಗ ಆ ವರದಿಯಲ್ಲಿರುವ ಅಂಶವನ್ನೇ ಮತ್ತೊಮ್ಮೆ ಹೊಸ ವರದಿಯಲ್ಲಿ ಉಲ್ಲೇಖಿಸುವ ಬಗ್ಗೆಯೂ ನಿರ್ಧರಿಸಲಾಗಿದೆ.

ಮಹಾನಗರ ಹಣಕಾಸು ಆಯೋಗ

ಐದೂ ಪಾಲಿಕೆಗಳಲ್ಲಿ 3 ಹಂತದ ಆಡಳಿತ ವ್ಯವಸ್ಥೆಯಿರಬೇಕು. ವಾರ್ಡ್‌, ಕಾರ್ಪೋರೇಷನ್‌ ಮತ್ತು ಗ್ರೇಟರ್‌ ಬೆಂಗಳೂರು ಮಟ್ಟದಲ್ಲಿ ಅಧಿಕಾರವಿರಬೇಕು. ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಆರ್ಥಿಕ ಸ್ಥಿತಿ ನಿಭಾಯಿಸಲು ಪ್ರತ್ಯೇಕವಾಗಿ ಮಹಾನಗರ ಹಣಕಾಸು ಆಯೋಗ ರಚಿಸಬೇಕು. ಆ ಆಯೋಗವು 5 ಮಹಾನಗರ ಪಾಲಿಕೆಯಿಂದ ಬರುವ ಆದಾಯವನ್ನು ವಾರ್ಡ್‌ ಮಟ್ಟದಲ್ಲಿ ಸಮರ್ಪಕವಾಗಿ ಹಂಚಿಕೆಯಾಗುವಂತೆ ನೋಡಿಕೊಳ್ಳಬೇಕು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು.

5 ಮಹಾನಗರ ಪಾಲಿಕೆಗೆ ಪ್ರತ್ಯೇಕವಾಗಿ 5 ಮಂದಿ ಆಯುಕ್ತರ ನೇಮಕ, 10 ವಲಯಗಳನ್ನು ರಚಿಸಿ ಪ್ರತಿ ವಲಯಕ್ಕೂ ಒಬ್ಬರು ವಲಯ ಆಯುಕ್ತರನ್ನು ನೇಮಿಸಬೇಕು. ಜತೆಗೆ ಪ್ರತಿ ಪಾಲಿಕೆಯಲ್ಲೂ ಕೇವಲ 3 ಸ್ಥಾಯಿ ಸಮಿತಿ ರಚಿಸಬೇಕು, ಆ ಸ್ಥಾಯಿ ಸಮಿತಿಗಳು ತೆರಿಗೆ, ಬಜೆಟ್‌ ಹಾಗೂ ಇನ್ನಿತರ ಕಾರ್ಯಗಳಿಗೆ ಸಂಬಂಧಿಸಿದ್ದಾಗಿರಬೇಕು. ಪ್ರತಿ 3 ತಿಂಗಳಿಗೊಮ್ಮೆ ವಲಯ ಸಭೆ ನಡೆಸಿ, ಆ ವಲಯ ವ್ಯಾಪ್ತಿಯಲ್ಲಿನ ಕಾರ್ಪೋರೇಟರ್‌ಗಳಿಂದ, ಸಾರ್ವಜನಿಕರಿಂದ ಕುಂದು ಕೊರತೆ ಆಲಿಸಬೇಕು. ಅದನ್ನು ಪರಿಹರಿಸಲು ಸೂಕ್ತ ಯೋಜನೆ ರೂಪಿಸಬೇಕು ಎಂದು ತಿಳಿಸಲಾಗಿತ್ತು.

ಅಲ್ಲದೆ ಜನರ ಸಮಸ್ಯೆ ಅರಿತು ನಿವಾರಿಸಲು ಬೆಂಗಳೂರಿನಲ್ಲಿ ಸೇವೆ ನೀಡುತ್ತಿರುವ ಬಿಎಂಟಿಸಿ, ಜಲಮಂಡಳಿ, ಬೆಸ್ಕಾಂ ಸೇರಿದಂತೆ ಎಲ್ಲ ಸೇವಾ ಸಂಸ್ಥೆಗಳು ಒಂದೇ ಸೂರಿನಡಿ ಬರುವಂತೆ ಮಾಡಬೇಕು. ಅವೆಲ್ಲವೂ ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಅಡಿಯಲ್ಲಿರಬೇಕು ಎಂದೂ ವರದಿಯಲ್ಲಿ ಉಲ್ಲೇಖಿಸಲಾಗಿತ್ತು.

ಬಿಬಿಎಂಪಿಯ 243 ವಾರ್ಡ್‌ಗಳಿಗೂ ಚುನಾವಣೆ ಸಾಧ್ಯತೆ: ರಾಮಲಿಂಗಾರೆಡ್ಡಿ ಸಮಿತಿ ವರದಿ

8 ಸಾವಿರ ಚದರ ಕಿಮೀ ಯೋಜನಾ ಸಮಿತಿ

ಬೆಂಗಳೂರು ಬೆಳೆಯುತ್ತಿರುವ ವೇಗಕ್ಕನುಗುಣವಾಗಿ ಮೆಟ್ರೋಪಾಲಿಟನ್‌ ಯೋಜನಾ ಸಮಿತಿ ರಚಿಸುವ ಬಗ್ಗೆಯೂ ಬಿ.ಎಸ್‌. ಪಾಟೀಲ್‌ ವರದಿಯಲ್ಲಿ ಶಿಫಾರಸು ಮಾಡಲಾಗಿತ್ತು. ಬೆಂಗಳೂರು ನಗರ ಜಿಲ್ಲೆ ಮಾತ್ರವಲ್ಲದೆ ರಾಮನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳನ್ನು ಮೆಟ್ರೋಪಾಲಿಟನ್‌ ಯೋಜನಾ ಸಮಿತಿಗೆ ಸೇರ್ಪಡೆ ಮಾಡಬೇಕು. ಈ ಸಮಿತಿಯ ಆಡಳಿತದ ವಿಸ್ತೀರ್ಣ 8005 ಚದರ ಕಿಮೀನಷ್ಟಿರಬೇಕು ಎಂದು ತಿಳಿಸಲಾಗಿತ್ತು.

Follow Us:
Download App:
  • android
  • ios