ಎರಡನೇ ದಿನವೂ ಮಾಜಿ ಸಚಿವ ಎಚ್.ಡಿ.ರೇವಣ್ಣ ಗೈರಾಗಿದ್ದಾರೆ. ಮಾಜಿ ಸಚಿವ ರೇವಣ್ಣ ಹಾಗೂ ಅವರ ಪುತ್ರ ಹಾಸನ ಸಂಸದ ಪ್ರಜ್ವಲ್‌ ವಿರುದ್ಧ ಹೊಳೆನರಸೀಪುರ ಠಾಣೆಯಲ್ಲಿ ಲೈಂಗಿಕ ಕಿರುಕುಳ ಪ್ರಕರಣ ದಾಖಲಾಗಿದೆ.

ಬೆಂಗಳೂರು (ಮೇ.03): ಎರಡನೇ ದಿನವೂ ಮಾಜಿ ಸಚಿವ ಎಚ್.ಡಿ.ರೇವಣ್ಣ ಗೈರಾಗಿದ್ದಾರೆ. ಮಾಜಿ ಸಚಿವ ರೇವಣ್ಣ ಹಾಗೂ ಅವರ ಪುತ್ರ ಹಾಸನ ಸಂಸದ ಪ್ರಜ್ವಲ್‌ ವಿರುದ್ಧ ಹೊಳೆನರಸೀಪುರ ಠಾಣೆಯಲ್ಲಿ ಲೈಂಗಿಕ ಕಿರುಕುಳ ಪ್ರಕರಣ ದಾಖಲಾಗಿದೆ. ಈ ಬಗ್ಗೆ ತನಿಖೆಗಿಳಿದಿರುವ ಎಸ್‌ಐಟಿ, ತಂದೆ-ಮಗನಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿತ್ತು. ಬುಧವಾರ ಹೊಳೆನರಸೀಪುರದ ರೇವಣ್ಣನಿವಾಸಕ್ಕೆ ಎಸ್‌ಐಟಿ ಅಧಿಕಾರಿಗಳು ಭೇಟಿ ನೀಡಿ, ಮನೆಯ ಕಾಂಪೌಂಡ್ ಗೆ ನೋಟಿಸ್ ಅಂಟಿಸಿ ಬಂದಿದ್ದರು. ಬುಧವಾರವೇ ರೇವಣ್ಣ ಬೆಂಗಳೂರಿಗೆ ಬಂದರೂ ಎನ್ನಲಾದರೂ ಅವರಿಗೆ ವಿಚಾರಣೆಗೆ ಹಾಜರಾಗಿರಲಿಲ್ಲ. ಎರಡನೇ ದಿನವಾದ ಗುರುವಾರ ಸಹ ರೇವಣ್ಣ ವಿಚಾರಣೆಗೆ ಗೈರಾದರು.

ನಿರೀಕ್ಷಣಾ ಜಾಮೀನು ಕೋರಿ ರೇವಣ್ಣ ಅರ್ಜಿ: ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನ ಭೀತಿಗೊಳಗಾಗಿರುವ ಮಾಜಿ ಸಚಿವ ಎಚ್‌.ಡಿ.ರೇವಣ್ಣ ಅವರು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಇದರ ವಿಚಾರಣೆ ಶುಕ್ರವಾರ ನಡೆಯಲಿದೆ. ಎಚ್‌.ಡಿ.ರೇವಣ್ಣ ಸಲ್ಲಿಸಿದ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಾಲಯ ವಿಚಾರಣೆಯನ್ನು ಕೈಗೆತ್ತಿಕೊಂಡಿತು. ರೇವಣ್ಣ ಪರ ವಾದ ಮಂಡಿಸಿದ ವಕೀಲ ಮೂರ್ತಿ ಡಿ. ನಾಯ್ಕ್, ‘ನಮ್ಮ ಕಕ್ಷಿದಾರರ ವಿರುದ್ಧ ಇರುವ ಎಫ್‌ಐಆರ್‌ನಲ್ಲಿ ಜಾಮೀನು ನೀಡಬಹುದಾದ ಆರೋಪಗಳಿವೆ. ಆದರೆ, ಮ್ಯಾಜಿಸ್ಟ್ರೇಟ್‌ಗೆ ಅತ್ಯಾಚಾರ ಆರೋಪ ಸಲ್ಲಿಸಲು ಅರ್ಜಿ ನೀಡಲಾಗಿದೆ. 

ಪ್ರಜ್ವಲ್‌ ರೇವಣ್ಣ ವಿರುದ್ಧ ಜಡ್ಜ್‌ ಮುಂದೆ ಸಂತ್ರಸ್ತೆ ಹೇಳಿಕೆ: ಬಂಧನದ ಆತಂಕ ಹೆಚ್ಚಳ

ಇದಕ್ಕೆ ಪೂರಕವಾಗಿ ರೇವಣ್ಣ ಅವರು ಪ್ರಮಾಣ ಪತ್ರ ಸಲ್ಲಿಕೆ ಮಾಡಿದ್ದಾರೆ. ಕಕ್ಷಿದಾರರಿಗೆ ನಿರೀಕ್ಷಣಾ ಜಾಮೀನು ನೀಡಬೇಕು’ ಎಂದು ಕೋರಿದರು. ವಾದ ಆಲಿಸಿದ ನ್ಯಾಯಾಲಯವು, ಎಫ್‌ಐಆರ್‌ನಲ್ಲಿ ಎಲ್ಲವೂ ಜಾಮೀನು ನೀಡಬಹುದಾದ ಆರೋಪಗಳಿವೆ. ಹೀಗಾಗಿ ನಿರೀಕ್ಷಣಾ ಜಾಮೀನು ಅರ್ಜಿ ಹೇಗೆ ಊರ್ಜಿತವಾಗಲಿದೆ. ವಿಚಾರಣಾ ನ್ಯಾಯಾಲಯದಲ್ಲಿ ನೇರವಾಗಿ ಹಾಜರಾಗಬಹುದಿತ್ತಲ್ಲವೇ ಎಂದು ಪ್ರಶ್ನಿಸಿತು. ಈ ನಡುವೆ, ನಿರೀಕ್ಷಣಾ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಕೆ ಮಾಡುವಂತೆ ಎಸ್‌ಐಟಿಗೆ ನೊಟೀಸ್‌ ಜಾರಿಗೊಳಿಸಿದ ನ್ಯಾಯಾಲಯವು ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿತು.