ಬಿಬಿಎಂಪಿಯ 243 ವಾರ್ಡ್‌ಗಳಿಗೂ ಚುನಾವಣೆ ಸಾಧ್ಯತೆ: ರಾಮಲಿಂಗಾರೆಡ್ಡಿ ಸಮಿತಿ ವರದಿ

ಬಿಬಿಎಂಪಿ ಚುನಾವಣೆಗೆ ಸಿದ್ಧತೆ ನಡೆಸಲು ಕೆಪಿಸಿಸಿಯಿಂದ ರಚಿಸಲಾಗಿರುವ ಸಚಿವ ರಾಮಲಿಂಗಾರೆಡ್ಡಿ ನೇತೃತ್ವದ ಸಮಿತಿಯಿಂದ ಇನ್ನೆರಡು ದಿನಗಳಲ್ಲಿ ವರದಿ ನೀಡಲಿದ್ದು, 243 ವಾರ್ಡ್‌ಗಳನ್ನಿಟ್ಟುಕೊಂಡೇ ಚುನಾವಣೆ ನಡೆಸುವುದು ಉತ್ತಮ ಎಂದು ವರದಿ ಸಲ್ಲಿಸುವ ಸಾಧ್ಯತೆಗಳಿವೆ. 

Elections likely for 243 wards of BBMP Ramalinga reddy committee report gvd

ಬೆಂಗಳೂರು (ಜೂ.12): ಬಿಬಿಎಂಪಿ ಚುನಾವಣೆಗೆ ಸಿದ್ಧತೆ ನಡೆಸಲು ಕೆಪಿಸಿಸಿಯಿಂದ ರಚಿಸಲಾಗಿರುವ ಸಚಿವ ರಾಮಲಿಂಗಾ ರೆಡ್ಡಿ ನೇತೃತ್ವದ ಸಮಿತಿಯಿಂದ ಇನ್ನೆರಡು ದಿನಗಳಲ್ಲಿ ವರದಿ ನೀಡಲಿದ್ದು, 243 ವಾರ್ಡ್‌ಗಳನ್ನಿಟ್ಟುಕೊಂಡೇ ಚುನಾವಣೆ ನಡೆಸುವುದು ಉತ್ತಮ ಎಂದು ವರದಿ ಸಲ್ಲಿಸುವ ಸಾಧ್ಯತೆಗಳಿವೆ. ಲೋಕಸಭೆ ಚುನಾವಣೆಗೂ ಮುನ್ನ ಬಿಬಿಎಂಪಿ ಚುನಾವಣೆ ನಡೆಸಿ ಶಕ್ತಿ ಪ್ರದರ್ಶನಕ್ಕೆ ರಾಜ್ಯ ಕಾಂಗ್ರೆಸ್‌ ನಿರ್ಧರಿಸಿದೆ. ಅದಕ್ಕಾಗಿಯೇ ವಾರ್ಡ್‌ ಮಟ್ಟದಲ್ಲಿ ಪಕ್ಷ ಬಲವರ್ಧನೆಗೆ ಕೈಗೊಳ್ಳಬೇಕಾದ ಕ್ರಮಗಳು, ಈಗಿರುವ 243 ವಾರ್ಡ್‌ಗಳನ್ನಿಟ್ಟುಕೊಂಡು ಚುನಾವಣೆ ನಡೆಸಿದರೆ ಕಾಂಗ್ರೆಸ್‌ ಪರವಾಗಿರಲಿದೆಯೇ ಎಂಬುದು ಸೇರಿ ಇನ್ನಿತರ ಅಂಶಗಳ ಕುರಿತಂತೆ ವರದಿ ನೀಡಲು ಸಚಿವ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು. 

ಸಮಿತಿಯು ಈಗಾಗಲೇ ಹಲವು ಸಭೆಗಳನ್ನು ನಡೆಸಿದ್ದು, ಶೀಘ್ರದಲ್ಲಿ ಚುನಾವಣೆ ನಡೆಸಬೇಕೆಂದರೆ ವಾರ್ಡ್‌ಗಳ ಸಂಖ್ಯೆಯಲ್ಲಿ ಬದಲಾವಣೆ ತರದಿರುವುದು ಸೂಕ್ತ ಎಂದು ಸಮಿತಿ ಸದಸ್ಯರು ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸಮಿತಿಯಲ್ಲಿ ಕೆಲ ಸದಸ್ಯರು 243 ವಾರ್ಡ್‌ಗಳನ್ನು ರದ್ದು ಮಾಡಿ 198 ವಾರ್ಡ್‌ಗಳನ್ನು ಮರು ಸ್ಥಾಪಿಸಿ ಚುನಾವಣೆಗೆ ತೆರಳಬೇಕು. ಈಗಿರುವ 243 ವಾರ್ಡ್‌ಗಳು ಬಿಜೆಪಿ ಅಭ್ಯರ್ಥಿಗಳಿಗೆ ಅನುಕೂಲವಾಗುವಂತೆ ರಚಿಸಲಾಗಿದೆ. ಹೀಗಾಗಿ ಸರ್ಕಾರ ವಾರ್ಡ್‌ಗಳಲ್ಲಿ ಬದಲಾವಣೆ ತರಲು ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ. 

ಬಿಟ್ಟಿ ಭಾಗ್ಯದ ಮೂಲಕ ಜನತೆಯನ್ನು ವಂಚಿಸಿದ ಕಾಂಗ್ರೆಸ್‌ ಸರ್ಕಾರ: ಸಚಿವ ರಾಜೀವ್‌ ಚಂದ್ರಶೇಖರ್‌

ಆದರೆ, 243 ವಾರ್ಡ್‌ಗಳಲ್ಲಿ ಬದಲಾವಣೆ ತರಲು ಮುಂದಾದರೆ ಮತ್ತೆ ವಾರ್ಡ್‌ ಮರುವಿಂಗಡಣೆ ಪ್ರಕ್ರಿಯೆ ಆರಂಭಿಸಬೇಕಾಗುತ್ತದೆ. ಅದಕ್ಕೆ ಸುಪ್ರೀಂಕೋರ್ಟ್‌ ಒಪ್ಪುವುದು ಕಷ್ಟ. ಹೀಗಾಗಿ ಆ ತಲೆನೋವನ್ನು ಎದುರಿಸದೆ ಈಗಿರುವ 243 ವಾರ್ಡ್‌ಗಳಿಗೇ ಚುನಾವಣೆ ನಡೆಸುವುದು ಸೂಕ್ತ ಎಂದು ಸಮಿತಿಯ ಬಹುತೇಕರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅದೇ ರೀತಿಯಲ್ಲಿ ವರದಿಯನ್ನೂ ಸಿದ್ಧಪಡಿಸಲಾಗಿದ್ದು, ಸಮಿತಿ ಸದಸ್ಯರ ಸಹಿಯನ್ನು ಮಾಡಿಸುವುದು ಬಾಕಿ ಉಳಿದಿದೆ. ಸಚಿವ ರಾಮಲಿಂಗಾ ರೆಡ್ಡಿ ಹಾಗೂ ಸಮಿತಿ ಸದಸ್ಯರು ಸೋಮವಾರ ಅಥವಾ ಮಂಗಳವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರಿಗೆ ವರದಿ ಸಲ್ಲಿಸುವ ಸಾಧ್ಯತೆಗಳಿವೆ.

ಇಂದಿರಾ ಕ್ಯಾಂಟೀನ್‌ ಶುರು ಕುರಿತು ಇಂದು ಸಿಎಂ ಸಭೆ: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಎದುರಾಗಿರುವ ಕುಡಿಯುವ ನೀರಿ ಸಮ ಸ್ಯೆ ನಿವಾರಣೆ, ಜಲ ಜೀವನ್‌ ಮಿಷನ್‌ ಅನುಷ್ಠಾನ ಹಾಗೂ ಇಂದಿರಾ ಕ್ಯಾಂಟೀನ್‌ಗಳನ್ನು ಪುನಾರಂಭಿಸುವ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಸಂಬಂಧಪಟ್ಟಇಲಾಖಾ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಲಿದ್ದಾರೆ. ಬೆಳಗ್ಗೆ 11 ಗಂಟೆಗೆ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯ ಕಾರ್ಯದರ್ಶಿ, ಆರ್ಥಿಕ ಇಲಾಖೆ, ಕಂದಾಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸೇರಿದಂತೆ ವಿವಿಧ ಇಲಾಖೆಗಳ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ. 

ಬೆಂಗಳೂರಿನ 3 ಕಡೆ ಕಲುಷಿತ ನೀರಿನಿಂದ ಜನರು ಅಸ್ವಸ್ಥ: ತೀವ್ರ ಹೊಟ್ಟೆನೋವಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ

ಮುಖ್ಯಮಂತ್ರಿ ಅವರು ಈಗಾಗಲೇ ನೀರಿನ ಸಮಸ್ಯೆ ಇರುವ ಕಡೆ ಟ್ಯಾಂಕರ್‌ಗಳಲ್ಲಿ ನೀರು ಪೂರೈಸಿ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಕ್ರಮ ವಹಿಸಲು ಸೂಚಿಸಿದ್ದರು. ಇನ್ನು ಮಧ್ಯಾಹ್ನ 1 ಗಂಟೆಗೆ ಇಂದರಾ ಕ್ಯಾಂಟೀನ್‌ ಪುನಾರಂಭದ ಕುರಿತು ಕೂಡ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಿದ್ದಾರೆ. ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಇಂದಿರಾ ಕ್ಯಾಂಟೀನ್‌ಗಲ್ಲಿ ಕಡಿಮೆ ದರದಲ್ಲಿ ತಿಂಡಿ, ಊಟ ವಿತರಣೆ ಮುಂದುವರೆಸುವುದಾಗಿ ಪ್ರಣಾಳಿಕೆಯಲ್ಲಿ ಘೋಷಿಸಿರುವುದರಿಂದ ಅವುಗಳ ಪುನಾರಂಭದ ಕುರಿತು ಮುಖ್ಯಕಾರ್ಯದರ್ಶಿಗಳು, ಆರ್ಥಿಕ ಇಲಾಖೆ, ನಗರಾಭಿವೃದ್ಧಿ ಇಲಾಖೆ ಹಾಗೂ ಬಿಬಿಎಂಪಿ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ.

Latest Videos
Follow Us:
Download App:
  • android
  • ios