ಮನೆಗೆ ಪಾರ್ಸೆಲ್ ಬಂದ ಇಲೆಕ್ಟ್ರಿಕ್ ಸಾಧನ ಸ್ಫೋಟಗೊಂಡು ಅಪ್ಪ ಮಗಳು ಸಾವನ್ನಪ್ಪಿದ ದಾರುಣ ಘಟನೆ ಗುಜರಾತ್‌ನಲ್ಲಿ ನಡೆದಿದೆ. ಈ ಅವಘಡದಲ್ಲಿ ಇನ್ನಿಬ್ಬರು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಸಬರ್‌ಕಾಂತಾ: ಮನೆಗೆ ಪಾರ್ಸೆಲ್ ಬಂದ ಇಲೆಕ್ಟ್ರಿಕ್ ಸಾಧನ ಸ್ಫೋಟಗೊಂಡು ಅಪ್ಪ ಮಗಳು ಸಾವನ್ನಪ್ಪಿದ ದಾರುಣ ಘಟನೆ ಗುಜರಾತ್‌ನಲ್ಲಿ ನಡೆದಿದೆ. ಈ ಅವಘಡದಲ್ಲಿ ಇನ್ನಿಬ್ಬರು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗುಜರಾತ್‌ನ ಸಬರ್‌ಕಾಂತಾ ಜಿಲ್ಲೆಯ ವೇದಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಅಪರಿಚಿತ ವ್ಯಕ್ತಿ ಪಾರ್ಸೆಲ್ ಮೂಲಕ ಕಳುಹಿಸಿಕೊಟ್ಟ ಇಲೆಕ್ಟ್ರಿಕ್ ಸಾಧನ ಇದಾಗಿದೆ ಎಂದು ತಿಳಿದು ಬಂದಿದೆ. 

ಘಟನೆಗೆ ಸಂಬಂಧಿಸಿದಂತೆ ವಡಲಿ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಜಿತೇಂದ್ರ ರಬರಿ ಪ್ರತಿಕ್ರಿಯಿಸಿದ್ದು, ಈ ಪಾರ್ಸೆಲ್‌ ಅನ್ನು ಅಪರಿಚಿತ ವ್ಯಕ್ತಿ ಕಳುಹಿಸಿಕೊಟ್ಟಿದ್ದ. ಪಾರ್ಸೆಲ್ ತೆರೆದು ಇಲೆಕ್ಟ್ರಿಕ್ ಸಾಧನದ ಪ್ಲಗ್‌ ಅನ್ನು ಸ್ವಿಚ್‌ಬೋರ್ಡ್‌ಗೆ ಸಿಕ್ಕಿಸಿ ಸ್ವಿಚ್ ಹಾಕಿದಾಗ ಈ ಸ್ಫೋಟ ಸಂಭವಿಸಿದೆ. ಸ್ಫೋಟದ ತೀವ್ರತೆಗೆ ತಂದೆ 33 ವರ್ಷದ ಜೀತು ವಂಝರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆ ಸಂಭವಿಸುವ ವೇಳೆ ಇವರ ಜೊತೆಗೆ ಇದ್ದ ಇನ್ನೂ ಮೂವರು ಮಕ್ಕಳು ಕೂಡ ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ವಡಲಿಯ ಸಮುದಾಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಂದ ಹಿಮತ್ ನಗರ ಸಿವಿಲ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಗಾಯಗೊಂಡಿದ್ದ ಬಾಲಕಿಯರಲ್ಲಿ ಒಬ್ಬಳಾದ ಜೀತು ವಂಝರ ಅವರ 11 ವರ್ಷದ ಮಗಳು ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ. ಈಕೆಯ ಸಹೋದರಿ ಹಾಗೂ ಕಸಿನ್‌ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.

ಪುಣೆಯಲ್ಲಿ ಓಲಾ ಇಲೆಕ್ಟ್ರಿಕ್‌ ಸ್ಕೂಟರ್‌ಗೆ ಬೆಂಕಿ: ವಿಡಿಯೋ ವೈರಲ್

ಗಾಯಗೊಂಡವರಲ್ಲಿ ಮತ್ತೊಬ್ಬ ಬಾಲಕಿಯ ಸ್ಥಿತಿಯೂ ಗಂಭೀರವಾಗಿದ್ದು, ಆಕೆಗೆ ವೆಂಟಿಲೇಟರ್ ಅಳವಡಿಸಲಾಗಿದೆ ಎಂದು ವೈದ್ಯಕೀಯ ಅಧಿಕಾರು ವಿಪುಲ್ ಜೈನ್ ಹೇಳಿದ್ದಾರೆ. ಅಪರಿಚಿತರು ಕಳುಹಿಸಿದ ಈ ಪಾರ್ಸೆಲ್ ಆಟೋ ರಿಕ್ಷಾದ ಮೂಲಕ ಮನೆಗೆ ಬಂದಿತ್ತುಎಂದು ಸಂತ್ರಸ್ತರ ಮನೆಯವರು ಹೇಳಿದ್ದಾರೆ. ಘಟನೆ ಬಗ್ಗೆ ಪೊಲೀಸರು ತನಿಖೆ ಮಾಡುತ್ತಿದ್ದು, ಈ ವಸ್ತುವನ್ನು ಮನೆಯವರೇ ಏನಾದರೂ ಆರ್ಡರ್ ಮಾಡಿದ್ದರ ಎಂಬ ಬಗ್ಗೆ ವಿಚಾರಣೆ ಮಾಡುತ್ತಿದ್ದಾರೆ ಎಂದು ಪೊಲೀಸ್ ಅಧಿಕಾರಿ ಜಿತೇಂದ್ರ ರಬರಿ ಹೇಳಿದ್ದಾರೆ. 

ಹೇಳಿದಂತೆ ಇಲ್ಲ ಮೈಲೇಜ್: ಮಾಲೀಕನ ಆಕ್ರೋಶಕ್ಕೆ ಕಸದ ಡಬ್ಬಿಯಾದ ಮಹೀಂದ್ರ XUV400 EV