ಯುವ ಬ್ರಿಗೇಡ್‌ಗೆ ಗುಡ್ ನ್ಯೂಸ್: ಟಿ.ನರಸೀಪುರ ವೇಣುಗೋಪಾಲ್ ಶ್ರದ್ಧಾಂಜಲಿ ಸಭೆಗೆ ಹೈಕೋರ್ಟ್ ಅನುಮತಿ
ಮೈಸೂರಿನಲ್ಲಿ ಇತ್ತೀಚೆಗೆ ಕೊಲೆಯಾದ ಯುವ ಬ್ರಿಗೇಡ್ ಕಾರ್ಯಕರ್ತ ಟಿ.ನರಸೀಪುರದ ವೇಣುಗೋಪಾಲ್ ಶ್ರದ್ಧಾಂಜಲಿ ಸಭೆಯನ್ನು ನಡೆಸಲು ಹೈಕೋರ್ಟ್ ಅನುಮತಿ ನೀಡಿದೆ.
ಬೆಂಗಳೂರು (ಜು.18): ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ಇತ್ತೀಚೆಗೆ ಕೊಲೆಯಾದ ಯುವ ಬ್ರಿಗೇಡ್ ಕಾರ್ಯಕರ್ತ ಟಿ. ನರಸೀಪುರದ ವೇಣುಗೋಪಾಲ್ ಶ್ರದ್ಧಾಂಜಲಿ ಸಭೆಯನ್ನು ನಡೆಸುವುದಕ್ಕೆ ತಾಲೂಕು ಆಡಳಿತ ಮತ್ತು ಪೊಲೀಸ್ ಇಲಾಖೆಯಿಂದ ನಿರಾಕರಣೆ ಮಾಡಲಾಗಿತ್ತು. ಈ ಕುರಿತು ನ್ಯಾಯಾಲಯದ ಮೊರೆ ಹೋಗಿದ್ದ ವೀರಾಂಜನೇಯ ಬಳಗ ಮತ್ತು ಯುವ ಬ್ರಿಗೇಡ್ ಸಂಸ್ಥೆಗೆ ಹೈಕೋರ್ಟ್ ವೇಣುಗೋಪಾಲ್‌ನ ಶ್ರದ್ಧಾಂಜಲಿ ಸಭೆಯನ್ನು ನಡೆಸಲು ಷರತ್ತುಬದ್ಧ ಅನುತಿಯನ್ನು ನೀಡಿದೆ.
ಟಿ.ನರಸೀಪುರದಲ್ಲಿ ವೇಣುಗೊಪಾಲ್ ಶ್ರದ್ಧಾಂಜಲಿ ಸಭೆಯನ್ನು ನಡೆಸುವುದಕ್ಕೆ ಟಿ.ನರಸೀಪುರ ಪೊಲೀಸರು ಹಾಗೂ ತಹಸಿಲ್ದಾರ್ ಇಲಾಖೆಯಿಂದ ನಿರಾಕರಣೆ ಮಾಡಲಾಗಿತ್ತು. ಈ ಕುರಿತು ಹೈಕೋರ್ಟ್ ಮೇಟ್ಟಿಲೇರಿದ್ದ ವೀರಾಂಜನೇಯ ಧರ್ಮ ಜಾಗೃತಿ ಬಳಗವು ಸಭೆ ನಡೆಸಲು ಅನುಮತಿ ನೀಡುವಂತೆ ಮನವಿ ಮಾಡಿತ್ತು. ಪೊಲೀಸರು ಹಾಗೂ ತಹಸಿಲ್ದಾರ್ ಆದೇಶ ಪ್ರಶ್ನಿಸಿ ಹೈಕೋರ್ಟ್ ಅರ್ಜಿ ಸಲ್ಲಿಸಲಾಗಿತ್ತು. ಈ ಕುರಿತು ವಿಚಾರಣೆ ಮಾಡಿದ ಹೈಕೋರ್ಟ್ ಏಕಸದಸ್ಯ ಪೀಠದಲ್ಲಿ ಅರ್ಜಿ ವಿಚಾರಣೆ ಮಾಡಿದ ನ್ಯಾ.ಕೃಷ್ಣ ದೀಕ್ಷಿತ್ ಅವರ ಪೀಠವು, ಯುವ ಬ್ರಿಗೇಡ್ ಕಾರ್ಯಕರ್ತ ವೇಣುಗೋಪಾಲ್ ಶ್ರದ್ಧಾಂಜಲಿ ಸಭೆ ಗೆ ಅನುಮತಿ ನೀಡಿದೆ. ಅರ್ಜಿದಾರರ ಪರ ವಕೀಲ ಅರುಣ್ ವಾದ ಮಂಡನೆ ಮಾಡಿದ್ದರು.
ಧರ್ಮಕ್ಕಾಗಿಯೇ ನನ್ನ ಗಂಡನ ಕೊಲೆ ಆಗಿದೆ: ವೇಣುಗೋಪಾಲ್ ಪತ್ನಿ ಪೂರ್ಣಿಮಾ ಆರೋಪ
ಟಿ.ನರಸೀಪುರ ಯುವ ಬ್ರಿಗೇಡ್ ಕಾರ್ಯಕರ್ತನ ಕೊಲೆ ಪ್ರಕರಣದ ಸಂಬಂಧಿಸಿದಂತೆ ಶ್ರದ್ಧಾಂಜಲಿ ಸಭೆಗೆ ಹೈಕೋರ್ಟ್‌ನಿಂದ ಷರತ್ತುಬದ್ಧ ಅನುಮತಿ ನೀಡಲಾಗಿದೆ. ಈ ಷರತ್ತುಗಳನ್ನು ಉಲ್ಲಂಘನೆ ಮಾಡದೇ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಶಾಂತಿಯುತವಾಗಿ ನಡೆಸಿ ಪೂರ್ಣಗೊಳಿಸಬೇಕು. ಕೊಲೆ ನಡೆದಿರುವ ಘಟನೆ ಸೂಕ್ಷ್ಮ ಘಟನೆಯಾಗಿದ್ದು, ಈ ಕುರಿತು ಹೆಚ್ಚಿನ ನಿಗಾವಹಿಸಬೇಕು. ಪೊಲೀಸರ ನಿಯಮಾವಳಿಗಳನ್ನು ಉಲ್ಲಂಘನೆ ಮಾಡಬಾರದು ಎಂದು ಹಲವು ಷರತ್ತುಗಳನ್ನು ವಿಧಿಸಿದೆ.
- ಹೈಕೋರ್ಟ್ ವಿಧಿಸಿದ ಷರತ್ತುಗಳು:
- ಶಾಂತಿಯುತವಾಗಿ ಕಾರ್ಯಕ್ರಮವನ್ನು ಆಯೋಜನೆ ಮಾಡಿ ನಡೆಸಬೇಕು.
- ಸೂರ್ಯಸ್ತವಾಗುವ ವೇಳೆಗೆ ಕಾರ್ಯಕ್ರಮ ಮುಗಿಸಬೇಕು.
- ಒಂದು ಲಕ್ಷ ರೂ. ಶೂರಿಟಿ ಬಾಂಡ್ ನೀಡಬೇಕು.
- ಪೊಲೀಸರ ಸಂಪೂರ್ಣ ಚಿತ್ರೀಕರಣಕ್ಕೆ ಮುಕ್ತ ಅವಕಾಶ ನೀಡಬೇಕು.
- ವೇದಿಕೆಯಲ್ಲಿ ಪ್ರಚೋಧನ ಕಾರಿ ಭಾಷಣ ಮಾಡುವಂತಿಲ್ಲ.
- ವೇದಿಕೆ ಮೇಲೆ ಮಾತನಾಡವವರ ಸಂಪೂರ್ಣ ವಿವರವನ್ನು ಪೊಲೀಸ್ ಇಲಾಖೆಗೆ ನೀಡಬೇಕು.
- ಕಾರ್ಯಕ್ರಮಕ್ಕೆ ಯಾವ ಯಾವ ಭಾಗದಿಂದ ಎಷ್ಟು ಜನ ಬಂದಿದ್ದಾರೆ ಎಂಬ ಮಾಹಿತಿ ನೀಡಬೇಕು.
ಆರೋಪಿಗಳು ಮೂರು ತಿಂಗ್ಳಲ್ಲಿ ಹೊರಬಂದ್ರೆ ಕತ್ತು ಕೊಯ್ದುಕೊಳ್ಳುವೆ: ಮೃತ ವೇಣುಗೋಪಾಲ್ ಪತ್ನಿ ಅಳಲು
ಧರ್ಮಕ್ಕಾಗಿಯೇ ನನ್ನ ಗಂಡನ ಕೊಲೆ: ಮೈಸೂರು: ಇತ್ತೀಚೆಗೆ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಮೃತ ವೇಣುಗೋಪಾಲ್‌ನ ಪತ್ನಿ ಪೂರ್ಣಿಮಾ, ನನ್ನ ಗಂಡ ಹತ್ತು ಜನ ಬಂದರೂ ಹೆದರುತ್ತಿರಲಿಲ್ಲ. ನನ್ನ ಗಂಡನ ಹತ್ಯೆ ವೈಯಕ್ತಿಕ ಕಾರಣದ ಕೊಲೆ ಅಲ್ಲ. ಧರ್ಮಕ್ಕಾಗಿಯೇ ನನ್ನ ಗಂಡನ ಕೊಲೆ ಆಗಿದೆ ಎಂದು ತಿಳಿಸಿದರು. ಟಿ. ನರಸೀಪುರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು- ವೇಣುಗೋಪಾಲ್ ಪ್ರೀತಿಸಿ ಮದುವೆ ಆಗಿದ್ದೆವು. ಮೂರು ವರ್ಷಗಳಿಂದ ಹನುಮ ಜಯಂತಿ ಆಚರಣೆ ಮಾಡುತ್ತಿದ್ದೇವೆ. ನನ್ನ ಗಂಡನ ಬಳಿ ಹಣ ಇಲ್ಲ, ಅಧಿಕಾರ ಇಲ್ಲ. ಆದರೂ ಅದ್ಧೂರಿಯಾಗಿ ಹನುಮ ಜಯಂತಿ ಆಚರಣೆ ಮಾಡಿದ್ದೆವು. ಅದನ್ನು ಸಹಿಸದೆ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದರು.
ಮೂರೇ ತಿಂಗಳಲ್ಲಿ ಹೊರಬಂದರೆ ಕತ್ತು ಕುಯ್ದುಕೊಂಡು ಸಾವು: ನನ್ನ ಗಂಡನ ಸಾವಿಗೆ ನ್ಯಾಯ ಬೇಕು. ಇಲ್ಲವಾದರೆ ನಾನು, ನನ್ನ ಮಗಳು ಗಂಡ ಸತ್ತಂತೆಯೇ ಸಾಯುತ್ತೇವೆ. ಇಂದು ನನ್ನ ಗಂಡನನ್ನ ಸಾಯಿಸಿದ್ದಾರೆ. ಮುಂದಿನ ವರ್ಷ ನಾನು ಹನುಮ ಜಯಂತಿ ಮಾಡುತ್ತೇನೆ. ಆಗ ನನ್ನನ್ನು ಸಾಯಿಸುತ್ತಾರೆ. ಮುಂದಿನ ವರ್ಷ ನನ್ನ ಮಗಳು ಹನುಮ ಜಯಂತಿ ಮಾಡಿದ್ರೆ ಅವಳನ್ನೂ ಸಾಯಿಸುತ್ತಾರೆ. ಅಲ್ಲಿಗೆ ಹಿಂದೂ ಧರ್ಮವೂ ಸಾಯುತ್ತದೆ. ನನ್ನ ಗಂಡನ ಏಳಿಗೆ ಸಹಿಸದೆ ಕೊಲೆ ಮಾಡಿದ್ದಾರೆ.ಹಿಂದೂಗಳನ್ನು ಕೊಲೆ ಮಾಡುತ್ತಿರುವ ಆರೋಪಿಗಳನ್ನು ಗಲ್ಲು ಶಿಕ್ಷೆಗೆ ಗುರಿಪಡಿಸಬೇಕು. ನನ್ನ ಗಂಡನನ್ನು ಕೊಲೆ ಮಾಡಿದ ಆರೋಪಿಗಳು ಮೂರು ಅಥವಾ ಆರು ತಿಂಗಳಿಗೆ ಜೈಲಿನಿಂದ ಹೊರಬಂದಲ್ಲಿ ನಾನು ಮತ್ತು ನನ್ನ ಮಗಳು ಕತ್ತು ಕೊಯ್ದುಕೊಂಡು ಸತ್ತು ಹೋಗುತ್ತೇವೆ ಎಂದು ಆಗ್ರಹಿಸಿದ್ದರು.