ಫೆಬ್ರವರಿ 12ರಿಂದ 14ರವರೆಗೆ ಬೆಂಗಳೂರಿನಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶ ನಡೆಯಲಿದ್ದು, 10 ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆ ಆಕರ್ಷಿಸುವ ಗುರಿ ಹೊಂದಲಾಗಿದೆ. 18 ದೇಶಗಳು ಮತ್ತು 2,000ಕ್ಕೂ ಹೆಚ್ಚು ಹೂಡಿಕೆದಾರರು ಭಾಗವಹಿಸಲಿದ್ದಾರೆ.

ಬೆಂಗಳೂರು (ಫೆ.03): ಫೆಬ್ರವರಿ 12ರಿಂದ 14ರವರೆಗೆ ಇಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಸಕಲ ಸಿದ್ಧತೆಗಳೂ ಮುಗಿದಿದ್ದು, 10 ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆಯನ್ನು ರಾಜ್ಯಕ್ಕೆ ಆಕರ್ಷಿಸುವ ಗುರಿ ಇಟ್ಟುಕೊಳ್ಳಲಾಗಿದೆ. ಫೆ.11ರ ಸಂಜೆಯೇ ಸಮಾವೇಶವನ್ನು ಉದ್ಘಾಟಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ.

Add Asianetnews Kannada as a Preferred SourcegooglePreferred

ಸಮಾವೇಶದ ಸಿದ್ಧತೆ ಮತ್ತು ನಾನಾ ಇಲಾಖೆಗಳ ನಡುವಿನ ಸಮನ್ವಯಕ್ಕೆ ಸಂಬಂಧಿಸಿದಂತೆ ತಮ್ಮ ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ನಡೆದ ಉನ್ನತ ಮಟ್ಟದ ಸಮಿತಿಯ ಸಭೆಯಲ್ಲಿ ಅವರು ಮಾತನಾಡಿದರು. ಸಭೆಯಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಉಪಸ್ಥಿತರಿದ್ದರು. ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ಪ್ರಾತ್ಯಕ್ಷಿಕೆಯನ್ನು ಪ್ರದರ್ಶಿಸಿದರು.

ಈಗಾಗಲೇ 2,000ಕ್ಕೂ ಹೆಚ್ಚು ಹೂಡಿಕೆದಾರರು ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಪಾಲ್ಗೊಳ್ಳಲು ಆಸಕ್ತಿ ತೋರಿ, ನೋಂದಾಯಿಸಿಕೊಂಡಿದ್ದಾರೆ. ಸಮಾವೇಶದಲ್ಲಿ 18 ದೇಶಗಳು ಪಾಲ್ಗೊಳ್ಳುತ್ತಿದ್ದು, ಈ ಪೈಕಿ 9 ದೇಶಗಳು ಪ್ರತ್ಯೇಕ ಪೆವಿಲಿಯನ್ ಹೊಂದಿರಲಿವೆ. ಈ ಸಂದರ್ಭದಲ್ಲಿ 60ಕ್ಕೂ ಹೆಚ್ಚು ಉದ್ಯಮ ಪರಿಣತರು ಗೋಷ್ಠಿಗಳಲ್ಲಿ ಮಾತನಾಡಲಿದ್ದಾರೆ. ಜೊತೆಗೆ ಸರಕಾರವು ರಾಜ್ಯದಲ್ಲಿ ಹೂಡಿಕೆಗೆ ಇರುವ ಪ್ರಶಸ್ತ ಅವಕಾಶಗಳನ್ನು ಮತ್ತು ನಮ್ಮಲ್ಲಿರುವ ಉದ್ಯಮಸ್ನೇಹಿ ನೀತಿ ಹಾಗೂ ಪ್ರೋತ್ಸಾಹಕ ಕ್ರಮಗಳನ್ನು ಹೂಡಿಕೆದಾರರಿಗೆ ಮನವರಿಕೆ ಮಾಡಿಕೊಡಲಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ವಿಧಾನಸೌಧದಿಂದ MLA ಹೊರಹಾಕಬಹುದು, ನಾಯಿಗಳನ್ನ ಹೊರಗೆ ಹಾಕೋಕೆ ಆಗೋದಿಲ್ಲ: ಯುಟಿ ಖಾದರ್‌

ಈ ಸಮಾವೇಶಕ್ಕೆ ಎಂ ಬಿ ಪಾಟೀಲರು ಕಳೆದ ಕೆಲವು ತಿಂಗಳುಗಳಿಂದಲೇ ಶ್ರಮಿಸುತ್ತಿದ್ದಾರೆ. ಇದರ ಭಾಗವಾಗಿ ಅಮೆರಿಕ, ಯೂರೋಪ್, ದಕ್ಷಿಣ ಕೊರಿಯಾ, ಜಪಾನ್ ದೇಶಗಳಲ್ಲಿ ಅವರು ಉನ್ನತ ಮಟ್ಟದ ನಿಯೋಗದೊಂದಿಗೆ ತೆರಳಿ ರೋಡ್-ಶೋ ಮತ್ತು ಹೂಡಿಕೆದಾರರ ಜೊತೆ ಮಾತುಕತೆಗಳನ್ನು ನಡೆಸಿದ್ದಾರೆ. ಸಮಾವೇಶದಲ್ಲಿ ಕೈಗಾರಿಕಾ ಬೆಳವಣಿಗೆಗೆ ಪೂರಕವಾದ ಇನ್ನೂ ಹಲವು ನೀತಿಗಳನ್ನು ಅನಾವರಣಗೊಳಿಸಲಾಗುವುದು ಎಂದು ವಿವರಿಸಿದ್ದಾರೆ.

'ಪ್ರಗತಿಯ ಮರುಕಲ್ಪನೆ ಥೀಮ್: ಎಂ ಬಿ ಪಾಟೀಲ
ಜಾಗತಿಕ ಹೂಡಿಕೆದಾರರ ಸಮಾವೇಶವು 'ಪ್ರಗತಿಯ ಮರುಕಲ್ಪನೆ' ಎನ್ನುವ ಪ್ರಧಾನ ಥೀಮ್ ಒಳಗೊಂಡಿದ್ದು, ತಂತ್ರಜ್ಞಾನ-ಚಾಲಿತ, ಪರಿಸರಸ್ನೇಹಿ, ಒಳಗೊಳ್ಳುವಿಕೆ ಮತ್ತು ಕ್ಷಮತೆ (Tech-driven, Green, Inclusive & Resilient) ಎನ್ನುವ ನಾಲ್ಕು ಉಪಆಶಯಗಳನ್ನು ಹೊಂದಿದೆ. ದಾವೋಸ್ ಆರ್ಥಿಕ ಶೃಂಗಸಭೆಯಲ್ಲಿನ ಕೆಲವು ಅತ್ಯುತ್ತಮ ಅಂಶಗಳನ್ನೂ ಇಲ್ಲಿ ಅಳವಡಿಸಿಕೊಂಡಿದ್ದೇವೆ. ಅಂಕಿತ ಹಾಕುವ ಒಡಂಬಡಿಕೆಗಳ ಪೈಕಿ ಶೇಕಡ 70-80ರಷ್ಟಾದರೂ ನಿಜವಾದ ಹೂಡಿಕೆಯಾಗಿ ಪರಿವರ್ತನೆಯಾಗಬೇಕು ಎನ್ನುವುದು ಸರಕಾರದ ಗುರಿಯಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಹೇಳಿದ್ದಾರೆ.

ಇದನ್ನೂ ಓದಿ: ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಸ್ವೀಕರಿಸಿದ ಏಷ್ಯಾನೆಟ್ ಫೈವ್ ಸ್ಟಾರ್ಸ್!

ಸಮಾವೇಶದಲ್ಲಿ ರಫ್ತಿಗೆ ಉತ್ತೇಜನ ನೀಡುವಂತಹ, 2025-30ರವರೆಗಿನ ಐದು ವರ್ಷಗಳ ನೂತನ ಕೈಗಾರಿಕಾ ನೀತಿಯನ್ನು ಬಿಡುಗಡೆ ಮಾಡುತ್ತಿದ್ದೇವೆ. ಇದರಲ್ಲಿ ಡಾ.ಡಿ ಎಂ ನಂಜುಂಡಪ್ಪ ವರದಿಯಲ್ಲಿ ಹಿಂದುಳಿದ ಮತ್ತು ಅತೀ ಹಿಂದುಳಿದ ಜಿಲ್ಲೆಗಳಲ್ಲಿ ಹೂಡಿಕೆ ಮಾಡುವವರಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುವುದು. ಸುಲಲಿತ ವಹಿವಾಟು ಸಂಸ್ಕೃತಿ ಮತ್ತು ಏಕಗವಾಕ್ಷಿ ವ್ಯವಸ್ಥೆಗೆ ಕೂಡ ಚಾಲನೆ ನೀಡಲಾಗುವುದು. ಬಹುತೇಕ ಜಾಗತಿಕ ಮಟ್ಟದ ಕಂಪನಿಗಳೆಲ್ಲವೂ ಬೆಂಗಳೂರಿನಲ್ಲಿ ಆರ್ & ಡಿ ಕೇಂದ್ರಗಳನ್ನು ಮತ್ತು ಜಾಗತಿಕ ಸಾಮರ್ಥ್ಯ ಕೇಂದ್ರಗಳನ್ನು (ಜಿಸಿಸಿ) ಹೊಂದಿವೆ. ಆದ್ದರಿಂದ ಸ್ಥಳೀಯ ಮಟ್ಟದಲ್ಲೇ ಉತ್ಪಾದನೆಯೂ ಆಗುವಂತೆ ನೋಡಿಕೊಳ್ಳಲು ಸರಕಾರ ಉಪಕ್ರಮಗಳನ್ನು ತೆಗೆದುಕೊಳ್ಳಲಿದೆ. ಪರಿಸರಸ್ನೇಹಿ ಇಂಧನ ಮತ್ತು ವಿದ್ಯುತ್ ಚಾಲಿತ ವಾಹನಗಳ ತಯಾರಿಕೆಗೂ ಗಮನಹರಿಸಲಾಗುವುದು ಎಂದು ವಿವರಿಸಿದ್ದಾರೆ.

ಮೊದಲು ಕರ್ನಾಟಕ, ಮಹಾರಾಷ್ಟ್ರ, ಗುಜರಾತಿನಂತಹ ಕೆಲವೇ ರಾಜ್ಯಗಳು ಮಾತ್ರ ಹೂಡಿಕೆದಾರರ ಸಮಾವೇಶ ನಡೆಸುತ್ತಿದ್ದವು. ಈಗ ಹೆಚ್ಚಿನ ರಾಜ್ಯಗಳು ಇಂಥ ಸಮಾವೇಶ ಹಮ್ಮಿಕೊಳ್ಳುತ್ತಿವೆ. ಈ ಸಲದ ಸಮಾವೇಶದಲ್ಲಿ ಕುಮಾರ್ ಬಿರ್ಲಾ, ಆನಂದ್ ಮಹೀಂದ್ರ, ಕಿರಣ್ ಮಜುಂದಾರ್ ಸೇರಿದಂತೆ ಖ್ಯಾತ ಉದ್ಯಮಿಗಳು ಪಾಲ್ಗೊಳ್ಳಲಿದ್ದಾರೆ. ಫೆ.12 ಮತ್ತು 13ರಂದು ಇಡೀ ಎರಡು ದಿನ ಸಮಾವೇಶದಲ್ಲಿ ಅತ್ಯಂತ ಗಂಭೀರ ಚಟುವಟಿಕೆಗಳು ನಡೆಯಲಿವೆ. ಹೀಗಾಗಿ 11ರಂದು ಸಂಜೆ 4 ಗಂಟೆಗೇ ಉದ್ಘಾಟನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.